ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಪಲಬ್ಧವಾಗಿರುವ ಕೆಲವೇ ಶ್ಲೋಕಗಳನ್ನುಳಿದು ಮಿಕ್ಕ ಇಡೀ ಬೃಹನ್ನಾರದೀಯ ಉಪಪುರಾಣವನ್ನು ಗರ್ಭೀಕರಿಸಿಕೊಂಡಿದೆ.
25000 ಶ್ಲೋಕಗಳಿದ್ದು ವೆಂದೂ ನಾರದ ಧರ್ಮವಿಧಿಗಳನ್ನೂ, ಬೃಹತ್ ಕಲ್ಪವನ್ನೂ ಅದರಲ್ಲಿ ಹೇಳಿದ್ದನೆಂದೂ ಮತ್ಸ್ಯಪುರಾಣ ನಿರ್ದೇಶಿಸುತ್ತದೆ. ಪ್ರಸ್ತುತ ಪುರಾಣದಲ್ಲಿ ಕೇವಲ 3,600 ಶ್ಲೋಕಗಳಿವೆ. ಬೃಹತ್ಕಲ್ಪದ ಪ್ರಸ್ತಾವವಿಲ್ಲ. ಇದರಲ್ಲಿ ನಾರದ ವಕ್ತಾರನಲ್ಲ, ಶ್ರೋತಾರ. ವೈಷ್ಣವಮತಾಚಾರ ಗಣ್ಯವಾಗಿರುವ ಇದರಲ್ಲಿ ನಾರದ ಸನತ್ಕುಮಾರರ ಸಂವಾದವೊಂದರ ಮೂಲಕ ವಿಷ್ಣುವಿನ ಭಕ್ತಿ, ವ್ರತ, ಉತ್ಸವಗಳನ್ನು ವಿವರಿಸಲಾಗಿದೆ. *ತಾಂತ್ರಿಕರನ್ನೂ ಬೌದ್ಧರನ್ನೂ ಇಲ್ಲಿ ಪಾಷಂಡರೆಂದು ಕರೆಯಲಾಗಿದೆ. ಪಾಪ ಹಾಗೂ ಪಾಪಿಗಳಿಗೆ ಸಿಗುವ ನರಕಶಿಕ್ಷೆಗಳ ವರ್ಣನೆಯಲ್ಲದೆ ವರ್ಣಾಶ್ರಮಧರ್ಮ, ಶ್ರಾದ್ಧಕಲ್ಪ, ಪ್ರಾಯಶ್ಚಿತ್ತ, ಸಂಸಾರ, ಕ್ಲೇಶ, ಮೋಕ್ಷ, ಯೋಗ, ವಿಷ್ಣುಭಕ್ತಿ ಪ್ರಶಂಸೆಗಳಿಂದ ತುಂಬಿದ ಇದರ ರಚನಾ ಕಾಲ 750-900ರ ನಡುವೆ ಎನ್ನಬಹುದು. ಪೂರ್ವೋತ್ತರ ಭಾಗಗಳೆಂದು ವಿಭಕ್ತವಾಗಿರುವ ನಾರದೀಯರ ಪೂರ್ವಭಾಗದ 4 ಉಪಪರ್ವಗಳಲ್ಲಿ ಮೊದಲನೆಯದು ಸಂಪೂರ್ಣವಾಗಿ ಬೃಹನ್ನಾರದೀಯ.
ಸನತ್ಕುಮಾರ ನಾರದನಿಗೆ 3ನೆಯ ಉಪ ವಿಭಾಗದಲ್ಲಿ ಉಪದೇಶಿಸಿದರೆ, 1, 2, 4ನೆಯ ಉಪವಿಭಾಗಗಳಲ್ಲಿ ಸನಕ, ಸನಂದನ, ಸನಾತನರು ವಿವಿಧ ವಿಷಯಗಳನ್ನು ವಿವರಿಸಿದ್ದಾರೆ. ಈ ಪುರಾಣದ ಪ್ರಕಾರ ನಾರಾಯಣ ವಿಶ್ವದ ಮೂಲಸತ್ಯ, ಆದಿಕಾರಣ. ಅವನು ಬ್ರಹ್ಮ, ವಿಷ್ಣು, ರುದ್ರರನ್ನು ಸೃಷ್ಟಿ, ಸ್ಥಿತಿ, ಲಯಗಳ ನಿರ್ವಹಣಕ್ಕಾಗಿ ತನ್ನ ಅಂಶದಿಂದ ಹುಟ್ಟಿಸುತ್ತಾನೆ. ನಾರಾಯಣನೂ ಮಹಾವಿಷ್ಣುವೂ ಅಭಿನ್ನರು. ಈತನ ಸೃಷ್ಟಿಶಕ್ತಿ ಸದಸದಾತ್ಮಕ, ವಿದ್ಯಾವಿದ್ಯಾತ್ಮಕ. ಮಹಾವಿಷ್ಣುವೂ ವಿಶ್ವವೂ ಭಿನ್ನವೆಂದು ತೋರುವುದು ಮಾನವರ ಅವಿದ್ಯೆಯ ದೆಸೆಯಿಂದ. *ಜ್ಞಾತೃಜ್ಞೇಯಗಳಲ್ಲಿಯ ಭೇದವಳಿದು ಅವೆರಡರ ಏಕತತ್ವ ಗೋಚರವಾಗುವುದು ವಿದ್ಯಾಬಲದಿಂದ. ಅಥವಾ ಅದೇ ವಿದ್ಯೆ. ಹರಿಯೂ ಅವನ ಶಕ್ತಿಯೂ ವಿಶ್ವವ್ಯಾಪ್ತಿಗಳು, ಅವಿನಾಭಾವಿಗಳು. ಶಕ್ತಿಯದು ವ್ಯಕ್ತಾವ್ಯಕ್ತ ಸ್ವರೂಪ. ಪ್ರಕೃತಿ, ಪುರುಷ, ಕಾಲಗಳು ಅದರ ಪ್ರಥಮಾವಿರ್ಭಾವಗಳು. ಪುರುಷ ಸಾನ್ನಿಧ್ಯದಿಂದ ಕ್ಷುಬ್ಧವಾದ ಪ್ರಕೃತಿ ಮಹತ್ತನ್ನೂ ಮಹತ್ತು ಆಮೇಲೆ ಬುದ್ಧಿಯನ್ನೂ ಬುದ್ಧಿ ಅಹಂಕಾರವನ್ನೂ ಪಡೆಯುತ್ತವೆ.
ವಾಸುದೇವ ಅಥವಾ ಮಹಾವಿಷ್ಣು ಜ್ಞಾನಗಮ್ಯ ಇಲ್ಲದೆ ಕರ್ಮಗಮ್ಯ. ಅವನನ್ನು ಹೊಂದಿದಾಗಲೇ ಕ್ಲೇಶತ್ರಯ ನಷ್ಟವಾಗುತ್ತದೆ. ಯೋಗವೆಂದರೆ ಬ್ರಹ್ಮನಲ್ಲಿ ಲಯಹೊಂದುವುದು. ಮನಸ್ಸನ್ನು ವಿಷಯಗಳಿಂದ ಹಿಂದಿರುಗಿಸಿ, ಆತ್ಮನಲ್ಲಿ ಲೀನಗೊಳಿಸಿ, ಬ್ರಹ್ಮನಲ್ಲಿ ಕೊನೆಯದಾಗಿ ಲಯವಾಗುವುದು. ಇದು ಜೀವಿ ಗಳಿಸಬಹುದಾದ ವ್ಯಕ್ತಿಯ ಲಕ್ಷಣ. ಈ ಎಲ್ಲವಕ್ಕೂ ಭಕ್ತಿ ಅಥವಾ ಶ್ರದ್ಧೆ ಅತ್ಯಾವಶ್ಯಕ.
Get in Touch With Us info@kalpa.news Whatsapp: 9481252093
Discussion about this post