ಭದ್ರಾವತಿ: ದೇಶದ ಐಕ್ಯತೆಗಾಗಿ ಮತ್ತು ಶಾಂತಿಗಾಗಿ ಹಾಗೂ ಯುವ ಪೀಳಿಗೆ ಮತ್ತು ಜನರ ರಕ್ಷಣೆಗಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ದೇಶದ ಒಳಿತಿಗಾಗಿ ಮಧು ಬಂಗಾರಪ್ಪ ರವರ ಆಯ್ಕೆ ಮಾಡಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಶನಿವಾರ ಸಂಜೆ ಹಳೇನಗರದ ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಮತಯಾಚಿಸಿ ಮಾತನಾಡಿದರು.
ನಂಬಿಕೆಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ಅರಿತು ಈ ಕ್ಷೇತ್ರದ ಜನತೆಯ ಮೇಲಿನ ಪ್ರೀತಿ ಮತ್ತು ನಂಬಿಕೆಯಿಂದ ಮಧು ಬಂಗಾರಪ್ಪ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಲು ಬಂದಿದ್ದೇನೆ. ಧರ್ಮದಲ್ಲಿ ರಾಜಕಾರಣ ಬೆರಸಬಾರದು. ರಾಜಕಾರಣದಲ್ಲಿ ಧರ್ಮವಿರಬೇಕು. ರಾಜಕಾರಣದಿಂದ ಧರ್ಮ ಮತ್ತು ಜಾತಿಗಳನ್ನು ದೂರವಿಡಬೇಕು. ಸಂವಿಧಾನದ ಅಡಿ ರಾಜಕಾರಣ ಮಾಡಬೇಕು. ಜಾತಿ ವೈಷಮ್ಯಗಳನ್ನು ದೂರಮಾಡಬೇಕು ಎಂದರು.
ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಜನರ ಸೇವಾ ಮನೋಭಾವ ಹೊತ್ತು ಹಾಗೂ ಸಮಾಜದ ಬದಲಾವಣೆಗಾಗಿ ನಿಸ್ಪಕ್ಷಪಾತವಾಗಿ ನಡೆಯಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜೊತೆ ಜೊತೆಯಾಗಿ ಒಗ್ಗೂಡಿ ಪ್ರಸ್ತುತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಬೇಕು. ಎರಡು ಪಕ್ಷಗಳಿಂದ ಕಳೆದ ಶಾಸನ ಸಭಾ ಚುನಾವಣೆಯಲ್ಲಿ ಪಡೆದಂತೆ 1.20 ಲಕ್ಷಕ್ಕೂ ಅಧಿಕ ಮತಗಳನ್ನು ಒಮ್ಮತ ಅಭ್ಯರ್ಥಿ ಪರ ನೀಡಿ ಹರಸಬೇಕು ಎಂದರು.
ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಇವರಿಬ್ಬರ ಬಗ್ಗೆ ನನಗೆ ಬೇಸರವಿಲ್ಲ. ರಾಜ್ಯ ಬಿಜೆಪಿ ನಾಯಕರುಗಳಿಗೆ ಇವರಿಬ್ಬರ ಬಗ್ಗೆ ಬೇಸರವಿದೆ. ಯಡಿಯೂರಪ್ಪ ರವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ಗೌರವ ನೀಡಬಹುದಾಗಿತ್ತು. ಆದರೆ ಅವರನ್ನು ಮೂಲೆ ಗುಂಪು ಮಾಡಲು ಮುಖ್ಯಮಂತ್ರಿಯ ಆಸೆ ತೋರಿ ಮೂಗಿಗೆ ಮಸಿ ಬಳಿಯಲಾಗುತ್ತಿದೆ. ಮಾಜಿ ಕೇಂದ್ರ ಸಚಿವ ದಿವಂಗತ ಅನಂತ ಕುಮಾರ್ ರವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರನ್ನು ನಂಬಿಸಿ ಮೋಸ ಮಾಡಿದ ಬಿಜೆಪಿ ಅವರ ಪಾಡು ಹೀಗಾದರೆ ಮುಂದೆ ಯಡಿಯೂರಪ್ಪ ಅವರ ಗತಿಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಮಾತಿಗೆ ಮಣಿದು ಬಡವರ ಆಶಾಕಿರಣ, ಬಡವರ ಬಂಧುವಾಗಿದ್ದ ಎಸ್. ಬಂಗಾರಪ್ಪರವರ ಪುತ್ರ ಮಧು ಬಂಗಾರಪ್ಪ ಅವರನ್ನು ಮನವೊಲಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಕಳೆದುಕೊಂಡ ಜಾಗದಲ್ಲಿ, ಸೋತ ಸ್ಥಳದಲ್ಲಿ ಅವಮಾನಕ್ಕೊಳಗಾದ ಕ್ಷೇತ್ರದಲ್ಲಿ ಪುನಃ ಜನರ ಆಶೀರ್ವಾದ ಪಡೆದು ಪುರಸ್ಕಾರಕ್ಕೊಳಗಾಗಬೇಕು. ಆ ನಂಬಿಕೆ ನಮಗೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಯಾವ ಒಬ್ಬ ಕಾರ್ಯಕರ್ತನನ್ನು ಬಿಜೆಪಿ ಪರ ಕೆಲಸ ಮಾಡಲು ಮುಖಂಡರು ಬಿಡದೆ ಎಚ್ಚರ ವಹಿಸಿ ಯಶಸ್ವಿಯಾಗಬೇಕು ಎಂದರು ಕರೆ ನೀಡಿದರು.
ಕೇಂದ್ರ ಬಿಜೆಪಿ ಮೋದಿ ಸರಕಾರವನ್ನು ಮೂಲೆ ಗುಂಪು ಮಾಡಬೇಕು. ಜಾತಿ ರಾಜಕಾರಣ ವಿರೋಧಿಸಿ ಜಾತ್ಯತೀತ ಮನೋಭಾವದ ಎಲ್ಲ ವರ್ಗಗಳ ಧರ್ಮಗಳ ಪರವಿರುವ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ರವರನ್ನು ಪಿಎಂ ಮಾಡಲು ನಮ್ಮೆಲ್ಲರ ಶಕ್ತಿ ತುಂಬಿದಾಗ ದೇಶದ ಭದ್ರತೆ, ಜನರ ರಕ್ಷಣೆ, ಅಲ್ಪ ಸಂಖ್ಯಾತರ ಏಳಿಗೆ ಸಾದ್ಯವಾಗುತ್ತದೆ. ಅದ್ದರಿಂದ ಒಮ್ಮತದ ಅಭ್ಯರ್ಥಿ ಮಧು ಬಂಗಾರಪ್ಪ ರವರನ್ನು ಅತಿ ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸಿ ಸಂಸತ್‌ಗೆ ಕಳುಹಿಸಿ ಪುನಃ ಅಭಿನಂದನಾ ಸಮಾರಂಭಕ್ಕೆ ಆಗಮಿಸುವುದಾಗಿ ನೆರೆದಿದ್ದ ಸಹಸ್ರಾರು ಜನರಿಂದ ಚಪ್ಪಾಳೆ ಗಿಟ್ಟಿಸಿ ಮಾತನಾಡಿದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷದಿಂದ ಬಡವರ ಕಲ್ಯಾಣ ಅಸಾಧ್ಯ. ದೇಶದಲ್ಲಿ ಬಿಜೆಪಿಯಿಂದಲೆ ಉಗ್ರಗಾಮಿಗಳ ತಯಾರಿ ನಡೆಯುತ್ತಿದೆ. ಮೋದಿ ಸರಕಾರ ಸೋಲಿಸಿ ರಾಹುಲ್ ಗಾಂಧಿ ರವರನ್ನು ಅಧಿಕಾರಕ್ಕೆ ತರಬೇಕು. ಕ್ಷೇತ್ರದ ಮತದಾರರು ನನ್ನ ಗೆಲುವಿಗೆ ಆಶೀರ್ವದಿಸಿದಂತೆ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದರೆ ದೇಶ ಮತ್ತು ರಾಜ್ಯಕ್ಕೆ ಒಳಿತಾಗುತ್ತದೆ. ಎ.3 ರಂದು ನಾಮಪತ್ರ ಸಲ್ಲಿಸುವ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶಿವಮೊಗ್ಗಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಅಭ್ಯರ್ಥಿ ಮಧು ಬಂಗಾರಪ್ಪ ಕೇವಲ ನಾಲ್ಕು ತಿಂಗಳಲ್ಲಿ ಎರಡನೆ ಬಾರಿ ಪುನಃ ನಿಮ್ಮ ಮುಂದೆ ಅಭ್ಯರ್ಥಿಯಾಗಿ ಬಂದಿದ್ದೇನೆ. ದೇಶದಲ್ಲಿ ಸಂಸತ್ ಚುನಾವಣೆಗೆ ಒಮ್ಮತದ ಅಭ್ಯರ್ಥಿಗೆ ಅತಿಹೆಚ್ಚು ಮತ ನೀಡಿರುವ ಕ್ಷೇತ್ರ ಇದಾಗಿರುವುದರಿಂದ ಪ್ರಸ್ತುತ ಚುನಾವಣೆಯಲ್ಲೂ ನಿಮ್ಮ ಆಶೀರ್ವಾದ ಕೋರುತ್ತಿದ್ದೇನೆ. ಬಂಗಾರಪ್ಪನವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕಾರ್ಯ ಮಾಡುವ ಹಂಬಲ ಹೊತ್ತಿದ್ದೇನೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹಿರಿಯ ಸಚಿವ ಡಿ.ಕೆ. ಶಿವಕುಮಾರ್ ಇವರ ಕೃಪಾಶೀರ್ವಾದದಿಂದ ಹಾಗೂ ಇಲ್ಲನ ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿ ಹಾಗೂ ಅವಳಿ ಕಾರ್ಖಾನೆಗಳ ಹೇಳಿಗೆ ಹಾಗು ಕಾರ್ಮಿಕರ ಹಿತ ಕಾಯುವುದಾಗಿ ಹೇಳಿ ಮತಯಾಚಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎಚ್.ಎಲ್. ಷಡಾಕ್ಷರಿ, ಬಲ್ಕಿಷ್ ಬಾನು, ವೇದಾ ವಿಜಯಕುಮಾರ್, ಪಲ್ಲವಿ, ಸಿ.ಎಂ. ಖಾದರ್, ರಾಮೇಗೌಡ, ಶೇಷಾದ್ರಿ, ಆ.ಗಾ. ಸುಲ್ತಾನ್, ಸುರೇಶ್ ಹೆಗಡೆ, ಬಿ.ಕೆ. ಮೋಹನ್, ತಳ್ಳಿಕಟ್ಟೆ ಮಂಜುನಾಥ್, ಅಮೀರ್ ಜಾನ್, ಅತ್ತಿಗುಂದ ಶ್ರೀನಿವಾಸ್, ಮಧುಸುದನ್, ಇಸ್ಮಾಯಿಲ್ ಖಾನ್, ಅಣ್ಣಾಮಲೈ, ಲೋಕೇಶ್, ಪ್ರೇಮ್ ಕುಮಾರ್, ಚೆನ್ನಪ್ಪ, ಫ್ರಾನ್ಸಿಸ್, ನಾರಾಯಣ ಸ್ವಾಮಿ, ಚಂದ್ರಬೂಪಾಲ್, ದಿಲ್ದಾರ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post