ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರ ಕಾರ್ಯಕ್ಕೆ ಸಿಂದಗಿ ಕ್ಷೇತ್ರಕ್ಕೆ ಆಗಮಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಕ್ಷೇತ್ರ ವ್ಯಾಪ್ತಿಯ ಬಗಲೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುರುಬ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಗಲೂರ ಗ್ರಾಮಕ್ಕೆ ಭೇಟಿ ನೀಡಿ ಕುರುಬ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಕುರುಬ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಿದೆ. ಬೇರೆ ಬೇರೆ ಪಕ್ಷಗಳು ಈ ಸಮುದಾಯವನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ಕೆಲಸ ಮಾಡಿವೆ. ಸಮುದಾಯದ ಸಹಾಯ ತೆಗೆದುಕೊಂಡು ಅಧಿಕಾರ ನಡೆಸಿವೆ. ಆದರೆ ಈ ಸಮುದಾಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿಲ್ಲ. ಜೆಡಿಎಸ್ ಪಕ್ಷ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಈ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ ಎಂದರು.
ನಮ್ಮ ಪಕ್ಷದಿಂದ ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಅವರು ಶಿಕ್ಷಣವಂತರಾಗಿದ್ದಾರೆ. ಸಮಾಜ ಸೇವೆ ಮಾಡುವ ಆಸಕ್ತಿ ಹೊಂದಿದ್ದಾರೆ. ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಗೆಲ್ಲಿಸಿ ಕಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕುರುಬ ಸಮುದಾಯದ ಜನರು ಒಗ್ಗಟ್ಟಾಗಿ ನಮ್ಮ ಕೈ ಬಲಪಡಿಸುವ ಮೂಲಕ ನಮ್ಮ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಸವರಾಜ ಹೊನವಾಡ, ಹಾಲುಮತ ಸಮುದಾಯದ ಮುಖಂಡರಾದ ಈರಗಂಟಪ್ಪ ಮಾಗಣಗೇರಿ, ಐ.ಎಸ್ ಮಾಗಣಗೇರಿ, ಪೂಜಾರಿ ವಕೀಲರು, ಕಾಂತಪ್ಪ ಇಂಚಗೇರಿ, ಪ್ರಕಾಶ ಹೀರೆಕುರಬರ, ಮಾಳಪ್ಪ ಸಿದ್ಧನಾಥ, ತೋರವೆ, ಮಲ್ಲು ಪೂಜಾರಿ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post