ತೀರ್ಥಹಳ್ಳಿ: ಆಗುಂಬೆ ಘಾಟಿ ರಸ್ತೆ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ 30 ದಿನ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಆದೇಶ ಹೊರಡಿಸಿದ್ದಾರೆ.
ಘಾಟಿ ರಸ್ತೆಯಲ್ಲಿ 5, 7, ಮತ್ತು 14 ನೇ ತಿರುವುಗಳಲ್ಲಿ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಲಘು ವಾಹನಗಳಾದ ಸಾಮಾನ್ಯ ಬಸ್, ಜೀಪ್, ವ್ಯಾನ್, ಮಿನಿ ವ್ಯಾನುಗಳು ಮತ್ತು ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ 169 ಮಾರ್ಗವಾದ ತೀರ್ಥಹಳ್ಳಿ- ಕೊಪ್ಪ-ಶೃಂಗೇರಿ-ಮಾಳಾ ಘಾಟಿ ಮಾರ್ಗವಾಗಿ ಕಾರ್ಕಳಕ್ಕೆ ಸಂಚರಿಸಬಹುದು.
ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಷುರಿ ಬಸ್ಸುಗಳು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಛಾರ್ಸಿ ವಾಹನಗಳು ರಾಜ್ಯ ಹೆದ್ದಾರಿಯ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹೊಸಂಗಡಿ-ಸಿದ್ಧಾಪುರ-ಕುಂದಾಪುರ ಮಾರ್ಗವಾಗಿ ಚಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

















