ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇದನ್ನು ಬ್ರಹ್ಮಕೈವರ್ತಪುರಾಣವೆಂದೂ ಹೇಳುತ್ತಾರೆ. ದಕ್ಷಿಣ ಭಾರತದಲ್ಲಿ ಇದರ ಎರಡನೆಯ ಹೆಸರು ಪ್ರಸಿದ್ಧ. ಇದು ಬ್ರಹ್ಮಖಂಡ ಕೃಷ್ಣಾತ್ಮಕನಾದ ಬ್ರಹ್ಮನ ಉತ್ಪತ್ತಿಯನ್ನು ಹೇಳುತ್ತದೆ. ನಾರದನ ಬಗೆಗೆ ಅನೇಕ ಕಥೆಗಳು ಬಂದಿವೆ. 16ನೆಯ ಅಧ್ಯಾಯದಲ್ಲಿ ವೈದ್ಯಕೀಯ ವಿಷಯದ ಪ್ರಸ್ತಾಪವಿದೆ. ಪ್ರಕೃತಿ ಖಂಡದಲ್ಲಿ ಜಗತ್ತಿನ ಮೂಲದ್ರವ್ಯವಾದ ಪ್ರಕೃತಿ ದುರ್ಗೆ, ಲಕ್ಷ್ಮಿ, ಸರಸ್ವತಿ, ಸಾವಿತ್ರಿ, ರಾಧೆ-ಎಂಬ ಐದು ಅವತಾರಗಳನ್ನು ಕೃಷ್ಣನ ಅಪ್ಪಣೆಯ ಮೇರೆಗೆ ತಾಳಿದ ಸಂಗತಿಯಿದೆ.
ಗಣೇಶಖಂಡ ಅತಿ ಪ್ರಾಚೀನ ಕಾಲದಲ್ಲಿ ಅಜ್ಞಾತನಾಗಿದ್ದ ಮತ್ತು ಅರ್ವಾಚೀನಕಾಲದಲ್ಲಿ ಅತಿ ಜನಪ್ರಿಯನಾದ ಗಜಮುಖ ಗಣಪನ ಕಥೆಗಳನ್ನು ಹೇಳಿದೆ. ಒಂದು ವಿಚಿತ್ರರೀತಿಯಿಂದ ಗಣೇಶನನ್ನಿಲ್ಲಿ ಕೃಷ್ಣನ ಒಂದು ಅವತಾರವೆಂದು ಹೇಳಲಾಗಿದೆ. ಕೊನೆಯದಾದ ಕೃಷ್ಣಜನ್ಮಖಂಡ ಕೃಷ್ಣನ ಹುಟ್ಟಿನಿಂದ ಹಿಡಿದು ಅವನ ಇಡೀ ಜೀವನ ವೃತ್ತಾಂತವನ್ನು ತಿಳಿಸುತ್ತದೆ. ಅವನು ಮಾಡಿದ ಯುದ್ಧಗಳ ಹಾಗೂ ಗೋಪಿಯರೊಡನೆ ನಡೆಸಿದ ಪ್ರಣಯ ಪ್ರಕರಣಗಳ ವಿವರಗಳಿಲ್ಲಿವೆ. ಇಡೀ ಪುರಾಣದ ಮುಖ್ಯೋದ್ದೇಶ ಕೃಷ್ಣ ರಾಧೆಯರ ವಿಲಾಸವನ್ನು ಬಣ್ಣಿಸುವುದರಲ್ಲಿ ಮುಗಿಯುತ್ತದೆ.
ಇಲ್ಲಿ ಇರುವುದು ಹರಿಸರ್ವೋತ್ತಮವಾದವಲ್ಲ, ಕೃಷ್ಣಸರ್ವೋತ್ತಮವಾದ. ಒಟ್ಟಿನಲ್ಲಿ ಅಷ್ಟು ಉತ್ತಮ ಸಾಹಿತ್ಯವೆನ್ನಿಸದ ಈ ಪುರಾಣದಲ್ಲಿ ಅನೇಕ ಮಾಹಾತ್ಮ್ಯಗಳು ತುಂಬಿಕೊಂಡಿವೆ. ಬ್ರಹ್ಮವೈವರ್ತಪುರಾಣವನ್ನು ಸಾವರ್ಣಿ ನಾರದನಿಗೆ ಹೇಳಿದನೆಂದೂ ಶ್ಲೋಕಸಂಖ್ಯೆ 18,000 ಎಂದೂ ಪ್ರಸಿದ್ಧಿ. ಆದರೆ ವಾಸ್ತವಿಕವಾಗಿ ಶ್ಲೋಕಗಳು ಇನ್ನೂ ಹೆಚ್ಚಾಗಿವೆ. ಬ್ರಹ್ಮ, ಗರುಡ ಪುರಾಣಗಳಂತೆಯೇ ಇದೂ ಮೂಲಸ್ವರೂಪವನ್ನು ಕಳೆದುಕೊಂಡು ಅರ್ವಾಚೀನ ಕಾಲದಲ್ಲಿ ಪುನಾರಚಿತವಾದ ಪುರಾಣ.
ಕೃಷ್ಣ ರಾಧೆಯರ ನಿತ್ಯದಾಂಪತ್ಯವನ್ನೂ ಕೃಷ್ಣನ ಪರಬ್ರಹ್ಮತ್ವವನ್ನೂ ಪ್ರ.ಶ. 12ನೆಯ ಶತಮಾನದಲ್ಲಿದ್ದ ನಿಂಬಾರ್ಕ ಮೊಟ್ಟಮೊದಲ ಬಾರಿಗೆ ಹೇಳಿರುವುದರಿಂದ ಇದರ ಕಾಲ ಅದರಿಂದ ಇತ್ತೀಚಿನದೆನ್ನಬಹುದು. ರಾಧೆಯನ್ನು ಕೃಷ್ಣಶಕ್ತಿಯೆಂದು ಆರಾಧಿಸುವ ರಾಧಾವಲ್ಲಭೀಯ ಪಂಥವಂತೂ ಪ್ರ.ಶ. 16ನೆಯ ಶತಮಾನದಲ್ಲಿ ಉದಯವಾದದ್ದು. ಆದ್ದರಿಂದ ಪ್ರಸ್ತುತ ಪುರಾಣದ ಕಾಲ 16ನೆಯ ಶತಮಾನಕ್ಕೆ ಸಮೀಪವರ್ತಿಯಾಗಿರುವುದು ಸುಲಭೋಹ್ಯ.
Get in Touch With Us info@kalpa.news Whatsapp: 9481252093








Discussion about this post