ಸರಕಾರಕ್ಕೆ ತನಗಂಟಿದ ಮಸಿಯನ್ನು ಮರೆಮಾಚುವುದಕ್ಕಾಗಿ ಕುರ್ಚಿ ಬಿಟ್ಟು ಬೇರೇನೂ ಕಾಣಿಸ್ತಾ ಇಲ್ಲ. ಪ್ರತಿಪಕ್ಷ ಸತ್ತೇ ಹೋಗಿದೆ. ಹಗರಣಗಳ ಸರಮಾಲೆ ನಡೆಯುತ್ತಿದ್ದರೂ, ಪ್ರಾಕೃತಿಕ ಆಪತ್ತಿನ ಸೂಚನೆಗಳು ಬುಡಕ್ಕೆ ಬೆಂಕಿ ಬಿದ್ದಂತೆ ಹೊತ್ತಿ ಉರಿಯುತ್ತದ್ದರೂ ಮಾಧ್ಯಮಗಳು ತಮ್ಮ ಅಣ್ತಮ್ಮಂದಿರ ಪ್ರಹಸನದಲ್ಲೆ ಕಾಲ ಕಳೆಯುತ್ತಿದೆ. ಆಯ್ಕೆಯಾದ ಪ್ರತಿನಿಧಿಗಳು ರೆಸಾರ್ಟ್ ನಲ್ಲಿ ದುಂದುವೆಚ್ಚ ಮಾಡುತ್ತಾ ಪ್ರಜೆಗಳ ಮತಗಳನ್ನು ಅಪಹಾಸ್ಯಗೈಯ್ಯುತ್ತಿದ್ದಾರೆ.
ಇಲಾಖೆಗಳು ಸಂಬಳ-ಗಿಂಬಳಗಳ ನಡುವೆ ಖೊಟ್ಟಿ ದಾಖಲೆಗಳ ಸೃಷ್ಟಿಸಿ ಸರಕಾರಕ್ಕೆ ಲೆಕ್ಕ ಕೊಡುವುದರಲ್ಲಿ ಸಮಯ ದೂಡುತ್ತಿವೆ. ಉಪಯೋಗವಿಲ್ಲದ ವೈಟ್ ಟ್ಯಾಪಿಂಗ್, ಅನಗತ್ಯವಾದ ಸ್ಕೈವಾಕ್ ಗಳು, ಭಾರೀ ವೆಚ್ಚದ ಸ್ಟೀಲ್ ಬ್ರಿಡ್ಜ್ ನಿರ್ಮಾಣ, ಪ್ರಕೃತಿಗೆ ವಿರುದ್ಧವಾಗಿ ಶರಾವತಿಯನ್ನು ಬೆಂಗಳೂರಿಗೆ ತರುವ ನಿರ್ಧಾರ, ಇದೇ ಊರುಗಳ ಹೆಸರಲ್ಲಿದ್ದ ಇದ್ದ ಕೆರೆ-ನದಿಗಳ (ಹೊಸಕೆರೆಹಳ್ಳಿ ಅರೆಕೆರೆ ಮತ್ತಿಕೆರೆ ವೃಷಭಾವತಿ) ಮುಚ್ಚಿದ ಪ್ರಾಭಾವಿಗಳ ಜಾಗ ನುಂಗಾಟ.
ಕ್ಯಾಂಟೀನ್ ವ್ಯವಸ್ಥೆ ಈ ಎಲ್ಲದರ ಹಿಂದೆ ಕುರುಡು ಕಾಂಚಾಣ ಸರಕಾರದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನೆನೆಗುದಿಗೆ ತಳ್ಳಿದೆ. ಸಮಾಜವನ್ನು ತಿದ್ದುವ, ಸಾಕ್ಷರ ರಾಕ್ಷಸರ ಅತೃಪ್ತ ಆತ್ಮಗಳಿಗೆ ತೃಪ್ತಿಯಾಗುವಂತದ್ದು ಏನು ಸಿಕ್ಕಿದೆಯೊ ಗೊತ್ತಿಲ್ಲ. ಪ್ರಶ್ನೆ ಕೇಳುವವರು ತುಟಿಪಿಟಿಕ್ಕೆನ್ನುತ್ತಿಲ್ಲ.
ಹೈರಾಣಾದ ಜನರ ಬವಣೆಯನ್ನು ಕೇಳುವವರು ನೋಡುವವರು ಯಾರೂ ಇಲ್ಲ…. ಇದು ದೊಂಬರಾಟ ಎಂದರೆ ಕಲೆಗೆ ಅವಮಾನ. ಕೊಚ್ಚೆ ಎಂದರೆ ಗೊಬ್ಬರಕ್ಕೆ ಅವಮಾನ. ಥೂ ಅಂತ ಉಗಿಯೋಣ ಅಂದರೆ ಎಂಜಲು ವೇಸ್ಟ್. ಯಾವ ಪ್ರಾಣಿಗು ಹೋಲಿಸಿದರೂ ಆ ಪ್ರಾಣಿ ನಾಳೆ ಮಾನನಷ್ಟ ಮೊಕದ್ದಮೆ ಹಾಕಿಯಾವು. ಬೈಗುಳದ ಯಾವ ಪದಗಳು ಇವುಗಳಿಗೆ ತಾಕದ ದಪ್ಪಚರ್ಮದವುಗಳು. ನಮ್ಮ ನಾಲಿಗೆ ಮನಸ್ಸು ಎರಡನ್ನೂ ಮಲಿನಗೊಳಿಸುವುದರ ಬದಲು ನಾವೆ ಏನಾದ್ರು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಪ್ರಯೋಜನವಿದೆ.
ಹಿಂದೆ ಮೊನಾರ್ಕಿಯಲ್ಲಿ ಪ್ರಜೆಗಳಿಗು ಅಧಿಕಾರವಿತ್ತು. ಅಸಮರ್ಥ ರಾಜರನ್ನು ಕೆಳಗಿಳಿಸಿದ ಪ್ರಕರಣಗಳು ಇತಿಹಾಸದಲ್ಲಿ ದಾಖಲೆಯಾಗಿವೆ. ಈಗ ಹೆಸರಿಗುಳಿದಿರುವ ಡೆಮೊಕ್ರಸಿಯಲ್ಲು ಕುಟುಂಬವೆ ಪ್ರಾಬಲ್ಯ ಸಾಧಿಸುತ್ತಿದೆ.
ಕೇರಳ ಕೊಡಗು ಚೆನ್ನೈ ಮೊದಲಾದ ಪ್ರಾಕೃತಿಕ ವಿಕೋಪಗಳ ಉದಾಹರಣೆಗಳು ಕಣ್ಣಮುಂದಿದ್ದರೂ ಬೆಂಗಳೂರಿಗರಾದ ನಮಗೆ ಬಿಸಿ ಹತ್ತಿಲ್ಲ. ದುಡ್ಡು ಕೊಟ್ರೆ ಎಲ್ಲ ಸಿಗತ್ತೆ ಎನ್ನುವ ವಿಶ್ವಾಸ ಒಂದೆಡೆ. ಇನ್ನೊಂದೆಡೆ ಟ್ಯಾಕ್ಸ್ ಕಟ್ಟಿದ ನಮಗೆ ಏನಾದ್ರು ಮಾಡಿ ನೀರೊದಗಿಸುವ ಜವಾಬ್ದಾರಿ ಸರಕಾರದ್ದು ಎಂಬ ಹುಂಬತನ ನಮ್ಮದು.
ಪ್ಯಾರಿಸ್ ನಗರ ನಿರ್ಮಾಣಕ್ಕೆ ಸ್ಫೂರ್ತಿಯಾಗಿದ್ದ ಸುಮಾರು 1700 ಕೆರೆಗಳಿಂದ ಸಮೃದ್ಧವಾಗಿದ್ದ ಬೆಂಗಳೂರು ಈಗ ಬೆರಳೆಣಿಯಷ್ಟೆ ಕೆರೆಗಳನ್ನು ಉಳಿಸಿಕೊಂಡಿದೆ. ಕೆಲವು ಕೆರೆಗಳು ಲೆಕ್ಕಪತ್ರಗಳಲ್ಲಿ ಮಾತ್ರ ಉಳಿದಿವೆ. ಕೆಲವು ಕೊಳಚೆ ಗುಂಡಿಗಳಾಗಿವೆ. ಇದು ಎಲ್ಲ ನಗರಗಳ ಕಥೆ. ಇನ್ನು ಕೆಲವೇ ತಿಂಗಳುಗಳಲ್ಲಿ ಮಳೆ ಕಡಿಮೆ ಬಿದ್ದ ಪರಿಣಾಮ ನೀರಿನ ದೊಡ್ಡ ಅಡಚಣೆ ಎದುರಿಸಬೇಕಾಗುತ್ತದೆ. ತಮ್ಮ ಸೇಫ್ಟಿಯನ್ನು ಮಾತ್ರ ನೋಡಿಕೊಳ್ಳುವ ನಮ್ಮ ಮಂತ್ರಿ ಮಾಗಧರನ್ನು ನಂಬಿಕೊಂಡರೆ ಏನೂ ನಡೆಸಲಾದು.
ಚೆನ್ನೈನಲ್ಲಿ ಕಂಪನಿಗಳು, ಹೋಟೆಲುಗಳು , ಸಭಾಭವನಗಳು, ಮಠಗಳು ನೀರಿಲ್ಲದೆ ಪರದಾಡುತ್ತಿರುವುದನ್ನು ಕಾಣುತ್ತಿದ್ದಾಗಲು ಎಚ್ಚರಗೊಳ್ಳದಿದ್ದರೆ ಎಂದೂ ಕಣ್ಣು ತೆರೆಯಲಾಗದೆ ಹೋದೀತು. ಈ ಲೇಖನ ಎಲ್ಲರನ್ನು ಭಯಕ್ಕೆ ಈಡಾಗಿಸಬೇಕೆಂಬ ಉದ್ದೇಶದಿಂದ ಬರೆಯುತ್ತಿಲ್ಲ. ಕಾಲ ಮಿಂಚಿಲ್ಲ. ಯುದ್ಧದಲ್ಲೆ ಶಸ್ತ್ರಾಭ್ಯಾಸದ ಸ್ಥಿತಿ ಯಾರಿಗೂ ಬಾರದಿರಲಿ ಎಂಬ ಕಾಳಜಿ.
ಪ್ರಜೆಗಳಾಗಿ ನಮ್ಮ ಶಕ್ತಿ ತೋರ್ಪಡಿಸುವ ಕಾಲ ಬಂದಿದೆ. ನಮ್ಮ ಪರಿಸರ ಸುರಕ್ಷಿತವಾಗಿಡಲು ಏನೇನು ಮಾಡಬಹುದು? ನಮಗೆ ತಿಳಿಯದೆ ನಡೆಯುತ್ತಿರುವ ತಪ್ಪುಗಳನ್ನು ಎಷ್ಟು ತಿದ್ದಿಕೊಳ್ಳಬಹುದು. ಚಿಕ್ಕ ಇಟ್ಟಿಗೆಗಳೆ ದೊಡ್ಡ ಭವನವನ್ನು ಎದ್ದು ನಿಲ್ಲಿಸುತ್ತವೆ.
ನಾವು ಇದ್ದಲ್ಲೆ ಏನು ಮಾಡಬಹುದು.. ಯೋಚಿಸೋಣ.. ನೀವೂ ಯೋಚಿಸಿ.. ನಿಮ್ಮ ಸಲಹೆ ಸೂಚನೆಗಳನ್ನು ಇಲ್ಲಿ ಹಂಚಿಕೊಳ್ಳಿ.. ನಾವೂ ಪಾಲಿಸಿ ಸಾವಿರಾರು ಜನಕ್ಕೆ ತಲುಪಿಸಿ ಕರ್ತವ್ಯಪ್ರಜ್ಞೆ ಮೂಡಿಸೋಣ.
ನೀರು ಪೋಲಾಗದಿರಲು ಹೀಗೆ ಮಾಡೋಣ..
- ನೀರು ಪ್ರಕೃತಿ ಕೊಟ್ಟ ಅಪೂರ್ವ ಸಂಪತ್ತು. ಗೌರವಿಸೋಣ.
- ಲೋ ಫ್ಲಶ್ ಟಾಯ್ಲೆಟ್ ಬಳಸುವುದು. ಅರ್ಧ ಮಾತ್ರ ಫ್ಲಶ್ ಮಾಡುವುದು. ಫ್ಲಶ್ ಟ್ಯಾಂಕ್ ನಲ್ಲಿ ಇಟ್ಟಿಗೆ ಅಥವಾ ಬಾಟಲಿ ಇಟ್ಟರೆ ನೀರು ಕಡಿಮೆ ಬಳಕೆಯಾಗುತ್ತದೆ.
- ಶವರ್ ಬದಲು ಬಕೆಟ್ ನಲ್ಲಿ ನೀರು ತುಂಬಿಸಿ ಮಿತವಾಗಿ ಉಪಯೋಗಿಸುವುದು.
- ನೀರು ಕಡಿಮೆ ಹರಿಯುವಂತೆ ವಾಲ್ವ್ ಅನ್ನು ಅಡ್ಜಸ್ಟ್ ಮಾಡಿದರೆ ನೀರು ಹದವಾಗಿ ಹರಿಯುತ್ತದೆ.
- ಕಾರು ಮೊದಲಾದ ವಾಹನಗಳನ್ನು ತೊಳೆಯುವುದರ ಬದಲು ಒರೆಸುವುದು ಉಚಿತ. ಮಳೆಗೆ ಒಡ್ಡುವುದು ಸಹಕಾರಿ.
- ಮದುವೆ ಅಥವಾ ಯಾವುದೇ ಸಮಾರಂಭಗಳಲ್ಲಿ ನೀರಿನ ಬಾಟಲಿ ಉಪಯೋಗ ಬೇಡ. ನೀರು ವ್ಯರ್ಥವಾಗುತ್ತದೆ. ಪ್ಲಾಸ್ಟಿಕ್ ಕಸ ದುಪ್ಪಟ್ಟಾಗುತ್ತದೆ.
- ಊಟಕ್ಕೆ ಕುಳಿತಾಗ ಅಗತ್ಯವಿದ್ದಷ್ಟೇ ನೀರು ಹಾಕಿಸಿಕೊಳ್ಳುವುದು.
- ಸ್ನಾನಕ್ಕೆ ಸೋಪಿನ ಬದಲು ಕಡಲೆಹಿಟ್ಟು ಮೃತ್ತಿಕೆ ಬಳಕೆ ಉತ್ತಮ.
- ಪೇಸ್ಟ್ ಬದಲು ಹಲ್ಲಿನ ಪುಡಿ ಮಾವಿನೆಲೆ ಕಹಿಬೇವಿನ ಕಡ್ಡಿ ಬಳಕೆ.
- ಯಾವಾಗಲು ಫುಲ್ ಲೋಡ್ ನೊಂದಿಗೆ ವಾಷಿಂಗ್ ಮಿಷನ್ ಉಪಯೋಗಿಸಬೇಕು. ಸಣ್ಣ ಪುಟ್ಟದ್ದನ್ನು ಕೈನಲ್ಲೆ ಒಗೆದು ಹಾಕುವುದು ಒಳಿತು. ಇದರಿಂದ ನೀರು ಕರೆಂಟ್ ಎರಡೂ ಉಳಿಯತ್ತೆ.
- ಬಟ್ಟೆ ಒಗೆದು ವಾಷಿಂಗ್ ಮಿಷನ್ ನಿಂದ ಹೊರಬಂದ ನೀರಿನಲ್ಲೆ ನೆಲ ಒರೆಸುವುದು. ಗಾಡಿ ತೊಳೆಯುವುದು.
- ರಂಗೋಲಿ ಹಾಕುವ ಮುನ್ನ ಪೈಪ್ ನಿಂದ ನೀರು ಹಾಕಿ ತೊಳೆಯುವುದು ಬೇಕಾಗಿಲ್ಲ. ಗುಡಿಸಿದರೆ ಸಾಕು. ಬೇಕೇ ಬೆಕೆನಿಸಿದರೆ ಒಮ್ಮೆ ಬಳಸಿದ ನೀರನ್ನೆ ಬಳಸಿದರೆ ಸಾಕು.
- ಗಿಡಗಳಿಗೆ ತುಂತುರು ಪದ್ಧತಿಯಲ್ಲಿ ನೀರನ್ನು ಬಿಡಿ.
- ಪಾತ್ರೆ ತೊಳೆಯುವಾಗ ಡಿಟರ್ಜೆಂಟ್ ಬಳಸುವ ಅನಿವಾರ್ಯತೆ ಇದ್ದಲ್ಲಿ ಮಾತ್ರ ಬಳಸಿ.
- ಮನೆಗೆ ಮಳೆನೀರು ಕೊಯ್ಲು (rain water harvesting ) ಅವಶ್ಯ ಮಾಡಿಕೊಳ್ಳಬೇಕು.
- ಊರಿನ ಕೆರೆ ಹೂಳು ತುಂಬಿದ್ದರೆ ಸಾಧ್ಯವಾದರೆ ಎಲ್ಲರೂ ಸೇರಿ ಕೆಸರು ತೆಗೆಸುವುದು. ಕೆರೆ ತುಂಬಿದಷ್ಟು ಊರಿನ ಬಾವಿಗಳು ಬತ್ತುವುದಿಲ್ಲ.
✍ ಕೃಷ್ಣರಾಜ ಕುತ್ಪಾಡಿ
Discussion about this post