ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪಶ್ಚಿಮ ಘಟ್ಟ ಪ್ರದೇಶವು ಗುಜರಾತಿನ ತಪತಿ ನದಿಯ ತಟದಿಂದ ದಕ್ಷಿಣದ ಕನ್ಯಾಕುಮಾರಿಯ ವರೆಗೆ ಆರು ರಾಜ್ಯಗಳಲ್ಲಿ 1,200 ಕಿಮೀ ಸುತ್ತುವರೆದು 62,000 ಚದುರ ಕಿಮೀ ವ್ಯಾಪ್ತಿಯಲ್ಲಿ ತನ್ನ ಬಾಹುಳ್ಯವನ್ನು ಪಸರಿಸಿಕೊಂಡಿದೆ.
ತನ್ನ ಮೈ ಸಿರಿಯಲ್ಲಿ 7,402 ಹೂಬಿಡುವ ವಿವಿಧ ಪ್ರಬೇಧಗಳ ಹೂ ಸಸ್ಯಗಳು 1814 ಜಾತಿಯ ವಿವಿಧತೆಯ ಮರಗಳು, 139 ಜಾತಿಯ ಸಸ್ತನಿಗಳು, ಕಾಡು ಮೃಗಗಳು ವಿವಿಧ ವೈವಿದ್ಯತೆಯುಳ್ಳ 6,000 ಕೀಟದ ಪ್ರಬೇಧಗಳು, 508ಕ್ಕೂ ಹೆಚ್ಚು ಸಂಖ್ಯೆಯ ಪಕ್ಷಿ ಸಂಕುಲಗಳು, 290 ವಿವಿಧ ಬಗೆಯ ಸಿಹಿನೀರಿನ ಮೀನು ತಳಿಗಳು, 66 ಜೀವನದಿಗೆ ಉಗಮ ಸ್ಥಾನವಾಗಿರುವ ಈ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾರ್ಷಿಕ ಒಟ್ಟಾರೆ ಸುಮಾರು 2314 ಮಿಮೀ ಮಳೆಯು ಸುರಿಸುವ ತಾಣವಾಗಿದೆ. ಪ್ರತ್ಯಕ್ಷವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಒಟ್ಟು 400 ದಶಲಕ್ಷ ಜನರ ಬದುಕು ಸಾಗಲು ಸಾಕ್ಷಿಯಾಗಿದೆ.
ಈ ನಿತ್ಯ ಹರಿಧ್ವರ್ಣದ ಕಾಡುಗಳಲ್ಲಿ ಮರಗಿಡಗಳ ಸಮೂಹಗಳು ಬೇರಿನ ಮೂಲಕ ಮಣ್ಣಿನಲ್ಲಿರುವ ನೀರನ್ನು ಹೀರಿಕೊಂಡು ತನ್ನೊಡಲ ಎಲೆ, ಕೊಂಬೆಗಳ ಬೆಳವಣಿಗೆಗೆ ಬಳಸಿ ಉಳಿದ ನೀರನ್ನು ದ್ರವೀಕರಿಸಿ ಮಂಜಿನ ರೂಪದಲ್ಲಿ ಎಲೆಗಳ ಮೇಲೆ ಒಸರುವ ಘನೀಕೃತ ಇಬ್ಬನಿಗಳ ಮೂಲಕ ಮಳೆಯನ್ನು ಆಕರ್ಷಿಸುತ್ತವೆ. (ಖಠಿಟಞಠಿಟ) ಈ ಕ್ರಿಯೆಗೆ ಆಂಗ್ಲ ಭಾಷೆಯಲ್ಲಿ ಸ್ಟೋಮ್ಯಾಟೋ ಎಂದು ಕರೆಯುತ್ತಾರೆ. ಇಂತಹ ವಿಸ್ಮಯಕಾರಿ ಜೈವಿಕ ಕ್ರಿಯೆಯಿಂದ ಪರಿಸರದ ಸಮತೋಲನದ ವಾತಾವರಣವನ್ನು ಕಾಣಬಹುದಾಗಿದೆ.
ವಾಯು ಮಂಡಲಕ್ಕೆ ವಿಶಿಷ್ಟವಾಗಿ ವರದಾನವಾಗಿರುವ ಈ ಪಶ್ಚಿಮ ಘಟ್ಟ ಪ್ರದೇಶಕ್ಕೆ ಯುನೆಸ್ಕೋದಿಂದ ವಿಶ್ವ ಪರಂಪರೆಯ ಹೆಗ್ಗಳಿಕೆಗೆ ಪಾತ್ರವಾಗಿದೆ, (ಖಠಿಟಞಠಿಟ) ಹಾಗೂ ಜಾಗತಿಕ ಹವಾಮಾನದ ಸಮಾನತೆಯನ್ನು ಕಾಪಾಡಿ, ಹವಾಮಾನ ನಿಯಂತ್ರಿಸುವ ಜೊತೆಗೆ ಮುಂಗಾರು ಮಳೆ ಪದ್ಧತಿಯನ್ನು ಸುಸ್ಥಿಯಲ್ಲಿಡುವ ಸ್ವಾಭಾವಿಕ ಋತು ಚಕ್ರದ ಕೊಂಡಿಯಾಗಿ ಈ ಪಶ್ಚಿಮ ಘಟ್ಟಗಳು ಕೊಡುಗೆ ನೀಡುತ್ತಿವೆ.
ಈ ಪ್ರದೇಶಗಳಲ್ಲಿ ಹುಟ್ಟಿ ಹರಿಯುವ ಕಾಳಿ, ಶರಾವತಿ, ತುಂಗಭದ್ರಾ, ಕೃಷ್ಣ, ಕಾವೇರಿ, ಗೋದಾವರಿ, ಮಲಪ್ರಭ, ಘಟಪ್ರಭ, ಪೆರಿಯಾರ್, ಪೆನ್ನಾರ್ ನದಿಗಳಿಂದ ದೇಶದ ಒಟ್ಟು ಶೇಕಡ 22ರಷ್ಟು ಫಲವತ್ತಾದ ಕೃಷಿ ಭೂಮಿಗೆ ನೀರುಣಿಸಿ ಆಹಾರೋತ್ಪತ್ತಿಗೆ ನಾಂದಿಯಾಗಿದೆ.
ಜೀವವೈವಿಧ್ಯತೆಯ ಸೂಕ್ಷ್ಮತಾಣವಾದ ಈ ಪ್ರದೇಶದಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿಗಳ ವಿಭಿನ್ನತೆಗಳನ್ನು ಕಾಣಬಹುದಾಗಿದೆ. ಪಶ್ಚಿಮ ಘಟ್ಟದ ಉದ್ದಗಲಕ್ಕೂ ಅನೇಕ ಗಿರಿಶ್ರೇಣಿಗಳು ಛಾದ್ರಿತವಾಗಿದ್ದು ಮುಖ್ಯವಾಗಿ ಅನ್ನಮುಡಿ, ಮಾಮುಲ್ಯ (ಕೇರಳ) ಪರ್ವತಗಳು, ಮುಳ್ಳಯ್ಯನಗಿರಿ(ಕರ್ನಾಟಕ) ಇವು ಅತಿ ಎತ್ತರದ ಗಿರಿಶ್ರೇಣಿಗಳಾಗಿವೆ.
ಪಶ್ಚಿಮ ಘಟ್ಟ ಪ್ರದೇಶದ ನಿತ್ಯ ಹರಿಧ್ವರ್ಣ ಕಾಡುಗಳು ಎಲ್ಲಾ ಸ್ತರದ ಜನರಿಗೆ ಬದುಕು ಕಟ್ಟಿಕೊಳ್ಳುವ ಜೀವನಾಡಿಯಾಗಿದೆ. ‘ಈ ಕಾನನಗಳಿಂದ ಏನನ್ನು ನಾವು ಪಡೆಯಬೇಕು ಎನ್ನುವುದಕ್ಕಿಂತ ಏನನ್ನು ಪಡೆದಿಲ್ಲ ಎನ್ನುವ ಇಂದಿನ ಪರಿಸ್ಥಿತಿಯು ಸತ್ಯಶೋಧನೆಗೆ ಎಡೆಮಾಡಿಕೊಟ್ಟಿದೆ.
ಅಪಾಯದ ಹಂಚಿನಲ್ಲಿ ಪಶ್ಚಿಮ ಘಟ್ಟ ಪ್ರದೇಶ
‘ಪ್ರಾಣಿ ಮತ್ತು ಮನುಷ್ಯನ ಸಂಘರ್ಷ ಒಂದೆಡೆಯಾದರೆ, ಪಟ್ಟಭದ್ರ ಹಿತಾಶಕ್ತಿಗಳಿಂದ ಅರಣ್ಯ ಭೂಮಿಯ ಲೂಟಿಯ ಸಂಘರ್ಷ ಮತ್ತೊಂದೆಡೆ, ವನ ಮತ್ತು ವನ್ಯಮೃಗಗಳ ಉಳಿಸುವ ಹೋರಾಟ ಇಂದು ಉಸಿರುಕಟ್ಟಿದ ವಾತಾವರಣ ಸೃಷ್ಟಿ ಮಾಡಿದೆ. ಕಾಡಿಗೆ ಕೊಳ್ಳಿ ಇಟ್ಟು, ಬಯಲು ಮಾಡಿ, ಭೂಮಿಯ ಅಳೆಯುವ ಗೋಮುಖ ವ್ಯಾಘ್ರಗಳ ಹಗಲು ದರೋಡೆಯ ಅಪರಾಧಿ ಬಾವನೆಗೆ ತಡೆಯಿಲ್ಲದೆ ಮುನ್ನುಡೆದಿದೆ. ಓಟು ಕೊಡುವ ಕೈಗಳಿಗೆ ಅರಣ್ಯದ ಮೇಟಿ ಭೂಮಿ ಕೊಡಲು ಹೊರಟಿರುವಂತಿದೆ.
ಸಹ್ಯಾದ್ರಿ ಬೆಟ್ಟ ಪ್ರದೇಶ
ಅರಣ್ಯ ಭೂಮಿಯ ಒತ್ತುವರಿ ಎಂದಾಗ ಮರಗಿಡಗಳ ನಾಶ, ಪ್ರಾಣಿಗಳ ಪಕ್ಷಿಗಳ ಅವಸಾನದ ಚಿತ್ರಣಗಳು ನಮ್ಮಲ್ಲಿ ಸಾಮಾನ್ಯಾವಾಗಿ ಮೂಡುತ್ತದೆ. ಪಶ್ಚಿಮ ಘಟ್ಟ ಪ್ರದೇಶವು ಉತ್ತರೋತ್ತರಣಿಯಾಗಿ ತನ್ನ ಒಡಲು ಬರಿದಾಗಿಸಿಕೊಂಡು ತಾನು ಬೆತ್ತಲಾಗುತ್ತಿರುವ ಇತಿಹಾಸವನ್ನು ಬಿಚ್ಚಿ ಹೇಳುತ್ತದೆ. ತನ್ನ ಮಡಿಲನ್ನು ದೋಚುವ ಭೂಗಳ್ಳರು, ಗಣಿ ಲೂಟಿಕೋರರು, ಮರಗಳ್ಳರಿಂದ ಹಿಡಿದು ರಸ್ತೆ, ರೈಲು, ಸ್ಥಾವರ, ಕಂಬಗಳ ಹಾಯಿಗಳಿಗೆ ಅರಣ್ಯೇತ್ತರ ಕಾರ್ಯಕ್ಕೆ ಪಶ್ಚಿಮ ಘಟ್ಟಗಳ ಬಾಹುಳ್ಯದ ಬಳಕೆಯಾಗುತ್ತಿದೆ ಇದರಿಂದ ಅರಣ್ಯ ಭೂಮಿ ನಾಶವಾಗುತ್ತಿದೆ ಹಾಗೂ ಜೀವ ವೈವಿದ್ಯತೆಯೆ ಸಮತೋಲನ ತಪ್ಪುತ್ತಿದೆ ಎನ್ನುವ ಅರಣ್ಯ ರೋಧನಕ್ಕೆ ಕಾರಣಕರ್ತರ್ಯಾರು? ಎನ್ನುವುದೇ ಅಳತೆಗೆ ಸಿಗದ ಪ್ರಶ್ನೆಯಾಗಿದೆ.
ಜೀವಿ ವೈವಿಧ್ಯತೆಯ ಅಸ್ಥಿತ್ವಕ್ಕೆ ಧಕ್ಕೆ
ಜೈವಿಕ ಸೂಕ್ಷ್ಮ ವಲಯವಾಗಿರುವ ಈ ಶಾಂತ ಕಣಿವೆಗಳಲ್ಲಿ ಕಾಡುಗಳನ್ನು ಕದಡಿ ಅಶಾಂತಿಗೆ ಸ್ಪಷ್ಟ ಕಾರಣಗಳನ್ನು ಗುರುತಿಸಲು ಹೊರಟಾಗ, ಇದರ ಒಡಲ ನೋವಿನ ಆಳದ ಆಕ್ರೋಶಗಳು ಸರಣಿ ಸರಣಿಯಾಗಿ ಬಿಚ್ಚಿಕೊಳ್ಳುತ್ತವೆ, 60ರ ದಶಕದ ಕುದುರೆಮುಖ ಅದಿರು ಯೋಜನೆ ಇರಬಹುದು, ಕೇರಳ ರಾಜ್ಯದ ಶಾಂತ ಕಣಿವೆಯನ್ನು ಕದಡಿದ ಅಂದಿನ ವ್ಯವಸ್ಥೆ ಇರಬಹುದು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಳಿಗಳ ದಾರಿಗೆ ಸೂಕ್ಷ್ಮ ಪ್ರದೇಶಗಳು ಬಲಿಯಾಗಿ ಅಶಾಂತಿಯ ವಾತಾವರಣಗಳು ಸೃಷ್ಟಿಯಾಗಿರುವ ಕಾರಣವೂ ಇರಬಹುದು. ಇತ್ತೀಚಿನ ಶಿಶಿಲ, ಬೈರಾಪುರ ಹೆದ್ದಾರಿಯ ಯೋಜನೆಗೆ 20 ಲಕ್ಷ ಮರಗಳ ಮಾರಣ ಹೋಮ (ಚಿಕ್ಕಮಗಳೂರು) ಬೆಳ್ತಂಗಡಿ ತಾಲ್ಲೂಕಿನ ಡಿಡುಪೆ – ಕುದುರೆ ಮುಖದ ಸಂಶೆಗೆ ಸಂಪರ್ಕ ರಸ್ತೆ ಇತ್ತೀಚಿನ ಹುಬ್ಬಳ್ಳಿ – ಅಂಕೋಲಾ ರೈಲ್ವೆ ರಸ್ತೆ, ಪ್ರಸ್ತಾವನೆಗಳು ಅರಣ್ಯ ನಾಶಕ್ಕೆ ಕಾರಣವಾಗಬಲ್ಲದು. ಕೊಡಗಿನ ಪ್ರವಾಸೋಧ್ಯಮದ ಪ್ರಖರತೆಯಿಂದ ಕೊಡಗು ಆಧುನೀಕರಣಕ್ಕೆ ಹತ್ತಿರವಾಗುತ್ತಿರುವುದರಿಂದ ಇಲ್ಲಿಯ ಜೀವವೈವಿಧ್ಯತೆಯ ಮೂಲ ಸೆಲೆಯು ಧಕ್ಕೆಯಾಗಿ ಪ್ರವಾಹಗಳು ಮತ್ತು ಅರಣ್ಯದ ಭೂಪ್ರದೇಶ ಕಡಿಮೆಯಾಗಲು ಕಾರಣವಾಗಿರುವ ಬಗ್ಗೆ ಪರಿಣತರು ತಮ್ಮ ಅನಿಸಿಕೆಗಳು ಮಂಡಿಸಿರುತ್ತಾರೆ. ಇದರ ಜೊತೆಗೆ ಪಶ್ಚಿಮ ಘಟ್ಟದ ನದಿಗಳ ತಿರುವು ಯೋಜನೆಗಳಿರಬಹುದು, ಈ ರೀತಿ ಪಶ್ಚಿಮ ಘಟ್ಟವು ನಾಶದ ಹಂಚಿಗೆ ಹೋಗಲು ನೂರಾರು ಕಾರಣಗಳಿವೆ.
ಇದರ ಜೊತೆಗೆ 2014ರಲ್ಲಿ ಅಂದಿನ ಕೇರಳ ಸರ್ಕಾರವು ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದ 3115 ಚ.ಮೈಲಿ ಅರಣ್ಯ ಪ್ರದೇಶ ಹಾಗೂ 123 ಸೂಕ್ಷ್ಮ ವಲಯದ ಗ್ರಾಮಗಳು ಸ್ಥಾಪಿತ ಜೀವ ವೈವಿದ್ಯತೆಯ ಕೇಂದ್ರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿದ್ದು? ಪಶ್ಚಿಮ ಘಟ್ಟದ ಉಳಿವಿಗೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ಇದರ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಗಾಳಿಯಂತ್ರಗಳ ಸ್ಥಾಪನೆ ಮೂಲಕ ಇದರ ತಿರುಗುಣೆಯ ಕಂಪನದಿಂದ ಪಕ್ಷಿ ಸಂಕುಲಗಳ ನಾಶ ಹಾಗೂ ವಲಸೆಗೆ ಹೋಗಿ ಒಟ್ಟಾರೆ ಅರಣ್ಯ ನಾಶದ ಮಾರಕ ಯೋಜನೆಗಳಾಗಿ ಪರಿಣಮಿಸಿವೆ ಒಟ್ಟಾರೆ ಪಶ್ಚಿಮ ಘಟ್ಟ ಪ್ರದೇಶವು ತನ್ನ ಸ್ವಾಭಾವಿಕ, ಜೈವಿಕ ಕೊಂಡಿಯು ಕಳಚುವ ಸ್ಥಿತಿಗೆ ಬರಬಹುದೆಂದು ಊಹಿಸಬಹುದು.
ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶ
ಅರಣ್ಯ ಭೂಮಿಯ ಲೂಟಿ ಮತ್ತು ಮಾರಾಟ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳು ಎರಡು ರೀತಿಯಲ್ಲಿ ಕಬಳಿಕೆಯಾಗುತ್ತಿರುವುದನ್ನು ಈ ಸಂದರ್ಭದಲ್ಲಿ ವಿಶ್ಲೇಷಸಬಹುದು. ಮೊದಲನೆಯದಾಗಿ ಸರ್ಕಾರ ಹಾಗೂ ಸರ್ಕಾರೇತರ ಕಾರ್ಯಕ್ರಮಗಳಿಗೆ ಬಳಕೆಗಾಗಿ ಕೈಗಾ ಅಣು ವಿದ್ಯುತ್ ಯೋಜನೆಗಳಾಗಲಿ, ಕಾರವಾರದ ನೌಕಾನೆಲೆ ಪ್ರದೇಶಕ್ಕೆ ಅರಣ್ಯ ಭೂಮಿಯ ಬಳಕೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳ ಕಾರ್ಯಕ್ಕೆ ಜೀವವೈವಿಧ್ಯತೆಯ ಈ ಪ್ರದೇಶಗಳನ್ನು, ತಲಾಂತರದಿಂದ ಸ್ವಾಭಾವಿಕವಾಗಿ ಜೈವಿಕ ಕೊಡುಗೆಗಳನ್ನು ನೀಡುತ್ತಿರುವ ಇದರ ಸ್ಥಾಪಿತ ಪ್ರಯೋಜನಗಳನ್ನು ಮರೆಮಾಚಿ ಪಶ್ಚಿಮ ಘಟ್ಟಕ್ಕೆ ದ್ರೋಹ ಬಗೆದಿರುವ ಸಾಕ್ಷಿಗಳು ಪ್ರತ್ಯಕ್ಷವಾಗಿ ನಾವು ಇಂದು ಕಾಣಬಹುದು, ಇಂತಹ ಪ್ರಾಕೃತಿಕ ಪ್ರಹಾರದ ವಿರುದ್ಧ ಸಂಘಟನೆಗಳ ಕೂಗು ಇಂದು ಗೌಣವಾಗಿ ಎಲ್ಲೋ ಕಾಡಂಚಿನಲ್ಲಿ ನಿಶ್ಯಬ್ದವಾಗಿಬಿಟ್ಟಿವೆ. ಇದು ದುರಂತವೇ ಸರಿ.
ಇನ್ನು ಪಶ್ಚಿಮ ಘಟ್ಟದ ಅರಣ್ಯ ಭೂಮಿಯನ್ನು ಸರ್ಕಾರೇತರರು ಲೂಟಿ ಹೊಡೆಯುತ್ತಿರುವ ಪರಿವೇ ಬೇರೆಯಾಗಿದೆ. ಬಕರ್ ಹುಕುಂ ಸಾಗುವಳಿಯು ಅರಣ್ಯ ಭೂಮಿಯ ಲೂಟಿಗೆ ಮಾರಕವಾದ ಕಾರ್ಯಕ್ರಮ. ‘‘ಇಷ್ಟು ವರ್ಷಗಳಿಂದ ಪ್ರಸ್ಥ ಭೂಮಿಗಳಲ್ಲಿ ಇದ್ದ, ಗೋಮಾಳ ಭೂಮಿಗಳನ್ನು ನುಂಗಿ ನೀರು ಕುಡಿದು, ನಾಡಿನ ಕಾಡು ಬರಿದು ಮಾಡಿ ಪಶು, ಪಕ್ಷಿಗಳಿಗೆ ಹುಲ್ಲು, ನೀರು ದೊರಕದೆ ಗೋಮಾಳಗಳು ವ್ಯವಸಾಯ ಭೂಮಿಗಳಾಗಿ ಮಾರ್ಪಟ್ಟಿರುವ ಕಾರಣ, ಇಂದು ಪಶುಗಳು ರಸ್ತೆಗಳಲ್ಲಿನ ಕಸ ಕಡ್ಡಿಗಳು, ಪ್ಲಾಸ್ಟಿಕ್ ವಸ್ತುಗಳನ್ನು ಮೇಯ್ಯುವ ಪರಿಸ್ಥಿತಿ ಒದಗಿ ಬಂದಿದೆ.
ಈ ಬಗರ್ ಹುಕುಂ ಸಾಗುವಳಿ ಯಾವ ರೀತಿ ಮುನ್ನಡೆದಿದೆ ಎಂದರೆ, ಪ್ರಸ್ತುತದಲ್ಲಿ ಬೃಹತ್ ಪ್ರಮಾಣದಲ್ಲಿ ಆಹಾರಗಳನ್ನು ಹುಡುಕಿ ಸಾಗುತ್ತಿರುವ ಸೈನಿಕ ಮಿಡತೆಗಳಂತೆ ಗುಂಪು ಗುಂಪಾಗಿ ಎಲ್ಲೆಲ್ಲಿ ಉತ್ತಮ ಮೇವು ಸಿಗುತ್ತದೋ ಅಲ್ಲಿ ಲಗ್ಗೆ ಹಾಕಿ ಬೆಳೆಗಳನ್ನು ನಾಶಪಡಿಸುವಂತೆ, ಗೋಮಾಳದ ಭೂಮಿಗಳು ಮುಗಿದ ನಂತರ ಈಗ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ನುಂಗಲು ಲಗ್ಗೆ ಹಾಕಿದೆ ಎನ್ನಬಹುದು. ಅವ್ಯಾಹತವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕಂದಾಯ ಇಲಾಖೆಗೆ ನಮೂನೇ 57 ಸಲ್ಲಿಸಲಾಗಿರುವ ಮಾಹಿತಿಯನ್ನು ಅವಲೋಕಿಸಿದಾಗ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅಂದಾಜಿನಂತೆ ಸುಮಾರು 1.60 ಸಾವಿರ ಹೆಕ್ಟೇರ್ ಪಶ್ಚಿಮ ಘಟ್ಟ ಪ್ರದೇಶದ ಅರಣ್ಯ ಭೂಮಿಯು ಸಾಗುವಳಿಯಾಗಿ ಬದಲಾಗುವ ಸನ್ನಿವೇಶ ಸೃಷ್ಟಿಯಾಗಿದೆ.
ಇವರಿಗೆ ಯಾವ ಪಶ್ಚಿಮ ಘಟ್ಟವಾದರೇನು? ಜೀವವೈವಿಧ್ಯತೆಗೆ ಧಕ್ಕೆಯಾದರೇನು? ಮಳೆ ಪ್ರಮಾಣ ಕಡಿಮೆಯಾದರೇನು? ತಮ್ಮ ಹಿಂಬಾಲಕರಿಗೆ ಭೂಮಿ ಮಂಜೂರಾದರೆ ಸಾಕು, ಎನ್ನುವ ಧೋರಣೆ ಮುಂದೆ ಪಶ್ಚಿಮ ಘಟ್ಟ ಪ್ರದೇಶವು ಮಾರಾಟಕ್ಕೆ, ಹರಾಜು ಕೂಗುವ ಸನ್ನಿವೇಶ ಒದಗಿ ಬರಬಹುದು.
ವರದಿಗಳ ಅನುಷ್ಠಾನದ ಕೊರತೆ
ಪಶ್ಚಿಮ ಘಟ್ಟದ ಪ್ರದೇಶದ ಜೀವ ವೈವಿದ್ಯತೆಯನ್ನು ಉಳಿಸಿ ಸರ್ಕಾರವು ಇದುವರೆವಿಗೆ ಎರಡು ಉನ್ನತ ಸಮಿತಿಯನ್ನು ರಚಿಸಿ ಸಲ್ಲಿಕೆಯಾದ ವರದಿಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎನ್ನಬಹುದು. 2014ರಲ್ಲಿ ಮಾಧವರಾವ್ ಗಾಡ್ಗಿಲ್ ವರದಿಯನ್ನು ಸರ್ಕಾರವು ಅನುಷ್ಠಾನಗೊಳಿಸಲು ಒಳ-ಹೊರ ಲಾಭಿಗಳ ಒತ್ತಡಕ್ಕೆ ಮಣಿದು ತಿರಸ್ಕ ೃತಗೊಂಡಿದೆ. ಮುಂದುವರೆದು 2018ರಲ್ಲಿ ಡಾ. ಕಸ್ತೂರಿ ರಂಗನ್ ವರದಿಯಂತೆ ಅಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಹೊಸ ಯೋಜನೆಗಳಿಗೆ ಅನುಮತಿಯ ನಿರಾಕರಣೆ, ಗಣಿಗಾರಿಕೆ, ಕೆಂಪು ಪಟ್ಟಿಗೆ ಸೇರಿದ ಕೈಗಾರಿಕೆಗಳ ನಿಷೇಧ, ಕಟ್ಟಡ ನಿರ್ಮಾಣಗಳಿಗೆ ವಿರೋಧ, ಅತಿ ಸೂಕ್ಷ್ಮ ವಲಯದ ಗ್ರಾಮಗಳ ಸ್ಥಾನಪಲ್ಲಟ ಇಂತಹ ಪ್ರಸ್ತಾವನೆಗಳ ವಿರುದ್ಧ ಪ್ರತಿಭಟನೆಗಳಿಗೆ ಮಣಿದ ಸರ್ಕಾರವು ಪಶ್ಚಿಮ ಘಟ್ಟವನ್ನು ವೈಜ್ಞಾನಿಕವಾಗಿ ಉಳಿಸುವಲ್ಲಿ ವಿಫಲವಾಗಿದೆ ಎಂದು ಗೋಚರಿಸುತ್ತದೆ.
ಲೇಖಕರು: ಚಿಂತಕರು, ರಾಜ್ಯ ಪರಿಸರ ಪರಿಚಾರಕರು, ವಾಣಿಜ್ಯ ತೆರಿಗೆಗಳ ನಿವೃತ್ತ ಉಪ ಆಯುಕ್ತರು
Get in Touch With Us info@kalpa.news Whatsapp: 9481252093
Discussion about this post