ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಎನ್’ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಯಶಸ್ಸು ನೀಡಿರುವ ಬಿಹಾರ ಜನತೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ `ಮೈ ಫಾರ್ಮುಲಾ’ ಅಂದರೆ ` ಮಹಿಳಾ ಹಾಗೂ ಯೂಥ್ ಸಬಲೀಕರಣಕ್ಕಾಗಿ ಶ್ರಮಿಸುವ ಸಂಕಲ್ಪ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್’ಡಿಎ ಮೈತ್ರಿಕೂಟ ಪ್ರಚಂಡ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ದೇಶದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಪ್ರಚಂಡ ವಿಜಯ, ಅಪಾರ ನಂಬಿಕೆ ಬಿಹಾರ ಜನರ ಕೊಡುಗೆಯಾಗಿದೆ. ಇಂದು ಬಿಹಾರದ ಮನೆ ಮನೆಯಲ್ಲೂ ಪಾಯಸ ಮಾಡಿ ಸಂಭ್ರಮಿಸುತ್ತಾರೆ, ಅಂತಹ ದಿನವಾಗಿದೆ. ನಾವೆಲ್ಲಾ ಜನರ ಸೇವಕರಷ್ಟೇ. ನಿಮ್ಮಗಳಿಗಾಗಿಯೇ, ನಿಮ್ಮ ಸಂತೋಷಕ್ಕಾಗಿಯೇ, ನಿಮ್ಮ ಹೃದಯ ಗೆದ್ದಿದ್ದೇವೆ. ಮತ್ತೊಮ್ಮೆ ಎನ್’ಡಿಎ ಸರ್ಕಾರ ಎಂಬುದು ಮತ್ತೆ ಸಾಬೀತಾಗಿದೆ. ಇದು ಮುಂದೆಯೂ ಸಹ ಸಾಬೀತಾಗಬೇಕಿದೆ ಎಂದರು.
ಬಿಹಾರ ರಾಜ್ಯ ಜಂಗಲ್ ರಾಜ್ಯವನ್ನು ಕಂಡಿದೆ. ಅಂತಹ ಕೆಟ್ಟ ಪರಿಸ್ಥಿತಿಗೆ ಆರ್’ಜೆಡಿಯ ಕೆಟ್ಟ ಆಡಳಿತ ಕಾರಣವಾಗಿತ್ತು. ಈಗ ನಮಗೆ ಅಧಿಕಾರ ನೀಡಿದ್ದೀರಿ. ಮುಂದೆ ಎಂದೂ ಬಿಹಾರ ಜಂಗಲ್ ರಾಜ್ಯ ಬರಲು ನಾವು ಬಿಡುವುದಿಲ್ಲ. ಸಮೃದ್ದ ಬಿಹಾರಕ್ಕಾಗಿ ಅಲ್ಲಿನ ಜನರ ನಮಗೆ ಬಹುಮತ ಮಾತ್ರವಲ್ಲ, ದಾಖಲೆಯ ಬೆಂಬಲ ನೀಡಿದ್ದಾರೆ. ಅಲ್ಲಿನ ಜನರಿಗೆ ಪ್ರಚಂಡ ಜಯ ನೀಡುವಂತೆ ಕೋರಿದ್ದೆ. ಅದನ್ನು ಮನ್ನಿಸಿ ಎನ್’ಡಿಎಗೆ ಪ್ರಚಂಡ ಬಹುಮತ ನೀಡಿದ್ದಾರೆ. ಇದಕ್ಕಾಗಿ ಬಿಹಾರದ ಮಹಾನ್ ಜನತೆಗೆ ಎನ್’ಡಿಎ ಮೈತ್ರಿ ಕೂಟ ಎಲ್ಲ ಸದಸ್ಯರ ಪರವಾಗಿ ವಿನಮ್ರತೆಯ ಧನ್ಯವಾದ ಹಾಗೂ ನಮನ ಸಲ್ಲಿಸುತ್ತೇನೆ ಎಂದರು.
ಇಂದಿನ ವಿಜಯದ ಸಂದರ್ಭದಿಂದ ಬಿಹಾರದ ಸಮಗ್ರ ಅಭಿವೃದ್ಧಿಗಾಗಿ ನಾವು ಸಂಕಲ್ಪ ಮಾಡುತ್ತೇವೆ. ಬಿಹಾರದಲ್ಲಿ ಕೆಲವು ತುಷ್ಠೀಕರಣಕ್ಕಾಗಿ ಮೈ ಫಾರ್ಮುಲಾ ಮಾಡಿದ್ದರು. ಅದು ನಡೆಯಲಿಲ್ಲ. ಆದರೆ, ನಾವೂ ಸಹ ಮೈ ಫಾರ್ಮುಲಾ ಮಾಡಿದ್ದೇವೆ. ನಮ್ಮ ಪ್ರಕಾರ ‘ಮಹಿಳಾ ಹಾಗೂ ಯೂಥ್’ ಸಬಲೀಕರಣ ನಮ್ಮ ಮೈ ಫಾರ್ಮುಲಾ ಆಗಿದೆ ಎಂದರು.
ಮೈ ಫಾರ್ಮುಲಾ ಜಾರಿ ಮಾಡಿ ಜಂಗಲ್ ರಾಜ್ಯದ ಕೆಟ್ಟ ಅಂಶಗಳನ್ನು ನಾವು ಸಂಫೂರ್ಣ ಸ್ವಚ್ಚ ಮಾಡುತ್ತೇವೆ. ಅಲ್ಲದೇ, ಮಹಿಳೆಯರಿಗೆ ಹಾಗೂ ಯುವಕರಿಗೆ ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಗುರಿ ಎಂದರು.
ಎನ್’ಡಿಎ ಮೈತ್ರಿಕೂಟದ ನಿತೀಶ್ ಕುಮಾರ್, ಜಿತನ್ ರಾಮ್ ಮಾಂಜಿ, ಚಿರಾಗ್ ಪಾಸ್ವಾನ್ ಸೇರಿದಂತೆ ಎಲ್ಲ ನಾಯಕರು ಹಾಗೂ ಎಲ್ಲ ಅಭ್ಯರ್ಥಿಗಳು ಅದ್ಬುತ ಸಾಧನೆ ಮಾಡಿದ್ದಾರೆ. ಈ ವಿಜಯದ ಹಿಂದೆ ನಾಯಕರು ಮಾತ್ರವಲ್ಲ ಎನ್’ಡಿಎ ಮೈತ್ರಿಕೂಟದ ಪ್ರತಿಯೊಬ್ಬರ ಕಾರ್ಯಕರ್ತರ ಶ್ರಮವಿದೆ ಎಂದರು.
ಇದು ಎನ್’ಡಿಎ ವಿಜಯವಲ್ಲ. ಬದಲಾಗಿ ಲೋಕತಂತ್ರದ ವಿಜಯ. ಭಾರತದ ಚುನಾವಣಾ ಆಯೋಗದ ಮೇಲೆ ನಂಬಿಕೆಯನ್ನು ಗಟ್ಟಿ ಮಾಡುವ ವಿಜಯ ಇದಾಗಿದೆ. ಹೆಚ್ಚು ಹಾಗೂ ಪ್ರಮಾಣಿಕವಾಗಿ ಮತದಾನವಾಗುವಲ್ಲಿ ಚುನಾವಣಾ ಆಯೋಗ ಬಹಳಷ್ಟು ಶ್ರಮಿಸಿದೆ. ಇದಕ್ಕಾಗಿ ಚುನಾವಣಾ ಆಯೋವನ್ನು ಅಭಿನಂದಿಸುತ್ತೇನೆ ಎಂದರು.
ಒಂದು ಕಾಲದಲ್ಲಿ ಮಾವೋವಾದಿಗಳ, ನಕ್ಸಲರ ಹಾಗೂ ಸಮಾಜಘಾತುಕರ ಉಪಟಳದಿಂದ ಇಲ್ಲಿ ಮಧ್ಯಾಹ್ನ ಮೂರು ಗಂಟೆಗೇ ಮತದಾನ ಮುಕ್ತಾಯವಾಗುವ ಕಾಲವಿತ್ತು. ಮತಗಟ್ಟ ಲೂಟಿ, ಹಿಂಸಾಚಾರ ನಡೆಯುತ್ತಿದೆ. ಅದರೆ, ಈಗ ಯಾವುದೇ ಅಂಜಿಕೆಯಿಲ್ಲದೇ ಪ್ರತಿಯೊಬ್ಬರೂ ಧೈರ್ಯದಿಂದ ಮುಂದೆ ಬಂದು ಮತದಾನ ಮಾಡುವ ಉತ್ತಮ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖವಾಗಿ, ಯಾವುದೇ ಭಯವಿಲ್ಲದೇ, ಶಾಂತಿಯುತವಾದ ಮತದಾನ ಆಗಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದರು.
2005ಕ್ಕೂ ಮೊದಲು ಬಿಹಾರದಲ್ಲಿ ಮರು ಮತದಾನಗಳು ಹೆಚ್ಚಾಗಿ ನಡೆಯುತ್ತಿತ್ತು. ಈ ಬಾರಿ ಎರಡು ಹಂತದ ಚುನಾವಣೆಯೂ ಸಹ ಶಾಂತಿಯುತವಾಗಿ, ದಾಖಲೆಯ ಮತದಾನ ನಡೆದಿದೆ. ಅಲ್ಲದೇ ಪ್ರಮುಖವಾಗಿ, ಎಲ್ಲಿಯೂ ಸಹ ಮರು ಮತದಾನ ಮಾಡುವಂತಹ ಪರಿಸ್ಥಿತಿ ಬಂದಿಲ್ಲ. ಇದರ ಹಿಂದೆ ಚುನಾವಣಾ ಆಯೋಗ, ಅಧಿಕಾರಿ, ಸಿಬ್ಬಂದಿಗಳು ಹಾಗೂ ಶಾಂತಿಯುತ ಮತದಾನಕ್ಕೆ ಕಾರಣರಾದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.
ಜನರು ಜಾಮೀನಿನ ಮೇಲಿರುವ ನಾಯಕನನ್ನು ನಂಬುವುದಿಲ್ಲ. ತುಷ್ಠೀಕರಣಕ್ಕಿಂಗಲೂ ಸಂತುಷ್ಠೀಕರಣ ತುಂಬಾ ದೊಡ್ಡ ವಿಷಯ ಎಂದು ವಿರೋಧಿಗಳಿಗೆ ಟಕ್ಕರ್ ಕೊಟ್ಟರು.
ಬಿಹಾರದಲ್ಲಿ ಎನ್’ಡಿಎಗೆ 15 ವರ್ಷದ ನಂತರವೂ ಸಹ ಭಾರೀ ಬಹುಮತ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಬಿಹಾರದ ಜನ ಜಂಗಲ್ ರಾಜ್ ಆಡಳಿತ ಅನುಭವಿಸಿದ್ದಾರೆ. ಬಿಹಾರದಲ್ಲಿ ರೆಡ್ ಕಾರಿಡಾರ್ ಇತಿಹಾಸದ ಪುಟ ಸೇರಿದೆ. ಮುಂದೇ ಎಂದೂ ಬಿಹಾರ ಎಂದಿಗೂ ಜಂಗಲ್ ರಾಜ್ ಆಡಳಿತಕ್ಕೆ ಮರಳಲು ಎನ್’ಡಿಎ ಬಿಡುವುದಿಲ್ಲ ಎಂದರು.
ನನ್ನ ತಾಯಿಯನ್ನು ಅವಮಾನಿಸಿದವರಿಗೆ ಬಿಹಾರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಎನ್’ಡಿಎಗೆ 3ನೇ ಬಾರಿ ಅಧಿಕಾರ ನೀಡಿರುವದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಷ್ಟವೃಷ್ಠಿ, ಬಣ್ಣದ ಕಾಗದದ ವೃಷ್ಠಿ ಮಾಡಿ, ಘೋಷಣೆ ಕೂಗಿ ಬರಮಾಡಿಕೊಂಡು ಅಭಿನಂದಿಸಲಾಯಿತು.
ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















