ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಳುವರ ಮುಂಬೈ ವಲಸೆಗೆ ಸುಮಾರು ಎರಡು ಶತಮಾನಗಳ ಸುದೀರ್ಘ ಇತಿಹಾಸವಿದೆ. ಇಲ್ಲಿ ತುಳುವರು ಎಂದರೆ ದಕ್ಷಿಣದ ನೀಲೇಶ್ವರದಿಂದ ಉತ್ತರದ ಬೈಂದೂರಿನವರೆಗೆ ವ್ಯಾಪಿಸಿರುವ ವಿಶಾಲ ಪ್ರದೇಶದಲ್ಲಿ ವಾಸಿಸುವವರು ಎಂದು ಅರ್ಥೈಸಿಕೊಳ್ಳಬೇಕು. ಮಂಗಳೂರು, ಮಲ್ಪೆ, ಬಂದರುಗಳಿಂದ ಹಡಗಿನಲ್ಲಿ ಮುಂಬೈಗೆ ಬಂದ ಮೊದಲಿಗರು ಸಾಹಸಿಗಳಾದ ಮೊಗವೀರ ಬಂಧುಗಳು.
ಅನಂತರ ಅವರ ಮೂಲಕ ಅಥವಾ ಅವರನ್ನು ಅನುಸರಿಸಿ ಇತರ ಸಮುದಾಯದವರು ಮುಂಬೈಗೆ ವಲಸೆ ಬರತೊಡಗಿದರು. ಮೊಗವೀರರ ನಂತರ ಬಂದ ಗೌಡ ಸಾರಸ್ವತರು, ಬಂಟರು, ಬಿಲ್ಲವರು ಹಾಗೂ ಇನ್ನಿತರರು ಮುಂಬೈಯಲ್ಲಿ ಹೋಟೆಲು ಉದ್ಯಮಲ್ಲಿ ತೊಡಗಿಕೊಂಡರು. ದಕ್ಷಿಣ ಭಾರತೀಯ ಖಾದ್ಯಗಳಾದ ಉದ್ದಿನ (ಮೆಂದು) ವಡೆ, ಇಡ್ಲಿ ಸಾಂಬಾರ್, ದೋಸೆ, ಮಸಾಲೆ ದೋಸೆ, ಉತ್ತಪ್ಪ, ಮುಂತಾದ ಉಪಹಾರಗಳು, ರೈಸ್ ಪ್ಲೇಟ್ ಎನ್ನುವ ಊಟದ ಬಟ್ಟಲು (ತಾಲಿ)ಗಳು ಮುಖ್ಯವಾಗಿ ನಮ್ಮವರ ಹೋಟೆಲು ಉತ್ಪನ್ನಗಳಾಗಿದ್ದವು.
ಉಡುಪಿ ಹೋಟೆಲುಗಳ ಈ ಮಾದರಿಯ ಆಹಾರ ದೇಶದ ಮೂಲೆ ಮೂಲೆಗಳಿಂದ ಉದರ ಪೋಷಣೆಗಾಗಿ ಮುಂಬೈಗೆ ಬಂದಿದ್ದ, ಬರುತ್ತಿರುವ ವಲಸಿಗರಿಗೆ ರುಚಿಸಿತು. ಮುಂಬೈಗೆ ವಲಸಿಗರ ಸಂಖ್ಯೆ ಹೆಚ್ಚುತ್ತ ಹೋದಂತೆ ಉಪನಗರಗಳಲ್ಲಿ ಹೋಟೆಲ್ ಉದ್ಯಮದ ವಿಸ್ತರಣೆಯಾಯಿತು. ನಂಬಿಕಸ್ಥ ಹಾಗೂ ಪರಿಶ್ರಮಿ ಕೆಲಸದವರ ಅವಶ್ಯಕತೆ, ಪರೋಪಕಾರ, ಊರಿನಲ್ಲಿನ ಬಡತನ, ಶಿಕ್ಷಣ, ನಿರುದ್ಯೋಗ ಸಮಸ್ಯೆ ಮುಂತಾದ ಕಾರಣಗಳಿಂದ ವಲಸೆ ತೀವ್ರಗತಿಯಲ್ಲಾಯಿತು. ಭೂಸುಧಾರಣಾ ಕಾಯ್ದೆಯ ಕಾಲಘಟ್ಟದಲ್ಲಿ ವಲಸೆ ವೇಗೋತ್ಕರ್ಷವನ್ನು ಪಡೆಯಿತು. ವಲಸೆ ಹೆಚ್ಚಿದಂತೆ ತುಳುವರು ಮುಂಬೈಯ ನೆರೆಯ ಥಾಣೆ, ನವಿಮುಂಬೈ, ರಾಯ್ಘಡ್ ಜಿಲ್ಲೆಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು.
ಕಾಲ ಬದಲಾದಂತೆ, ಗಿರಾಕಿಗಳು ಮತ್ತು ಗಿರಾಕಿಗಳ ಅಭಿರುಚಿ ಬದಲಾದಂತೆ ಉಡುಪಿ ಹೋಟೆಲುಗಳು ಹಲವು ಸ್ತರಗಳ ಪಂಜಾಬಿ ಶೈಲಿ, ಬಿಯರ್ ಬಾರ್, ತಾರಾ ಹೋಟೇಲುಗಳಾಗಿ ಮಾರ್ಪಾಡು ಹೊಂದಿವೆ ಬೃಹತ್, ಮಧ್ಯಮ ಹಾಗೂ ಸಣ್ಣ ಪುಟ್ಟ ಕಂಪನಿಗಳ ಕ್ಯಾಂಟೀನ್ ವ್ಯವಹಾರಗಳೂ ಹೋಟೆಲು ಉದ್ಯಮದ ಒಂದು ಭಾಗವಾಗಿದೆ. ಗುರಿ ಮುಟ್ಟುವ ತನಕ ವಿಶ್ರಮಿಸದ, ಕಠಿಣ ಪರಿಶ್ರಮ, ನಾಯಕತ್ವ, ಶುಚಿ ರುಚಿ, ನೈರ್ಮಲ್ಯ, ಒಳಾಂಗಣ ಅಲಂಕಾರ, ವ್ಯವಹಾರಿಕ ಚತುರತೆ, ನಿರ್ಭಯತೆ ಮುಂತಾದ ಗುಣಗಳಿಂದ ತುಳುನಾಡಿನ ಹೋಟೆಲಿಗರು ’ಅಣ್ಣ’ ಎಂಬ ಅಭಿವಾದನಕ್ಕೆ ಪಾತ್ರರಾಗಿದ್ದಾರೆ.
ಮುಂಬೈಯಂಥ ಮಹಾನಗರಗಳ ಯಶಸ್ವೀ ಉದ್ಯಮಗಳಲ್ಲಿ ಹೋಟೆಲ್ ಉದ್ಯಮವೂ ಒಂದು. (ಪುಣೆ, ನಾಸಿಕ್, ಔರಂಗಾಬಾದ್ ಮುಂತಾದ ಜಿಲ್ಲೆಗಳ ಹೋಟೆಲು ಉದ್ಯಮವನ್ನೂ ಸೇರಿಸಿಕೊಂಡು) ಆದರೆ ಕೆಲವೊಮ್ಮೆ ಹೊರಗೆ ಕಾಣುವ ಕಥೆ ಬೇರೆ, ಒಳಗಿನ ವ್ಯಥೆಯೇ ಬೇರೆಯಾಗಿರುತ್ತದೆ. ಲೈಸೆನ್ಸ್ ರಾಜ್ ಎಂಬ ಕಪಿ ಮುಷ್ಠಿಯ ಕಾನೂನುಗಳು, ಹಲವಾರು ಅನುಮತಿ ಹಾಗೂ ನಿರಪೇಕ್ಷಣಾ ಪತ್ರಗಳು ಇತ್ಯಾದಿಗಳ ಒಳ ಸುಳಿಗಳೂ ಇವೆ.
ಒಂದು ಕಾಲದಲ್ಲಿ ರಾಜಕೀಯವಾಗಿ ಬಲಿತಿರದ ಶಿವಸೇನೆ ತುಳು ಕನ್ನಡಿಗರ ಹೋಟೆಲುಗಳಿಗೆ ಮುತ್ತಿಗೆ ಹಾಕಿ ಲೂಟಿ ಮಾಡಿದ ದಿನಗಳೂ ಇವೆ. ಬಹಳ ಸಮಯ ಭೂಗತ ದೊರೆಗಳ ಕಬಂಧ ಬಾಹುಗಳಿಗೆ ಸಿಕ್ಕಿ ನಲುಗಿದ ದಿನಗಳೂ ಇದ್ದವು. ಸ್ಥಳೀಯ ಗೂಂಡಾಗಳು, ರಾಜಕೀಯ ಪುಢಾರಿಗಳು, ಭ್ರಷ್ಟ ಅಧಿಕಾರಿಗಳ ಕಾಟಗಳೂ ಹೋಟೆಲು ಉದ್ಯಮವನ್ನು ಕಾಡುವುದೂ ಉಂಟು. ಜಾಗತೀಕರಣದಿಂದಾಗಿ ’ಮೆಕ್-ಡೊನಾಲ್ಡ್’, ’ಬರ್ಗರ-ಕಿಂಗ್’, ’ಕೆಎಫ್’ಸಿ’, ’ಡಾಮಿನೋಜ್’, ’ಪಿಜ್ಜಾಹಟ್’, ’ಒವೆನ್-ಸ್ಟೋರಿ’ ’ಜಂಬೋ-ಕಿಂಗ್’, ಮುಂತಾದ ಬಹುರಾಷ್ಟ್ರೀಯ ಆಹಾರ ಸಂಸ್ಥೆಗಳೂ ಲಗ್ಗೆಯಿಟ್ಟು ಅಲ್ಪಮಟ್ಟಿನ (ತಾತ್ಕಾಲಿಕ) ತೊಂದರೆಯನ್ನೂ ನೀಡುತ್ತಿವೆ. ’ಜೊಮ್ಯಾಟೋ’, ’ಸ್ವಿಗ್ಗಿ’ ಮುಂತಾದ ಸಂಸ್ಥೆಗಳು ’ಉಚಿತ ಮನೆಗೆ ವಿತರಣೆ’ ಮಾಡುವುದರಿಂದ ಪೈಪೋಟಿಯಂತೂ ಇರುವುದು ಸತ್ಯವೇ ಆಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈ ಹೋಟೆಲ್ ಉದ್ಯಮದ ಭವಿತವ್ಯ ಭಯಾನಕವಾಗಲಿದೆಯೇ? ಎಂಬ ಪ್ರಶ್ನೆಗೆ ಹಿರಿಯ ಉದ್ಯಮಿಗಳು, ಹೋಟೆಲ್ ಕಾರ್ಮಿಕರು, ಹೋಟೆಲ್ ಬಳಕೆದಾರರು, ವ್ಯವಹಾರ ತಜ್ಞರು ಹೌದು, ನಿಜ ಎಂಬ ಉತ್ತರಗಳನ್ನು ನೀಡುತ್ತಲ್ಲಿದ್ದಾರೆ. ಭಾರತ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರ ಮಾರ್ಚ್ ಮೂರನೇ ವಾರದಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ನಿಂತ ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದಾಗಲೇ ಹೋಟೆಲಿಗರು ಬಹಳ ದೊಡ್ಡ ಮೊತ್ತದ ನಷ್ಟವನ್ನು ಅನುಭವಿಸಿದರು. ತಾರಾ ಮತ್ತು ಮಧ್ಯಮ ಮಟ್ಟದ ಹೋಟೆಲಿಗರು ಶೇಖರಿಸಿಟ್ಟಿದ್ದ ದೊಡ್ಡ ಪ್ರಮಾಣದ ಖಚ್ಚಾ ವಸ್ತುಗಳು ಹಾಳಾದವು. ಅವುಗಳಲ್ಲಿ ದುಬಾರಿಯಾಗಿರುವ ಪನ್ನೀರ್, ಆಡಿನ ಮಾಂಸ, ಕೋಳಿ ಮಾಂಸ, ಸಮುದ್ರ ಉತ್ಪನ್ನಗಳು, ನೀರುಳ್ಳಿ, ಬೆಳ್ಳುಳ್ಳಿ, ತರಕಾರಿಗಳು, ಬಿಯರ್, ತಂಪು ಪಾನೀಯ, ಹಾಲು ಇತ್ಯಾದಿ ಇತ್ಯಾದಿಗಳು. ಶೇಖರಣೆಯ ಅನುಪಾತ ಆಯಾ ಹೋಟೆಲಿನ ವ್ಯಾಪಾರ ಮತ್ತು ಶೇಖರಣೆಯ ಜಾಗದ ವ್ಯಾಪ್ತಿಯನ್ನು ಹೊಂದಿರಬಹುದು. ಆ ಪ್ರಕಾರದಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಬಹುದು.
ಲಾಕ್ ಡೌನ್ ಆರಂಭವಾದ್ದಂದಿನಿಂದ ಹೊಟೇಲಿಗರು ದಿನವೊಂದಕ್ಕೆ ಹಲವು ಸಾವಿರಗಳಿಂದ ಲಕ್ಷಗಟ್ಟಲೆ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದಾರೆ. ಕಾರ್ಮಿಕರ ಸಂಬಳ, ಊಟ, ವಸತಿ, ಔಷದೋಪಚಾರ, ನೀರು, ವಿದ್ಯುತ್ ಶುಲ್ಕ, ಸಾಲದ ಕಂತುಗಳು, ಬಡ್ಡಿ, ಲೈಸೆನ್ಸ್ ಶುಲ್ಕ, ಬಾಡಿಗೆ ಇತ್ಯಾದಿಗಳು ಲಾಕ್ ಡೌನಲ್ಲಿ ನಿಂತಿಲ್ಲ. ಅವುಗಳು ರಾಕೆಟ್ ವೇಗದಲ್ಲಿ ತಿರುಗುತಿವೆ. ಕಾರ್ಮಿಕರು ಮೈಮನಗಳಿಗೆ ಕೆಲಸವಿಲ್ಲದೆ ನಲುಗಿದ್ದಾರೆ. ಕೆಲವರು ಊರಿನ ಹಾದಿ ಹಿಡಿದಿದ್ದಾರೆ. ಉಳಿದವರನ್ನು ಉಳಿಸಿಕೊಂಡರೂ ಉಪಯೋಗವಿಲ್ಲ. ಏಕೆಂದರೆ ಲಾಕ್ ಡೌನ್ ಈಗಾಗಲೇ ನಾಲ್ಕು ಬಾರಿ ವಿಸ್ತರಿಸಲ್ಪಟ್ಟಿದೆ. ಮಹಾರಾಷ್ಟ್ರ ಹಾಗೂ ಮುಂಬೈಯಲ್ಲಿ ಕೋರೋನ ರೋಗಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತಿದೆ. ಬೇಗನೆ ಹೋಟೆಲು ಪುನರಾರಂಭಗೊಳ್ಳುವ ಸೂಚನೆ ಕಂಡು ಬರುತ್ತಿಲ್ಲ. ಪುನರಾರಂಭಗೊಂಡರೂ ಸರಕಾರ ಯಾವ ತೆರನಾದ ನಿಯಮಗಳನ್ನು ಜಾರಿಗೊಳಿಸಬಹುದು ಎಂದು ಊಹಿಸುವುದೂ ಕಷ್ಟ. ಹಾಗಿರುವಾಗ ಮೇಲೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಹೋಟೆಲ್ ಉದ್ಯಮದ ಭವಿಷ್ಯ ಪ್ರಕಾಶಮಾನವಾಗಿ ಇಲ್ಲ ಎಂಬುದು ವೇದ್ಯವಾಗುತ್ತದೆ.
ತಜ್ಞರ ಸಲಹೆಗಳು
ಮಹಾನಗರಗಳಲ್ಲಿ ಹೋಟೆಲ್ ಉದ್ಯಮ ಪುನರಾರಂಭಗೊಂಡಾಗ ಮಾಲಕರು ಐವತ್ತು ಪ್ರತಿಶತ ಕಾರ್ಮಿಕರಿಂದ ಕಾರ್ಯನಿರ್ವಹಿಸಬೇಕು. ಮಾರುಕಟ್ಟೆಯ ವ್ಯವಹಾರಗಳನ್ನು ಮಾಲಕರು ಸ್ವತಃ ಮಾಡುವುದು ಅತ್ಯಂತ ಅಗತ್ಯ. ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚುವರಿ ವೆಚ್ಚ ವನ್ನು ಸಂಪೂರ್ಣ ನಿಲ್ಲಿಸಬೇಕು. ಪ್ರತಿಯೊಂದರಲ್ಲೂ ವೆಚ್ಚ ಕಡಿತ ಮಾಡುವುದು ಅನಿವಾರ್ಯ ಆಗಬೇಕು. ಅನಿಲ ಇಂಧನ, ವಿದ್ಯುತ್ ಮೀಟರ್, ಮಾರಾಟದ ಲೆಕ್ಕವನ್ನು ಮಾಲಕರು ಸ್ವತಃ ಪರಿಶೀಲಿಸುವ ಅಗತ್ಯವಿದೆ. ಈ ಎಲ್ಲ ಮುನ್ನೆಚ್ಚರಿಕೆ ವಹಿಸಿಕೊಂಡು ವ್ಯಾಪಾರ ಮಾಡಿದರೂ ಆಗಿರುವ ನಷ್ಟವನ್ನು ಸರಿದೂಗಿಸಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾದಿತು.
ತುಳುನಾಡಿನಲ್ಲಿ ಪ್ರತಿಫಲನ
ಹಿಂದಿನಿಂದಲೂ ತುಳುನಾಡನ್ನು ಪೋಷಿಸುತ್ತ ಬಂದಿರುವುದು ಮುಂಬೈ ಹೋಟೆಲ್ ಉದ್ಯಮ. ಹೋಟೆಲಿಗರು ತಮ್ಮ ಮನೆ, ಮನೆತನವನ್ನು ಸಲಹುವುತ್ತ ಬಂದಿದ್ದಾರೆ. ಊರು, ಗ್ರಾಮ, ಮಾಗಣೆಯ ದೈವ – ದೇವರ ಗುಡಿ ಗೋಪುರಗಳ ಜೀರ್ಣೋದ್ಧಾರ, ಬಹ್ಮಕಳಶ, ಬ್ರಹ್ಮಮಂಡಲ, ನಾಗಮಂಡಲ, ಸಮುದಾಯ ಭವನ, ವಾರ್ಷಿಕೋತ್ಸವ, ರಾಜಕೀಯ ಪುಢಾರಿಗಳಿಗೆ ನೆರವು ಇತ್ಯಾದಿಗಳಿಗೆ ನೇರವಾಗಿ ಮುಂಬೈ ಹೋಟೆಲು ಉದ್ಯಮ ಕಾರಣವಾಗಿತ್ತು. ಈಗ ಇಲ್ಲಿಯ ಪರಿಸ್ಥಿತಿ ಹೀಗಾಗಿರುವಾಗ ತುಳುನಾಡಿನ ಆರ್ಥಿಕ ಪರಿಸ್ಥಿತಿ ಕನಿಷ್ಠ ಮೂರು ವರ್ಷಗಳಷ್ಟು ಹಿಂದೆ ಸರಿಯಿತು. ಮುಂಬೈಯ ಜಣ ಜಣ ಕಾಂಚನ ಊರಿಗಿಳಿಯದೇ ನಾಗಮಂಡಲ, ಬ್ರಹ್ಮಕಲಶ, ನವೀಕರಣ, ನೇಮ ಕೋಲ, ಅಂಕ ಆಯನಗಳೂ ಸೊರಗಬಹುದು ಅಥವಾ ನಿಲ್ಲಬಹುದು. ಊರಿನಲ್ಲಿ ಎಪ್ರಿಲ್’ನಿಂದ ಜೂನ್’ತನಕ ಮುಂಬೈಗರಿಂದ ನಡೆಯುತ್ತಿದ್ದ ವ್ಯಾಪಾರ ವ್ಯವಹಾರ ನೆಲಕಚ್ಚಬಹುದು. ನಿಶ್ಚಯ, ಮೇಹಂದಿ, ಸಂಗೀತ, ಮದುವೆ, ಆರತಕ್ಷತೆಗಳು ಕಳೆಗುಂದಿ (ಪೇಲವವಾಗಿ) ಸರಳವಾಗಿ ನಡೆಯಬಹುದು.
Get in Touch With Us info@kalpa.news Whatsapp: 9481252093
Discussion about this post