ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಪುನೀತ್ ಜಿ. ಕೂಡ್ಲೂರು |
ಸನಾತನ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾತಿಯು ಪ್ರಮುಖವಾದುದು ಹಾಗೂ ವಿಶೇಷವಾದುದು. ಸೂರ್ಯ ಸಿದ್ದಾಂತದ ಆದರದ ಮೇಲೆ ಸಿದ್ದವಾಗಿರುವ ಪಂಚಾಂಗಗಳು ಮಕರ ಸಂಕ್ರಾಂತಿಯ ದಿನಗಳನ್ನು ನಿರ್ಧರಿಸುತ್ತವೆ. ಮಕರ ಸಂಕ್ರಾಂತಿಯ ಹಬ್ಬದ ಆಚರಣೆಗೂ ಮೊದಲು ಸಂಕ್ರಮಣ ಎಂದರೇನು, ಅದರ ಫಲವೇನು, ಸಂಕ್ರಮಣ ಕಾಲ ಯಾವುದು, ಎಷ್ಟು ಸಂಕ್ರಮಣಗಳಿವೆ ಎಂದು ತಿಳಿಯಬೇಕು.
ಸಂಕ್ರಮಣ ಕಾಲವನ್ನು ಹೇಗೆ ನಿರ್ಧರಿಸಬೇಕು ಎಂದು ಧರ್ಮ ಸಿಂಧು, ನಿರ್ಣಯ ಸಿಂಧು, ಧರ್ಮಶಾಸ್ತ್ರ ಕರದೀಪಿಕಾ ಎಂಬಿತ್ಯಾದಿ ಗ್ರಂಥಗಳು ನಮಗೆ ತಿಳಿಸಿವೆ. ಈ ಗ್ರಂಥಗಳಲ್ಲಿ ನೀಡಿರುವ ವಿಷಯಗಳ ಆದರಾದ ಮೇಲೆ ನಮ್ಮ ಪಂಚಾಂಗಗಳು ಸಂಕ್ರಮಣಕಾಲ ಹಾಗೂ ಸಂಕ್ರಮಣದ ಪುಣ್ಯಕಾಲ, ಪರ್ವಕಾಲವನ್ನು ನಿಖರವಾಗಿ ಪ್ರಕಟಿಸುತ್ತದೆ.
Also Read>> ಮನುಷ್ಯರಲ್ಲ ರಾಕ್ಷಸರು | 3 ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು | ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ನಮಗೆ ತಿಳಿದಿರುವಂತೆ ಸೂರ್ಯನು ನಮ್ಮ ರಾಶಿ ಚಕ್ರದ ರಾಶಿಗಳನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರಗೆ ಒಂದು ತಿಂಗಳು ಒಂದೊಂದು ರಾಶಿಯಲ್ಲಿ ಸಂಚಾರ ಮಾಡುತ್ತಾನೆ, ಅರ್ಥಾತ್ ಭೂಮಿಯು ಸೂರ್ಯನ ಸುತ್ತ ಆಯಾಯ ರಾಶಿಗಳ ಅಕ್ಷಾಂಶ ಹಾಗೂ ರೇಖಾಂಶಗಳಲ್ಲಿ ಸುತ್ತುತ್ತದೆ. ನಮ್ಮದು ಜಿಯೋ ಸೆಂಟ್ರಿಕ್ ಕ್ಯಾಲುಕೇಲೆಷನ್ ಆದ್ದರಿಂದ ಭೂ ಬಿಂಧುವನ್ನು ಸೂರ್ಯನ ಬಿಂಧುವಾಗಿ ಪರಿವರ್ತಿಸಿ ಸೂರ್ಯನ ಚಲನ ಎಂದು ಹೇಳುತ್ತೇವೆ. ಹೀಗೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವಾಗ ಉಂಟಾಗುವ ಸಂಧಿಕಾಲವೇ ಸಂಕ್ರಮಣ. ಹೀಗೆ ಪ್ರತಿವರ್ಷ ಹನ್ನೆರಡು ಸಂಕ್ರಮಣಗಳು ಬರುತ್ತವೆ ಅದರಲ್ಲಿ ನಾವು ಪ್ರಧಾನವಾಗಿ ಪರಿಗಣಿಸುವುದು ಕಟಕ ಸಂಕ್ರಮಣ ಹಾಗೂ ಮಕರ ಸಂಕ್ರಮಣ ಎಂಬ ಎರಡು ಸಂಕ್ರಮಣಗಳು ಮಾತ್ರ. ಉಳಿದ ಸಂಕ್ರಮಣಗಳಿಗೆ ಅನಧ್ಯನ, ಶ್ರಾದ್ಧಾ, ನಿಷೇಧಾದಿಗಳ ಆಚರಣೆಯಿದ್ದರು ಮಕರ ಸಂಕ್ರಮಣದಂತೆ ಹಬ್ಬದ ಆಚರಣೆ ಇರುವುದಿಲ್ಲ.
ಭೂಮಿಯು ಸೂರ್ಯನ ಸುತ್ತುವ ಒಂದು ದಿನದ ಕಾಲವನ್ನು ಒಂದು ಹಗಲು ಹಾಗೂ ಒಂದು ಇರುಳಾಗಿ ವಿಂಗಡಿಸಲಾಗಿದೆ. ಹಗಲಲ್ಲಿ ಬೆಳಕು ಹಾಗೂ ಇರುಳಲ್ಲಿ ಕತ್ತಲು ಕ್ರಮಶಹ ಹನ್ನೆರಡು ಗಂಟೆ ಎಂದು ವಿಭಜಿಸಲಾಗಿದೆ. ಆದರೆ ಹಗಲು ಮತ್ತು ಇರುಳು ನಮಗೆ ಸಮಪ್ರಮಾಣದ ಅವಧಿಯಲ್ಲಿ ಸಿಗುವುದು ವರ್ಷಕ್ಕೆ ಎರಡು ದಿನ ಮಾತ್ರ.
ಖಗೋಳ ಶಾಸ್ತ್ರವು ತಿಳಿಸಿದಂತೆ ಸೂರ್ಯೋದಯವು ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಆಗುತ್ತದೆ. ಆದರೆ ನಿಖರ ಪೂರ್ವ ಮತ್ತು ಪಶ್ಚಿಮದಲ್ಲಿ ಆಗುವುದು ಎರಡೇ ದಿನ ಮಾತ್ರ ಅದನ್ನೇ ನಾವು ಆಂಗ್ಲಭಾಷೆಯಲ್ಲಿ ಈಕ್ವೀನಾಕ್ಸ್ (Equinox) ಎಂದು ಕರೆಯುತ್ತೇವೆ. ಈ ಎರಡು ದಿನಗಳನ್ನು ಹೊರೆತು ಪಡೆಸಿ ಸೂರ್ಯನ ಉದಯವು ಉಳಿದ ದಿನಗಳಲ್ಲಿ ಸೂರ್ಯನ ಉದಯ ಪೂರ್ವದ ಬಲಕ್ಕೆ ಅಂದರೆ ಉತ್ತರಕ್ಕೆ ಅಥವಾ ಉದಯ ಪೂರ್ವದ ಎಡಕ್ಕೆ ಅಂದರೆ ದಕ್ಷಿಣಕ್ಕೆ ಚಲಿಸುತ್ತದೆ. ಹೀಗೆ ಚಲಿಸುವ ಸಂದರ್ಭದಲ್ಲಿ ಹೆಚ್ಚು ಹಗಲು ಅಥವಾ ಹೆಚ್ಚು ಇರುಳು ಭಾಸವಾಗುತ್ತದೆ, ಚಳಿ ಮತ್ತು ಬಿಸಿಲೂ ಸಹ ಇದೇ ವ್ಯವಸ್ಥೆಯಿಂದ ಕೂಡಿದೆ.
ಚಲಿಸುವ ಸೂರ್ಯನು ಆರು ತಿಂಗಳು ಉತ್ತರಕ್ಕೆ ಚಲಿಸಿ ಈಕ್ವಿನಾಕ್ಸ್ ಬಿಂದುವನ್ನು ತಲುಪುವವರಗೆ ಉತ್ತರಾಯಣವೆಂದು ಕರೆಯುತ್ತೇವೆ. ಇದು ಮಕರ ರಾಶಿಯಿಂದ ಆರಂಭವಾಗುವುದರಿಂದ ಮಕರ ಸಂಕ್ರಮಣ ಎಂದು ಕರೆಯುತ್ತೇವೆ. ಈ ಉತ್ತರಾಯಣ ಕಾಲದಲ್ಲಿ ಹಗಲು ಹೆಚ್ಚು ಹಾಗೂ ಬೇಸಿಗೆಯ ಕಾಲದ ಆರಂಭವಾಗುತ್ತದೆ. ಹೀಗೆ ಚಲಿಸುವ ಸೂರ್ಯನು ಉತ್ತರದ ತುತ್ತ ತುದಿಯನ್ನು ತಲುಪಿ ಅಚಲವೆಂವೆಂಬ ಕಂಡು ಮರುದಿನದಿಂದ ವಿರುದ್ಧ ದಿಕ್ಕಿನಲ್ಲಿ ಅಂದರೆ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಾನೆ. ಈ ದಕ್ಷಿಣದ ದಿಕ್ಕಿಗೆ ಸಂಚರಿಸುವ ಕಾಲವನ್ನು ದಕ್ಷಿಣಾಯನ ಎಂದು ಕರೆಯುತ್ತೇವೆ. ದಕ್ಷಿಣಾಯನದಲ್ಲಿ ಇರುಳು ಹೆಚ್ಚು ಕಾಲ ವಿರುತ್ತದೆ ಹಾಗೂ ಚಳಿಗಾಲದ ಆರಂಭವಾಗುತ್ತದೆ. ಈ ದಕ್ಷಿಣ ಪಥ ಸಂಚಲನವು ಕರ್ಕಾಟಕ ರಾಶಿಯಲ್ಲಿ ಆಗುವುದರಿಂದ ಕರ್ಕಾಟಕ ಸಂಕ್ರಮಣವೆಂದೂ ಕರೆಯುತ್ತೇವೆ.
ಮಕರ ಸಂಕ್ರಮಣವು ಪುಷ್ಯಮಾಸದ ಮಧ್ಯಭಾಗದಲ್ಲಿ ಬರುತ್ತದೆ, ಇಲ್ಲಿಂದ ಉತ್ತರಾಯಣ ಪುಣ್ಯಕಾಲವೆಂದು ನಾವು ಪರಿಗಣಿಸಿ ಮುಂದಿನ ಐದು ತಿಂಗಳು ಮಾಘಾಧಿ ಪಂಚಮ ಮಾಸಗಳಲ್ಲಿ ಶುಭಕಾರ್ಯಗಳನ್ನು ಹಿಂದುಗಳು ಆಚರಿಸುತ್ತೇವೆ. ಈ ಉತ್ತರಾಯಣ ಪರ್ವಕಾಲವು ಕೇವಲ ಶುಭಕಾರ್ಯಗಳಿಗಲ್ಲದೆ ಮರಣಕ್ಕೂ ಶುಭಸಮಯವೆಂಬುದು ಮಹಾಭಾರತದ ಭೀಷ್ಮ ಪಿತಾಮಹರ ಘಟನೆಯಿಂದ ನಮಗೆ ತಿಳಿಯುತ್ತದೆ. ಬಾಣಗಳ ಮೇಲೆ ಮಲಗಿರುವು ಭೀಷ್ಮರು ಉತ್ತರಾಯಣ ಆರಂಭವಾಗುವುದನ್ನು ಕಾದು ತದನಂತರ ಅವರಿಗೆ ಲಭಿಸಿದ ವರದ ಫಲವಾಗಿ ಇಚ್ಚಾ ಮರಣವನ್ನು ಪಡೆದರು ಎಂಬುದು ಮಹಾಭಾರತವನ್ನು ಓದಿದ ನಮಗೆಲ್ಲಾ ತಿಳಿದಿದೆ.
ಈ ಮಕರ ಸಂಕ್ರಮಣವನ್ನು ಕರ್ನಾಟಕದವರಾದ ನಾವು ಸಂಕ್ರಾಂತಿ ಎಂದು ಆಚರಿಸಿದರೆ ಉಳಿದ ರಾಜ್ಯಗಳು ಬೇರೆ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ. ವಿಶೇಷವಾಗಿ ರೈತರು ಬೆಳೆದ ಫಸಲುಗಳು ಬೆಳೆದು ಅದನ್ನು ಮಾರುವ ಸಂದರ್ಭವು ಈ ಕಾಲಾವಧಿಯಲ್ಲಿ ಆಗುವುದರಿಂದ ಸುಗ್ಗಿ ಹಬ್ಬ, ಸುಗ್ಗಿ ಕಾಲವೆಂದು ಆಚರಿಸುತ್ತಾರೆ. ತಾವು ಬೆಳೆದ ಬೆಳೆಯನ್ನು ಶೇಖರಿಸಿ ಅದನ್ನು ಗುಡ್ಡೆಹಾಕಿ ಅದಕ್ಕೆ ಪೂಜಿಸಿ ಸಂಭ್ರಮಿಸುತ್ತಾರೆ.
ಈ ಮಕರ ಸಂಕ್ರಾಂತಿಯನ್ನು ಹೇಗೆ ಆಚರಿಸಬೇಕೆಂದು ಧರ್ಮಶಾಸ್ತ್ರ ಕರದೀಪಿಕಾದಲ್ಲಿ ಹೀಗೆ ವಿವರಿಸಿದ್ದಾರೆ. ಮಕರ ಸಂಕ್ರಾಂತಿಯಲ್ಲಿ ಮನುಷ್ಯರೆಲ್ಲರೂ ತೀರ್ಥ ಸ್ನಾನವನ್ನು ಮಾಡಬೇಕು, ತಿಲಧೇನುವನ್ನು ದಾನಮಾಡಬೇಕು, ತಿಲ ತೈಲದ ದೀಪವನ್ನು ಈಶ್ವರನ ದೇವಾಲಯದಲ್ಲಿ ಹೊತ್ತಿಸಬೇಕು, ತಿಲತಂಡೂಲ ಮಿಶ್ರಮಾಡಿ ಶಿವಪೂಜೆಯನ್ನು ಮಾಡಬೇಕು, ತಿಲವನ್ನು ದಾನಮಾಡಬೇಕು, ತಿಲಹೋಮ ಮಾಡಬೇಕು, ತಿಲ ತರ್ಪಣವನ್ನು ನೀಡಬೇಕು ಹಾಗೂ ತಿಲವನ್ನು ಭಕ್ಷಿಸಬೇಕು. ಈ ನಿಯಮದಂತೆ ಈಗಲೂ ಎಳ್ಳು ಬೀರುವುದು ಹಾಗೂ ದಾನ ಕೊಡುವುದು ಆಚರಣೆಗೆ ಬಂದಿದೆ.
ಈ ಸಂಕ್ರಾಂತಿಯಿಂದ ರಥಸಪ್ತಮಿಯ ವರಗೆ ಅಂದರೆ ಪುಷ್ಯಮಾಸದ ಹುಣ್ಣಿಮೆಯ ಸ್ವಲ್ಪ ಆಚೆ ಈಚೆಯಿಂದ ಮಾಘಮಾಸ ಶುಕ್ಲ ಪಕ್ಷ ಸಪ್ತಮಿಯವರಗೆ ವಿಶೇಷವಾಗಿ ಎಳ್ಳು ತಿನ್ನಬೇಕು ಎಂದು ಹೇಳಿದ್ದಾರೆ. ಇದರ ಹಿಂದೆ ವಿಶೇಷವಾದ ವೈಜ್ಞಾನಿಕ ಕಾರಣವಿದೆ. ದಕ್ಷಿಣಾಯನದ ಮಧ್ಯಭಾಗ ಎಂದರೆ ಕಾರ್ತಿಕಮಾಸದ ದೀಪಾವಳಿಯಿಂದ ಮಾಘಮಾಸದ ಅಂತ್ಯದ ಶಿವರಾತ್ರಿಯವರಗೆ ಚಳಿಗಾಲವಿರುತ್ತದೆ. ಈ ಸಂದರ್ಭದಲ್ಲಿ ನಮ್ಮ ಚರ್ಮವು ಒಣಗುತ್ತವೆ ಹಾಗೂ ಒಡೆಯುತ್ತವೆ. ಈ ಚಳಿಯು ಧನುರ್ಮಾಸದಲ್ಲಿ ಬಹಳ ಅಧಿಕವಾಗುತ್ತದೆ ಈ ಸಂದರ್ಭದಲ್ಲಿ ಚರ್ಮಕ್ಕೆ ಸೂಕ್ತ ತೈಲಾಂಶ ನೀಡಬೇಕು. ಇದಕ್ಕಾಗಿ ನಾವು ಎಳ್ಳು ತಿನ್ನಬೇಕು.
ಈ ಎಳ್ಳಿನ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳನ್ನು ಗಮನಿಸಿ ಎಳ್ಳು, ಕಡ್ಲೇಕಾಯಿ ಬೀಜ, ಕೊಬ್ಬರಿ, ಬೆಲ್ಲ, ಕಡಲೆ. ಇದರಲ್ಲಿ ಎಳ್ಳು, ಕಡ್ಲೆಬೀಜ ಹಾಗೂ ಕೊಬ್ಬರಿ ಎಣ್ಣೆಯನ್ನು ನೀಡಿದರೆ, ಬೆಲ್ಲ ಹಾಗೂ ಕಡಲೆ ಉಷ್ಣವನ್ನು ನೀಡುತ್ತದೆ. ಬೆಲ್ಲ ಜೀರ್ಣಕ್ರಿಯೆಗೆ ಅತಿ ಹೆಚ್ಚು ಫಲಕಾರಿ. ಇವುಗಳ ಮಿಶ್ರಣವನ್ನು ಸಮಪ್ರಮಾಣದಲ್ಲಿ ತಿಳಿಸಿದ ಅವಧಿಯಲ್ಲಿ ಪ್ರತಿದಿನ ತಿಂದರೆ ದೇಹಕ್ಕೆ ಬೇಕಾದ ಜಿಡ್ಡು ಮತ್ತು ಉಷ್ಣವನ್ನು ದೇಹವು ಈ ಆಹಾರ ಪದಾರ್ಥಗಳಿಂದ ಉತ್ಪತ್ತಿಮಾಡಿಕೊಳ್ಳುತ್ತದೆ. ಇದರಿಂದ ದೇಹದ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಿಂದೂ ಧರ್ಮದ ಆಹಾರ ಹಾಗೂ ವಿಜ್ಞಾನ ಒಟ್ಟಿಗೆ ಇದೆ ಎಂಬುದಕ್ಕೆ ಇದೊಂದು ಸಾಕ್ಷಿ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ನಮ್ಮ ಕರ್ನಾಟಕದಲ್ಲಿ ಈ ಸಂಕ್ರಾಂತಿಗೆ ವಿಶೇಷ ಸ್ಥಾನಮಾನ ಸಿಕ್ಕೆದೆ ಎಂಬುದಕ್ಕೆ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು” ಎಂಬ ಗಾದೆಯ ಮಾತು ಸಾಕ್ಷಿಯಾಗಿದೆ. ಮನೆಯಲ್ಲಿ ಸಂಕ್ರಾಂತಿ ಎಂದರೆ ವಿಶೇಷ ಸಂಭ್ರಮ, ಮಹಿಳೆಯರಿಗೆ ಈ ಸಂಭ್ರಮದ ಶೇಕಡಾ ತೊಂಬತ್ತು ಮೀಸಲು. ಜನವರಿ ಆರಂಭದಿಂದಲೇ ಮನೆಯಲ್ಲಿ ಎಳ್ಳು ಬೆಲ್ಲದ ತಯಾರಿ, ಸಕ್ಕರೆ ಅಚ್ಚು ಮಾಡುವುದು ಹೀಗೆ ಅವರ ಪೂರ್ವ ಸಿದ್ಧತೆಯ ಹಂತದ ಸಂಭ್ರಮ ಅಪಾರವಾದುದು. ಆದರೆ ಇಂದು ಕೆಲವರು ಮಾರುಕಟ್ಟೆಯಿಂದ ಸಿದ್ದ ಎಳ್ಳುಗಳನ್ನು ತಂದು ಆ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರೆ. ಇರಲಿ ಅದು ಇಲ್ಲಿ ನಗಣ್ಯ. ಇನ್ನು ಹಬ್ಬದದಿನ ಮಹಿಳೆಯರು, ಹೆಣ್ಣುಮಕ್ಕಳ ಸಂಭ್ರಮ ವಿವರಿಸಲೇ ಆಗದು ಹೊಸ ಬಟ್ಟೆ, ಎಳ್ಳು ಬೆಲ್ಲ ಕಬ್ಬು ಹಿಡಿದು ಮನೆ ಮನೆಗೆ ಹೋಗಿ ಎಳ್ಳು ಬೆಲ್ಲ ನೀಡಿ ಶುಭಾಶಯ ವಿನಿಮಯ ಮಾಡಿ ಅರಿಶಿನ ಕುಂಕುಮ ಸ್ವೀಕರಿಸಿ ಸಡಗರದಿಂದ ದಿನ ಪೂರ್ತಿ ಕಳೆಯುತ್ತಾರೆ. ನೋಡಿದರೆ ಈ ಸಂಕ್ರಾಂತಿ ಹಬ್ಬ ಈ ಹೆಣ್ಣುಮಕ್ಕಳಿಗಾಗಿಯೇ ಮಾಡಲಾಗಿದಯೇ ಎಂದು ಅನ್ನಿಸುತ್ತದೆ. ಇದರ ಬಗ್ಗೆ ಕನ್ನಡದ ಪ್ರಖ್ಯಾತ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ರವರು ಸುಂದರ ಸಾಲುಗಳಲ್ಲಿ ಸಂಕ್ರಾಂತಿಯ ಕವನವನ್ನು ಬರೆದಿದ್ದಾರೆ. ಇದರಲ್ಲಿ ಹೆಣ್ಣುಮಕ್ಕಳ ಸಂಭ್ರಮವನ್ನು ಅವರು ಹೀಗೆ ವರ್ಣಿಸಿದ್ದಾರೆ ಗರಿಮುರಿ ಜರ್ಧಾರಿ ಲಂಗ ಹಾಕಿಕೊಂಡು ಗಿಲಿಗಿಲಿ ಗೆಜ್ಜೆಯ ಶಬ್ಧವ ಮಾಡಿಕೊಂಡು, ಎಳ್ಳು ಬೆಲ್ಲ ಸಕ್ರೆ ಅಚ್ಚು ಬಾಳೆ ಹಣ್ಣು ಬೆಲ್ಲ ಬಿರೋಕಂತ ಹೊರಟಿದ್ದಾಳೆ ತಂಗಿ ಕೇರಿಗೆಲ್ಲ. ಹೀಗೆ ಹೆಣ್ಣುಮಕ್ಕಳ ಸಂಭ್ರಮವನ್ನು ಅಕ್ಷರಗಳಲ್ಲಿ ಸಂಭ್ರಮಿಸಿದ್ದಾರೆ.
ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯ ರೀತಿ ಆಚರಿಸಲಾಗುತ್ತದೆ. ದನ-ಕರುಗಳ ಆರೋಗ್ಯದ ದೃಷ್ಠಿಯಿಂದ ಕಿಚ್ಚಾಯಿಸುವುದು, ಕಂಬಳ, ಜೆಲ್ಲಿಕಟ್ಟು, ಗಾಳಿಪಟದ ಸ್ಪರ್ಧೆ ಹೀಗೆ ಪ್ರಾಣಿಗಳಿಗೂ ಸಂಕ್ರಾಂತಿಯ ಸಂಭ್ರಮವಾದರೆ ಮಕ್ಕಳಿಗೆ ಯಾವುದೇ ದುಷ್ಟ ದೃಷ್ಟಿಗಳು ಬೀಳದೇ ಇರಲಿ ಎಂದು ಸಂಕ್ರಮಣದ ಸಂಜೆ ಎಳ್ಳಿನ ಫಲ ಎರೆದು ಆರತಿ ಮಾಡುವುದು ಸಹ ನಮ್ಮ ಪದ್ದತಿ.
ಪ್ರಕೃತಿ-ಪ್ರಾಣಿ ಸಂಕುಲ ಮನುಷ್ಯ ಮೂವರನ್ನು ಒಟ್ಟಿಗೆ ಬೆಸೆಯುವ ಹಬ್ಬವೇ ಸಂಕ್ರಾಂತಿ. ಸಂಭ್ರಮದಿಂದ ಸನಾತನ ಹಿಂದೂ ಧರ್ಮದ ಸಂಕ್ರಾಂತಿಯನ್ನು ಆಚರಿಸೋಣ ಓಂ ಸೂರ್ಯಾಯ ನಮಃ ಎಂದು ಭಗವಾನ್ ಸೂರ್ಯ ನಾರಾಯಣನನ್ನು ಪೂಜಿಸೋಣ…
Discussion about this post