ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ | 
ಪ್ರಪಂಚದ ಒಡೆಯ ಶ್ರೀನಿವಾಸನಿಗೆ ನಾವು ವಿವಿಧ ಉತ್ಸವಗಳನ್ನು ನವರಾತ್ರಿಯಲ್ಲಿ ಮಾಡಿ ಸಂಭ್ರಮಿಸುತ್ತೇವೆ. ದೇವರ ಮದುವೆಯನ್ನು ಮಾಡಿ ನಮಗೆ ಕಲ್ಯಾಣ ಮಾಡೆಂದು ಪ್ರಾರ್ಥನೆಯನ್ನು ಮಾಡಿ ಬೇಡಿಕೊಳ್ಳುತ್ತೇವೆ. ಇಂತಹ ಸುಂದರವಾದ ಉತ್ಸವದಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆಯ ಹೊತ್ತಿನಲ್ಲಿ 7 ದಿನ ವಿವಿಧ ವಾಹನಗಳ ಉತ್ಸವವನ್ನು ನಡೆಸುತ್ತಾರೆ. ಎಂಟನೇ ದಿನ ಬ್ರಹ್ಮ ರಥೋತ್ಸವ ಮತ್ತು ದಶಮಿಯ ದಿನ ಪಲ್ಲಕ್ಕಿ ಉತ್ಸವ ಹಾಗೂ ಚಕ್ರ ಸ್ನಾನವನ್ನು ಮಾಡಿ ನವರಾತ್ರೋತ್ಸವ ಮಾಡುತ್ತಾರೆ.
ಪ್ರತಿಯೊಂದು ವಾಹನಕ್ಕೂ ಅದರದೇ ಆದ ಮಹತ್ವ ಇದೆ. ಶೇಷ ವಾಹನ, ಗರುಡ ವಾಹನ, ಸಿಂಹ ವಾಹನ, ಗಜ ವಾಹನ, ಅಶ್ವವಾಹನ, ಹಂಸ ವಾಹನ, ಮುತ್ತಿನ ಅಲಂಕಾರದ ವಾಹನ, ಕಲ್ಪವೃಕ್ಷ ವಾಹನ, ಸರ್ವ ಭೂಪಾಲ ವಾಹನ, ಮೋಹಿನ ಅವತಾರ, ಬಂಗಾರದ ರಥೋತ್ಸವ, ಹನುಮಂತ ವಾಹನ, ಪುಷ್ಪಕ ವಾಹನ, ಸೂರ್ಯಪ್ರಭಾ ವಾಹನ, ಚಂದ್ರಪ್ರಭಾ ವಾಹನ ಮಾಡುತ್ತಾರೆ.


ಶೇಷ ವಾಹನ: ಶೇಷದೇವರು ಪರಮಾತ್ಮನ ಹಾಸಿಗೆ ಸದಾಕಾಲ ಅವನ ಸೇವೆಗೆ ನಿರಂತರವಾಗಿ ನಿಂತಿರುವವರು. ಅವರ ಪ್ರಾಣಿ ಜಾತಿಯ ಹಾವಿನ ಜಾತಿಗೆ ಸೇರಿದವರು ವಿಷವನ್ನು ಕಾರುವುದು ಅವರ ಸ್ವಭಾವ ಆದರೆ ಅವರ ಪ್ರಾಕೃತಿಕ ಸ್ವಭಾವವನ್ನು ಬಿಟ್ಟು ಭಗವಂತನ ಸೇವೆಗೆ ನಿಂತ ಮೇಲೆ ಪ್ರಪಂಚವನ್ನೇ ಹೊತ್ತಿರುವ ಭಗವಂತನ ಸೇವೆ ಮಾಡುತ್ತಾ ಇರುವುದು ನಾವು ನಮ್ಮಲ್ಲಿ ಎಂತದ್ದೇ ಗುಣ ಸ್ವಭಾವ ಹೊಂದಿದ್ದರೂ ಪರಮಾತ್ಮನ ಕೃಪೆಗೆ ಪಾತ್ರರಾದಾಗ ನಮ್ಮ ಕೆಟ್ಟಗುಣಗಳೂ ಕೂಡ ಒಳ್ಳೆಯದಾಗಿ ಪರಿವರ್ತಿತವಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಗಜ ವಾಹನ: ಆನೆ ದೊಡ್ಡದಾದ ಪ್ರಾಣಿ, ತಾನಾಗಿ ಉತ್ಪಾತ ಮಾಡುವ ಸ್ವಭಾವದ್ದಲ್ಲ, ನಿಧಾನವಾಗಿ ನಡೆದರೂ ಅದಕ್ಕೆ ಬಹಳ ಮರ್ಯಾದೆ, ರಾಜರ ಆಸ್ಥಾನಗಳಲ್ಲಿ ಅದರ ಮೇಲೆ ಕುಳಿತು ಕೊಂಡು ಹೋಗುವುದೇ ಗೌರವ ಎಂದು ರಾಜರು ಅಂದು ಕೊಂಡರೆ ಪ್ರಪಂಚದ ರಾಜನಾದ ಭಗವಂತನು ಆ ಗಜನ ಮೇಲೆ ಕುಳಿತು ಆ ಗಜಕ್ಕೆ ಇನ್ನಷ್ಟು ಮಹತ್ವವನ್ನು ಕೊಡುತ್ತಾನೆ. ಭಗವಂತನಿಗೆ ತನ್ನ ಭಕ್ತರಲ್ಲಿಯ ಗಜದ ಹಿರಿಮೆ ಮತ್ತು ಗಾಂಭೀರ್ಯದ ನಡೆ ಪ್ರೀತಿ ಪಾತ್ರವಾಗಿದೆ. ಗಜ ಎಲ್ಲೇ ಹೋಗಲಿ ತನ್ನ ಪಾಡಿಗೆ ತನ್ನ ಹಿಂಡಿನ ಜೊತೆಗೆ ಸಂತಸದಿಂದ ಇರುತ್ತದೆ, ಯಾರಾದರೂ ಕೆಣಕಲು ಬಂದಾಗ ತಾನೂ ದಾಳಿ ಮಾಡಿ ರಕ್ಷಿಸಿ ಕೊಳ್ಳುತ್ತದೆ. ಹಾಗೇಯೇ ಭಗವಂತನ ಭಕ್ತರಿಗೆ ಕೂಡ ನಿಮ್ಮ ಪಾಡಿಗೆ ನೀವು ಇರಿ, ಉತ್ಪಾತ ಮಾಡಲು ಬಂದವರನ್ನು ಸುಮ್ಮನೆ ಬಿಡಬೇಡಿ ಎಂಬ ಸಂದೇಶವನ್ನು ಕೂಡ ಕೊಡುತ್ತದೆ.

ಅಶ್ವ ವಾಹನ: ಕುದುರೆ ತನ್ನ ವೇಗಕ್ಕೆ ಪ್ರಸಿದ್ಧ ಬಹಳಷ್ಟು ದೇವತೆಗಳ ವಾಹನ ಅಶ್ವವಾಗಿದೆ. ಅಶ್ವವು ಅಷ್ಟು ವೇಗವಾಗಿ ಏಕೆ ಓಡುತ್ತದೆ ಎಂದರೆ ಅದಕ್ಕೆ ತನ್ನ ಅಕ್ಕಪಕ್ಕದ ಯಾವುದೇ ವಸ್ತುವಿನ ಕಡೆಗೆ ಲಕ್ಷ್ಯ ಹೋಗುವುದಿಲ್ಲ ತನ್ನ ಗುರಿಯತ್ತ ಮಾತ್ರ ಮನಸ್ಸು ಕೇಂದ್ರಿಕೃತವಾಗಿರುತ್ತದೆ. ಹಾಗೆಯೇ ಭಕ್ತನ ಮನಸ್ಸು ಭಗವಂತನ ಪಾದಚರಣಗಳಲ್ಲಿ ಸ್ಥಾನ ಪಡೆಯುವ ಒಂದೇ ಉದ್ಧೇಶವಿದ್ದಾಗ ಅವನ ಪಾದ ಸೇರುತ್ತೇವೆ ಎನ್ನುವ ವಿಚಾರವನ್ನು ಹೇಳುವ ಅಶ್ವವು ಕೂಡ ಪರಮಾತ್ಮನ ಸೇವೆ ತತ್ಪರವಾಗಿರುತ್ತದೆ.
ಹಂಸ ವಾಹನ: ಹಂಸವು ತನ್ನ ಹಂಸ ಕ್ಷೀರ ನ್ಯಾಯಕ್ಕೆ ಪ್ರಸಿದ್ಧ, ಹಾಲಿನಲ್ಲಿ ಮಿಶ್ರಿತವಾದ ನೀರನ್ನು ಬಿಟ್ಟು ಅದರಲ್ಲಿಯ ಹಾಲನ್ನು ಮಾತ್ರ ಸೇವಿಸುವ ಪಕ್ಷಿ ಹಂಸ, ನಮ್ಮ ಮನ ಹಂಸದ ಬಣ್ಣದಂತೆ ಶುದ್ಧವಾಗಿರಬೇಕು, ಮನದಲ್ಲಿ ಹಂಸದ ತೂಕದಷ್ಟೇ ಹಗುರವಾಗಿರಬೇಕು ಅಂದರೆ ಸಂಸಾರದ ಬಂಧನದ ಭಾರಗಳು ಆಧ್ಯಾತ್ಮದ ಜ್ಞಾನಕ್ಕೆ ಬಾಧಕವಾಗಬಾರದು. ಹೀಗೆ ಬೇರೆ ಪರಮಾತ್ಮನಂತೆ ವೇಷ ಹಾಕಿದವರನ್ನು ಹಿಂದೆ ಸರಿಸಿ ಪ್ರಪಂಚವನ್ನೇ ಉದ್ಧರಿಸುತ್ತಿರುವ ಪರಮಾತ್ಮನನ್ನು ಮಾತ್ರ ಆರಿಸಿಕೊಳ್ಳುವ ಹಂಸದಂತೆ ನಮ್ಮ ಭಕ್ತಿ ಇರಬೇಕು.

ಬ್ರಹ್ಮರಥೋತ್ಸವದಲ್ಲಿ ಬೃಹತ್ ಗಾತ್ರದ ಮರದ ರಥವನ್ನು ಎಳೆಯುತ್ತಾರೆ. ಸಾಮಾನ್ಯವಾಗಿ ರಥವನ್ನು ಎಳೆದು ಸೇವೆಯನ್ನು ಮಾಡುವುದರಿಂದಲೇ ನಮ್ಮ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅಂತಹ ಪ್ರಪಂಚದ ಕರ್ತೃವಾದ ಪರಮಾತ್ಮನ ಪ್ರೀತಿಗಾಗಿ ಮಾಡುವ ರಥೋತ್ಸವವು ಲೋಕ ಕಲ್ಯಾಣಕ್ಕಾಗಿಯೇ ಆಗಿರುತ್ತದೆ. ರಥೋತ್ಸವದ ಮುಂದೆ ಕೋಲಾಟ, ವಿವಿಧ ವೇಷಗಳಿಂದ ಸ್ವಾಮಿಯ ಸೇವೆಯನ್ನು, ಭಜನೆಗಳಿಂದ ಸೇವೆಯನ್ನು ಮಾಡುತ್ತಾ ಒಂದು ಪ್ರದಕ್ಷಿಣೆಯನ್ನು ಮಾಡುತ್ತಾರೆ.
ದಶಮಿಯ ದಿನ ಸ್ವಾಮಿ ಪುಷ್ಕರಣಿಯಲ್ಲಿ ವೆಂಕಟೇಶ ಶ್ರೀದೇವಿ ಭೂದೇವಿಯರಿಗೆ ಅವಭೃತ ಸ್ನಾನವನ್ನು ಮಾಡಿಸುತ್ತಾರೆ. ಉತ್ಸವ ಮೂರ್ತಿಗಳಿಗೆ ಅಭಿಷೇಕವನ್ನು ಶ್ರೀಚಕ್ರದ ಮೂಲಕ ಸ್ವಾಮಿ ಪುಷ್ಕರಣಿಯ ತೀರ್ಥದ ಮೂಲಕ ಮಾಡಿಸಿ ಅದರ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡುತ್ತಾರೆ. ಈ ಮೂಲಕ ಈ ಎಲ್ಲ ಆಚರಣೆಗಳಿಗೆ ತೆರೆ ಬೀಳುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post