ಬೆಂಗಳೂರು: ನನಗೆ ಮುಜರಾಯಿ ಇಲಾಖೆ ಕೊಟ್ಟುಬಿಡಿ, ದೇವಸ್ತಾನ ಸುತ್ಕೊಂಡು ಇರ್ತೀನಿ: ಹೀಗೆಂದವರು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್…
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಾರಣಕರ್ತ ಎಂದು ಕರೆಸಿಕೊಂಡಿರುವ ಡಿ.ಕೆ. ಶಿವಕುಮಾರ್, ಖಾತೆ ಹಂಚಿಕೆ ವಿಚಾರದಲ್ಲಿ ತಮ್ಮದೇ ಪಕ್ಷದ ವಿರುದ್ಧ ಈ ರೀತಿ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಸಂಪುಟ ವಿಸ್ತರಣೆ ಮಾಡಿದಾಗ ನನಗೆ ಮುಜುರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ತಿಕೊಂಡು ಕಾಲ ಕಳೆಯುತ್ತೇನೆ ಎಂದು ವರಿಷ್ಟರೆದುರು ಹೇಳಿದ್ದಾರೆ ಎನ್ನಲಾಗಿದೆ.
ಇಂಧನ ಖಾತೆಗೆ ಪಟ್ಟು ಹಿಡಿದಿರುವ ಡಿಕೆಶಿ ಅವರ ಮಾತಿಗೆ ವರಿಷ್ಠರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಶಿವಕುಮಾರ್ ಸಿಟ್ಟಿಗೆದ್ದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಸರ್ಕಾರ ರಚನೆಗೆ ಜೆಡಿಎಸ್ ಗೆ ನಾವು ಬೇಷರತ್ ಬೆಂಬಲ ನೀಡಿದ್ದು, ನಿಮಗೆ ಬೇಕಾದ ಖಾತೆಗಳನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ, ಈ ಕುರಿತಂತೆ ಯಾರೂ ತಕರಾರು ಮಾಡಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎನ್ನಲಾಗಿದ್ದು, ಇದರಿಂದಾಗಿ ಡಿಕೆಶಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅತ್ತ ಕಡೆಯಿಂದ ಕೇಂದ್ರ ಸರ್ಕಾರವೂ ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದೆ. ಇತ್ತ ಮೈತ್ರಿಕೂಟ ಸರ್ಕಾರದಲ್ಲಿ ಅಶಕ್ತನನ್ನಾಗಿ ಮಾಡಿ ಕೂರಿಸಲು ಪಕ್ಷವೇ ಸಿದ್ಧವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ, ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ಕೊಡಿಸಿಬಿಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
Discussion about this post