ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮದ್ದಾನೆಯ ಹಿಂಡೊಂದು ದಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ, ಆದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ್ರೊ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ, ಬೆಳಗೂ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ. ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ, ಹಾಂ! ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ, ಇದು ಮಳೆ ಆರಂಭದ ಮಾಸ. ಆದ್ದರಿಂದ ಮಳೆಗಿಂತಲೂ ಮೊದಲು ಬರುವ ಮೋಡದ ಮೆರವಣಿಗೆ, ಅದಕ್ಕೆ ಗಾಳಿಯ ಹಿಮ್ಮೇಳ ಜೋರಾಗಿರುತ್ತದೆ.
ಆಷಾಢವೆಂದರೆ-ವಿಷಮಗೊಂಡಿರುವ ಪ್ರಕೃತಿ. ಈ ಬದಲಾದ ವಾತಾವರಣಕ್ಕೆ ದೇಹ-ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟುಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು ನಿಷೇಧಗೊಳಿಸಿದರು.
ವರಕವಿ ಬೇಂದ್ರೆಯವರು ಸಂಗೀತದಲ್ಲಿ ಆಷಾಢವನ್ನು ವರ್ಣಿಸುವುದು ಹೀಗೆ-
ಆಷಾಢದಾ ಮುಗಿಲು ಬೀಸಾಡಿ ಬಂದವು
ಈಸಾಡಿ ಬಂದಂಥ ಆನೆಗಳೆ
ರೋಷದ ತೋಷದ ಬೆಡಗು ಬಿನ್ನಾಣದ
ಬೀರುವ ಬಿಂಕದಿ ಮೆರೆಯುವೊಲೆ
ಹೌದು! ಆಷಾಢವೇ ಹಾಗೆ, ಚೈತ್ರ-ವೈಶಾಖಗಳಲ್ಲಿ ಗಿಡಗಳು ಚಿಗುರಿ ಹೊಸದಾಗಿ ಪಡೆದದ್ದನ್ನು ಬೀಸುಗಾಳಿಯಿಂದ ಆಷಾಢ ಅಲುಗಾಡಿಸುತ್ತದೆ. ಎಷ್ಟೋ ವರ್ಷಗಳ ನಿಷ್ಠೆಯ ಬೇರುಗಳನಿಳಿಬಿಟ್ಟು ನಿಂತ ಮರಗಳನ್ನೂ ಜೋರಾಗಿ ತಳ್ಳುತ್ತ ’ಗಟ್ಟಿಯಾ, ನೀನು ಗಟ್ಟಿಯಾ’ ಅಂತ ಪರೀಕ್ಷಿಸುತ್ತದೆ. ತನಗೆ ತಾನೇ ಗಟ್ಟಿಯಾಗಿರುವುದನ್ನು ಉರುಳಿಸಿಬಿಡುತ್ತದೆ. ಸುಳ್ಳು-ಪೊಳ್ಳುಗಳು ಆಷಾಢ ಗಾಳಿಯೆದುರು ಉಳಿಯುವುದು ಕಷ್ಟ ಹಾಗೊಮ್ಮೆ ಎದುರಿಸಿ ಉಳಿದ ಸತ್ಯಗಳು ಹಚ್ಚಗೆ ಅರಳಿ ಶ್ರಾವಣದಲ್ಲಿ ನಳನಳಿಸುತ್ತವೆ.
ಆಷಾಢಕ್ಕೆ, ಅದರ ರುದ್ರ ರಮಣೀಯ ಪ್ರಾಕೃತಿಕ ಲಕ್ಷಣಕ್ಕೆ ಎಲ್ಲವನ್ನೂ ನೆನಪಿಸುವ ಅಸೀಮ ಬಲವಿದೆ. ಸುಯ್ಯನೆ ಶ್ರುತಿ ಹಿಡಿದ ಹಳೆಯ ವಾದ್ಯದಂತೆ ಬೀಸುವ ಗಾಳಿ, ಅದರ ಮುನ್ನುಡಿಯ ಜೊತೆಗೆ ಧಾಂಗುಡಿಯಿಡುವ ಮಳೆ ಇವುಗಳ ಜುಗಳಬಂದಿಯ ಕಚೇರಿ ಹಳೆಯ ನೆನಪುಗಳನ್ನು ನಿಧಾನವಾಗಿ ಮೀಟುತ್ತ ಮರೆತ ರಾಗವೊಂದನ್ನು ಎಳೆದು ತರುತ್ತವೆ. ಮತ್ತೀಗ ಎದೆಯ ಬೀದಿಗಳಲ್ಲಿ ಹಳೆಯ ಕತೆಗಳ ಮೆರವಣಿಗೆ. ಒಂಥರ ಖುಷಿಯ ಇರಚಲು, ಒಂಥರ ನೋವಿನ ತುಂತುರು. ಮನಸ್ಸು ಎಷ್ಟೇ ಒಳ ಸರಿದು ಅಡಗಲು ಯತ್ನಸಿದರೂ ಗಾಳಿಯ ರಭಸಕ್ಕೆ ಹನಿಗಳು ತೊಯ್ಯಿಸಿಯೇ ಬಿಡುತ್ತವೆ. ನೆನೆಯದೆ ಉಳಿಗಾಲವಿಲ್ಲ.
ಆಷಾಢದ ಮಡುಗಟ್ಟಿದ ಮುಗಿಲು ಏನೋ ಮಬ್ಬು ಕವಿಸುತ್ತದೆ. ಎಂಥದೊ ಅಲಸ್ಯ. ಮುಜುಗರ, ನಿರುತ್ಸಾಹ. ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆಯುತ್ತಾರೆ.
ಏನು ಹೊಳೆಯದ ಮನಸಿನಾಗಸಕೆ ಆಷಾಢ
ಆಕ್ರಮಿಸಿ ಬೆಳಕನು ಬದಿಗೆ ಸರಿಸಿ ಈಸತೊಡ
ಗಿದವು ಘಾಸಿಕೊಳ್ಳುತ ಯಕ್ಷ ಯಾಚಿಸಿದ ಮೋಡ
ಆಷಾಡವೆಂದರೆ-ವಿಷಮಗೊಂಡಿರುವ ಪ್ರಕೃತಿ, ಅಸಮತೋಲನದಲ್ಲಿರುವ ನಿಸರ್ಗ. ಆದ್ದರಿಂದ ಈ ಬದಲಾದ ವಾತಾವರಣಕ್ಕೆ ದೇಹ-ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು ನಿಷೇಧಗೊಳಿಸಿದರು. ಪಕ್ವಾನ್ನಗಳನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಕಷ್ಟ, ಬಂಧು-ಬಳಗ ಸೇರಲಿಕ್ಕೆ ಸಂಚಾರವೂ ಕಷ್ಟ ಎಂಬುದು ಅವರ ದೂರಾಲೋಚನೆ ಇರಬಹುದು.
ಜ್ಯೋತಿಷಶಾಸ್ತ್ರದ ಪ್ರಕಾರ ಆಷಾಢ-ದಕ್ಷಿಣಾಯನ ಕಾಲ. ಅಂದರೆ ಸೂರ್ಯ ದಕ್ಷಿಣಾಭಿಮುಖನಾಗುತ್ತಾನೆ. ಕರ್ಕಾಟಕ ವೃತ್ತವನ್ನು ಪ್ರವೇಶಿಸುತ್ತಾನೆ. ಶ್ರೀಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾನೆಂಬ ಪ್ರತೀತಿ. ಆದ್ದರಿಂದ ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ.
ಸರಸವಿಲ್ಲ, ವಿರಹ ಮಾತ್ರ
ವೈಜ್ಞಾನಿಕವಾಗಿ ನೋಡಿದಾಗ ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಗರ್ಭಾಂಕುರವಾದರೆ ನವಮಾಸಗಳು ತುಂಬಿ ಶಿಶು ಜನನವಾಗುವುದು ಬೇಸಿಗೆಯಲ್ಲಾಗುತ್ತದೆ. ಆ ಬಿರು ಬಿಸಿಲಿನಲ್ಲಿ ಪ್ರಥಮ ಹೆರಿಗೆ ಎಂದರೆ ಮಗು-ಬಾಣಂತಿ ಇಬ್ಬರಿಗೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ರಕ್ತಸ್ರಾವ ನಿಲ್ಲಿಸುವುದು ಕಷ್ಟ ಎಂಬಿತ್ಯಾದಿ ಕಾರಣಗಳಿಂದ ಹಿಂದಿನ ಜನರು ಆಗಿನ ಆಧುನಿಕ ವೈದ್ಯಕೀಯ ಬೆಳೆಯದಿದ್ದ ಕಾಲದಲ್ಲಿ ನವದಂಪತಿಗಳನ್ನು ಆಷಾಢದಲ್ಲಿ ದೂರ ಇಡುತ್ತಿದ್ದರು. ಹೊಸ ಸೊಸೆ ಗಾಳಿ-ಮಳೆಯ ಪ್ರತಾಪಕ್ಕೆ ಹೊಂದಿಕೊಳ್ಳುವುದು ಕಷ್ಟ ಎಂದೋ ಏನೋ ತೌರಿಗೆ ಕರೆತೆರುತ್ತಿದ್ದರು. ಶ್ರಾವಣ ಆರಂಭ ಆದೊಡನೆ ಗೌರೀಪೂಜೆ ಮಾಡಿಸಿ ನಾಗರ ಪಂಚಮಿಯ ಉಂಡಿಗಳನ್ನು ಬುಟ್ಟಿ ತುಂಬಿಸಿ ಕಳಿಸಿ ಕೊಡುತ್ತಿದ್ದರು.
ಈಗಲೂ ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಯಲುಸೀಮೆಯ ಹೆಣ್ಣುಮಕ್ಕಳು ತಮ್ಮ ಪ್ರೀತಿಯ ತೌರು ಸೇರಿ, ತಾಯಿ-ತಂದೆ-ಸೋದರ ಪ್ರೀತಿಯ ಕಡಲಿನಲ್ಲಿ ಮೀಯುವ ಗಳಿಗೆಗಳನ್ನು ಕಾತುರತೆಯಿಂದ ಕಾಯುತ್ತಾರೆ. ಇಲ್ಲಿನ ಜನಪ್ರಿಯ ಜಾನಪದ ಗೀತೆ-ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಕರಿಯಾಕ. ಕರೆದುಕೊಂಡು ಹೋಗಲು ಬರುವ ಅಣ್ಣನನ್ನು ಕಾಯುವ ನಾರಿ ಮುಂದುವರಿದು ಹೀಗೆ ಕನವರಿಸುತ್ತಾಳೆ.
ರೊಟ್ಟಿ ಬುತ್ತಿ ಮಾಡಿಕೊಂಡು ಎತ್ತಿನ ಬಂಡಿ ಹೂಡಿಕೊಂಡು
ಎಂದು ಹೋಗೇನ ತವರಿಗೆ
ಇಂದಿನ ಹೊತ್ತು ಹಿಂದೇ ಇರಲಿ
ಮುಂದಿನ ಹೊತ್ತು ಇಂದೇ ಬರಲಿ
ಎಂದು ನೊಡೇನ ತಾಯಿಯ ಮೋರೆ
ಶೃಂಗಾರ ವಿರೋಧಿ ಮಾಸ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಮಿಥುನ ರಾಶಿಯಲ್ಲಿ ಶಿವನಿರುತ್ತಾನೆ. ಅಂದರೆ ಆತ ಕಾಮಾರಿ. ದುಷ್ಟ ಕಾಮವನ್ನು ಸಂಹರಿಸುತ್ತಾನೆ. ಆದ್ದರಿಂದ ಈ ಮಾಸವು ಶೃಂಗಾರ ವಿರೋಧಿ ಮಾಸ ಎಂದು ಪರಿಗಣಿಸುತ್ತಾರೆ.
ಯಾರೋ ಜೋರಾಗಿ ತಳ್ಳಿದಂತೆ ಸುಂಯ್ಗುಡುತ್ತದೆ.
ಗೂಳಿಯಂತೆ ಗಾಳಿ ಬಡಿದುಕೊಳ್ಳುವ ಕಿಟಕಿ ಕದ
ಗಂಡನ ಖಾಲಿಯೆದೆಯ ಹಾಗೆ ಪಟಪಟ
ದಿನಕ್ಕೆ ಹತ್ತು ಸಲ ಎಂದು ಬರುತ್ತಿ ಎಂಬ ಫೋನು
ಕಿವಿಗಾನಿಸಿ ನಗುತ್ತಾಳೆ ಹೊಸ ವಧು ಕಿಲಕಿಲ
ವರಕವಿ ಬೇಂದ್ರೆ ಹೇಳುತ್ತಾರೆ-ಗಾಳಿ ಗೋಳಿಡುವಂತೆ
ಭೋರಾಡುತಿಹುದು
ಬಾಳುವೆಯೆ ಹೊಸತೊಂದು ಒಗಟವಾಗಿಹುದು
ಅದೇ ಆಗ ಹೊಸ ಬಾಳುವೆಯ ಒಗಟು ಬಿಡಿಸಲಾರಂಭಿಸದ ಜೋಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಒಂದು ತಿಂಗಳ ವಿರಹ ಸಹಾಯಕವಾಗಬಹುದು. ಏಕೆಂದರೆ, ಬದುಕಿನ ಪ್ರಯಾಣದಲ್ಲಿ ದೈಹಿಕ ಸಾಮೀಪ್ಯವೇ ಎಲ್ಲವೂ ಅಲ್ಲ, ಮನಸ್ಸುಗಳು ಬೆರೆತು, ಕಲೆತು, ನೆನಪುಗಳಲ್ಲಿ ಪರಸ್ಪರರನ್ನು ಮೂಡಿಸಿಕೊಳ್ಳುತ್ತ ರೂಪಿಸಿಕೊಳ್ಳುತ್ತ, ಧ್ಯಾನಿಸುತ್ತ ತನ್ಮೂಲಕ ಒಂದು ಸಾಮೀಪ್ಯವನ್ನು ಖುದ್ದು ಸೃಷ್ಟಸಿಕೊಳ್ಳುವುದಿದೆಯಲ್ಲ, ಅದು ನಿಜವಾಗಿ ಆಗಬೇಕಿರುವ ಮಿಲನ. ಇಂತಹ ದೈಹಿಕ ದೂರದ ಮಿಲನದಲ್ಲಿ ಆತ್ಮಗಾನವೊಂದು ಹುಟ್ಟಿ ಬರುತ್ತದೆ. ಮತ್ತದು ಬದುಕಿಡೀ ಕೂಡಿ ಹಾಡುವ ಯುಗಳಗೀತೆಗೆ ಸೂಕ್ತ ರಾಗ-ಪ್ರಸ್ತಾರವಾಗುತ್ತದೆ. ಮದುವೆಯ ನಂತರ ಒಟ್ಟಿಗಿದ್ದು ಪರಸ್ಪರರಿಗೆ ಕಲಿಸಿದ್ದನ್ನು ದೂರ ಕೂತು ರಿವಿಜನ್ ಮಾಡಿಕೊಂಡು ಬಂದರೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗಬಹುದು!
ಕಾಳಿದಾಸನ ಪ್ರಸಿದ್ದ ಕಾವ್ಯ ಮೇಘದೂತದಲ್ಲಿ ಶಾಪಗ್ರಸ್ತನಾದ ಯಕ್ಷ ತನ್ನ ಸಂದೇಶ ರವಾನೆಗಾಗಿ ಮೋಡಗಳು ಬರುವ ಆಷಾಢಮಾಸವನ್ನು ಬಹಳ ಕಾತುರನಾಗಿ ಕಾಯುತ್ತಾನೆ. ಅವನಿಗೆ ಬಂಧುಸ್ವರೂಪಿ ಮೇಘದೂತನ ಭಟ್ಟಿಯಾಗುವುದು ಆಷಾಢಸ್ಯ ಪ್ರಥಮ ದಿವಸೆ. ಬೇಂದ್ರೆಯವರು ಕನ್ನಡ ಮೇಘದೂತದಲ್ಲಿ ಬರೆಯುವಂತೆ-
ಗಾಳಿ ಬೀಸುವುದು ನಿನ್ನ ನೂಕಿಸುತ ಮಂದ ಮಂದವಾಗಿ
ಚೂಚು ಚಾಚಿ ಚಾದುಗೆಯು, ಎಡಕೆ ಕೂಗುವುದು ಚೆಂದವಾಗಿ
ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ
ಹೀಗೆ ಮಂಕು ಕವಿದ ಪ್ರಕೃತಿ, ವಿರಹದುರಿಯ ತೊಳಲಾಟದ ನವ ಜೋಡಿ, ಹಬ್ಬ ಹುಣ್ಣಿಮೆ ಕಾಣದ ದೇವರು ಎಲ್ಲರನ್ನೂ ಬೆದರಿಸಿ ತೆಪ್ಪಗೆ ಕೂರಿಸುವ ಗಾಳಿಯೆದುರು ನಿರುತ್ತರರಾಗುತ್ತಾರೆ
ಹೆಪ್ಪುಗಟ್ಟಿದ ಕಪು ರಾತ್ರಿಗಳಲ್ಲಿ ನೆನಪಾದ ಹಳೆ
ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ
ಜೊರ್ರನೆ ಸುರಿಯುತ್ತದೆ ಅಬ್ಬರದ ಮಳೆ
ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ
ಆಗಲಿದ ಗಂಡ-ಹೆಂಡಿರ ಮತ್ತು ದೇವರು
ಆದರೆ, ಈಗ ನಾವು ನೋಡುತ್ತಿರುವ ಆಷಾಢ ತನ್ನ ಮೊದಲಿನ ವಿಲಾಸ-ವಿಭ್ರಮದಿಂದ ವಿಜೃಂಭಿಸುತ್ತಿಲ್ಲ, ನಾವು ಬರಿದಾಗಿಸಿದ ಪ್ರಕೃತಿಯ ಒಡಲು ನೋವಿನ ಮಡಿಲಾಗಿ ಋತುಮಾನಗಳು ಅಸ್ತವ್ಯಸ್ತಗೊಂಡು ಉಧ್ವಸ್ಥಗೊಂಡಿವೆ.
ಕುವೆಂಪು ಅವರು ತಾವು ಕಂಡ ಆಷಾಢದ ವೈಭವವನ್ನು ಚಿತ್ರಿಸಿದ ರೀತಿಯನ್ನು ಈಗ ಪ್ರತ್ಯಕ್ಷವಾಗಿ ಕಾಣಬೇಕೆನ್ನುವ ಹಂಬಲ ಹುಸಿಹೋಗುತ್ತಿದೆ-
ಕದ್ದಿಂಗಳು ಕಗ್ಗತ್ತಲು
ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ
ಪರ್ವತ ವನಧಾತ್ರಿ
ಉತ್ತು ಬಿತ್ತು ನೆಲದ ಕರುಣೆಯ ಧ್ವನಿಯಂತೆ
ಕುಡಿಯೊಡೆವ ಮೊಳಕೆಯ ನಿರೀಕ್ಷೆಯಲ್ಲಿರುವ ರೈತ ಆಷಾಢದ ಮಳೆಗಾಗಿ ತೀವ್ರವಾಗಿ ಹಂಬಲಿಸುತ್ತಾನೆ. ಪುನರ್ವಸು ಮಳೆಗೆ ಪುಳಕಗೊಳ್ಳುವ ಇಳೆ ದಳದಳವರಳಿ ಬೆಳೆಗಳ ಕಣ್ಣು ಹೊಳೆಸುತ್ತದೆ. ಆದರೆ, ಈಗೀಗ ಮಳೆ ಹುಸಿ ಹೋಗುತ್ತಿದೆ. ಬೇಂದ್ರೆಯವರ ಓ ಆಷಾಢ ಪದ್ಯದಲ್ಲಿ ಈ ಬೇಡಿಕೆ ದೈನ್ಯದಿಂದ ಮಂಡಿಸಲ್ಪಟ್ಟಿದೆ.
ಓ ಆಷಾಢಾ ಆಷಾಢಾ
ಆಡಿಸ್ಕಾಡಬೇಡಾ
ದುರುಳರ್ಹಾಂಗ/ನೆರಳು ಚಲ್ಲಿ
ಆಸೀ ಹಚ್ಚೀ/ಕಸಕೊಂಡಾಂಗ
ಬಂತು ಮೋಡಾ/ಹೋಥೂ ಮೋಡಾ
ನೋಡಾ ನೋಡಾ
ಈಗೀಗ ಆತ್ಮಹತ್ಯೆಗಿಳಿದಿರುವ ರೈತರ ಗೋಳನ್ನು ಕಂಡಾಗ ಬೇಂದ್ರೆಯವರ ಪದ್ಯದ ಮುಂದುವರಿದ ಭಾಗ ನೆನಪಾಗುತ್ತದೆ-
ಮೊದಲ ಬಿತ್ತಿಗೀ ಮೊಳಗೀ ಗೋಣು ಚೆಲ್ಯಾವ
ತೂಕ ತಪ್ಪಿದ ಮೂಕ ಪ್ರಾರ್ಥನೀ ಮುಗಿಲಿಗೆ ಸಲ್ಲಾಪ
ಎಲ್ಲ್ಯಾವ ಎಲ್ಲ್ಯಾವ ಎಲ್ಲ್ಯಾವ ಮೋಡಾ
ಮಣ್ಣಿತ್ತೂನೂ ನೀರಡಿಸ್ಯಾವ
ಒಕ್ಕಲಿಗನ ಕಣ್ ಬಿಡಿಸ್ಯಾವ ಓ ಆಷಾಢಾ
ಎಂತೆಂಥ ಆಧುನಿಕ ಆವಿಷ್ಕಾರಗಳಾಗಿವೆ ಎಂದರೂ ಕೂಡ ಮನುಜನ ಬಾಳು ಸೃಷ್ಟಿಯ ಸಮಷ್ಟಿಯ ಒಟ್ಟಂದದ ಹಂದರದಲ್ಲಿಯೇ ಅರಳಬೇಕಾದ ಹೂವು. ಹಾಗಲ್ಲದಿದ್ದರೆ ಹಾಹಾಕಾರದ ಗೋಳಿನ ಬಾಳು ನಮ್ಮದಾಗುತ್ತದೆ. ನಿಸರ್ಗದ ಜೊತೆಗೆ ಅನುಸಂಧಾನ ನಡೆಸುವ ರೀತಿಯಲ್ಲಿ ಬದುಕಲು ಕಲಿತ ದಿನ ಮಾನವ ನಿಜವಾದ ಜಾಣನಾಗುತ್ತಾನೆ. ಆಯಾ ಋತುಗಳು, ಆಯಾ ಮಾಸಗಳು ತಮ್ಮ ಸಹಜ ಗುಣ-ಲಕ್ಷಣಗಳೊಂದಿಗೆ ಮೈದೋರಿ ನಮ್ಮ ಬದುಕನ್ನು ಹಸನುಗೊಳಿಸುತ್ತವೆ.
Get In Touch With Us info@kalpa.news Whatsapp: 9481252093
Discussion about this post