ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುರಾ (ಹಿಂದೆ) ನವಂ (ಹೊಸದು) ಎಂದು ಪುರಾಣಪದದ ವ್ಯುತ್ಪತ್ತಿಯನ್ನು ಹೇಳುವುದೊಂದು ಚಮತ್ಕಾರ. ಪುರಾ (ಹಿಂದಕ್ಕೆ) ನೀಯತೇ (ಒಯ್ಯಲ್ಪಡುತ್ತದೆ) ಎಂಬುದಿ ನ್ನೊಂದು ನಿರುಕ್ತಿ. ಬ್ರಾಹ್ಮಣ ಗ್ರಂಥಗಳಲ್ಲಿ ಬಳಸಲಾಗಿರುವ ಪುರಾಣವೆಂಬ ಪದಕ್ಕೆ ಕೇವಲ ಹಳೆಯ ಕತೆ ಎಂದಿಷ್ಟೇ ಅರ್ಥ. ಅದು ಇತಿಹಾಸ ಮತ್ತು ನಾರಾಶಂಸಿಗಳ ಸಾಲಿಗೆ ಸೇರಿದ್ದು. ಬಾಯಿಂದ ಬಾಯಿಗೆ ಹರಿದುಬಂದ ಹಳಗತೆಯ ರೂಪದಲ್ಲಿದ್ದ ಪುರಾಣವಸ್ತು ಕೆಲ ಅಂಶಗಳಲ್ಲಿ ವೇದವಾಙ್ಮಯಕ್ಕೂ ಹಿಂದಿನದೆಂದು ಹೇಳುತ್ತಾರೆ. ಆದರೆ ನಮಗೆ ಈಗ ಸಿಗುವ ಪುರಾಣಕೃತಿಗಳು ಸ್ವರೂಪತಃ ವೇದೋತ್ತರಕಾಲೀನ. ಇವು ವಿಶಿಷ್ಟಕೃತಿಗಳೆಂಬ ಸೂಚನೆಯನ್ನು ಛಾಂದೋಗ್ಯೋಪನಿಷತ್ತು ಕೊಟ್ಟಿದೆ. ಇವುಗಳ ಸ್ಪಷ್ಟೋಲ್ಲೇಖ ಸೂತ್ರವಾಙ್ಮಯದಲ್ಲಿದೆ.
ಹದಿನೆಂಟು ಪುರಾಣಗಳ ಹೆಸರನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಶ್ಲೋಕ ನೆರವಾಗುತ್ತದೆ:
ಮಧ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷ್ಯತ್ರೇ॥
ಅಂದರೆ ಮಕಾರಾದಿಯಾಗಿ ಎರಡು 1) ಮತ್ಸ್ಯ ಮತ್ತು 2) ಮಾರ್ಕಂಡೇಯ ಭಕಾರಾದಿಯಾಗಿ ಎರಡು- 3) ಭವಿಷ್ಯ ಮತ್ತು 4) ಭಾಗವತ; ಬ್ರಕಾರಾದಿಯಾಗಿ ಮೂರು- 5) ಬ್ರಹ್ಮಾಂಡ, 6) ಬ್ರಹ್ಮವೈವರ್ತ, ಮತ್ತು 7) ಬ್ರಾಹ್ಮ; ವಕಾರಾದಿಯಾಗಿ ನಾಲ್ಕು- 8) ವಾಮನ, 9) ವರಾಹ, 10) ವಿಷ್ಣು ಮತ್ತು 11) ವಾಯು; 13) ಅಗ್ನಿ, 13) ನಾರದ, 14) ಪದ್ಮ, 15) ಲಿಂಗ, 16) ಗರುಡ, 17) ಕೂರ್ಮ, 18) ಸ್ಕಂದ.
ಸಾಂಪ್ರದಾಯಿಕ ಗಣನೆಯ ಮೇರೆಗೆ ಬ್ರಾಹ್ಮ, ವೈಷ್ಣವ, ವಾಯವ್ಯ, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಮತ್ಸ್ಯ, ವರಾಹ, ಲೈಂಗ, ಸ್ಕಾಂದ, ವಾಮನ, ಕೌರ್ಮ, ಗಾರುಡ ಮತ್ತು ಬ್ರಹ್ಮಾಂಡಗಳೆಂಬುವೇ 18 ಮಹಾಪುರಾಣಗಳು. ಈ ಪಟ್ಟಿಯಲ್ಲಿ ವಾಯವ್ಯಕ್ಕೆ ಬದಲಾಗಿ ದೇವೀಭಾಗವತವನ್ನೂ ಸೇರಿಸಿದ ಪಾಠಾಂತರಗಳಿವೆ. ಆದರಿವು ವಾಸ್ತವಿಕವಾಗಿ ಉಪಪುರಾಣಗಳು.
18 ಮುಖ್ಯ ಪುರಾಣಗಳು ಏನು ಹೇಳುತ್ತವೆ, ಯಾವ ಕಥನವನ್ನು ಒಳಗೊಂಡಿವೆ? ಇಂದಿನಿಂದ ಪ್ರತಿನಿತ್ಯ ಒಂದು ಪುರಾಣದ ಕುರಿತು ಬರೆಯುತ್ತೇನೆ… ಓದಿ…
ಬ್ರಹ್ಮ ಪುರಾಣ
ಅಷ್ಟಾದಶ ಮಹಾಪುರಾಣಗಳ ಎಲ್ಲ ಪಟ್ಟಿಗಳಲ್ಲೂ ಹತ್ತು ಸಾವಿರ ಶ್ಲೋಕಗಳುಳ್ಳವೆಂದು ಹೆಸರಾದರೂ ನಿಜವಾಗಿ ಸುಮಾರು 7-8 ಸಾವಿರ ಶ್ಲೋಕಗಳನ್ನಷ್ಟೇ ಉಳ್ಳ ಇದು ಆದಿಪುರಾಣವೆಂದು ಹೆಸರಾಗಿದೆ. ಉಪೋದ್ಘಾತದಲ್ಲಿ ಲೋಮಹರ್ಷಣ ಸೂತನ ನೈಮಿಷಾರಣ್ಯಕ್ಕೆ ಹೋದಾಗ ಅಲ್ಲಿದ್ದ ಋಷಿಗಳು ಪ್ರಪಂಚದ ಆದ್ಯಂತಗಳನ್ನು ವಿವರಿಸಲು ಕೇಳಿಕೊಳ್ಳಲಾಗಿ ಸೂತಪುರಾಣಿಕ ಮಾನವಕುಲದ ಮೂಲಪಿತಾಮಹರಲ್ಲಿ ಒಬ್ಬನಾದ ದಕ್ಷನಿಗೆ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಹೇಳಿದ ಬ್ರಹ್ಮಪುರಾಣವನ್ನು ಹೇಳಲು ಒಪ್ಪುತ್ತಾನೆ.
ಅವನ ಪುರಾಣ ಪ್ರವಚನದಲ್ಲಿ ಎಲ್ಲ ಪುರಾಣಗಳಿಗೂ ಹೆಚ್ಚು ಕಡಿಮೆ ಸಾಧಾರಣವೆನ್ನಿಸುವ ವಿಶ್ವಸೃಷ್ಟಿ, ಆದಿಮಾನವನಾದ ಮನು ಮತ್ತು ಅವನ ವಂಶಜರ ಹುಟ್ಟು, ದೇವತೆಗಳ ಉತ್ಪತ್ತಿ, ಗಂಧರ್ವಾದಿಗಳ ಉದಯ, ಸೂರ್ಯ, ಚಂದ್ರವಂಶಜರ ರಾಜ ಮಹಾರಾಜರ ಪೀಳಿಗೆಯ ವೃತ್ತಾಂತ, ಭೂವಿಭಾಗ, ಸ್ವರ್ಗ, ನರಕಗಳ ವಿವರ ಬರುತ್ತವೆ. ಪುರಾಣದ ಬಹ್ವಂಶ ತೀರ್ಥ ಮಾಹಾತ್ಮ್ಯವನ್ನು ಹೇಳುತ್ತದೆ. ಒರಿಸ್ಸದ ದೇವಾಲಯ ಮತ್ತು ಸುತ್ತಮುತ್ತಲಿನ ತೀರ್ಥಕ್ಷೇತ್ರಗಳು ಗಣ್ಯವಾಗಿ ವರ್ಣಿಸಲ್ಪಟ್ಟಿವೆ.
ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ. ಪ್ರಸ್ತುತ ಪುರಾಣದಲ್ಲಿ ಅತ್ಯಲ್ಪಭಾಗ ಪ್ರಾಚೀನ; ತೀರ್ಥಮಾಹಾತ್ಮ್ಯವಂತೂ ಪ್ರ.ಶ. 13ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು.
Get in Touch With Us info@kalpa.news Whatsapp: 9481252093
Discussion about this post