ಶ್ರೀನಗರ: ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಡಿಯ ದೇಶದಲ್ಲಿಯೇ ಹೈಟೆನ್ಷಕ್ ಹುಟ್ಟು ಹಾಕಿದ್ದು, ಜಮ್ಮು ಕಾಶ್ಮೀರದಲ್ಲಿ ಏನಾಗಲಿದೆ ಎಂಬ ಪ್ರಶ್ನೆ ದೇಶದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಈ ಬೆಳವಣಿಗೆಗಳ ನಡುವೆಯೇ ಮಾತನಾಡಿರುವ ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರು, ಸಂಸತ್ ಕಲಾಪ ಇನ್ನೂ ಮುಕ್ತಾಯವಾಗಿಲ್ಲ. ಊಹಾಪೋಹಗಳಿಗೆ ಕಿವಿಗೊಡುವುದರ ಬದಲು ಸೋಮವಾರ, ಮಂಗಳವಾರದವರೆಗೂ ಕಾದು ನೋಡಿ, ಜಮ್ಮು ಕಾಶ್ಮೀರದಲ್ಲಿ ಏನೇ ನಡೆದರೂ ಸಹ ರಹಸ್ಯವಾಗಿ ನಡೆಯುವುದಿಲ್ಲ, ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಬಗ್ಗೆ ಚರ್ಚೆ ನಡೆಯಲಿದೆ, ಆದ್ದರಿಂದ ವದಂತಿಗಳಿಗೆ ಅವಕಾಶವಿಲ್ಲ ಎಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು, ಕೇಂದ್ರ ಸರ್ಕಾರ ಏಕೆ ಕಣಿವೆ ರಾಜ್ಯಕ್ಕೆ ಭಾರೀ ಪ್ರಮಾಣದ ಸೇನೆಯನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಸ್ವತಃ ಸ್ಥಳೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಇಡೀ ಬೆಳವಣಿಗೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ.
ಮೂಲಗಳ ಪ್ರಕಾರ ಕಾಶ್ಮೀರ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಅಂತಿಮ ಸಿದ್ದತೆ ನಡೆಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕಾಗಿಯೇ, ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಸೇನೆಯ ನಿಯೋಜನೆ, ಅಮರನಾಥ ಯಾತ್ರೆ ಸ್ಥಗಿತಗೊಳಿಸಿ ಯಾತ್ರಿಗಳನ್ನು ರಾಜ್ಯದಿಂದ ಸ್ವರಾಜ್ಯಗಳಿಗೆ ಕಳುಹಿಸುತ್ತಿರುವುದು, 43 ದಿನಗಳ ಕಾಲ ನಡೆಯುವ ಮಚಿಲ್ ಮಾತಾ ಯಾತ್ರಾವನ್ನೂ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು, ಶ್ರೀನಗರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಸಂಸ್ಥೆಯು ಅನಿರ್ದಿಷ್ಟಾವಧಿಯವರೆಗೆ ತರಗತಿಗಳನ್ನು ರದ್ದು ಮಾಡಿರುವುದು, ಅಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಕ್ರಮಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇದರಷ್ಟೇ ಪ್ರಮುಖವಾಗಿ, ಕಣಿವೆ ರಾಜ್ಯದ ಬೆಳವಣಿಗೆಯ ಹಿನ್ನೆಲೆಯಲ್ಲಿ ಬ್ರಿಟನ್ ಹಾಗೂ ಜರ್ಮನಿ ಸರ್ಕಾರಗಳು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿ, ತಮ್ಮ ದೇಶದ ಪ್ರಜೆಗಳು ಯಾವುದೇ ಕಾರಣಕ್ಕೂ ಕಾಶ್ಮೀರಕ್ಕೆ ತೆರಳಕೂಡದು ಹಾಗೂ ಈಗಾಗಲೇ ಆ ರಾಜ್ಯದಲ್ಲಿರುವ ತಮ್ಮ ದೇಶದ ಪ್ರಜೆಗಳು ತತಕ್ಷಣವೇ ಸುರಕ್ಷತಾ ದೃಷ್ಠಿಯಿಂದ ರಾಜ್ಯವನ್ನು ತೊರೆಯುವಂತೆ ಸೂಚಿಸಿದೆ.
ಈ ಎಲ್ಲಾ ಬೆಳವಣಿಗೆಗಳು ಭಾರೀ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಸಂಸತ್ ಅಧಿವೇಶನ ಮುಕ್ತಾಯವಾದ ನಂತರ ಕಣಿವೆ ರಾಜ್ಯದಲ್ಲಿ ಏನಾಗಲಿದೆ? ದಶಕಗಳ ಕಾಲದಿಂದಲೂ ಕಾಡುತ್ತಿರುವ ಕಾಶ್ಮೀರದ ಸಮಸ್ಯೆಗೆ ಮೋದಿ ಸರ್ಕಾರ ಶಾಶ್ವತ ಹಾಗೂ ತಾತ್ವಿಕ ಅಂತ್ಯ ಹಾಡುತ್ತದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Discussion about this post