ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶಾಖಪಟ್ಟಣಂ: ಇಲ್ಲಿನ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, 200 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ.
ಇಂದು ನಸುಕಿನ 3 ಗಂಟೆ ವೇಳೆಯಲ್ಲಿ ಗೋಪಾಲಪಟ್ಟಣದ ನಾಯ್ಡು ತೋಟಾ ಸಮೀಪದ ಎಲ್’ಜಿ ಪಾಲಿಮರ್ಸ್ ಇಂಡಸ್ಟ್ರೀಸ್’ನಲ್ಲಿ ದುರಂತ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಬೆರೆತ ಕಾರಣ, ಸುತ್ತಮುತ್ತಲಿನ ನಿವಾಸಿಗಳು ಅಸ್ವಸ್ಥಗೊಂಡಿದ್ದಾರೆ.
ಈ ವೇಳೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿಕೆಯಾಗಿದ್ದು, 200ಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥಗೊಂಡಿದ್ದು, ಇದರಲ್ಲಿ 20 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಎನ್’ಡಿಆರ್’ಎಫ್ ಕಾರ್ಯಾಚರಣೆ
ಘಟನೆ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಲ್ಲಿಂದ ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಿದ್ದಾರೆ.
ಸುಮಾರು 27 ಯೋಧರು ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಸುಮಾರು ಶೇ.80 ರಷ್ಟು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಸಭೆ
ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತುರ್ತು ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿದ್ದಾರೆ. ಗೃಹ ಸಚಿವಾಲಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡ ಪ್ರಧಾನಿ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲಿ ಸದ್ಯ ಪರಿಸ್ಥಿತಿಯನ್ನು ನಿಗಾವಹಿಸಲಾಗುತ್ತಿದೆ. ಗೃಹ ಸಚಿವ ಅಮಿತಾ ಶಾ ಕೂಡ ಘಟನೆ ತೀರಾ ದುರದೃಷ್ಟಕರ ಎಂದಿದ್ದಾರೆ.
ಆಂಧ್ರ ಸಿಎಂಗೆ ಪ್ರಧಾನಿ ಕರೆ
ಇನ್ನು, ಘಟನೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪರಿಸ್ಥಿತಿ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ನಿರ್ವಹಿಸಲು ಎಲ್ಲ ಸಹಕಾರ ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ.
Get in Touch With Us info@kalpa.news Whatsapp: 9481252093






Discussion about this post