ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಹೇಗೆ ಎಲ್ಲವೂ ಸರಿ ಇಲ್ಲವೋ ಹಾಗೆಯೇ, ರಾಜ್ಯ ಸರ್ಕಾರದ ಅಧಿಕಾರಿಗಳ ವಲಯದಲ್ಲೂ ಸಹ ಹೇಗೆ ದಿವ್ಯ ನಿರ್ಲಕ್ಷ್ಯ ಮನೆ ಮಾಡಿದೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ.
ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಅವರು ಅ.8ರ ಸೋಮವಾರದಿಂದ ಅ.10ರವರೆಗೂ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಲಿದ್ದಾರೆ. ಇದು ಸಚಿವ ಅಧಿಕೃತ ಭೇಟಿಯಾಗಿರುವ ಹಿನ್ನೆಲೆಯಲ್ಲಿ ಸಚಿವರ ಟಿಪಿ ಯನ್ನು ಮುನ್ನವೇ ಸಿದ್ದಪಡಿಸಿ, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿ, ಸೂಕ್ತ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.
ಅದೇ ರೀತಿಯಲ್ಲಿ ಖಾದರ್ ಅವರ ಮೂರು ದಿನಗಳ ಪ್ರವಾಸ ಕಾರ್ಯಕ್ರಮಗಳ ಪಟ್ಟಿಯನ್ನು ನಗರಾಭಿವೃದ್ಧಿ ಮತ್ತು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಲೆಟರ್ ಹೆಡ್‌ನಲ್ಲಿ ಅಕ್ಟೋಬರ್ 5ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ನಮೂದಾಗಿರುವ ಸಚಿವರ ಪ್ರವಾಸದ ಮಾರ್ಗ, ಉನ್ನತ ಅಧಿಕಾರಿ ವರ್ಗದಲ್ಲಿ ಬೇರೂರಿರುವ ನಿರ್ಲಕ್ಷ್ಯವನ್ನು ಹೊರ ಹಾಕಿದೆ.
ನಿನ್ನೆ ಬಿಡುಗಡೆಯಾದ ಪ್ರವಾಸದ ಪಟ್ಟಿಯಂತೆ ಅ.8ರಂದು ಬೆಳಗ್ಗೆ 9.30ಕ್ಕೆ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸುವ ಸಚಿವರು, ಸ್ಮಾರ್ಟ್ ಸಿಟಿ ಕುರಿತಂತೆ ಸಭೆ ನಡೆಸಲಿದ್ದಾರೆ. ಆನಂತರ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಿಂದ ನಿರ್ಗಮಿಸುವ ಸಚಿವರು ಹಿರಿಯೂರು-ಹೊಸಪೇಟೆ ಮಾರ್ಗವಾಗಿ ರಸ್ತೆ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಮೂದಿಸಲಾಗಿದೆ. ಇದರಲ್ಲಿ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ಬಿಡಲಿರುವ ಸಚಿವರ ಹಿರಿಯೂರು-ಹೊಸಪೇಟೆ ಮಾರ್ಗವಾಗಿ ರಸ್ತೆ ಮೂಲಕ ಮಧ್ಯಾಹ್ನ ಮೂರು ಗಂಟೆಗೆಲ್ಲಾ ದಾವಣಗೆರೆ ತಲುಪಲಿದ್ದಾರಂತೆ..
ಈ ಮಾರ್ಗವಾಗಿ ಅದು ಹೇಗೆ ಒಂದು ಗಂಟೆಯಲ್ಲಿ ತಲುಪಲು ಸಾಧ್ಯ ಎನ್ನುವುದು ಈಗಿರುವ ಪ್ರಶ್ನೆ?
ಶಿವಮೊಗ್ಗದಿಂದ ಹಿರಿಯೂರಿಗೆ 141 ಕಿಮೀಗಳು, ಹಿರಿಯೂರಿನಿಂದ ಹೊಸಪೇಟೆಗೆ 183 ಕಿಮೀಗಳು, ಹೊಸಪೇಟೆಯಿಂದ ದಾವಣಗೆರೆಗೆ 121 ಕಿಮೀಗಳು. ಅಂದರೆ ಈ ಮಾರ್ಗದಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ 445 ಕಿಮೀಗಳಾಗುತ್ತವೆ? ರಸ್ತೆ ಮಾರ್ಗವಾಗಿ 445 ಕಿಮೀಗಳನ್ನು ಒಂದು ಗಂಟೆಯಲ್ಲಿ ತಲುಪಲು ಸಾಧ್ಯವೇ? ಗಂಟೆಗೆ ನೂರು ಕಿಮೀ ವೇಗದಲ್ಲಿ ತೆರಳಿದರೂ ಕನಿಷ್ಠ ನಾಲ್ಕು ಗಂಟೆ ಬೇಕಾಗುತ್ತದೆ.
ವಾಸ್ತವವಾಗಿ ಇಷ್ಟೇ ಆಗಿರುತ್ತದೆ. ಸಚಿವಾಲಯದ ಸಿಬ್ಬಂದಿಗಳು ಈ ಪಟ್ಟಿಯನ್ನು ಸಿದ್ದಪಡಿಸಿರುತ್ತಾರೆ. ಬಹುತೇಕ ಇದು ಸಚಿವರ ಗಮನಕ್ಕೇ ಬಂದಿರುವುದಿಲ್ಲ. ಆದರೆ, ಇದನ್ನು ಪರಿಶೀಲನೆ ನಡೆಸಿ ಸಹಿ ಹಾಕಿರುವುದು ಕೆಎಎಸ್ ಅಧಿಕಾರಿಯಾಗಿರುವ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ.. ಸಿಬ್ಬಂದಿಗಳು ಮಾರ್ಗವನ್ನು ತಪ್ಪಾಗಿ ನಮೂದಿಸಿರುತ್ತಾರೆ ಒಪ್ಪಿಕೊಳ್ಳೋಣ. ಆದರೆ, ಇದನ್ನು ಕೂಲಂಕಶವಾಗಿ ಪರಿಶೀಲನೆ ನಡೆಸದೇ ತಪ್ಪಾಗಿರುವ ಈ ಪಟ್ಟಿಗೆ ಕೆಎಎಸ್ ದರ್ಜೆಯ ಅಧಿಕಾರಿಯೊಬ್ಬರು ಸಹಿ ಹಾಕಿ, ರವಾನಿಸಿದ್ದಾರೆ ಎಂದರೆ ಈ ಅಧಿಕಾರಿಯದ್ದು ಇನ್ನೆಂತಹ ನಿರ್ಲಕ್ಷ್ಯವಿರಬೇಕು? ಜವಾಬ್ದಾರಿ ಸ್ಥಾನದಲ್ಲಿ ಕುಳಿತ ಹಿರಿಯ ಅಧಿಕಾರಿಯಾಗಿ ಇಂತಹ ತಪ್ಪನ್ನು ಮಾಡಿದ್ದಾರೆ ಎಂದರೆ, ಸಚಿವಾಲಯದಲ್ಲಿ ಇನ್ನೆಷ್ಟು ತಪ್ಪುಗಳು, ಅಕ್ರಮಗಳು ನಡೆಯುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇದು ಆದ ನಂತರ ಅಕ್ಟೋಬರ್ 6ರ ಇಂದು ಮತ್ತೊಂದು ಟಿಪಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಂ.ಎಸ್. ಮಂಜುನಾಥ್ ಅವರ ಹೆಸರಿನಲ್ಲಿದ್ದು, ಇದರಲ್ಲಿ ಶಿವಮೊಗ್ಗದಿಂದ ಹೊನ್ನಾಳಿ ಮಾರ್ಗವಾಗಿ ದಾವಣಗೆರೆ ತಲುಪಲಿದ್ದಾರೆ ಎಂದು ನಮೂದಾಗಿದೆ.
ತಪ್ಪಾಗಿದ್ದ ಪಟ್ಟಿಯನ್ನು ತಿದ್ದುಪಡಿ ಮಾಡಿ ಮತ್ತೆ ಬಿಡುಗಡೆ ಮಾಡಿದ್ದು ಸರಿ. ಆದರೆ, ಓರ್ವ ಕೆಎಎಸ್ ಅಧಿಕಾರಿಯಾಗಿ ಮಹೇಶ್ ಕರ್ಜಗಿ ಅವರು ಪಟ್ಟಿಯನ್ನು ಕೂಲಂಕಶವಾಗಿ ಪರಿಶೀಲನೆ ನಡೆಸದೇ ಅದು ಹೇಗೆ ಸಹಿ ಹಾಕಿದರು? ಇದನ್ನು ಕರ್ತವ್ಯ ನಿರ್ಲಕ್ಷ್ಯ ಎಂದೇ ಹೇಳಬೇಕಾಗುತ್ತದೆ. ಇಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಚಾರದಲ್ಲಿ ಸಚಿವರು ಅಥವಾ ಸರ್ಕಾರ ಕ್ರಮಕ್ಕೆ ಮುಂದಾಗುತ್ತದೆಯೇ? ಪ್ರಮುಖವಾಗಿ ತಮ್ಮ ಆಪ್ತ ಕಾರ್ಯದರ್ಶಿ ಅವರ ಈ ನಿರ್ಲಕ್ಷ್ಯದ ಕರ್ತವ್ಯಕ್ಕೆ ಯು.ಟಿ. ಖಾದರ್ ಅವರು ಕ್ರಮ ಕೈಗೊಳ್ಳುವರೇ?
ಎಸ್.ಆರ್. ಅನಿರುದ್ಧ ವಸಿಷ್ಠ
ಮೊ: 9008761663









Discussion about this post