ಕಲ್ಪ ಮೀಡಿಯಾ ಹೌಸ್ | ವಾಷಿಂಗ್ಟನ್ ಡಿಸಿ |
ಅಮೆರಿಕ ಪ್ರವಾಸದಲ್ಲಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ MBPatil ಅವರ ನೇತೃತ್ವದ ನಿಯೋಗವು ಮಂಗಳವಾರ ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಜೊತೆ ಮಹತ್ವದ ಮಾತುಕತೆ ನಡೆಸಿತು. ಜಾಗತಿಕ ಕಂಪನಿಗಳು ಅನುಸರಿಸುತ್ತಿರುವ “ಚೀನಾ + ಒನ್” ಕಾರ್ಯಾಚರಣೆ ತಂತ್ರದ ಸದುಪಯೋಗ ಪಡೆಯಲು ಕರ್ನಾಟಕಕ್ಕೆ ಇರುವ ಅನುಕೂಲತೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಮತ್ತಿತರರು ಪಾಲ್ಗೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಬೆಳವಣಿಗೆ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಯನ್ನೂ ನಡೆಸಲಾಯಿತು.

ಇದೆ ವೇಳೆ, ಬೆಂಗಳೂರಿಗೆ ಹೆಚ್ಚಿನ ಹೂಡಿಕೆಯನ್ನು ಸೆಳೆಯುವ ನಿಟ್ಟಿನಲ್ಲಿ ನಗರದ ದಟ್ಟಣೆಯನ್ನು ತಗ್ಗಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಚಿವ ಪಾಟೀಲ ಅವರು ಕೌಶಲ್ಯಯುಕ್ತ ಕಾರ್ಮಿಕರ ಸಂಖ್ಯೆಯಲ್ಲಿ ಕೊರತೆ ಉಂಟಾಗದಂತಹ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಯುಎಸ್ಐಎಸ್ ಪಿಎಫ್ (ಯುಎಸ್- ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ) ಜೊತೆ ನಡೆದ ಸಭೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ನಿರ್ಮಾಣವಾಗಲಿರುವ ಆರೋಗ್ಯ ತಂತ್ರಜ್ಞಾನ ಪಾರ್ಕ್ ನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಅವಲೋಕಿಸಲಾಯಿತು.
ಕರ್ನಾಟಕದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪೂರಕವಾದ ನೀತಿಗಳನ್ನು ಅನುಸರಿಸುವ ಅಗತ್ಯವಿದೆ ಎಂಬ ಸಲಹೆ ಸಭೆಯಲ್ಲಿದ್ದವರಿಂದ ವ್ಯಕ್ತವಾಯಿತು.

Also read: ನಿಖರ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಆತ್ಮವಿಶ್ವಾಸ ತುಂಬಿ: ಅಧಿಕಾರಿಗಳಿಗೆ ಕೃಷಿ ಸಚಿವರ ಸೂಚನೆ
ಇಂಡಸ್ಟ್ರಿ 4.0 ಸಂಬಂಧಿಸಿದ ಕೌಶಲಗಳ ಕಲಿಕೆಗೆ ಪೂರಕವಾಗಿ ತರಬೇತಿ ಪಠ್ಯಕ್ರಮಗಳನ್ನು ಸಿದ್ದಪಡಿಸುವ ಬಗ್ಗೆಯೂ ವಿಚಾರ ವಿನಿಮಯ ನಡೆಯಿತು. ಜಿಇ ವೆರ್ನೋವ ಜೊತೆಗಿನ ಸಭೆಯಲ್ಲಿ ಕರ್ನಾಟಕದಲ್ಲಿ ಕಾಂಪೋನೆಂಟ್ ಗಳ ತಯಾರಿಕೆಗೆ ಇರುವ ಅವಕಾಶಗಳ ಬಗ್ಗೆ ಗಮನಹರಿಸಲಾಯಿತು. ಜೊತೆಗೆ, ಸೌರಶಕ್ತಿ, ಪವನ ಶಕ್ತಿ ಮತ್ತಿತರ ಪರ್ಯಾಯ ಇಂಧನಗಳ ಸಂಗ್ರಹ ವ್ಯವಸ್ಥೆ ಸ್ಥಾಪನೆ ಸಂಬಂಧ ಇರುವ ಹೂಡಿಕೆ ಅವಕಾಶಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಬೋಯಿಂಗ್ ಉಪಾಧ್ಯಕ್ಷರಾದ ಗ್ರೆಟಾ ಲಂಡ್ ಬರ್ಗ್, ನಿರ್ದೇಶಕರಾದ ನಿಕೋಲ ಪೊರ್ರೆಕಾ, ಯುಎಸ್ಐ ಪಿಎಫ್ ಸಿಇಒ ಮುಕೇಶ್ ಅಘಿ, ಉಪಾಧ್ಯಕ್ಷರಾದ ಸೂಸನ್ ರಿಚಿ, ಜಿಇ ವೆರ್ನೋವಾ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಪಿಕ್ಯಾರ್ಟ್ ಮತ್ತಿತರರು ಸಭೆಯಲ್ಲಿ ಪಾಲ್ಕೊಂಡಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಅವರು ಸಭೆಗಳಲ್ಲಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post