ಅದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಬೇಕಿದ್ದ ಕ್ಷಣವಾಗಿತ್ತು. ಇದನ್ನು ಸಾಕಾರಗೊಳಿಸಲು ಇಸ್ರೋ ವಿಜ್ಞಾನಿಗಳು ವರ್ಷಗಟ್ಟಲೆ ಹಗಲು ರಾತ್ರಿ ಶ್ರಮಿಸಿದ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ, ವಿಜ್ಞಾನಿಗಳೊಂದಿಗೆ ಕುಳಿತಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ…
ಚಂದ್ರಯಾನ-2 ಭಾಗವಾಗಿ 48 ದಿನಗಳ ಸುದೀರ್ಘ ಪ್ರಯಾಣದ ನಂತರ ನಿನ್ನೆ ತಡರಾತ್ರಿ 27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೆಯ ಹಂತದಲ್ಲಿ ತನ್ನ ಸಂಪರ್ಕ ಕಡಿದುಕೊಂಡು, ವಿಜ್ಞಾನಿಗಳ ಕನಸು ಮಾತ್ರವಲ್ಲ, ಇಡಿಯ ದೇಶದ ಸಂತೋಷವನ್ನು ಕಮರಿಸಿದೆ.
ಈ ಯೋಜನೆ ಆರಂಭದಿಂದಲೂ ಎಲ್ಲ ಹಂತಗಳಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬಂದಿತ್ತು. ಯಾವುದೇ ದೊಡ್ಡ ವಿಜ್ಞಗಳು ಎದುರಾಗಿರಲಿಲ್ಲ. ಆದರೆ, ಕೊನೆಯ ಹಂತದಲ್ಲಿ ಹೀಗಾಗಿರುವುದು ನಿಜಕ್ಕೂ ಭಾರತೀಯರ ಆಶಾಭಾವನೆಯನ್ನು ಕಮರಿಸಿಲ್ಲ ಎನ್ನುವುದಾದರೂ ನಿರಾಸೆ ಉಂಟು ಮಾಡಿರುವುದಂತೂ ಸತ್ಯ.
ಇದೇ ವೇಳೆ, ಈ ಯೋಜನೆ ಕೊನೆಯ ಕ್ಷಣದಲ್ಲಿ ಹಿನ್ನಡೆಯಾಗಿರುವ ಬೆನ್ನಲ್ಲೇ ನಿಖರ ಹಾಗೂ ವೈಜ್ಞಾನಿಕ ಜ್ಯೋತಿಷಿ ಎಂದು ದೇಶದಲ್ಲೇ ಖ್ಯಾತರಾಗಿರುವ ಪ್ರಕಾಶ್ ಅಮ್ಮಣ್ಣಾಯ ಅವರು ಕೆಲವೊಂದು ವಿಚಾರವನ್ನು ತಮ್ಮ ಫೇಸ್’ಬುಕ್’ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿ ಅಮ್ಮಣ್ಣಾಯ ಅವರು ಬರೆದಿರುವ ಸಮಯ ಹಾಗೂ ಗ್ರಹಗತಿಗಳು ಲೆಕ್ಕಾಚಾರಕ್ಕೂ, ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಸಂಪರ್ಕ ಕಡಿದುಕೊಂಡಿರುವ ಸಮಯಕ್ಕೂ ತಾಳೆಯಾಗುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಅಮ್ಮಣ್ಣಾಯ ಅವರೊಂದಿಗೇ ಚರ್ಚಿಸುವ ಎಂದು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ದೂರವಾಣಿ ಕರೆಗೆ ಅವರು ಸಿಗದ ಕಾರಣ ಅವರ ಪೋಸ್ಟ್ ಆಧರಿಸಿ ಇಲ್ಲಿ ಕೆಲವು ವಿಚಾರಗಳನ್ನು ಉಲ್ಲೇಖಿಸಿದ್ದೇವೆ.
ಅಮ್ಮಣ್ಣಾಯ ಅವರ ಪೋಸ್ಟ್’ನಲ್ಲಿ ಏನಿದೆ?
ಶನಿವಾರ 2 AM ಬಳಿಕ ನವಮಿ ತಿಥಿ ಇರುವುದರಿಂದ ಇದು ದಗ್ಧ ಯೋಗವಾಗುತ್ತದೆ. ಅಂದರೆ ಕಾರ್ಯ ಸಿದ್ಧಿಯಾಗುವಲ್ಲಿ ತೊಡಕುಗಳಾಗುತ್ತದೆ. ಶುಕ್ಲ ನವಮಿ ಎಂದರೆ ರವಿಯಿಂದ ಚಂದ್ರನು 12ಡಿಗ್ರಿ x 9 ಅಂತರದ ದೂರ. ಹಾಗೆಂದು ಕಾರ್ಯ ವಿಫಲವಲ್ಲ ಅಥವಾ ಹಾನಿಯೂ ಅಲ್ಲ. ಇದು ವಿಳಂಬ ಎಂದರ್ಥ.
ಹಾಗೆಯೇ 9 ನೆಯ ತಾರೀಕು, (12ಡಿಗ್ರಿ x 11) ಸೋಮವಾರವೂ ಏಕಾದಶಿ ಇರುವುದರಿಂದ ಆ ದಿನವೂ ದಗ್ಧ ಯೋಗ ಇರುತ್ತದೆ. ಅಲ್ಲಿಯೂ ಕಾರ್ಯಕ್ಕೆ ವಿಘ್ನಗಳು ಉಂಟಾಗುತ್ತದೆ. ರವಿ ಚಂದ್ರರನ್ನಾಧರಿಸಿ ಮಾಡುವ ಕಾರ್ಯಗಳಿಗೆ ಇಂತಹ ವಿಘ್ನಗಳಾಗುತ್ತದೆ. ಹುಣ್ಣಿಮೆಯ ನಂತರ ಪ್ರತೀ ತಿಥಿಗೆ 12ಡಿಗ್ರಿ ಅಂತರ ಹೆಚ್ಚುತ್ತಾ ರವಿಯಿಂದ ದೂರ ಸಾಗುವುದು, ಅಮಾವಾಸ್ಯೆಯ ನಂತರ ರವಿಗೆ ಸಮೀಪವಾಗುವಿಕೆಯ ಕ್ರಿಯೆಯನ್ನು ಪುರಾತನರು ತಿಥಿ ಘಟಿ ಅಂತರದ ಮೂಲಕ ಲೆಕ್ಕಾಚಾರ ಮಾಡಿದ್ದರು. ಇದನ್ನೇ ಮುಹೂರ್ತಗಳಲ್ಲಿ ವಿಶೇಷವಾಗಿ ಪರಿಗಣಿಸುತ್ತಾರೆ.
ಚಂದ್ರನು ರವಿಯಿಂದ ಪ್ರತೀ ದಿನವೂ 12 ಡಿಗ್ರಿ ಅಂತರದಲ್ಲಿ ಸರಿಯುತ್ತಾನೆ. ಅಮಾವಾಸ್ಯೆಯಲ್ಲಿ ಒಂದೇ ಬಿಂದುವಿನಲ್ಲೂ, ಹುಣ್ಣಿಮೆಯ ದಿನ 180 ಡಿಗ್ರಿ ಅಂತರ ದೂರದಲ್ಲೂ ಇರುವುದು ಖಗೋಳ ನಿಯಮ.
ಈ ಪೋಸ್ಟ್ ಆಧಾರದಲ್ಲಿ ನೋಡುವುದಾದರೆ, ಚಂದ್ರನ ನಿಗದಿತ ಕಕ್ಷೆಯಲ್ಲಿ ವಿಕ್ರಮ್ ಲ್ಯಾಂಡರ್ ಇಳಿಯುವ ನಿಶ್ಚಿತ ಸಮಯಕ್ಕೂ ಅಮ್ಮಣ್ಣಾಯ ಅವರು ಉಲ್ಲೇಖಿಸಿರುವ ಲೆಕ್ಕಾಚಾರಕ್ಕೂ ಒಂದೇ ಆಗುತ್ತದೆ. ಈ ಹಿನ್ನೆಲೆಯಲ್ಲಿ, ಎಲ್ಲವೂ ಸರಿಯಾಗಿದ್ದು, ಎಲ್ಲ ಹಂತಗಳಲ್ಲೂ ಯಾವುದೇ ತೊಂದರೆಯಿಲ್ಲದೇ 48 ದಿನ ಸಾಗಿದ್ದ ಈ ಯೋಜನೆಯ ಕೊನೆಯ ಹಂತದಲ್ಲಿ ‘ದಗ್ಧ ಯೋಗ’ ಇದನ್ನು ನಾಶ ಮಾಡಿತೇ? ಈ ಸಮಯವೇ ಇಸ್ರೋ ವಿಜ್ಞಾನಿಗಳ ವರ್ಷಗಳ ಶ್ರಮವನ್ನು, ಕೋಟ್ಯಂತರ ಭಾರತೀಯರ ಕನಸನ್ನು ತಾತ್ಕಾಲಿಕವಾಗಿ ವಿಫಲವಾಗಿಸಿತೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
-ಕಲ್ಪ ನ್ಯೂಸ್ ಡೆಸ್ಕ್
Discussion about this post