ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಪನಯನವು ಒಂದು ಅತಿ ಉಪಯುಕ್ತವಾದ ಅಗತ್ಯ ಸಂಸ್ಕಾರವಾಗಿದ್ದು ಸೂಕ್ತಕಾಲದಲ್ಲಿ ಸೂಕ್ತಸ್ಥಳದಲ್ಲಿ ಮಾಡಬೇಕು. ಮುಖ್ಯವಾಗಿ ಸೂಕ್ತಕಾಲ, ಸ್ಥಳಾಭಾವ, ಮನೆಯಲ್ಲಿ ಉಪನಯನ ಮಾಡುವ ಸಾಧ್ಯಾಸಾಧ್ಯಗಳ ಕುರಿತು ಋತ್ವಿಕ್‌ವಾಣಿ ವಿದ್ವತ್ ಸಭೆಯ ಚರ್ಚೆಯ ವರಧಿ ಇದಾಗಿರುತ್ತದೆ. ಆ ವಿಚಾರವಾಗಿ ಶೃತಿಸ್ಮೃತಿಗಳು ಏನು ಹೇಳುತ್ತವೆ, ಧರ್ಮಶಾಸ್ತ್ರಗಳು ಏನು ಹೇಳುತ್ತವೆ ಎಂಬ ವಿಚಾರವಾಗಿ ಲಭ್ಯ ಗ್ರಂಥಾಧಾರಗಳಿಂದ ಸ್ಪಷ್ಟೀಕರಣ ಕೊಡಲು ಇಚ್ಛಿಸುತ್ತೇವೆ. ಇದಕ್ಕೆ ಆಧರಿಸಲ್ಪಟ್ಟ ಗ್ರಂಥಗಳ ವಿವರ ಹೀಗಿರುತ್ತದೆ:
1.ಮನು 2. ವಿಷ್ಣುಧರ್ಮೋತ್ತರ 3. ಅಪರಾರ್ಕವೃತ್ತಶಾಕಾದಪ 4. ಪರಧತ್ತ 5.ಗೌತಮ 6.ಆಪಸ್ತಂಭ 7.ಆಶ್ವಲಾಯನ 8.ಗರ್ಗ 9.ವೃತ್ತಶತ ಕರ್ತುವಾದ ಆನಂದ ವಸಿಷ್ಟ 10. ಮದನ ರತ್ನ ಕರ್ತುವಾದ ನಾರದ 11. ಬೃಹಸ್ಪತಿ ಪ್ರೋಕ್ತ ಪಾರಿಜಾತ 12.ರಾಜಮಾರ್ತಾಂಡ 13. ವೃದ್ಧ ಗಾರ್ಗ್ಯ ಪ್ರೋಕ್ತ ಕಾಲಾದರ್ಶ 14.ಮೈತ್ರೇಯಿ ಸೂತ್ರ 15. ಸುದರ್ಶನ ಭಷ್ಯ 16. ಜ್ಯೋತಿ ರ್ನಿಬಂಧ 17. ಧನುರ್ವಿಧ್ಯಾ ದೀಪಿಕ
ಅಲ್ಲದೇ ಇನ್ನೂ ಹಲವಾರು ಪುರಾತನ ಪ್ರಕಟಣಾ ಗ್ರಂಥಗಳು ಹೇಳಿದ ಮುಖ್ಯ ಸಮಾನಭಿಪ್ರಾಯಿಕ ಅಥವಾ ಭಾವಾಭಿಪ್ರಾಯ ವಿಚಾರಗಳನ್ನು ಇಲ್ಲಿ ಮಂಡಿಸಲು ಇಚ್ಛಿಸುತ್ತೇವೆ. ಇದು ಚಾಲ್ತಿಯಲ್ಲಿರಬಹುದು ಅಥವಾ ಸುಪ್ತವಾಗಿರಬಹುದು. ಅವುಗಳಲ್ಲಿ ಮುಖ್ಯವಾದ ಗೌಣ ಸೂತ್ರವನ್ನು ಗಮನಿಸಬೇಕೇ ವಿನಃ ವಾಕ್ಯಾರ್ಥಗಳಲ್ಲ! ಹಾಗೆ ನೋಡಿದಾಗ ಉಪನಯನಕ್ಕೆ ಎಲ್ಲರ ಅಭಿಮತವೂ ಒಂದು ರೀತಿಯಲ್ಲಿ ಒಮ್ಮತವಿರುವುದು ಕಂಡುಬರುತ್ತದೆ. ಅದರಂತೆ ಗರ್ಭಾಷ್ಟಮ, ಅಷ್ಟಮ, ಪಂಚಮ, ಸಪ್ತಮ ಈ ಕಾಲಗಳು ತುಂಬ ಸೂಕ್ತ ಎಂದೇ ಅಭಿಪ್ರಾಯವಾಗುತ್ತದೆ.
ಗರ್ಭಾಷ್ಟಮೈಷ್ಟಮೇ ವಾಬ್ದೇ ಪಂಚಮೇ ಸಪ್ತಮೇ ಪಿವ
ದ್ವಿಜತ್ವಂ ಪ್ರಾಪ್ನುಯಾದ್ವಿಪ್ರೇ ವರ್ಷೇತ್ವೇಕಾದಶೇನೃಪಃ ॥
ಎಂಬಂತೆ ಗ್ರಂಥಾಂತರಗಳಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರಬಹುದು. ಆದರೆ ಅವೆಲ್ಲವೂ ಪುರಾಕೃತವೆಂದೇ ಅಥವಾ ಶೃತ್ಯುಕ್ತ ವಚನವೆಂದೇ ಧೃಡೀಕರಿಸಲು ಸಾಧ್ಯವಿಲ್ಲ.
ಆದ್ದರಿಂದ ಹಲವಾರು ಗ್ರಂಥಗಳ ಸಾಭಿಪ್ರಾಯ ಅಥವಾ ಏಕಾಭಿಪ್ರಾಯ ಇರುವಂತಾದ್ದನ್ನೇ ಸೂಕ್ತ ಮತ್ತು ಅನುಕರಣೀಯವೆಂದು ಕಂಡುಬರುತ್ತದೆ. ಆತ್ರೇಯ ತತ್ವ ಎಂಬ ಬಹು ಪ್ರಾಚೀನವಾದ ಸೂತ್ರಗ್ರಂಥವೊಂದು ಸೂತ್ರಭೇದವಿಲ್ಲದೇನೆ ಎಲ್ಲರೂ ಸಮಾನವಾಗಿ ಸ್ವೀಕರಿಸಬೇಕಾದ ಕೆಲವು ಮಾನವೀಯ ನಿಬಂಧನೆಗಳು,
ಮನುಷ್ಯನ ಆಧ್ಯಾತ್ಮಿಕ, ದೈವೀಕ ಮತ್ತು ಭೌತಿಕ ಉನ್ನತಿಗಾಗಿ ಬರೆದಿಟ್ಟಿದ್ದು ಕಂಡುಬರುತ್ತದೆ. ಉಳಿದ ಸೂತ್ರಗಳೆಲ್ಲಾ ಅದರ ನಂತರದ್ದಾಗಿಯೂ ಒಂದು ರೀತಿಯಲ್ಲಿ ಆ ಗ್ರಂಥಕ್ಕೆ ಅವಿನಾಭಾವ ಸಂಬಂಧ ಹೊಂದಿರುವುದನ್ನು ಕಾಣಬಹುದು.
ಆದ್ದರಿಂದ ಸರ್ವಮಾನ್ಯವಾದ ಮಾನವೀಯ ಬದುಕಿನ ಮೂಲೋದ್ದೇಶವಾದ ವಿಧ್ಯಾರ್ಥಿ ಜೀವನಕ್ಕೆ ಕಾಲಿಡಲು 5ನೇ ವರ್ಷವೇ ಸೂಕ್ತವಾದರೂ 11 ವರ್ಷದವರೆಗೆ ಎಲ್ಲಾ ವರ್ಷಗಳು ಅತ್ಯುಪಯುಕ್ತವಾಗಿರುತ್ತದೆ. ಆ ಕಾಲದಲ್ಲಿ ಉಪನಯನ ಮಾಡುವ ಕರ್ತವ್ಯವನ್ನು ತಂದೆಯು ನಿರ್ವಹಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ತಪ್ಪಾಗುತ್ತದೆ ಎಂದು ಸಭೆಯ ಮತ್ತು ಧರ್ಮಶಾಸ್ತ್ರಗಳ ಅಭಿಪ್ರಾಯವಾಗಿರುತ್ತದೆ.
ಇನ್ನು ಉಪನಯನ ಪ್ರಕ್ರಿಯೆ ವಿಚಾರದಲ್ಲಿ ಹೇಳುವುದಾದರೆ ಒಬ್ಬ ಮನುಷ್ಯನಿಗೆ ವಿದ್ಯಾರ್ಥಿಯಾಗಿ ಜ್ಞಾನವೃದ್ಧಿ ಮಾಡಿಕೊಳ್ಳಬೇಕೆಂಬ ವಿಶೇಷ ಆಕಾಂಕ್ಷೆಗಳನ್ನು ಹುಟ್ಟಿಸುವುದೇ ಈ ಉಪನಯನ ಕರ್ಮದ ಮೂಲೋದ್ದೇಶ ಆಗಿರುತ್ತದೆ.
ಪ್ರಪಂಚದಲ್ಲಿ ಮಖ್ಯವಾಗಿರುವ ಅಗ್ನಿವಿಧ್ಯೆ ಮತ್ತು ಮೃತ್ಯುವಿಧ್ಯೆ ಎಂಬ ಎರಡು ಪ್ರಾಕಾರಗಳಿರುವುದು ಸರ್ವವಿದಿತ. ಮೃತ್ಯುವಿಧ್ಯೆಯಲ್ಲಿ ಸೃಷ್ಟಿವಿಚಾರ, ರಕ್ಷಣಾತತ್ವ, ಅಭಿಚಾರಿಕಾದಿ ತತ್ವಗಳು, ಶಕ್ತಿ ಮತ್ತು ಶಕ್ತಿಯ ಬಳಕೆ, ಜನ್ಮಾಂತರ ವಿಚಾರಗಳು, ಆತ್ಮ-ಪರಮಾತ್ಮ ವಿಚಾರಗಳು ಹೇಗೆ ಅರಿಯಬಹುದೋ, ಅದರಂತೆಯೇ ಅಗ್ನಿವಿಧ್ಯೆಯೂ ಮಾನವನಿಗೆ ಜ್ಞಾನವನ್ನು, ಜೀವನಧರ್ಮವನ್ನು, ಶ್ರೌತಾದಿ ಚತುರ್ದಶ ತಾತ್ವಿಕ ವಿಜ್ಞಾನವನ್ನು ಅಲ್ಲದೆ ಚತುರ್ದಶ ವಿಧ್ಯೆಯನ್ನು, ಚತುಃಷಷ್ಠಿ ಕಲೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ಒಂದು ಉತ್ತಮ ವಿಧ್ಯಾ ಪ್ರಾಕಾರವಾಗಿರುತ್ತದೆ.
ಆ ಅಗ್ನಿವಿಧ್ಯೆಯನ್ನು ವಿದ್ಯುಕ್ತವಾಗಿ ಸಂಸ್ಕಾರಪೂರ್ವಕವಾಗಿ ಕೊಡುವುದರ ಸಂಕೇತವಾಗಿ ಮೇಧಾನಾಮಕ ಅಧಿಷ್ಠಾನ ದೇವತೆಯ ಪೂಜೆಯೊಂದಿಗೆ ವಿದ್ಯಾರ್ಜನೆಯಲ್ಲಿ ಹೆಚ್ಚಿನ ಶ್ರದ್ಧೆ ಹುಟ್ಟಲಿ, ತಾನು ವಿದ್ಯಾರ್ಥಿಯಾಗಬೇಕೆಂಬ ಅತೀವ ಆಕಾಂಕ್ಷೆ ಹುಟ್ಟಲಿ, ಆ ಮಾರ್ಗದಲ್ಲಿಯೇ ತನ್ನ ಬುದ್ಧಿಗೆ ಪ್ರಚೋದನೆ ಸಿಗಲಿ. ಈ ನಿಟ್ಟಿನಲ್ಲಿಯೇ ಗಾಯತ್ರಿ ಮಂತ್ರದ ಉಪದೇಶವು ವಟುವಿಗೆ ಅಲ್ಲಿ ಸಿಗುತ್ತದೆ. ವಟುವಾಗಲು ಸ್ತ್ರೀ ಪುರುಷ, ಜಾತಿ-ಮತ-ಪಂಥ-ಸಿದ್ಧಾಂತ, ಭೇದವಿಲ್ಲ. ಉಪನಯನವು ಸರ್ವರಿಗೂ ಅವಶ್ಯಕವಾದ ಸಂಸ್ಕಾರವಾಗಿದೆ. ಗಾಯತ್ರಿಯ ಉಪದೇಶದಿಂದ ವಟುವಿಗೆ ವಿದ್ಯಾರ್ಥಿಯಾಗಬೇಕೆಂಬ ಅತೀವ ಆಕಾಂಕ್ಷೆಯೊಂದು ಹುಟ್ಟುತ್ತದೆಯೇ ವಿನಃ ಆತನು ವಿಧ್ಯಾವಂತನಾಗುತ್ತಾನೆ ಎಂದಲ್ಲ. ಸತತ ಪರಿಶ್ರಮದಿಂದ ಸಕಲ ಶಾಸ್ತ್ರಾಧ್ಯಯನ ಮಾಡಿದಾಗಲೂ ಪರಿಪೂರ್ಣನಾಗಲಾರ.
ದೇಶ ಸಂಚಾರ, ಕಲಿತ ವಿಧ್ಯೆಯ ಪ್ರಾಯೋಗಿಕ ಉಪಯೋಗ. ತತ್ಸಂಬಂಧವಾಗಿ ಜನತಾ ಜನಾರ್ಧನ ಸೇವೆ ಮಾಡಿಕೊಳ್ಳುವುದರ ಮುಖೇನ ಸತ್ಯ, ಜ್ಞಾನ, ಧರ್ಮ, ದಯಾ, ಶಾಂತಿ, ಕ್ಷಮೆಗಳಿಂದ ಷಡ್ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಅವನು ವಿದ್ಯಾವಂತನಾಗುತ್ತಾನೆ ಎಂದು ಶೃತಿ ಸ್ಮೃತಿಗಳೆಲ್ಲಾ ಸಾರಿ ಹೇಳುತ್ತದೆ. ವಿದ್ಯಾ ದಧಾತಿ ವಿನಯಂ ವಿನಯ ಸಹಿತವಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು ಯಾರು ತಾನು ಕಲಿತ ವಿಧ್ಯೆಯಿಂದ ಪರೋಪಕಾರಿಯಾಗಿ ಜೀವಿಸುತ್ತಾನೋ ಅವನೇ ನಿಜವಾದ ವಿಧ್ಯಾವಂತ ಎಂದು ಘೋಷಿಸಬಹುದು.
ಆದ್ದರಿಂದ ತಂದೆಯಾದವನ ಮುಖ್ಯ ಕರ್ತವ್ಯವೆಂದರೆ ಯಾವುದೇ ಆಡಂಬರವಿಲ್ಲದೆ ಸೂಕ್ಷ್ಮವಾಗಿಯಾದರೂ ಶಾಸ್ತ್ರೀಯ ರೀತಿಯಲ್ಲಿ ತನ್ನ ಮಕ್ಕಳಿಗೆ ಅಗ್ನಿವಿದ್ಯಾ ಪ್ರಧಾನ ಮಾಡುವ ಉದ್ದೇಶದಿಂದ ಸಕಲ ಜ್ಞಾನಾಕಾಂಕ್ಷೆಯನ್ನು ಹುಟ್ಟಿಸತಕ್ಕ ಗಾಯತ್ರಿ ಉಪದೇಶವನ್ನು ಮಾಡಿ ಸತ್ಪ್ರಜೆಗಳಾಗಿ ರೂಪಿಸಿ ದೇಶಕ್ಕೆ ಸಮರ್ಪಿಸಿ ಕೃತಕೃತ್ಯರಾಗಿ ಎಂದು ಹಾರೈಸುತ್ತೇನೆ.
ಇಲ್ಲವಾದಲ್ಲಿ ಸೂಕ್ತ ವಿದ್ಯಾಭ್ಯಾಸವಿಲ್ಲದ ಒಬ್ಬ ಮನುಷ್ಯನು ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಎಂಬಂತೆ ಸರಿಯಾದ ಮಾರ್ಗದರ್ಶನವಿಲ್ಲದೆ, ಉಪಯುಕ್ತ ವಿಧ್ಯಾಭ್ಯಾಸವಿಲ್ಲದೆ, ಉತ್ತಮ ಸಂಸ್ಕಾರವಿಲ್ಲದೆ ದುಷ್ಟ ಸಹವಾಸವನ್ನು ಹೊಂದಿ ಮನುಷ್ಯನೊಬ್ಬನು ಬೆಳೆದಲ್ಲಿ ಹಿಂದೆ ಸೂಕ್ತಿಯಲ್ಲಿ ತಿಳಿಸಿದಂತೆ ಸಾಕ್ಷರಾ ಎಂಬ ಶಬ್ದವು ಹಿಂದುಮುಂದಾಗಿ ಓದಲ್ಪಟ್ಟು ರಾಕ್ಷಸಾ ಆಗಲು ಸಾಧ್ಯ! ಹಾಗಾಗದಂತೆ ನಿಮ್ಮದ್ದಾದಂತಹಾ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ಲೋಕಕ್ಕೆ ಉತ್ತಮ ಪ್ರಜೆಯನ್ನು ಒದಗಿಸುವ ಕಂಕಣಬದ್ಧರಾಗಿ ಎಂದು ಇನ್ನೊಮ್ಮೆ ಹಾರೈಸುತ್ತಾ ಈ ಪುರಾಣ ಶಾಸ್ತ್ರ ಗ್ರಂಥಗಳು ವೇದ ಸ್ಮೃತಿಗಳು ಕುಲಾಚಾರಗಳು ನಿಮಗೆ ಆಯುರಾರೋಗ್ಯ ಮಂಗಳವನ್ನು ಉಂಟುಮಾಡಲಿ ಎಂದು ಆ ವೇದ ಪುರುಷನಲ್ಲಿ ಪ್ರಾರ್ಥಿಸುತ್ತೇನೆ.
ನಾಳೆ: ಉಪನಯನ ಎಂದರೇನು? ಲೇಖನ ಸರಣಿ-3: ಚಿತ್ರಾವತಿ ಹೇಗೆ? ಎಷ್ಟು ಬಲಿ ಹಾಕಬೇಕು?
Get in Touch With Us info@kalpa.news Whatsapp: 9481252093
Discussion about this post