ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಾಖಾ ವ್ರತ (ಆಷಾಢ ದ್ವಾದಶಿಯಿಂದ ಶ್ರಾವಣ ದಶಮಿ):
ಊಟ ತಯಾರಿಕೆಗೆ ತೊಗರಿ, ಅವರೆ, ಹುರುಳಿ, ಕಡ್ಲೆ ಯಾವುದೇ ತರಕಾರಿ, ಕೆಂಪು ಮೆಣಸು, ಹಸಿ ಮೆಣಸು, ಹುಳಿ, ತಿನ್ನಲು ಬಾಳೆ ಹಣ್ಣು, ಮೂಸಂಬಿ, ಸೇಬು ಬಳಸುವಂತಿಲ್ಲ. ನೀರಲ್ಲಿ ಹಾಕಿದ ಮಾವಿನ ಕಾಯಿ ಅಡುಗೆಗೆ ಹುಳಿಯಾಗಿ ಬಳಸಿದರೆ, ಮಾವಿನ ಹಣ್ಣನ್ನು ತಿನ್ನಲು ಬಳಸಬಹುದು. ಹೆಸರು, ಉದ್ದು, ತಿಮರೆ (ಒಂದೆಲಗ), ಪಾಪಟೆ, ಕಾಳು ಮೆಣಸು, ಜೀರಿಗೆ, ಎಳ್ಳು, ಸಾಸಿವೆಯಿಂದಷ್ಟೇ ರುಚಿ ರುಚಿಯಾದ ಅಡುಗೆ ಮಾಡುವುದು ಪಾಕಶಾಸ್ತ್ರಜ್ಞರಿಗೆ ಮಾತ್ರವಲ್ಲ ಉಣ್ಣುವವರಿಗೂ ಸವಾಲು, ಕೆಲವರ ನಾಲಿಗೆಗೆ ರುಚಿಸದಿದ್ದರೂ ಹೊಟ್ಟೆಗಿದು ಶ್ರೇಯಸ್ಕರ, ಆರೋಗ್ಯಕರ.
ದಧಿ ವ್ರತ (ಶ್ರಾವಣ ದ್ವಾದಶಿಯಿಂದ ಭಾದ್ರಪದ ದಶಮಿ):
ಎಂದಿನಂತೆ ಮೆಣಸು, ಹುಳಿ, ತರಕಾರಿ ಊಟ ಮಾಡಬಹುದಾಗಿದ್ದರೂ ವ್ರತ ಕೆಡಿಸಿಕೊಳ್ಳದೆ ಸಾತ್ವಿಕ ನೆಲೆಯಲ್ಲಿ ಶಾಖಾ ವ್ರತವನ್ನೇ ಮುಂದುವರಿಸಲಡ್ಡಿಯಿಲ್ಲ. ಆದರೆ ಊಟಕ್ಕೆ ಮೊಸರು ಬಳಕೆಯಿಲ್ಲ, ಕೆಲವೆಡೆ ಮಜ್ಜಿಗೆ ಬಳಕೆಯಲ್ಲಿದೆ.
ಕ್ಷೀರ ವ್ರತ (ಭಾದ್ರಪದ ದ್ವಾದಶಿಯಿಂದ ಆಶ್ವಿಜ ದಶಮಿ):
ಪಾಯಸಕ್ಕೆ ಹಾಲು ಬಳುವಂತಿಲ್ಲ. ಹಾಲು ಬೆರೆಸಿ ಕಾಫಿ, ಟೀ ಕುಡಿಯುವಂತಿಲ್ಲ. ಕಾಫಿ, ಟೀಗೆ ತೆಂಗಿನಕಾಯಿ ಹಾಲು ಹಾಕಿ ಕುಡಿಯುವುದೂ ನಿಷಿದ್ಧ.
ದ್ವಿದಳ ವ್ರತ (ಆಶ್ವಿಜ ದ್ವಾದಶಿಯಿಂದ ಕಾರ್ತಿಕ ದಶಮಿ):
ಕಡ್ಲೆ, ಉದ್ದು, ತೊಗರಿ, ಹೆಸರು, ಅವರೆ, ಹುರುಳಿ ಬಳಕೆಯಿಲ್ಲ. ಭೂಮಿಯೊಳಗೆ ಬೆಳೆದ ಗಡ್ಡೆ, ಗೆಣಸನ್ನಷ್ಟೇ ಬಳಸಬಹುದು. ಶುಂಠಿ, ಗೆಣಸು, ಸುವರ್ಣ ಗಡ್ಡೆ, ಬಾಳೆಕಾಯಿ ಬಳಸಬಹುದಾದರೂ ಬಟಾಟೆ ಕೆಲವರಷ್ಟೇ ಬಳಸುತ್ತಾರೆ. ಸೇಬು, ಮೂಸಂಬಿ, ಕಿತ್ತಳೆ ಇತ್ಯಾದಿಗಳ ಬದಲು ಕೇವಲ ಬಾಳೆಹಣ್ಣು ಬಳಸಲಷ್ಟೇ ಅವಕಾಶ.
ವ್ರತವೆಂದರೆ ಸ್ವೀಕಾರ ಅಥವಾ ಬಿಡುವುದು ಎನ್ನುವ ದ್ವಂದ್ವಾರ್ಥವಿದೆ. ಬ್ರಹ್ಮಚರ್ಯ ವ್ರತ ಪಾಲನೆ (ಸ್ವೀಕಾರ), ಬಿಡುವುದಲ್ಲ. ವ್ರತದೂಟದಲ್ಲಿ ಆರೋಗ್ಯದ ದೃಷ್ಟಿಯಿದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ಕಶ್ಮಲ, ಕ್ರಿಮಿ, ಕೀಟಗಳು ತರಕಾರಿಗಳನ್ನು ಕಾಡುವುದರಿಂದಾಗಿ ಶಾಖಾ ವ್ರತದ ಹೆಸರಲ್ಲಿ ತ್ಯಾಗ ಮಾಡಲಾಗುತ್ತಿದೆ.
ವ್ರತದೂಟದಲ್ಲೂ ಭಿನ್ನತೆ
ಚಾತುರ್ಮಾಸ್ಯ ವ್ರತದೂಟದಲ್ಲೂ ಮಠ, ಪ್ರಾದೇಶಿಕ ಭಿನ್ನತೆ, ವೈಶಿಷ್ಟ್ಯವಿದೆ. ಕೆಲ ಮಠಗಳಲ್ಲಿ ವ್ರತದೂಟಕ್ಕೆ ತೆಂಗಿನ ಕಾಯಿ ಬದಲು ಒಣ ಕೊಬ್ಬರಿ ಬಳಸುತ್ತಾರೆ. ಸಾಸಿವೆ, ತೊಗರಿ ಕೆಲ ಮಠಗಳಲ್ಲಿ ಬಳಸೋದಿಲ್ಲ. ಉಡುಪಿಯ ಸೋದೆ ಶ್ರೀವಾದಿರಾಜ ಮಠದಲ್ಲಿ ಹುಣ್ಣಿಮೆ ದಿನದಂದು ಸರ್ವ ಶಾಖಾ ವ್ರತವಾಗಿ ಆಚರಿಸಲಾಗುತ್ತಿದೆ. ಕಾಣಿಯೂರು ಮಠದಲ್ಲಿ ಚಾತುರ್ಮಾಸ್ಯ ವ್ರತ ದಶಮಿಗೆ, ಉಳಿದ ಮಠಗಳಲ್ಲಿ ದ್ವಾದಶಿಗೆ ಆರಂಭವಾಗುತ್ತದೆ. ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡ ಬಳಿಕ ನದಿ ದಾಟುವಂತಿಲ್ಲ. ಗೃಹಸ್ಥರು ಚಾತುರ್ಮಾಸ್ಯ ವ್ರತದುದ್ದಕ್ಕೂ ಕಾಫಿ ಕುಡಿಯುವುದಿಲ್ಲ. ಯತಿ, ಗೃಹಸ್ಥರು ಪಂಚಗವ್ಯ ಮೂಲಕ ದೇಹ ಶುದ್ಧಿ (ಆಂತರಿಕ), ತಪ್ತ ಮುದ್ರಾ ಧಾರಣೆ (ದೈಹಿಕ) ಮೂಲಕ ಬಾಹ್ಯ ಶುದ್ಧಿ ಮಾಡಿಕೊಂಡು ಚಾತುರ್ಮಾಸ್ಯ ವ್ರತ ಪಾಲನೆ ಮಾಡಬೇಕು.
ಆಹಾರದ ಪರಿಣಾಮ
ಉತ್ತಮ ಆಹಾರದ ಹವ್ಯಾಸ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೀವನ ಪದ್ಧತಿ ಬದಲಾವಣೆ ಹಿನ್ನೆಲೆಯಲ್ಲಿ ವೈದ್ಯಕೀಯ ವಿಜ್ಞಾನ ಮಾನವನ ಮೇಲೆ ಆತ ಸ್ವೀಕರಿಸುವ ಆಹಾರ ಬೀರುವ ಪರಿಣಾಮದ ಅಧ್ಯಯನ ನಡೆಯುತ್ತಿದೆ.
Get In Touch With Us info@kalpa.news Whatsapp: 9481252093
Discussion about this post