ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಿಣಾಮಕಾರಿ ಬರ ನಿರ್ವಹಣೆಗೆ ಕೃಷಿ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ನಿರ್ವಹಣೆ ಮಾಡಬೇಕು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ Minister Cheluvarayaswamy ಸೂಚಿಸಿದ್ದಾರೆ.
ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿಂದು ಕೃಷಿ ಹಾಗೂ ಜಲಾನಯನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆ ನೀಡಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದೆ ಅಧಿಕಾರಿಗಳು ನಿರಂತರವಾಗಿ ರೈತರೊಂದಿಗೆ ಸಂಪರ್ಕದಲ್ಲಿದ್ದು ಆತ್ಮವಿಶ್ವಾಸ ತುಂಬಬೇಕು. ಸಲಹೆ, ಮಾರ್ಗದರ್ಶನ ನೀಡುತ್ತಾ, ಅರಿವು ಮೂಡಿಸಬೇಕು ಎಂದರು.
ಎಲ್ಲಾ ಗ್ರಾಮಗಳಲ್ಲಿ ನಿಖರ ಬೆಳೆ ಸಮೀಕ್ಷೆ ನಡೆಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯ ಬೆಳೆ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ಮಾಹಿತಿ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ರೈತರ ಹಿತ ಸಂರಕ್ಷಣೆ ಮೊದಲ ಆಧ್ಯತೆಯಾಬೇಕು. ಅಧಿಕಾರಿಗಳು ಸುಲಭವಾಗಿ ರೈತರಿಗೆ ಸಿಗುವಂತಿರಬೇಕು ಎಂದು ಸೂಚನೆ ನೀಡಿದರು.
ವಿಮೆ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಮೇಲ್ವಿಚಾರಣೆ ನಡೆಸಿ ಎಲ್ಲಾ ಅರ್ಹರಿಗೆ ಸೌಲಭ್ಯ ತಲುಪಬೇಕು. ಹಿಂಗಾರು ಬೆಳೆಗಳ ವಿಮೆ ನೋಂದಣಿ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ ಹೆಚ್ಚಿನ ನೊಂದಣಿ ಮಾಡಿಸಲು ಸೂಚನೆ ನೀಡಿದರು.
Also read: ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ಧೂರಿ ಚಾಲನೆ
ಬಜೆಟ್ ನಲ್ಲಿ ಘೋಷಣೆಯಾದ ಎಲ್ಲಾ ಕಾರ್ಯಕ್ರಮ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಅನುದಾನ ಬಿಡುಗಡೆಗೆ ಅನುಗುಣವಾಗಿ ಎಲ್ಲಾ ಜಿಲ್ಲೆಗಳಲ್ಲಿ ಶೇ 100% ಆರ್ಥಿಕ ಭೌತಿಕ ಗುರಿ ಸಾಧನೆಯಾಗಬೇಕು ಎಂದು ಸಚಿವರು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿ ಜಲ ಸಂರಕ್ಷಣೆ ಚಟುವಟಿಕೆಗಳಿಗೆ ಆಧ್ಯತೆ ನೀಡಿ. ಹಿಂಗಾರಿನಲ್ಲಿ ಸಾಧ್ಯವಿರುವ ಒಣ ಬೇಸಾಯದ ಬಗ್ಗೆ ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳಿಂದ ಮಾಹಿತಿ ಪಡೆದು ಅದನ್ನು ರೈತರಿಗೆ ವರ್ಗಾಯಿಸಿ, ಮುಂದಿನ ದಿನಗಳಲ್ಲಿ ಸಮಗ್ರ ಕೃಷಿ (ಮಿಶ್ರ ಬೇಸಾಯ) ಹಾಗೂ ಸಿರಿಧಾನ್ಯ ಬೆಳೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರೈತರ ನಷ್ಟ ತಪ್ಪಿಸಿ ನಿಶ್ಚಿತ ಆದಾಯ ಖಾತರಿ ಮಾಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಎಂದು ಸಚಿವರು ಸಲಹೆ ನೀಡಿದರು.
ಕಳಪೆ ಬಿತ್ತನೆ ಬೀಜ ,ರಸಗೊಬ್ಬರ ಮಾರಾಟ, ಕೃಷಿ ಯಾಂತ್ರೀಕರಣ, ಯಂತ್ರ ಧಾರೆ, ಸಬ್ಸಿಡಿ ಯೋಜನೆಯಲ್ಲಿ ಯಾವುದೇ ದುರ್ಬಳಕೆಯಾಗದಂತೆ ನಿಗಾವಹಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ಅಯಾಯ ಜಿಲ್ಲೆಗಳ ಜಂಟಿ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ನವೋದ್ಯಮ ಪ್ರೋತ್ಸಾಹ ಯೋಜನೆ ಅನುಷ್ಠಾನ, ನಂದಿನಿ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಬ್ರಾಂಡಿಗ್, ಕೇಂದ್ರ ಪುರಸ್ಕೃತ ಜಲಾನಯನ ಅಭಿವೃದ್ಧಿ ಮತ್ತು ಜಲ ಸಂರಕ್ಷಣಾ ಯೋಜನೆಗಳ ಪರಿಣಾಮಕಾರಿ ಬಳಕೆ ಕುರಿತು ಕೃಷಿ ಸಚಿವರು ಸೂಚನೆ ನೀಡಿದರು.
ಕೃಷಿ ಇಲಾಖೆ ಆಯುಕ್ತರಾದ ವೈ ಎಸ್. ಪಾಟೀಲ್, ನಿರ್ದೇಶಕರಾದ ಜಿ.ಟಿ ಪುತ್ರ, ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್, ನಿರ್ದೇಶಕರಾದ ಶ್ರೀನಿವಾಸ್ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post