ಈ ಮನುಸ್ಮೃತಿ ರಚಿಸಿದವನ ಹಿನ್ನೆಲೆ ತಿಳಿದರೆ ನೀವು ಅವನನ್ನು ಪೂಜಿಸುವಿರಿ ಎಂಬ ಅದ್ಬುತ ಲೇಖನವನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಬರೆದಿದ್ದಾರೆ. ಮುಂದೆ ಓದಿ…
ಮನುವಿನಿಂದ ಮನ್ವಂತರ ಆಯಿತು. ಹದಿನಾಲ್ಕು ಮನುಗಳು ಒಂದು ಕಲ್ಪದೊಳಗೆ ರಾಜ್ಯಾಡಳಿತ ಮಾಡುತ್ತಾರೆ. ಇವರೆಲ್ಲರೂ ರವಿಯ ಸುತರು. ಜಗದ ರಕ್ಷಣೆಗಾಗಿಯೇ ಇವರು ಇರುವುದು. ಇವರಲ್ಲಿ ಈಗಿನವರಂತೆ ಪಕ್ಷ ಬೇಧವಾಗಲೀ, ಮತ ಬೇಧವಾಗಲೀ ಇಲ್ಲ ಎಂಬುದು ಈ ಮನುವಿನ ಚರಿತ್ರೆ ತಿಳಿದಾಗಲೇ ಗೊತ್ತಾಗಬಹುದು.
ಕಳಂಕಿತವಲ್ಲ ಮನುಸ್ಮೃತಿ
ಯಾರೋ ಮನುಸ್ಮೃತಿ ಬ್ರಾಹ್ಮಣರ ಪರ, ಕಳಂಕಿತ ಎಂದು ಹಳಿದಿರಬಹುದು. ಆದರೆ ಮನುಸ್ಮೃತಿ ಕಳಂಕಿತವಲ್ಲ. ಒಂದು ಕಾಲಕ್ಕೆ ಅಂತಹ ಶಾಸನ ಬೇಕಿತ್ತು. ಆದರೆ ಈಗಲೂ ಅದೇ ಇರಬೇಕೆಂದು ಹೇಳುವುದಿಲ್ಲ. ಜಗತ್ತು ಪ್ರಳಯಾ ನಂತರ format ಆಗುತ್ತಾ ಬರುತ್ತದೆ. ಆಗ ಇಂತಹ ಕಠಿಣ ಶಾಸನ ಬೇಕಿತ್ತು. ಆದರೆ ಈಗಿನ ಶಾಸನಗಳಲ್ಲೂ ಮೂಲ ವಿಚಾರ ಮನುಸ್ಮೃತಿಯದ್ದೆ. ಕೆಲವೊಂದು ತಿದ್ದುಪಡಿ ಆಗಿರುತ್ತದೆ.
ಉದಾಹರಣೆಗೆ ಹಿಂದೆ ಸಿನಿಮಾ ಸೆನ್ಸಾರ್ ಮಂಡಳಿಯು ಸಿನಿಮಾ ಬಿಡುಗಡೆಗೆ ಮುಂಚೆ ಆ ಸಿನಿಮಾವನ್ನು ನೋಡಿ ಎಲ್ಲಿ ಅಶ್ಲೀಲವಿದೆಯೋ (ಅಶ್ಲೀಲ ಸಂಭಾಷಣೆಯನ್ನೂ ಕತ್ತರಿಸುತ್ತಿತ್ತು!) ಅದನ್ನು ಕತ್ತರಿಸುತ್ತಿತ್ತು. ಕ್ರಮೇಣ ಕಾಲ ಬದಲಾದಂತೆ ಈಗ ಅಶ್ಲೀಲ ದೃಶ್ಯ ಸಂಭಾಷಣೆಯೇ ಪ್ರಮುಖವಾಗಿದೆ. ಈಗ ಜಾತಿ, ಪಕ್ಷ, ಮತ- ಧರ್ಮ, ಪಂಗಡಗಳ ವಿಚಾರದಲ್ಲಿ controversy ಇದೆಯಾ ಎಂಬುದನ್ನಷ್ಟೇ ನೋಡುತ್ತದೆ.
ಕಾಲ ಬದಲಾದಂತೆ ಶಾಸನಗಳೂ ಬದಲಾಗುತ್ತದೆ. ಇದನ್ನೆಲ್ಲ ತಿಳಿಯದೆ, ಮನುಸ್ಮೃತಿ ಬ್ರಾಹ್ಮಣರ ಒಂದು ಕುಟಿಲ, ಶೂದ್ರರನ್ನು ಅವಹೇಳನ ಮಾಡಿದ ಕಳಂಕ ಇರುವ ಶಾಸ್ತ್ರ ಎಂದೆಲ್ಲಾ ನಿಂದನೆಗಳಾಗುತ್ತಿದೆ. ಈಗ ಯಾವ ಶಾಸನಗಳೂ ಈ ಸ್ಮೃತಿಯ ಪ್ರಕಾರ ಇರುವುದಿಲ್ಲ. ಶಾಸನಗಳೂ ಪರಿವರ್ತನೆಯಾಗಿವೆ. ಆದರೂ ನಮ್ಮ ಪುರಾತನರು ಏನು ಹೇಳಿದ್ದರು, ಯಾಕಾಗಿ ಹೇಳಿದ್ದರು ಎಂಬ ಅರಿವು ನಮಗಿರಲೇ ಬೇಕು. ಒಂದು ವೇಳೆ ಅವರೆಲ್ಲರೂ ಮೂರ್ಖರೇ ಆಗಿರುತ್ತಿದ್ದರೆ? ನಾವು ಅದೇ ಪೀಳಿಗೆಯಲ್ಲಿ ಶತ ಶತ ಮೂರ್ಖರಾಗಿರುತ್ತಿದ್ದೆವು.
ಈಗಿರುವುದು ವೈವಸ್ವತ ಮನು
ಮನು ಸ್ಮೃತಿಗೆ ತಿದ್ದು ಪಡಿಯಾಗಿ ಯಜ್ಞ್ಯವಲ್ಕ್ಯ ಸ್ಮೃತಿಯೂ ಚಾಲ್ತಿಗೆ ಬಂತು. ನಂತರ ಸುಮಂತ, ವಿಧುರ, ಚಾಣಕ್ಯಾದಿಗಳೂ ತಿದ್ದುಪಡಿ ತಂದರು. ಇದೆಲ್ಲ ಆಯಾಯ ಕಾಲಕ್ಕೆ ಆಗುವ ಪರಿವರ್ತನೆಗಳು. ಅದು ಬಿಟ್ಟು ಅದು ಕಳಂಕಿತ, ಇದು ಬ್ರಾಹ್ಮಣರ ಹುನ್ನಾರ ಎಂದು ಹೇಳುವುದನ್ನು ಮತ್ಸರ ಎಂದು ಹೇಳಲೇಬೇಕು. ಈಗ ಈ ಮನುವಿನ ಗುಣ ಹೇಗಿತ್ತು ನೋಡೋಣ.
ಸ್ವಯಂಭೂ, ಸ್ವಾರೋಚಿತ, ಉತ್ತಮ, ತಾಮಸ, ರೈವತ, ಚಾಕ್ಷುಷರೆಂಬ ಆರು ಮನುಗಳ ನಂತರ ಇರುವ ಈಗಿನ ವೈವಸ್ವತ ಮನು. ಇವನ ನಂತರ ಎಂಟನೆಯವನಾಗಿ ಸೂರ್ಯಸಾವರ್ಣಿ, ನಂತರ ದಕ್ಷಸಾವರ್ಣಿ, ಬ್ರಹ್ಮ ಸಾವರ್ಣಿ, ರುದ್ರಸಾವರ್ಣಿ, ದೇವ ಸಾವರ್ಣಿ, ಇಂದ್ರಸಾವರ್ಣಿಗಳೆಂಬ ಹದಿನಾಲ್ಕು ಮನುಗಳು ಸೂರ್ಯನ ಮಕ್ಕಳಾಗಿರುತ್ತಾರೆ.
ಇದರಲ್ಲಿ ಈಗ ನಡೆಯುವ ವೈವಸ್ವತ ಮನುವಿನ ಹೆಸರು ವಿವಸ್ವಂತ. ರವಿಯ ಪತ್ನಿ ಸಂಜ್ಞಾದೇವಿಯಲ್ಲಿ ಶ್ರಾದ್ಧಾದೇವ ಎಂಬ ಹೆಸರಲ್ಲಿ ಜನಿಸಿದ. ಮುಂದೆ ಈತನ ಪೀಳಿಗೆಯೇ ಇಕ್ಷ್ವಾಕು ವಂಶ.
ಸಣ್ಣ ಮೀನು ರಾಜನನ್ನು ಕಚ್ಚಿದ್ದು ಯಾಕೆ?
ಈ ಶ್ರಾದ್ಧಾದೇವ ಆಡಳಿತ ಮಾಡುವಾಗ ಒಂದು ದಿನ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಒಂದು ಮರಿ ಮೀನು ಈತನ ಕಾಲನ್ನು ಕಚ್ಚುತ್ತದೆ. ಆಗ ಕರುಣಾಮಯಿಯಾದ ಈ ಶ್ರಾದ್ಧಾದೇವ ಮಹಾರಾಜನು ಆ ಮೀನನ್ನು ಎತ್ತಿಕೊಂಡು,’ ಯಾಕಪ್ಪಾ ಕಚ್ಚುತ್ತೀ? ಯಾರಿಂದ ನಿನಗೆ ಭಯವಿದೆ? ಎಂದು ಕೇಳುತ್ತಾನೆ. ಆಗ ಆ ಮೀನು ಹೇ ರಾಜನ್, ಜಗತ್ತಿನಲ್ಲಿ ನಿನ್ನಂತಹ ಕರುಣಾಮಯಿ ಇನ್ನೊಬ್ಬರಿಲ್ಲ. ದೊಡ್ಡ ಮೀನುಗಳಿಂದ ರಕ್ಷಣೆ ಪಡೆಯಲು ನಿನ್ನ ಕಾಲನ್ನು ಕಚ್ಚಿದೆ’ ಎಂದು ಹೇಳಿತು. ಒಡನೆಯೇ ರಾಜನು ತನ್ನ ಕಮಂಡಲದೊಳಗೆ ಮೀನನ್ನು ಹಾಕಿ ಅರಮನೆಯ ಸರೋವರದಲ್ಲಿ ಬಿಟ್ಟ.
ಆಶ್ಚರ್ಯ ಎಂದರೆ ಮರುದಿನ ಇಡೀ ಸರೋವರ ವ್ಯಾಪಿಯಾಗಿ ಈ ಮೀನು ಬೆಳೆದಿತ್ತು. ಇದನ್ನು ನೋಡಿದ ರಾಜನು ಅಬ್ಬಾ ಎಂದು ಬಿಟ್ಟ. ಆಗ ಆ ಮೀನು ಹೇ ರಾಜನ್ ನಿನ್ನ ಕರುಣೆಗೆ ನಾನು ಮೆಚ್ಚಿದೆ. ಅತೀ ಸಣ್ಣ ಜೀವಿಯ ಬಗ್ಗೆ ಕನಿಕರ ತೋರುವವರು ವಿರಳ. ಅಂತಹದ್ದರಲ್ಲಿ ನೀನು ರಕ್ಷಣೆ ನೀಡಿದೆ ಎಂದರೆ ಎಂತಹ ಹೃದಯವಂತ. ನೀನು ನಿಜವಾದ ಪರಿಸರ(environment) ರಕ್ಷಕ. ಇಗೋ ನಾನು ಹೇಳಿದ ಆದೇಶ ಪಾಲಿಸಲು ನೀನು ಸಮರ್ಥನಿದ್ದಿ. ಅದಕ್ಕಾಗಿಯೇ ನಿನ್ನ ಪರೀಕ್ಷೆ ನಡೆಸಿದೆ. ಇನ್ನೇಳು ದಿನಗಳಲ್ಲಿ ಪ್ರಳಯ ಸಂಭವಿಸಲಿದೆ. ಜಗತ್ತಿನ ಸಮಸ್ತ ಪ್ರಭೇದಗಳೂ ಜಲಾಧಿವಾಸವಾಗಲಿದೆ. ನೀನು ನೌಕೆಗಳನ್ನು ನಿರ್ಮಿಸಿ ಸಕಲ ಪ್ರಬೇಧಗಳ ಬೀಜಗಳನ್ನು, ಮೊಳಕೆಗಳನ್ನು ನಿನ್ನ ಪ್ರಯೋಗಾಲಯದಲ್ಲಿಟ್ಟು ರಕ್ಷಿಸಬೇಕು. ನಿನ್ನಲ್ಲಿ ತಾರತಮ್ಯದ ಗುಣಗಳಿಲ್ಲದಿರುವುದರಿಂದಲೇ ನಿನ್ನನ್ನು ನಾನು ಆಯ್ಕೆ ಮಾಡಿದೆ. ನೀನು ರಕ್ಷಿಸಿದ ಪ್ರಬೇಧಗಳನ್ನು ಮುಂದೆ ಋಷಿಗಳು(scientist) ವೃದ್ಧಿ(develop) ಮಾಡಲಿದ್ದಾರೆ. ನಿನ್ನ ಕಾರ್ಯ ಯಶಸ್ವಿಯಾಗಲಿ. ಮುಂದಿನ ಮನ್ವಂತರಾಧಿಪ ನೀನೇ ಆಗು. ನಿನ್ನ ಹೆಸರು ವೈವಸ್ವತ ಎಂದು ಕೀರ್ತಿಗಳಿಸಲಿ’ ಎಂದು ಆ ಮೀನು ಅಂತರ್ಧಾನವಾಯ್ತು. ಅದುವೇ ಮತ್ಸ್ಯಾವತಾರ.
ಮುಂದೆ ವಿಷ್ಣುವಿನ ಮಾತಿನಂತೆ ಮಹಾಪ್ರಳಯವಾಗುತ್ತದೆ. ವಿಷ್ಣು ದೇವರು ಹೇಳಿದಂತೆ ಚಾಚೂ ತಪ್ಪದೆ ಮತ್ತೆ ಜಗದ ಸೃಷ್ಟಿಯಲ್ಲಿ ತನ್ನ ನಿಷ್ಟೆಯನ್ನು ತೋರಿದ ಈ ವಿವಸ್ವಂತ ಮಹಾರಾಜ. ಸೃಷ್ಟಿಸಿದರೆ ಮಾತ್ರ ಸಾಲದು. ಅದಕ್ಕೊಂದು ನಿಯಮವೂ ಬೇಕು. ಆ ನಿಯಮವೇ ಆಗಿನ ಮನುಸ್ಮೃತಿ. ಅಂದರೆ ಈಗ ಹೇಳುವ ಸಂವಿಧಾನ. ಈಗ ನಡೆಯುವುದೇ ವೈವಸ್ವತ ಮನ್ವಂತರ. ಇಂತಹ ಫಲಾಪೇಕ್ಷೆ ಇಲ್ಲದ, ಪರಮ ದಯಾಳುವಾದ ಬೇಧಭಾವಗಳಿಲ್ಲ ಈ ಮನ್ವಂತರಾಧಿಪ ವೈವಸ್ವತನಿಗೆ ಕೃತಜ್ಞತೆ ಸಲ್ಲಿಸಬೇಕಾದದ್ದು ನಮ್ಮೆಲ್ಲರ ನೀತಿಯಾಗುತ್ತದೆ.
Discussion about this post