ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರಸ್ತುತ ದಿನಗಳಲ್ಲಿ ಒಂದಲ್ಲ ಒಂದು ಮೂಲದಿಂದ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುವ, ನೋಡುವ ವಿದ್ಯಮಾನಗಳನ್ನು ಗಮನಿಸುವಾಗ ಮೇಲಿನ ಪ್ರಶ್ನೆ ನಿಜವೆಂದು ಅನಿಸುತ್ತಿದೆ. ವರ್ಷಂಪ್ರತೀ ಎಪ್ರಿಲ್, ಮೇ ಮತ್ತು ಜೂನ್ ಈ ಮೂರು ತಿಂಗಳುಗಳಲ್ಲಿ ಮುಂಬೈಯಿಂದ ಲಕ್ಷೋಪಲಕ್ಷ ಜನರು ಊರಿಗೆ ಹೋಗುತ್ತಿದ್ದರು. ಆದರೆ 2020 ರ ಈ ವರ್ಷ ಮುಂಬೈಗರ ಪಾಲಿಗೆ ಗರ ಬಡಿದಂತಾಗಿದೆ. ಲಾಕ್ ಡೌನ್ ನಿಂದಾಗಿ ಎಲ್ಲ ಸ್ಥಗಿತಗೊಂಡವು. ಈಗ ರಾಜ್ಯ ಸರಕಾರಗಳು ಅನುಮತಿ ನೀಡಿ, ಕೇಂದ್ರ ಸರಕಾರ ರೈಲು ಸೇವೆಯನ್ನು ಪ್ರಾರಂಭಿಸಿದರೂ ಊರಿನವರು ಎಂದೂ ಕೇಳರಿಯದ ಕಠೋರತೆಯನ್ನು ಕಾಣಿಸುತ್ತಿದ್ದಾರೆ. ರೈಲು ಟಿಕೇಟಾದರೂ ಸಿಗಬಹುದು. ಊರವರ ಅನುಮತಿ ಸಿಗುತ್ತಿಲ್ಲ ಎಂಬ ದುಃಖಿತ ಭಾವನೆ ಹೊರನಾಡ ತುಳುವರದ್ದು. ಈ ಪರಿಸ್ಥಿತಿ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಆಗಲೀ, ದೇಶದ ಇತರ ರಾಜ್ಯಗಳಲ್ಲಿ ಆಗಲೀ ತಲೆದೋರಿಲ್ಲ. ಸರಕಾರ, ಜಿಲ್ಲಾಡಳಿತ ವಿಧಿಸುವ ನಿಯಮಗಳನ್ನು ಪಾಲಿಸಿದರೂ ಮನೆಯವರ ಮಾನಸಿಕತೆ ಏಕೋ ಏನೋ ಕೂಡಿ ಬರುತ್ತಿಲ್ಲ.
ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದು, ಮಳೆ ಬಿಟ್ಟ ಮೇಲೆ ಮರದಡಿ ನಿಲ್ಲಬಾರದು. ಎಂಬುದೊಂದು ಮಾರ್ಮಿಕವಾದ ನುಡಿಗಟ್ಟು. ಈ ಧ್ವನಿಯ ಅರ್ಥ ತಾಯಿ ಸತ್ತ ನಂತರದ ದಿನಗಳಲ್ಲಿ ತವರಿಗೆ ಹೋಗಬಾರದು. ಹುಟ್ಟಿ ಬೆಳೆದ ಮನೆಯಾದರೂ ಈಗ ಅಲ್ಲಿರುವುದು ಹೊರಗಿನಿಂದ ಬಂದ ಹೆಂಗಸರ ಯಜಮಾನಿಕೆ. ನಿಮ್ಮನ್ನು ಬರಸೆಳೆದು ಆಲಂಗಿಸುವವರು ಯಾರೂ ಇಲ್ಲ. ನಿಮ್ಮ ಸುಖ ದುಃಖ ಸುಂಕದವರ ಎದುರಿನ ಪ್ರಲಾಪವಾದೀತು. ಹಾಗೆಯೇ; ಮಳೆ ಬಿಟ್ಟ ಮೇಲೆ ಮರದಡಿ ನಿಂತು ಏನೂ ಪ್ರಯೋಜನವಿಲ್ಲ. ಇಷ್ಟರ ತನಕ ಒದ್ದೆಯಾಗದಿದ್ದರೂ ಈಗ ಒದ್ದೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪರಿಸ್ಥಿತಿ ಅದಕ್ಕಿಂತಲೂ ಕಡೆಯಾಗಿದೆ ಎನ್ನುತ್ತದೆ ಇತ್ತೀಚಿನ ವಿದ್ಯಮಾನಗಳು.
ಈಗ ಹಿಂದಿನಂತೆ ಅಲ್ಲ. ಸತ್ತರೆ ಕ್ಷಣಮಾತ್ರದಲ್ಲಿ ಸಂಬಂಧಪಟ್ಟವರಿಗೆ ಸುದ್ದಿ ತಿಳಿಯುವ ಯುಗ ಇದು. ಅಂತ್ಯಕ್ರಿಯೆಗೆ ಅಲ್ಲವಾದರೂ ಉತ್ತರಕ್ರಿಯೆಗೆ ಹೋಗೋಣ ಎಂದು ಅಂದಾಜಿಸುವಂತಿಲ್ಲ. ತಾಯಿ ಸತ್ತಾಗ ಮುಂಬೈಯಲ್ಲಿ ಇರುವ ಮಗಳು ಉತ್ತರಕ್ರಿಯೆಗೂ ಬರುವುದನ್ನು ಅವರ ಅಣ್ಣ ಹಾಗೂ ಮನೆಯವರು ತಡೆವ ಘಟನೆಗಳು ನಡೆಯುತ್ತಿವೆ. ನೇರ ಮತ್ತು ಸ್ಪಷ್ಟ ಮಾತಿನಲ್ಲೇ ಹೇಳಿದ್ದಾರೆ. ನೀನು ಬರುವುದು ಬೇಡ. ಬಂದರೆ ಕುಟುಂಬದವರು/ಸಂಬಂಧಿಕರು ಬರುವುದಿಲ್ಲ ಎಂದಿದ್ದಾರೆ. ಮುಂಬೈಯಲ್ಲಿ ಇರುವ ಕರ್ಮಕ್ಕೆ ತಾಯಿಯ ಆಕಾಲ ಮರಣವಾದಾಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಮುಖ ನೋಡುವ ಭಾಗ್ಯ ಇಲ್ಲದಿದ್ದರೂ ಉತ್ತರಕ್ರಿಯೆಯಲ್ಲಿ ಭಾಗಿಯಾಗಿ ಮೈಶುದ್ಧ ಮಾಡಿಕೊಳ್ಳುವ ಎಂದರೆ ಅದಕ್ಕೂ ಅವಕಾಶ ನಿರಾಕರಿಸಲಾಯಿತ್ತಲ್ಲ ಎಂದು ಹಣೆ ಚಚ್ಚಿಕೊಳ್ಳುವ ಪರಿಸ್ಥಿತಿ ಆ ಹತಭಾಗ್ಯ ಮಗಳದ್ದು.
ಇನ್ನೊಂದು ಪ್ರಸಂಗದಲ್ಲಿ, ದೊಡ್ಡ ಮಗ ಉತ್ತರಕ್ರಿಯೆಗೆ ಹೋಗಿ ದೂರದಲ್ಲೇ ನಿಂತರೂ ನೆರೆದವರು ಅವರನ್ನು ನೋಡಿದ ಕೂಡಲೇ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮುಂಬೈಯಿಂದ ಬಂದವರು ಎಂದು ತಿಳಿದು ಎಲ್ಲರೂ ಬಸ್ಸಿನಿಂದ ಕೆಳಗಿಳಿದ ಘಟನೆ ನಡೆದಿದೆ. ಮತ್ತೊಬ್ಬರು ಕೋಳಿ ಅಂಕಕ್ಕೆ ಹೋದರೆಂದು ಅಲ್ಲಿದ್ದವರು ಎಲ್ಲ ಪರಾರಿಯಾಗಿದ್ದಾರೆ. ಹೀಗೆ ಹಲವಾರು ಘಟನೆಗಳು ನಡೆಯುತ್ತಿವೆ. ರೈಲು ಸೇವೆ ಆರಂಭವಾದ ಮೇಲೆ ಊರಿಗೆ ಹೋಗಿ 7/14 ದಿನಗಳ ಕ್ವಾರಂಟೈನ್ ಮುಗಿಸಿ ಬಂದರೂ ಮನೆಯವರು/ನೆರೆಯವರು ಮುಖಕೊಟ್ಟು ಮಾತನಾಡುತ್ತಿಲ್ಲ. ಮುಂಬೈಯಿಂದ ಬರುವಾಗ ಏಳು ಕೊಲೆ ಮಾಡಿ ಬಂದಿದ್ದಾರೆ ಎನ್ನುವ ಹಾಗೆ ನೋಡುತ್ತಿದ್ದಾರೆ ಎಂದು ನೊಂದು ನುಡಿಯುತ್ತಿದ್ದಾರೆ. ಊರಿನವರು ನಿಷ್ಠುರದಿಂದಲೇ ಹೀಗೆ ಹೇಳುತ್ತಿದ್ದಾರೆ; ನಾವು ಮಾರ್ಚ್ ನಾಲ್ಕನೆ ವಾರದಿಂದ ನಿಯಮಬದ್ಧವಾಗಿ ಲಾಕ್ ಡೌನ್ ಪಾಲಿಸಿದ್ದೇವೆ. ನಾವು ಮಂದಿರ, ಮಾಲ್, ಬೀಚ್ ಎಲ್ಲಿಗೆ ಹೋಗದೆ ಇದ್ದದ್ದು ಈಗ ಮುಂಬೈಯವರಿಂದಾಗಿ ವ್ಯರ್ಥವಾಗುತ್ತಿದೆ ಎಂಬ ಖೇಧ ಅವರದು.
ಮುಂಬೈಯಿಂದ ಹೋಗುವ ಶತ ಪ್ರತಿಶತ ಜನರಿಗೆ ಕೊರೋನಾ ನಿಘಂಟು ಎಂಬ ಮನಃಸ್ಥಿತಿಗೆ ತಲುಪಿದ್ದಾರೆ. ದೂರದರ್ಶನ ಮಾಧ್ಯಮಗಳೂ ಅವರನ್ನು ದಿಕ್ಕು ತಪ್ಪಿಸುತ್ತಿವೆ ಎಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಇತಿಹಾಸದದಲ್ಲಿ ಎಂದೂ ಬರೆದಿರಲಾರದ ದಾಖಲೆಯೊಂದು ಈಗ ಬರೆಯಲ್ಪಡುತ್ತಿದೆ. ಊರಿನವರು ಮುಂಬೈಯವರನ್ನು ಆ ಕಾರ್ಯಕ್ರಮಕ್ಕೆ ಬನ್ನಿ, ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಎಡೆಬಿಡದೆ ಕರೆಯುತ್ತಿದ್ದವರು ಈಗ ಯಾಕೆ ಬರುವುದು ಎಂಬ ದಾಟಿಯ ರಾಗ ಆಲಾಪಿಸುತ್ತಿದ್ದಾರೆ. ದುಡಿತಕ್ಕೆಂದು ಕರ್ಮಭೂಮಿಗೆ ಹೋದವರನ್ನು ಜನ್ಮಭೂಮಿ ಭಾವನಾತ್ಮಕವಾಗಿ ದೂರೀಕರಿಸುತ್ತಿದೆ ಎಂದರೂ ತಪ್ಪಾಗಲಾರದು.
Get In Touch With Us info@kalpa.news Whatsapp: 9481252093
Discussion about this post