ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಲಕ್ಷಣವಾದ ಪ್ರಾಚೀನ ಮಹಾಪುರಾಣ. ಮತ್ಸ್ಯಾವತಾರ ತಾಳಿ ವಿಷ್ಣು ಮನುವನ್ನು ಪ್ರಲಯಪ್ರವಾಹದಿಂದ ಉದ್ಧರಿಸುವ ವೃತ್ತಾಂತದಿಂದ ಪುರಾಣಾರಂಭ. ಮನುವಿನ ಹಡಗನ್ನು ಮತ್ಸ್ಯ ಎಳೆದೊಯ್ಯುವಾಗ ಅವನಿಗೂ ಮನುವಿಗೂ ನಡೆದ ಸಂವಾದವೇ ಮತ್ಸ್ಯಪುರಾಣ. ಸೃಷ್ಟಿ, ವಂಶವೃಕ್ಷ, ಶ್ರಾದ್ಧ, ಭೂ, ಖಗೋಲಗಳ ವಿಷಯ, ಆಂಧ್ರಾದಿ ವಿವಿಧ ದೇಶಗಳ ಅರಸರ ಆಳಿಕೆ. ಯಯಾತಿ ವೃತ್ತಾಂತ, ಸಾವಿತ್ರಿಯ ಕಥೆ ಮತ್ತು ವಿಷ್ಣುವಿನ ಅವತಾರಗಳು ಪ್ರಸ್ತುತ ಪುರಾಣದ ವಸ್ತು ಪ್ರಪಂಚದಲ್ಲಿ ಗಣ್ಯ.
ಯಯಾತಿ ವೃತ್ತಾಂತ ಮುಂತಾದುವು ಮಹಾಭಾರತ ಹರಿವಂಶಗಳಲ್ಲಿರುವಂತೆಯೇ ಇವೆ. ವಿವಿಧವ್ರತಗಳು, ಪ್ರಯೋಗಮಾಹಾತ್ಮ್ಯ, ವಾರಾಣಸೀಮಾಹಾತ್ಮ್ಯ, ನರ್ಮದಾಮಾಹಾತ್ಮ್ಯ, ರಾಜಧರ್ಮ, ಶಕುನಶಾಸ್ತ್ರ, ಗೃಹಾರಂಭಕರ್ಮ, ವಿಗ್ರಹಪ್ರತಿಷ್ಠೆ, ದೇವಾಲಯ, ಅರಮನೆಗಳ ರಚನೆ, ಷೋಡಶದಾನ ಮುಂತಾದ ವಿಷಯಗಳು ಇದರಲ್ಲಿ ಆಮೇಲಾದ ಪ್ರಕ್ಷೇಪಗಳು. ವೈಷ್ಣವ, ಶೈವ ಸಮಪ್ರಾಧಾನ್ಯವನ್ನಿದರಲ್ಲಿ ಕಾಣಬಹುದು. ಶ್ಲೋಕಸಂಖ್ಯೆ 15,000; ಪ್ರಸ್ತುತರೂಪದ ಕಾಲ ಕ್ರಿ.ಶ. 550-650 ನಡುವೆ.
ಈ ಪುರಾಣ ತನ್ನ ಅಲಭ್ಯವಾದ ಮೂಲಸ್ವರೂಪದಲ್ಲಿ ವಾಯು, ಬ್ರಹ್ಮಾಂಡ ಪುರಾಣಗಳಷ್ಟೇ ಪ್ರಾಚೀನ. ವಿಷ್ಣು ಹಾಗೂ ಪದ್ಮ ಪುರಾಣಗಳಿಗೂ ಇದಕ್ಕೂ ಸಾಧಾರಣವೆನ್ನಿಸುವ ಎಷ್ಟೋ ಅಧ್ಯಾಯಗಳಿವೆ. ಮೂಲದ ದೃಷ್ಟಿಯಿಂದ ಇದರ ಪ್ರಸ್ತುತ ರೂಪ ಉಕ್ತಪುರಾಣಗಳಿಗೆ ಋಣಿಯೋ ಅವೇ ಇದಕ್ಕೆ ಋಣಿಯೋ ಗೊತ್ತಿಲ್ಲ. ಕೂರ್ಮ, ಲಿಂಗ ಪುರಾಣಗಳಂತೆ ಇದು ಮತಾಚಾರಮಯವಾಗಿಲ್ಲ.
ಬ್ರಹ್ಮಪುರಾಣವನ್ನು ಮೊದಲು ನೆನೆದು, ಅನಂತರ ವೇದಗಳನ್ನು ತನ್ನ ಬಾಯಿಯಿಂದ ಹೊರಗೆಡಹಿದ ಎನ್ನುತ್ತದೆ ಮತ್ಸ್ಯಮಹಾಪುರಾಣ. ಇದರ ಪ್ರಕಾರ ಸರ್ವಚರಾಚರಗಳ ರಕ್ಷಣೆಗಾಗಿ ದಂಡನೆಯನ್ನು ಕೈಗೊಳ್ಳಲೆಂದು ಸ್ವಯಂಭುವಾದ ಬ್ರಹ್ಮ ದೇವತೆಗಳ ಅಂಶಗಳಿಂದ ರಾಜನನ್ನು ಸೃಜಿಸಿದ. ಆದುದರಿಂದ ರಾಜನನ್ನು ಯಾರೂ ಎದುರು ನಿಂತು ನೋಡಲಾರರು. ಆತ ಮಾನವರಲ್ಲಿ ಸೂರ್ಯ. ಆತ ದುಷ್ಟನಾದರೆ ಪ್ರಜೆಗಳೆಲ್ಲರೂ ದುಷ್ಟರಾಗುತ್ತಾರೆ.
ಹೆಚ್ಚು ಕಡಿಮೆಗೆಡೆಗೊಡದಂತೆ ದೊರೆ ದಂಡಶಕ್ತಿಯನ್ನು ನಿರ್ಭಯದಿಂದ ಬಳಸಿದರೆ ಮಾತ್ರ ಪ್ರಜೆಗಳು ದುರ್ಮಾರ್ಗಿಗಳಾಗುವುದಿಲ್ಲ. ಧರ್ಮರೂಪದ ದಂಡಶಕ್ತಿ ಯಿರುವುದು ಬಲಿಷ್ಠರು ದುರ್ಬಲರನ್ನು ಶೋಷಿಸದಂತೆ ನೋಡಿಕೊಳ್ಳಲೆಂದು. ಇಡೀ ರಾಜ್ಯಕ್ಕೆ ರಾಜನು ನಿಯಮಿಸುವ ನೌಕರರೇ ಆಧಾರ. ಧರ್ಮಜ್ಞರ ಸಲಹೆಯಂತೆಯೇ ಆತ ಆಡಳಿತ ನಡೆಸಬೇಕು-ಎಂಬುದು ಪ್ರಸ್ತುತಪುರಾಣದ ರಾಜಧರ್ಮದ ಮುಖ್ಯಾಂಶ.
Get in Touch With Us info@kalpa.news Whatsapp: 9481252093
Discussion about this post