ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನಾವೆಲ್ಲರೂ ಪ್ರತಿನಿತ್ಯ ಅಡಿಗೆಯನ್ನು ಮಾಡಿಕೊಂಡು ಭೋಜನವನ್ನು ಮಾಡುತ್ತೇವೆ. ವಸ್ತುತಸ್ತು ವಿಚಾರ ಮಾಡಬೇಕಾದ ವಿಷಯವೆಂದರೆ; ನಾವು ಪ್ರತಿನಿತ್ಯ ಅನ್ನವನ್ನು ತಿನ್ನುತ್ತೇವೆಯೋ ಅಥವಾ ಪಾಪವನ್ನು ತಿನ್ನುತ್ತೇವೆಯೋ? ಕಾರಣ, ನಾವು ಯಾವುದಾದರೂ ಒಂದು ಆಹಾರ ಪದಾರ್ಥವನ್ನು ಬೇಯಿಸಿ, ಅದನ್ನು ತಿನ್ನಬೇಕಾದರೆ, ನಾವು ಐದು ಪಾಪಗಳನ್ನು ಮಾಡಿಯೇ ಮಾಡುತ್ತೇವೆ. ಹಾಗಾದರೆ ಆ ಪಾಪಗಳು ಯಾವುವು?
ಖಂಡಿನೀ: ನಾವು ತರಕಾರಿಯನ್ನು ಬಿಡಿಸುವಾಗ ಕೆಲವೊಮ್ಮೆ ಇಡೀ ಗಿಡವೇ ನಾಶವಾಗುತ್ತವೆ. ಆ ಗಿಡವೂ ಒಂದು ಜೀವಿ ತಾನೇ. ಆ ಜೀವಿಯನ್ನು ಕೊಂದ ಪಾಪ ನಮಗೆ ಬರುತ್ತದೆ.
ಪೇಶಿನೀ: ನಾವು ಅನೇಕ ಕಾಳುಗಳನ್ನು ಕುಟ್ಟಿ ಪುಡಿ ಮಾಡುತ್ತೇವೆ, ಕೆಲವೊಮ್ಮೆ ರುಬ್ಬುತ್ತೇವೆ. ಆದರೆ ನಿಜವಾಗಿ ಕಾಳುಗಳಲ್ಲಿ ಜೀವ ಇರುತ್ತದೆ. ಆ ಜೀವಿಗಳ ಸಾವಿಗೆ ಕಾರಣವಾದುದ್ದರಿಂದ ಇದೂ ಕೂಡ ಪಾಪಕೃತ್ಯವೆಂದೆನಿಸುತ್ತದೆ.
ಚುಲ್ಲೀ: ನಾವು ಪದಾರ್ಥಗಳನ್ನು ಒಲೆಯ ಮೇಲೆ ಇಟ್ಟು ಬೇಯಿಸುತ್ತೇವೆ. ಬೇಯಿಸುವಾಗ ಅನೇಕ ಜೀವಿಗಳು ಸಾಯುತ್ತೇವೆ. ಅದರಿಂದ ಪಾಪವು ನಮಗೆ ತಗಲುತ್ತದೆ.
ಉದಕುಂಭೀ: ನೀರಿನಲ್ಲಿ ಅನೇಕ ಜೀವಿಗಳು ಇರುತ್ಯವೆ. ನಾವು ಆರೋಗ್ಯಕ್ಕೋಸ್ಕರವೋ ಅಥವಾ ಇನ್ಯಾವುದಾದರೂ ಕಾರಣಕ್ಕೆ ನೀರನ್ನು ಕುದಿಸಿದರೆ, ಅದರಲ್ಲಿದ್ದ ಜೀವಿಗಳ ಸಾವಿಗೆ ನಾವು ಕಾರಣರಾಗುತ್ತೇವೆ.
ಮಾರ್ಜೀನೀ: ನಾವು ತೊಳೆಯುವಾಗ ಅನೇಕ ಜೀವಿಗಳು ಸಾಯಬಹುದು. ಆ ಎಲ್ಲ ಜೀವಿಗಳ ಸಾವಿಗೆ ನಾವು ಕಾರಣರಾಗುತ್ತೇವೆ. ಹೀಗೆ ಈ ಐದು ಪಾಪಕೃತ್ಯವನ್ನು ಮಾಡಿಯೇ ನಾವು ಪ್ರತಿನಿತ್ಯ ಊಟ ಮಾಡುವುದು. ಆದರೆ ಈ ಪಾಪಗಳನ್ನು ನಾವು ಬೇಕೂಂತ ಮಾಡದಿದ್ದರೂ ಕೂಡ, ಪರೋಕ್ಷವಾಗಿ ನಾವೇ ಕಾರಣರು. ಹಾಗಾದರೆ ನಮಗೆ ಮೇಲೆ ತಿಳಿಸಿದ ಪಾಪಗಳು ಅಂಟಬಾರದು ಎಂದರೆ, ನಾವು ಏನು ಮಾಡಬೇಕು?
ಇದಕ್ಕೆ ಉತ್ತರವನ್ನು ಕೃಷ್ಣನು ಭಗವದ್ಗೀತೆಯಲ್ಲಿ ತಿಳಿಸುತ್ತಾನೆ. ನಾವು ಅಡಿಗೆಯನ್ನು ಮಾಡಿ, ಪ್ರತಿನಿತ್ಯವೂ ವೈಶ್ವದೇವ ಅಥವಾ ಹೋಮ-ಹವನದ ಮೂಲಕ ದೇವತೆಗಳಿಗೆ ಆಹುತಿಯನ್ನು ಕೊಟ್ಟು ಅನಂತರ ಉಳಿದ ಯಜ್ಞಶೇಷವನ್ನು ನಾವು ಭುಂಜಿಸಿದರೆ, ನಮಗೆ ಮೇಲೆ ತಿಳಿಸಿದ ಯಾವುದೇ ಪಾಪವೂ ಅಂಟುವುದಿಲ್ಲ. ಇಲ್ಲವಾದರೆ, ನಾವು ಪ್ರತಿನಿತ್ಯ ಪಾಪವನ್ನೇ ಊಟ ಮಾಡುತ್ತೇವೆ ಎಂಬುದಾಗಿ ಶ್ರೀಕೃಷ್ಣನು ತಿಳಿಸುತ್ತಾನೆ.
(ನಾಳಿನ ಲೇಖನ: ಯುದ್ಧದ ಸಂದರ್ಭದಲ್ಲಿ ಒದಗಿದ ಆತಂಕ)ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post