ಹೌದು… ಏನೆಲ್ಲಾ ನಾಟಕವಾಡಿ, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ, ಮುಖಮುಚ್ಚಿಕೊಂಡು ಅಯ್ಯಪ್ಪ ದೇವಾಲಯದೊಳಗೆ ತೆರಳಿದ ಇಬ್ಬರು ಹೇಡಿ ನಯವಂಚಕ ಸ್ತ್ರೀಯರು, ಕಳ್ಳತನದಿಂದ ಹೇಡಿಗಳಂತೆ ಮುಖಮುಚ್ಚಿಕೊಂಡು ತೆರಳಲು ಅವಕಾಶ ಮಾಡಿಕೊಟ್ಟ ಕೇರಳ ಕಮ್ಯೂನಿಸ್ಟ್ ಸರ್ಕಾರ ಹಾಗೂ ಗೆದ್ದೆನೆಂದು ಬೀಗುತ್ತಿರುವ ಇದರ ಸೂತ್ರಧಾರಿ ಸಿಎಂ ಪಿಣರಾಯಿ ವಿಜಯನ್ ಅಂತಿಮವಾಗಿ ಸಾಧಿಸಿದ್ದೇನು ಹಾಗೂ ಗೆದ್ದಿದ್ದು ಯಾರ ವಿರುದ್ಧ?
ನಿಜಕ್ಕೂ ಈ ಪ್ರಶ್ನೆಗೆ ಉತ್ತರವಿದೆಯೇ? ಖಂಡಿತವಾಗಿಯೂ ಇಲ್ಲ. ಬಲಪಂಥೀಯ ಹಾಗೂ ಎಡಪಂಥೀಯ ಯಾವುದೇ ಆಡಳಿತವಿರಲಿ ಅಲ್ಲಿನ ಆಡಳಿತದಲ್ಲಿ ಜನರ ಭಾವನಾತ್ಮಕ ವಿಚಾರಗಳಿಗೆ ಹಾಗೂ ಮಾನವೀಯತೆಗೆ ಬೆಲೆ ನೀಡುವುದೇ ಮುಖ್ಯವಾಗುತ್ತದೆ ಎಂಬ ಕನಿಷ್ಠ ಜ್ಞಾನವಿಲ್ಲದೇ ನಡೆದುಕೊಂಡ ಕೇರಳ ಸರ್ಕಾರದ ದಾರ್ಷ್ಟ್ಯ ನಿಜಕ್ಕೂ ಈ ದೇಶಕ್ಕೊದಗಿದ ದುರಂತ.
ಯಾವುದೇ ಪಕ್ಷವಿದ್ದರೂ ಆ ರಾಜ್ಯದಲ್ಲಿ ಎಲ್ಲ ಧರ್ಮ ಹಾಗೂ ಜಾತಿಯ ಜನರ ಭಾವನೆಗಳಿಗೆ ಗೌರವ ನೀಡಿ, ಆಡಳಿತ ನಡೆಸಬೇಕು ಎಂದು ಸಂವಿಧಾನ ಹೇಳಿದೆ. ಆದರೆ, 800 ವರ್ಷಗಳ ಧಾರ್ಮಿಕ ನಂಬಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕೇರಳ ಸರ್ಕಾರ ಪಾಲಿಸಿತು ಎಂದೇ ಇಟ್ಟುಕೊಳ್ಳೋಣ. ಆದರೆ, ಪ್ರಕರಣ ಸುಪ್ರೀಂ ಅಂಗಳದಲ್ಲಿದ್ದಾಗ ಪಿಣರಾಯಿ ಸರ್ಕಾರ ನಡೆದುಕೊಂಡ ರೀತಿಗಳು ಹೇಗಿತ್ತು. ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತಿಳಿದಿದ್ದರೂ ರಾಜ್ಯದ ಜನರ ಭಾವನಗೆಳ ಪರವಾಗಿ ಅಲ್ಲಿನ ಸರ್ಕಾರ ಎಂದಿಗೂ ನಿಲ್ಲಲೇ ಇಲ್ಲ.
ಬದಲಾಗಿ, ಅಲ್ಲಿನ ಸಂಪ್ರದಾಯವನ್ನು ಮುರಿಯುವಂತೆ ತೀರ್ಪು ಬರುವುದಕ್ಕೆ ಏನು ಬೇಕೋ ಅದನ್ನೆಲ್ಲಾ ಮಾಡಿತು ಹಾಗೂ ಇದರ ಹಿಂದೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವ ಕಮ್ಯೂನಿಸ್ಟರ ಮತ್ತು ಇತರೆ ಧರ್ಮಗಳ ಕುತಂತ್ರವೂ ಇಲ್ಲವೆಂದು ಹೇಳಲು ಸಾಧ್ಯವೇ ಇಲ್ಲ.
ಇಲ್ಲಿ, ಇನ್ನೊಂದು ವಿಚಾರವೂ ಇದೆ. ಶಬರಿಮಲೆ ದೇವಾಲಯಕ್ಕೆ ಯಾತಕ್ಕಾಗಿ ಸ್ತ್ರೀಯರು ಪ್ರವೇಶಿಸಬಾರದು ಎಂಬುದನ್ನು ದೇವಾಲಯ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿತ್ತು ಎಂಬುದನ್ನೂ ಸಹ ಹೇಳಲೇಬೇಕು. ಒಂದು ಪ್ರಕರಣದಲ್ಲಿ ಎದುರಾಳಿ ಗೆದ್ದರೆ ಆತನ ಬಲದಿಂದ ಮಾತ್ರ ಗೆಲುವು ಆಗಿರುವುದಿಲ್ಲ. ಬದಲಾಗಿ, ಸೋತವರ ವೈಫಲ್ಯಗಳು ಹಾಗೂ ಬಲಹೀನತೆಗಳೂ ಸಹ ಕಾರಣವಾಗಿರುತ್ತವೆ.
ಇನ್ನು, ಸುಪ್ರೀಂ ತೀರ್ಪು ಪಾಲನೆ ಎಂಬ ನೆಪವನ್ನಿಟ್ಟುಕೊಂಡ ಕೇರಳ ಸರ್ಕಾರ ಆನಂತರದ ದಿನಗಳಲ್ಲಿ ನಡೆದುಕೊಂಡು ರೀತಿ ಎಂತಹುದ್ದು ಎಂಬುದನ್ನು ಒಮ್ಮೆ ನೆನಪಿಕೊಂಡರೆ ಇದರ ಹಿಂದೆ ಇನ್ನೆಂತಹ ವ್ಯವಸ್ಥಿತ ಜಾಲವಿದೆ ಎಂಬುದು ತಿಳಿಯುತ್ತದೆ. ಕೇರಳ ಸರ್ಕಾರಕ್ಕೆ ಜನಹಿತವೇ ಮುಖ್ಯವಾಗಿದ್ದರೆ, ಅಂದೇ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿ, ಜನರ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಹಾಗೂ ಕಾನೂನು, ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಡಬಹುದಿತ್ತು. ಆದರೆ, ಪಿಣರಾಯಿ ಸರ್ಕಾರ ಮಾಡಿದ್ದೇನು?
ಹಲವು ಸ್ತ್ರೀಯರು ದೇವಾಲಯ ಪ್ರವೇಶಿಸಬೇಕು ಎಂದು ಪ್ರಯತ್ನಿಸಿದರೂ ಭಕ್ತರ ಪ್ರತಿಭಟನೆಯಿಂದ ಕಾಲ್ಕಿತ್ತರು. ಆದರೆ, ಈಗ ಇದೇ ಕೇರಳ ಸರ್ಕಾರವೇ ಕುತಂತ್ರ ಮಾಡಿ, ಸ್ತ್ರೀಯರನ್ನು ಕಳ್ಳತನದಲ್ಲಿ ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದು ದುರಂತವೇ ಸರಿ.
ಈ ಸ್ತ್ರೀಯರೆಲ್ಲಾ ನಿಜಕ್ಕೂ ಅಯ್ಯಪ್ಪನ ಭಕ್ತರೇ ಆಗಿದ್ದರೆ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಅಯ್ಯಪ್ಪ ಸ್ವಾಮಿಯ ನಿಜವಾದ ಭಕ್ತರೇ ಆಗಿದ್ದರೆ ಯಾವುದೇ ಸ್ತ್ರೀ ಅಲ್ಲಿನ ಸಂಪ್ರದಾಯ ಹಾಗೂ ನಂಬಿಕೆಗೆ ಬೆಲೆ ನೀಡಿ, ಅದರಲ್ಲೂ ಸಂತೃಪ್ತಿ ಹೊಂದುತ್ತಾರೆಯೇ ವಿನಾ, ಈ ರೀತಿ ಮೋಸದ ತಂತ್ರದಲ್ಲಿ ನಂಬಿಕೆಯನ್ನು ಮುರಿಯುವ ಕೃತ್ಯಕ್ಕೆ ಕೈ ಹಾಕುವುದಿಲ್ಲ.
ಇಷ್ಟಕ್ಕೂ, ನಿನ್ನೆ ದೇವಾಲಯ ಪ್ರವೇಶಿಸಿರುವ ಸ್ತ್ರೀಯರು ಅಯ್ಯಪ್ಪನ ಭಕ್ತರೇ? ದೇಗುಲ ಪ್ರವೇಶಿಸಿರುವ ಕನಕದುರ್ಗ ಮಲಪ್ಪುರಂ ಜಿಲ್ಲೆಯ ಅಂಗಾಡಿಪುರಂ ಹಾಗೂ ಬಿಂದು ಕೊುಯಿಕ್ಕೋಡ್ ಕೊಯಿಲಾಂಡಿ ನಿವಾಸಿ. ಇಬ್ಬರೂ ಸಿಪಿಐಎಂ ಬೆಂಬಲಿಗರಾಗಿದ್ದು, ನಕ್ಸಲರ ತಂಡದ ನೆರವಿನೊಂದಿಗೆ ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿರುವುದು ಇದರ ಹಿಂದೆ ಸರ್ಕಾರದ ಕೈವಾಡವಿದೆ ಎಂಬುದು ಸಾರಾಸಗಟಾಗಿ ಸಾಬೀತಾಗಿದೆ.
ಈಗ ಈ ಇಬ್ಬರೂ ದೇವಾಲಯ ಪ್ರವೇಶಿಸಿ ಹಾಗೂ ಇವರ ಪ್ರವೇಶದ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೀಗುತ್ತಿರುವ ಪಿಣರಾಯಿ ಸರ್ಕಾರ ಸಾಧಿಸಿದ್ದೇನು? ಕೇರಳದಾದ್ಯಂತ ಗಲಭೆ, ಬಂದ್ ಹಾಗೂ ರಕ್ತಪಾತಗಳು!
ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಣಕಿ, ಅದರ ವಿರುದ್ದ ಗೆಲುವು ಸಾಧಿಸಿದ್ದೇವೆ ಎನ್ನುತ್ತಿರುವ ಕಮ್ಯೂನಿಸ್ಟ್ ಸರ್ಕಾರ ನಿಜಕ್ಕೂ ಈಗ ಸೋತಿದೆ. ಇದಕ್ಕೆ ಕೇರಳದ ಇಂದಿನ ಗಲಭೆಗಳೇ ಸಾಕ್ಷಿ.
ಮಹಿಳೆಯರು ದೇವಾಲಯ ಪ್ರವೇಶಿಸಿದ್ದರಿಂದ ಅಯ್ಯಪ್ಪ ಸ್ವಾಮಿಗೆ ಯಾವುದೇ ಮೈಲಿಗೆ ಹಾಗೂ ಧಕ್ಕೆಗಳಿಲ್ಲ. ಆದರೂ, ಸಂಪ್ರದಾಯದ ಹಿನ್ನೆಲೆಯಲ್ಲಿ ಅರ್ಚಕರು ಶುದ್ಧೀಕರಣ ಮಾಡಿರುವುದು ಸ್ವಾಗತಾರ್ಹ.
ಒಂದಂತೂ ನೆನಪಿಟ್ಟುಕೊಳ್ಳಿ…. ನಯವಂಚಕತನ ಮಾಡಿ, ಕಳ್ಳತನದಿಂದ ಮುಖ ಮರೆಮಾಚಿಕೊಂಡು, ದೇವಾಲಯವನ್ನು ಆ ಇಬ್ಬರೂ ಮಹಿಳೆಯರು ಪ್ರವೇಶಿಸಿ ಅಯ್ಯಪ್ಪನನ್ನು ನೋಡಿರಬಹುದು. ಇದನ್ನು ಸಾಧಿಸುವಲ್ಲಿ ವಾಮಮಾರ್ಗವನ್ನು ಅನುಸರಿಸಿ ಪಿಣರಾಯಿಯ ಕಮ್ಯೂನಿಸ್ಟ್ ಸರ್ಕಾರ ಯಶಸ್ವಿಯೂ ಆಗಿರಬಹುದು. ಆದರೆ, ಇದನ್ನೆಲ್ಲಾ ಅಯ್ಯಪ್ಪನೂ ಸಹ ನೋಡುತ್ತಿರುತ್ತಾನೆ. ಇದರ ಪ್ರಸಾದವನ್ನು ಅತ್ಯಂತ ಶೀಘ್ರದಲ್ಲೇ ಇವರಿಗೆಲ್ಲಾ ನೀಡುತ್ತಾನೆ… ನೋಡುತ್ತಿರಿ… ಯಾಕೆಂದರೆ, ಜನರ ನಂಬಿಕೆಯ ನಿಟ್ಟುಸಿರು ವಿರೋಧಿಗಳನ್ನು ಬಿಟ್ಟದ್ದು ಇತಿಹಾಸದಲ್ಲೇ ಇಲ್ಲ…
Discussion about this post