ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ಅಥವಾ ಆಡಳಿತ ಸಮಿತಿಯ ನೇಮಕದ ಬದಲಿಗೆ ಹಾಲಿ ಇರುವ ಚುನಾಯಿತ ಪ್ರತಿನಿಧಿಗಳನ್ನೇ ಮುಂದಿನ ಚುನಾವಣೆ ನಡೆಯುವವರೆಗೆ ಮುಂದುವರೆಸುವಂತೆ ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ಕೆ.ಸಿ. ಶಾಂತಾಕುಮಾರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಪರಿಣಾಮ ಕರ್ನಾಟಕದ ಮೇಲೂ ಆಗುತ್ತಿರುವುದರಿಂದ ರಾಜ್ಯದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಬದಲಾವಣೆಗಳಾಗಿವೆ. ಇದರ ಪರಿಣಾಮ ಕರ್ನಾಟಕದಲ್ಲಿ ಇದೇ ಮೇ ತಿಂಗಳ ಅಂತ್ಯದೊಳಗೆ ನಡೆಯಬೇಕಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಮೇಲೂ ಉಂಟಾಗಿದೆ. ಈ ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ಚುನಾವಣೆಯಂತಹ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಹೇಳಿರುವಂತೆ ಸುಮಾರು ಆರು ತಿಂಗಳುಗಳ ಕಾಲ ಚುನಾವಣೆ ಮುಂದೂಡಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ, ಆಡಳಿತಾಧಿಕಾರಿಯ ನೇಮಕ ಅಥವಾ ಬೇರ್ಯಾವುದೋ ಉಸ್ತುವಾರಿ ಸಮಿತಿ ನೇಮಕ ಮಾಡುವ ಸರ್ಕಾರದ ಆಲೋಚನೆ ಕಾನೂನಿನಲ್ಲಿ ಅವಕಾಶವಿದ್ದರೂ ಈ ವಿಕೋಪದ ಪರಿಸ್ಥಿತಿ ಇರುವಾಗ ಸೂಕ್ತವಾದುದಲ್ಲ ಎಂದವರು ತಿಳಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ರಥದ ಎರಡು ಗಾಳಿಗಳಿದ್ದಂತೆ. ಸರ್ಕಾರದ ರಥ ಮುನ್ನಡೆಸುವಲ್ಲಿ ಇಬ್ಬರ ಪಾತ್ರವೂ ಬಹಳ ಪ್ರಮುಖವಾದುದ್ದು. ಗ್ರಾಮ ಪಂಚಾಯತ್ ಒಂದು ಸ್ಥಳೀಯ ಸ್ವಯಂ ಸರ್ಕಾರ. ಹೀಗಾಗಿಯೇ ಇಡೀ ರಾಜ್ಯದಾದ್ಯಂತ ಕೋವಿಡ್-19ರ ಪರಿಸ್ಥಿತಿ ಘೋಷಣೆಯಾದಾಗ ಮೊಟ್ಟಮೊದಲ ಸರ್ಕಾರ ಮಾಡಿದ ಕೆಲಸವೆಂದರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಇಲಾಖೆಗಳ, ಸ್ವಯಂ ಸೇವಾ ಸಂಸ್ಥೆಗಳ, ಸ್ವಯಂ ಸೇವಕರ ಸಂಯೋಜನೆಯಲ್ಲಿ ಕಾರ್ಯಪಡೆ ರೂಪಿಸಿ, ಇಡೀ ಪಂಚಾಯತ್‌ನ ವಿಕೋಪ ನಿರ್ವಹಣೆಯ ಜವಾಬ್ದಾರಿಯ ನೇತೃತ್ವವನ್ನು ಗ್ರಾಮ ಸರ್ಕಾರಕ್ಕೆ ನೀಡಿದ್ದು, ಚುನಾಯಿತ ಪ್ರತಿನಿಧಿಗಳಾದ ನಾವು ಪಂಚಾಯತ್ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನುಭವ ಪಡೆದು, ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ- ಜವಾಬ್ದಾರಿಗಳ ಮಹತ್ವವನ್ನು ಆಳವಾಗಿ ಅರ್ಥೈಸಿಕೊಂಡಿದ್ದರಿಂದ ವಿಕೋಪದ ಪರಿಸ್ಥಿತಿಯನ್ನೂ ಸಹ ನಿಭಾಯಿಸಲು ಸ್ಥಳೀಯ ಸರ್ಕಾರವಾಗಿ ನಮಗೆ ಸಾಧ್ಯವಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಜನರ ಅಗತ್ಯಗಳೇನು? ಇಲ್ಲಿನ ಪರಿಸ್ಥಿತಿ ಹೇಗಿದೆ? ಕಾರ್ಗಳೇನು? ಮುಂದಿರುವ ಸವಾಲುಗಳೇನು? ಎಂಬುದನ್ನು ಕೂಲಂಕಶವಾಗಿ ಗಮನಿಸಿರುವುದಾಗಿ ಅವರು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಂತೆ ಇರುವ ಈ ಸಮಯದಲ್ಲಿ ನಾವು ಸ್ಥಳೀಯ ಸರ್ಕಾರದ ಅವಿಭಾಜ್ಯ ಅಂಗವಾಗಿ, ವಿಕೋಪವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಉತ್ತರದಾಯಿಯಾಗಿ ಪಂಚಾಯತ್‌ನ ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಕಾರ್ಯನಿರ್ವಹಿಸಿದ್ದೇವೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಗ್ಗೂಡಿ ಆಡಳಿತ ನಡೆಸಿರುವುದೇ ಈ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ಪ್ರಮುಖ ಕಾರಣ. ಈ ವಿಕೋಪದ ಪರಿಸ್ಥಿತಿ ಇನ್ನೂ ಮುಂದುವರೆಯುತ್ತಿರುವ ಈ ಸವಾಲಿನ ಸಮಯದಲ್ಲಿ, ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿಯ ಆಥವಾ ಉಸ್ತುವಾರಿ ಅಧಿಕಾರಿಯ ನೇಮಕ ಅಸಮಂಜಸವಾದುದು. ಸರ್ಕಾರ ಈ ಆಲೋಚನೆ, ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು, ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಸ್ಥಳೀಯ ಸರ್ಕಾರವನ್ನೇ ಮದ್ಯಂತರ ಸ್ಥಳೀಯ ಸ್ವಯಂ ಸರ್ಕಾರವಾಗಿ ಮುಂದುವರೆಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿರುವ ಅವರು, ಗ್ರಾಮ ಪಂಚಾಯತ್‌ನ ಜನರಿಂದ ಚುನಾಯಿತರಾದ ನಾವು ಸ್ಥಳೀಯ ಸರ್ಕಾರದ ಭಾಗವಾಗಿ ನಮ್ಮ ಗ್ರಾಮದ ಜನರಿಗೆ ಗ್ರಾಮಾಭಿವೃದ್ಧಿಗೆ ಬದ್ಧರಾಗಿರುತ್ತೇವೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post