ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಶಿವಮೊಗ್ಗ |
ಶರಾವತಿ ಮುಳುಗಡೆ ಸಂತ್ರಸ್ಥರ ಜಮೀನಿಗೆ ಹಕ್ಕುಪತ್ರ ನೀಡಲು ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲೋಕಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ನಿರಾಶ್ರಿತರಾದ ಸಾವಿರಾರು ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕನ್ನು ನೀಡುವ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರ ಗಮನ ಸೆಳೆದರು.
ಕಂದಾಯ ದಾಖಲೆಗಳಲ್ಲಿ ರೈತರ ಹೆಸರಿಲ್ಲ
ಮಲೆನಾಡು ಪ್ರದೇಶದ 31 ವಿವಿಧ ಅರಣ್ಯ ಪ್ರದೇಶಗಳಲ್ಲಿನ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಶರಾವತಿ ಜಲವಿದ್ಯುತ್ ಯೋಜನೆಯಿಂದಾಗಿ ಮುಳುಗಡೆಯಾದ ಪ್ರದೇಶದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಅವಕಾಶ ನೀಡಲಾಗಿತ್ತು. ಆದರೆ 1959ರಿಂದ ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ನಮೂದಾಗಿಲ್ಲ. ಮಲೆನಾಡು ಪ್ರಾಂತ್ಯವಾದ ಶಿವಮೊಗ್ಗ ಜಿಲ್ಲೆಯ ಈ ಭಾಗದ ಪ್ರಮುಖ ರೈತರು ಈಡಿಗ, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.
During Zero Hour today, Requested the Hon’ble @moefcc to take immediate steps to issue de-notification to grant the forest lands to all the displaced families of Sharavathi Hydro power project by making necessary amendments to the rules without further delay. @byadavbjp @BSYBJP pic.twitter.com/UdCEwp9Hp0
— B Y Raghavendra (@BYRBJP) December 21, 2022
ಸವಲತ್ತುಗಳು ಸಿಗುತ್ತಿಲ್ಲ
ಪ್ರಸ್ತುತ ಅಸ್ತಿತ್ವದಲ್ಲಿರುವ ಅರಣ್ಯ ಸಂರಕ್ಷಣಾ ಕಾಯಿದೆ-1980 ಕ್ಕಿಂತ ಮೊದಲು, ಅದನ್ನು ಮಾಡಬೇಕಾಗಿತ್ತು ಮತ್ತು ಭೂಮಿಯನ್ನು ಡಿ-ನೋಟಿಫೈ ಮಾಡಬೇಕಾಗಿತ್ತು. ಆದರೆ ಆಗಿನ ಸರ್ಕಾರದ ನಿರ್ಲಕ್ಷದಿಂದ ಅದು ಆಗಲಿಲ್ಲ. ಇದರಿಂದಾಗಿ ಈ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಥವಾ ಸರ್ಕಾರದ ಯಾವುದೇ ಯೋಜನೆಗಳಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಈ ಸಾವಿರಾರು ರೈತರ ಜಮೀನಿಗೆ ಹಕ್ಕುಪತ್ರ ನೀಡಬೇಕೆಂಬ ಬಹುದಿನಗಳ ಬೇಡಿಕೆ ಇಂದಿಗೂ ಈಡೇರಿಲ್ಲ ಎಂದು ಗಮನ ಸೆಳೆದರು.
ರಾಜ್ಯ ಸರ್ಕಾರದಿಂದ ಭೂಮಿ ಪಡೆಯಿರಿ
ಅರಣ್ಯ ಸಂರಕ್ಷಣಾ ಕಾಯ್ದೆ-1980 ಜಾರಿಗೆ ಬಂದ ನಂತರ ಅರಣ್ಯ ಭೂಮಿಯ ಡಿ-ನೋಟಿಫಿಕೇಶನ್ ಅನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬಹುದಾಗಿದೆ. ಆದ್ದರಿಂದ ಈಗ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದಿಂದ ವಿವರವಾದ ಪ್ರಸ್ತಾವನೆಯನ್ನು ಪಡೆದು ಭೂಮಿಯ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆ ರೈತರ ಜೀವನೋಪಾಯವನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ.
ದೇಶದ 139 ಕೋಟಿ ಜನರಿಗೆ ಸಂತೋಷ ಮತ್ತು ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಹೆಜ್ಜೆ ಇಡುತ್ತಿರುವ, ಭಾರತವನ್ನು ಪರಿವರ್ತಿಸುವ ಚಾಂಪಿಯನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಪರಿಸರ ಮತ್ತು ಅರಣ್ಯ ಖಾತೆಯ ಸಚಿವರು ಶರಾವತಿ ಜಲವಿದ್ಯುತ್ ಯೋಜನೆಯ ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ವಿಳಂಬ ಮಾಡದೆ ತಕ್ಷಣವೇ ಡಿ-ನೋಟಿಫಿಕೇಶನ್ ಹೊರಡಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post