ಭದ್ರಾವತಿ: ಬಿಳಕಿ ಗ್ರಾಮದಲ್ಲಿ ನಿರ್ಮಿಸಿರುವ ಈಶ್ವರ ಬಸವಣ್ಣ ಮತ್ತು ರೇಣುಕಾದೇವಿ ವಿಗ್ರಹ ಇರುವ ದೇವಾಲಯದ ಬೀಗ ತೆರೆದು ಪೂಜೆಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಬುಧವಾರ ಸಂಜೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಬಿಳಕಿ ಗ್ರಾಮದ ಮರಾಠ ಜನಾಂಗದವರು ತಾಲೂಕು ಕಚೇರಿ ಮುಂದೆ ದೀಢೀರ್ ಸತ್ಯಾಗ್ರಹ ಆರಂಭಿಸಿದ್ದರು.
ಬಿಳಕಿ ಗ್ರಾಮದಲ್ಲಿ ಕಟ್ಟಲ್ಪಟ್ಟಿರುವ ಈಶ್ವರ ಬಸವಣ್ಣ ಮತ್ತು ರೇಣುಕಾ ದೇವಿಯ ದೇವಾಲಯ ಮರಾಠ ಜನಾಂಗದವರು ನಿರ್ಮಿಸಿರುವ ದೇವಸ್ಥಾನವಾಗಿದ್ದು, ಇಲ್ಲಿ ಬಸವಣ್ಣನ ಜೊತೆ ರೇಣುಕಾದೇವಿಯ ಪೂಜೆ ಆಗಬಾರದು ಎಂದು ಆ ಗ್ರಾಮದ ಹಲವರು ವಿನಾಕಾರಣ ತರಾದೆ ತೆಗೆದ ಕಾರಣ ದೇವಾಲಯವನ್ನು ತಾಲೂಕು ದಂಡಾಧಿಕಾರಿಗಳು ವಶಕ್ಕೆ ಪಡೆದಿದ್ದರು.
ದೇವಾಲಯದಲ್ಲಿ ಇಲಾಖೆ ವತಿಯಿಂದಲೇ ಪೂಜೆ ಮಾಡಿಸುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ರವರಿಗೆ ದೂರನ್ನು ಸಹ ಸಲ್ಲಿಸಿದ ಮೇರೆಗೆ ದೇವಾಲಯದ ಬೀಗ ತೆರೆದು ಪೂಜೆ ಮಾಡಬೇಕೆಂದು ಆದೇಶವಿದ್ದರು ಸಹ ಈವರೆಗೂ ದೇವಾಲಯದಲ್ಲಿ ಪೂಜೆಗೆ ಯಾವುದೇ ವ್ಯವಸ್ಥೆ ಮಾಡಿರುವುದಿಲ್ಲ. ಈಗ ನವರಾತ್ರಿ ಹಬ್ಬವಾಗಿದ್ದು, ಈಗಲಾದರೂ ದೇವಾಲಯದ ಬೀಗ ತೆರೆದು ಪೂಜೆಗೆ ತಾಲೂಕು ಆಡಳಿತ ವ್ಯವಸ್ಥೆ ಮಾಡಬೇಕೆಂದು ಹೇಳಿದರು ಸಹ, ತಹಶೀಲ್ದಾರ್ ಎಂ.ಆರ್. ನಾಗರಾಜ್, ವ್ಯವಸ್ಥೆ ಮಾಡದೇ ಹಾಲಿ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಾ ಇರುವುದನ್ನು ಖಂಡಿಸಿ ಈ ದಿನ ಸದರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಯೋಗೇಶ್, ಮಾಜಿ ಜಿಪಂ ಸದಸ್ಯ ಎಸ್. ಕುಮಾರ್, ಮರಾಠ ಮುಖಂಡರಾದ ಲೋಕೇಶ್ ರಾವ್, ಪರಶುರಾಮರಾವ್, ಶಿವಾಜಿರಾವ್, ಅರ್ಜುನ್‌ರಾವ್, ಶಿವಪ್ಪ, ಧರ್ಮರಾವ್, ನಗರಸಭಾ ಅಧ್ಯಕ್ಷೆ ಹಾಲಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post