ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಗವಂತ ನಮಗೆ ಸಮರ್ಪಕವಾಗಿ ಮಳೆಯ ಮೂಲಕ ನೀರನ್ನು ನದಿಯನ್ನು ನೀಡಿದ್ದಾನೆ. ಆದರೆ ನಾವು ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸದೆ ನಮಗೆ ನಾವೇ ದ್ರೋಹ ಮಾಡಿ ಕೊಂಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಭಾನುವಾರ ಬಿಎಚ್ ರಸ್ತೆಯ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಜಿಪಂ, ತಾಪಂ ಏರ್ಪಡಿಸಿದ್ದ ನದಿಗಳ ಪುನಶ್ಚೇತನ ಕುರಿತ ಕಾರ್ಯಾಗಾರ ಭಾಗವಹಿಸಿ ಮಾತನಾಡಿದರು.
ಜನರಿಗೆ ನೀರನ್ನು ನೀಡುವ ಕೆಲಸ ದೇವರ ಕೆಲಸದಷ್ಟೇ ಪವಿತ್ರವಾದುದು. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಂರ್ತಜಲ ಸಂರಕ್ಷಣೆಯ ಮೂಲಕ ನದಿ, ಕೆರೆ, ಕೊಳಗಳ ನೀರಿನ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದ್ದು ಈ ಕಾರ್ಯಕ್ಕೆ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ನಾಗರಿಕರು ಸ್ಫಂದಿಸಿ ಅವರ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.
ಶಾಸಕ ಬಿ.ಕೆ. ಸಂಗಮೇಶ್ ಮಾತನಾಡಿ, ಗಾಳಿ, ನೀರು, ನೆಲ ಸಕಲಜೀವಿಗಳಿಗೂ ಅತ್ಯಗತ್ಯ ಎಂದರು.
ಜಿಪಂ ಸಿಇಓ ವೈಶಾಲಿ ಮಾತನಾಡಿ, ಮಲೆನಾಡಿನಲ್ಲಿ ಸುರಿಯುವ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ನಾವು ಅವುಗಳನ್ನು ಬಳಸಿಕೊಳ್ಳುವ ರೀತಿಯಲ್ಲಾಗಿರುವ ವ್ಯತ್ಯಾಸದಿಂದಾಗಿ ಮಳೆಯ ವಿಧಾನ ಬದಲಾಗಿದೆ ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಾಗರಾಜ ಗಂಗೊಳ್ಳಿ ಮಾತನಾಡಿ, ಮಳೆ ನೀರು ನೆಲದಲ್ಲಿ ಇಂಗಿಸಲು ಅವಕಾಶ ನೀಡದೇ ಇರುವುದರಿಂದ ಅಂರ್ತಜಲ ಕಡಿಮೆಯಾಗುತ್ತಿದೆ. ಈ ನದಿಗಳ ಪುನಶ್ಚೇತನ ಕಾರ್ಯದಿಂದ ಅಂರ್ತಜಲ ಹೆಚ್ಚಾಗಿ ಕೆಲವೇ ವರ್ಷಗಳಲ್ಲಿ ಗ್ರಾಮಗಳ ಕೆರೆ, ಕೊಳ್ಳ,ಹಳ್ಳಗಳಲ್ಲಿ ಯಥೇಚ್ಛ ನೀರನ್ನು ಕಾಣುವಂತಾಗಿ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ವಿವರಿಸಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್, ಜಿಪಂ ಸದಸ್ಯ ಮಣಿಶೇಖರ್, ವೀರಭದ್ರಪ್ಪ ಪೂಜಾರಿ, ರೇಖಾ ಉಮೇಶ್, ಆರ್ಯ ವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷ ಅರುಣ್ ಮುಂತಾದವರು ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ ನಿರೂಪಿಸಿ, ತಹಶೀಲ್ದಾರ್ ಸೋಮಶೇಖರ್ ವಂದಿಸಿದರು.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post