ಎಲ್ಲರಿಗೂ 5ನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಷಯಗಳು. ಮತ್ತೊಮ್ಮೆ ನಾವೆಲ್ಲರೂ ಯೋಗ ಸಂಭ್ರಮದ ಹೊಸ್ತಿಲಲ್ಲಿದ್ದೇವೆ. ಯೋಗದ ಸಾರ, ಮಹತ್ವ ಪ್ರಯೋಜನಗಳನ್ನು ಬದುಕಿನಲ್ಲಿ ಅಳವಡಿಸಿ ಔನ್ಯತ್ಯಕ್ಕೇರಲು ಇದೊಂದು ಸುಸಂದರ್ಭ.
ಯೋಗವು ದೇಹ-ಮನಸ್ಥಿತಿಯನ್ನು ಸುಸ್ಥಿಯಲ್ಲಿಟ್ಟು ಚಿಂತನೆ ಮತ್ತು ಕಾರ್ಯವನ್ನು, ನಿರ್ಬಂಧ ಮತ್ತು ಸಫಲತೆಯನ್ನು, ಮನುಷ್ಯ ಮತ್ತು ಪ್ರಕೃತಿಯೊಂದಿಗಿನ ಹೊಂದಿಕೆಯನ್ನು ಒಟ್ಟಾಗಿರಿಸುವುದನ್ನು ಒಳಗೊಂಡಿರುತ್ತದೆ.
ಯೋಗ ಬರೀ ದೈಹಿಕ ವ್ಯಾಯಾಮವಲ್ಲ, ಇದು ನಮ್ಮೊಳಗೆ ಪ್ರಪಂಚ ಮತ್ತು ಪ್ರಕೃತಿಯೊಡನೆ ಹೊಂದಾಣಿಕೆಯ ಭಾವವನ್ನು ಪ್ರತಿನಿಧಿಸುತ್ತದೆ.
ಜೀವನಶೈಲಿಯನ್ನು ಬದಲಿಸಿ ಜಾಗೃತ ಪ್ರಜ್ಞೆ ಸೃಷ್ಠಿಸುತ್ತದೆ. ಜೀವನ ಶೈಲಿಯನ್ನು ಬದಲಿಸುವುದರ ಮೂಲಕ ನಮ್ಮ ಅಂತಃ ಪ್ರಜ್ಞೆಯನ್ನು ಜಾಗೃತಗೊಳಿಸಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಸಹಾಯವಾಗುತ್ತದೆ ಎಂದು 5 ವರ್ಷದ ಹಿಂದೆಯೇ ಆಧರಣೀಯ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಯೋಗದೊಂದಿಗೆ ಥಳಕು ಹಾಕಿಕೊಂಡಿರುವ, ವ್ಯಾಪಾರೀಕರಣ, ಹಣ, ಪ್ರತಿಷ್ಠೆಗಳಿಸುವ ಮಾರ್ಗಗಳೆಲ್ಲಾ ಕಣ್ಣಿಗೆ ರಾಚುತ್ತಿದ್ದರೂ ಯೋಗ ದಿನದ ಉದ್ದೇಶ ಉತ್ತಮ ಆರೋಗ್ಯ ಹೊಂದುವುದೇ ಆಗಿದೆ.
ಈ ಬಾರಿಯ ಘೋಷವಾಕ್ಯ ‘‘ಹವಾಮಾನ ಕ್ರಮಕ್ಕಾಗಿ ಯೋಗ’’ ಎನ್ನುವುದು. ಇಂದು ಆಧುನೀಕರಣ, ಕೈಗಾರೀಕರಣಗಳಿಂದ ಪರಿಸರ ನಾಶ ಹೆಚ್ಚುತ್ತಿದ್ದು ಮನುಷ್ಯ ಸಂಕಷ್ಟದಲ್ಲಿದ್ದಾನೆ. ಹವಾಮಾನದ ವೈಪರೀತ್ಯಗಳು ಮನುಜಕುಲವನ್ನು ವಿನಾಶಕ್ಕೆ ತಳ್ಳುತ್ತಿವೆ. ಆದ್ದರಿಂದ ಯೋಗದ ಮುಖೇನ, ಯೌಗಿಕ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ ಶರೀರ, ಮನಸ್ಸನ್ನು ಹದಗೊಳಿಸಿ ಇಂದು ಮನುಷ್ಯ ಪ್ರಕೃತಿಯನ್ನು ಗೌರವಿಸುತ್ತಾ ಪ್ರಕೃತಿಯೊಡನೆ ಸಹಜೀವನ ನಡೆಸಲು ಮುಂದಾಗಬೇಕಾಗಿದೆ ಎನ್ನುವುದೇ ಆಗಿದೆ.
ಇಂದಿನ ಒತ್ತಡದ ಜೀವನದಲ್ಲಿ ಜನರು ತಮ್ಮ ಅಜ್ಞಾನದ ಅಂಧಕಾರದಿಂದ ಇರುಳು ಕಂಡ ಭಾವಿಗೆ ಹಗಲು ಬೀಳುವ ಜೀವನಶೈಲಿಯನ್ನು ಅನುಸರಿಸುವುದರ ಜೊತೆಗೆ ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾ ಪರಿಸರವನ್ನು ಕೆಡಿಸುತ್ತಾ ಹವಾಮಾನ ವೈಪರಿತ್ಯವನ್ನು ಉಂಟುಮಾಡುತ್ತಿರುವುದು ಸರ್ವ ವೇದ್ಯ.
ತಂಪಾದ ಮಲೆನಾಡಿನಲ್ಲೂ ಎಲ್ಲೆಡೆ ಈಗ ಬಿರುಬಿಸಿಲು, ನೀರಿಗಾಗಿ ಹಾಹಾಕಾರ, ಕಲುಶಿತಗೊಳ್ಳುತ್ತಿರುವ ಆಹಾರ ಪದಾರ್ಥಗಳು, ಹೆಚ್ಚುತ್ತಿರುವ ಜಂಕ್‌ಫುಡ್ ಸೇವನೆ, ವಿಶ್ವದಾದ್ಯಂತ ಹೆಚ್ಚುತ್ತಿರುವ ಪ್ರಕೃತಿ ವಿಕೋಪಗಳು, ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಎಗ್ಗಿಲ್ಲದೆ ಬಳಸಲ್ಪಡುತ್ತಿರುವ ರಾಸಾಯನಿಕಗಳು ಎಲ್ಲವೂ ಮನುಷ್ಯನ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದಲ್ಲದೆ ಭೂಮಿಯನ್ನು ಕೂಡ ವಾಸಿಸಲು ಆಯೋಗ್ಯವಾಗಿಸುತ್ತಿದೆ.
ಪ್ಲಾಸ್ಟಿಕ್ ಎಂಬ ಮೋಹಿನಿಯ ಹಿಂದೆ ಭಸ್ಮಾಸುರರ ಹಾಗೆ ಸುತ್ತುತ್ತಿರುವ ನಮಗೆ ಇಂದು ಪ್ಲಾಸ್ಟಿಕನ್ನು ಸುಟ್ಟರೆ ಡಯಾಕ್ಸಿನ್ ಎನ್ನುವ ಕ್ಯಾನ್ಸರ್’ಕಾರಕ ವಿಷವಸ್ತುವು ಉತ್ಪಾದನೆಯಾಗುವುದರ ಬಗ್ಗೆ ಯಾವುದೇ ರೀತಿಯ ಅರಿವಿಲ್ಲ. ಅತಿಯಾದ ಬಿಸಿವಸ್ತುಗಳನ್ನು, ಅತಿ ಹುಳಿ, ಉಪ್ಪು, ಖಾರದ ವಸ್ತುಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಸಂಗ್ರಹಿಸಿ, ಬಳಸಿದಾಗ ಬಿಸ್ಪಿನಾಲ್ ಮತ್ತು ಥ್ಯಾಲೇಟ್ ಅನ್ನುವ ವಿಷವಸ್ತುಗಳು ನಮ್ಮ ಶರೀರವನ್ನು ಸೇರುತ್ತಿರುವುದರ ಬಗ್ಗೆ ಪರಿಜ್ಞಾನವಿಲ್ಲದೆ ಪ್ಲಾಸ್ಟಿಕನ್ನು ನಾವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡುಬಿಟ್ಟಿದ್ದೇವೆ. ಸರ್ರಂತ ಹೋಗಿ ಬರ್ರಂತ ತಂದು ಬಳಸಿ ಬಿಸಾಕುವ ಸಂಸ್ಕೃತಿ ನಮಗೆ ಕರಗತವಾಗಿದೆ. ಇದರಿಂದಾಗಿ ನೆಲ-ಜಲ-ವಾಯು ಮಾಲಿನ್ಯದಿಂದ ಕಂಗೆಡುತ್ತಿದ್ದೇವೆ. ಮನುಷ್ಯನ ಜೀವನಕ್ಕೆ ಮೂರು ಮುಖ್ಯ ಆಧಾರಗಳಾದ ಶುದ್ಧ ಗಾಳಿ, ನೀರು, ಆಹಾರ ದೊರಕುವುದು ಕಷ್ಟವಾಗಿದೆ. ಜೊತೆಗೆ ತಪ್ಪು ಜೀವನಶೈಲಿಯಿಂದ ಜೀವನಶೈಲಿ ಸಂಬಂಧವಾದ ಮಧುಮೇಹ, ಹೃದ್ರೋಗ, ಏರುರಕ್ತದೊತ್ತಡ, ಕ್ಯಾನ್ಸರ್, ಬೊಜ್ಜು, ಅಸ್ತಮ ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯಲು ಹೆಣಗಾಡುತ್ತಾ ಮನುಷ್ಯನ ಆರೋಗ್ಯ ಸುಧಾರಿಸುವ ಹೊತ್ತಿಗೆ ಆರ್ಥಿಕ ಸಂಕಷ್ಟಕ್ಕೂ ನೂಕಲ್ಪಡುತ್ತಿದ್ದಾನೆ.
ಹಾಗಾದರೆ ಇದಕ್ಕೆಲ್ಲಾ ಯೋಗ ಉತ್ತರವಾಗಬಲ್ಲುದೆ? ಯೋಗದಿಂದೇನು ಮಳೆ, ಬೆಳೆ ಬರುತ್ತದೆಯೇ? ಹವಾಮಾನ ತಂಪಾಗಬಹುದೇ? ಎಂದರೆ ಉತ್ತರ ಹೌದು ಎಂದಾಗಿದೆ. ಯಾಕೆಂದರೆ ಇಂದು ಪರಿಸರ ಮಾಲಿನ್ಯವಾಗುತ್ತಿರುವುದು, ಸ್ವಚ್ಛತಾ ಆಂದೋಲನ ಹಾಗೂ ಇನ್ನಿತರ ಜನಪರ ಕಾರ್ಯಕ್ರಮಗಳು ಸಂಪೂರ್ಣ ಅನುಷ್ಠಾನಗೊಂಡು ಫಲಪ್ರದವಾಗದೇ ಇರುವುದಕ್ಕೆ ಕಾರಣ ಮನುಷ್ಯನ ಇಚ್ಛಾಶಕ್ತಿ ಹಾಗೂ ದೃಢಸಂಕಲ್ಪಗಳ ಕೊರತೆ. ಇದರಿಂದಲೇ ಹೆಚ್ಚು ಹೆಚ್ಚು ಪ್ರಜ್ಞಾಪರಾಧಗಳು ಆಗುತ್ತಿರುವುದು. ಯೋಗವು ಇದಕ್ಕೆಲ್ಲಾ ಹೇಗೆ ಉತ್ತರವನ್ನು ನೀಡುತ್ತದೆ ಎಂದು ತಿಳಿದುಕೊಳ್ಳುವ ಮೊದಲು ನಮ್ಮ ಶರೀರವನ್ನು ನಾವು ಯೌಗಿಕ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ನಮ್ಮ ಶರೀರವು ಕೇವಲ ಹೊರಗೆ ಕಾಣುವ ಭೌದ್ಧಿಕ ಶರೀರವಷ್ಟೇ ಅಲ್ಲಾ, ಅದು ಪಂಚಗೋಶಗಳಿಂದಾಗಿದೆ ಎಂಬುದನ್ನು ಅರಿಯಬೇಕು. ಅವುಗಳೆಂದರೆ…
ಅನ್ನಮಯಕೋಶ:
ಪಂಚಭೂತಾತ್ಮಕ (ಆಕಾಶ, ಅಗ್ನಿ, ವಾಯು, ನೀರು, ಭೂಮಿ), ಸಪ್ತಧಾತಾತ್ಮಕ – (ರಸ, ರಕ್ತ, ಮಾಂಸ, ಮೇದ, ಅಸ್ತಿ, ಮಜ್ಜೆ, ವೀರ್ಯ), ತ್ರಿದೋಷಾತ್ಮಕ (ವಾತ, ಪಿತ್ತ, ಕಫ) ಶರೀರವೇ ಅನ್ನಮಯಕೋಶ.
ಪ್ರಾಣಮಯಕೋಶ:
ಪಂಚಪ್ರಾಣಗಳು (ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ) ಹಾಗೂ ಪಂಚ ಉಪಪ್ರಾಣಗಳನ್ನೊಳಗೊಂಡಿದೆ.
ಮನೋಮಯಕೋಶ:
ಸೂಕ್ಷ್ಮಶರೀರದ ಮೊದಲ ಕಾರ್ಯಪ್ರಧಾನ ಭಾಗ. ಮನಸ್ಸು ಅಹಂಕಾರ ಮತ್ತು ಕರ್ಮೇಂದ್ರಿಯಗಳು (ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು) ವಾಣಿ, ಪಾಣಿ (ಕೈ), ಪಾದ (ಕಾಲು), ಪಾಯು (ಗುದಧ್ವಾರ) ಮತ್ತು ಉಪಸ್ಥ (ಮೂತ್ರೇಂದ್ರಿಯ) ಈ ಏಳು ತತ್ವದ ಸಮುದಾಯ ಮನೋಮಯಕೋಶ.
ವಿಜ್ಞಾನಮಯಕೋಶ:
ಸೂಕ್ಷ್ಮಶರೀರದ ಎರಡನೆಯಭಾಗ. ಜ್ಞಾನಪ್ರಧಾನವಾದದ್ದು ಬುದ್ದಿ, ಚಿತ್ತ ಹಾಗೂ 5 ಜ್ಞಾನೇಂದ್ರಿಯಗಳು (ಶಬ್ದ, ಸ್ಪರ್ಷ, ರೂಪ, ರಸ, ಗಂಧ)
ಆನಂದಮಯಕೋಶ:
ಇದು ಆಂತರಿಕ ಜಗತ್ತಿನೊಡನೆ ಸಂಬಂಧ ಹೊಂದಿದೆ. ಕೊನೆಯದಾಗಿ ಜ್ಯೋತಿರ್ಮಯವಾದ, ತೇಜೋಮಯವಾದ, ಶಾಂತಿಮಯವಾದ, ಆತ್ಮದ ಅನುಭವವಾಗುತ್ತದೆ.
ಪಂಚಕೋಶಗಳು ಅಂದರೆ ಭೌತಿಕ ಶರೀರವಾದ ಅನ್ನಮಯ ಕೋಶವನ್ನು ಸರಿಯಾದ ಆಹಾರ ಪದ್ಧತಿ ಹಾಗೂ ಪಥ್ಯೋಪಚಾರ ಮತ್ತು ಸೂಕ್ತ ಆಸನಗಳಿಂದಲೂ, ಪ್ರಾಣಮಯ ಕೋಶವನ್ನು ಪ್ರಾಣಾಯಾಮದಿಂದಲೂ, ಮನೋಮಯ ಕೋಶವನ್ನು ಜ್ಞಾನ, ಧ್ಯಾನ, ಭಕ್ತಿಗಳಿಂದಲೂ, ವಿಜ್ಞಾನಮಯ ಕೋಶವನ್ನು ಜ್ಞಾನ ಮತ್ತು ಕರ್ಮ ಯೋಗದಿಂದಲೂ ಸುಸ್ಥಿತಿಯಲ್ಲಿಡುವುದರಿಂದ ಆನಂದಮಯಕೋಶ ಅಥವಾ ಪರಮಾನಂದ ಸ್ಥಿತಿಯನ್ನು ತಲುಪಬಹುದು.
ಮನುಷ್ಯ ತನ್ನ ಮನೋಮಯಕೋಶ ಅಥವಾ ಮನಸ್ಸಿನಲ್ಲಿ ಸದಾ ಉಂಟಾಗುವ ಬೇಕು-ಬೇಡಗಳನ್ನು, ವಿಜ್ಞಾನಮಯ ಕೋಶ ತನ್ನ ವಿವೇಚನಾ ಶಕ್ತಿಯಿಂದ ಯೋಚಿಸಿ ಸರಿ ತಪ್ಪಿನ ನಿರ್ಣಯ ಮಾಡಿ ಸೃಷ್ಠಿ ಅಥವಾ ಪ್ರಕೃತಿಯ ನಿಯಾಮನುಸಾರ ಕಾರ್ಯನಿರ್ವಹಿಸಿದಾಗ ಮಾತ್ರ ಯಾವುದೇ ಕಾಯಿಲೆ, ಗೊಂದಲಗಳಿಗೆ ಒಳಗಾಗುವುದಿಲ್ಲ. ಆದರೆ ನಮ್ಮಲ್ಲಿ ತೀವ್ರತರವಾದ ಬೇಡಿಕೆಗಳು ಅಥವಾ ನಮ್ಮ ಬೇಕು ಬೇಡಗಳು ತೀವ್ರವಾದಾಗ ಅಂತಹ ಭಾವನೆಗಳು ಒತ್ತಡಗಳಾಗಿ ಅದೇ ಮನೋದೈಹಿಕ ಕಾಯಿಲೆಗಳಾಗಿ ಮನುಷ್ಯನ ಎಲ್ಲಾ ದುಶ್ಚಟ ಹಾಗೂ ದುರ‌್ವರ್ತನೆಗಳಿಗೆ ಕಾರಣವಾಗುತ್ತದೆ. ಇಂತಹ ದುರ‌್ವರ್ತನೆಗಳೇ ಪರಿಸರ ನಾಶಕ್ಕೂ ಪ್ರಚೋದಿಸಿ, ಪರಿಸರಕ್ಕೆ ವಿರುದ್ಧವಾಗಿ ಜೀವಿಸಲು ಪ್ರೇರಣೆ ನೀಡುತ್ತಿರುವುದೇ ಇಂದು ಆಗುತ್ತಿರುವ ಹವಾಮಾನ ವೈಪರಿತ್ಯಕ್ಕೂ, ಜೀವನಶೈಲಿ ಸಂಬಂಧ ಕಾಯಿಲೆಗಳಿಗೂ ಕಾರಣ.
ಉದಾ: ಪ್ಲಾಸ್ಟಿಕ್ ಬಳಸಿ ಬಿಸಾಡುವುದು ಮನುಷ್ಯನಿಗಷ್ಟೇ ಅಲ್ಲಾ ಜಾನುವಾರುಗಳಿಗೂ, ಜಲಚರ ಪ್ರಾಣಿಗಳಿಗೂ ಇಂದು ಅದು ವಿಷವಾಗುತ್ತಿದೆ ಎನ್ನುವುದು ಮನುಷ್ಯನಿಗೆ ಅರಿವಿಲ್ಲವೇ? ಹಾಗೆಯೇ ಮಧುಮೇಹಿಗಳಿಗೆ, ಬೊಜ್ಜುದೇಹಿಗಳಿಗೆ, ಸಿಹಿತಿಂಡಿ ಜಂಕ್‌ಫುಡ್ ಸೇವನೆ ಎಲ್ಲವೂ ತಪ್ಪೆಂದು ಒಳಮನಸ್ಸು ಹೇಳಿದರೂ, ಹೊರಮನಸ್ಸು ಅದನ್ನು ವಿರೋಧಿಸುತ್ತದೆ. ಬುದ್ಧಿ ಭಾವಗಳ ಸಂಘರ್ಷಗಳಲ್ಲಿ ಭಾವನೆಗಳ ಹಿಡಿತ ಮೇಲಾಗಿ ಬಿಡುತ್ತದೆ. ಮನಸ್ಸನ್ನು ಬುದ್ದಿಯ ಹಿಡಿತದಲ್ಲಿಡಲು ಅಸಾಧ್ಯವಾಗುತ್ತದೆ. ಈ ಒಂದು ಇಚ್ಛಾಶಕ್ತಿಯ ಕೊರತೆ ಅಥವಾ ಬುದ್ಧಿಭಾವಗಳ ಸಂಘರ್ಷವೇ ಇಂದು ಪರಿಸರ ನಾಶಕ್ಕೆ, ಎಲ್ಲಾ ಮನೋದೈಹಿಕ ಕಾಯಿಲೆಗಳಿಗೆ ಮೂಲಕಾರಣ. ಆದ್ದರಿಂದ ಕೇವಲ ಯೋಗಾಸನವೆಂಬ ಬಾಹ್ಯ ದೈಹಿಕ ಪ್ರದರ್ಶನಕ್ಕಷ್ಟೇ ಯೋಗ ಸೀಮಿತವಾಗಿರದೆ ಪತಂಜಲಿ ಮಹರ್ಷಿ ಹೇಳಿದ ಅಷ್ಟಾಂಗ ಯೋಗ ಸೂತ್ರಗಳಾದ ಯಮ-ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಃ, ನಿಯಮ-ಅಂದರೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರೀ ಪ್ರಾಣಿಧ್ಯಾನ ಎಂಬ ವೈಯಕ್ತಿಕ ನಿಯಮಗಳನ್ನು ಆಚರಿಸಿ, ಆಸನ-ಪ್ರಾಣಾಯಾಮಗಳನ್ನು ಸಿದ್ದಿಸಿಕೊಂಡು, ಪ್ರತ್ಯಾಹಾರ-ಎಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸುವುದರಿಂದ ಧಾರಣವೆಂದರೆ ಪ್ರಯತ್ನ ಪೂರ್ವಕವಾಗಿ ಮನಸ್ಸನ್ನು ಏಕಾಗ್ರಗೊಳಿಸಿವೆ ಹಾಗೂ ಧ್ಯಾನ-ಎಂದರೆ ನಿರಾಯಾಸವಾಗಿ ಮನಸ್ಸು ಒಂದು ವಸ್ತುವಿನಲ್ಲಿ ಏಕಾಗ್ರಗೊಳಿಸುವುದು. ಸಮಾಧಿ ಎಂದರೆ ಮನಸ್ಸು ಏಕಾಗ್ರವಾಗಿ ತಲ್ಲೀನಗೊಳ್ಳುವುದರಿದ ನಮ್ಮ ಅಂತರಂಗವು ಗಟ್ಟಿಗೊಂಡು ಬಹಿರಂಗವು ಸೊಗಸಾಗುತ್ತದೆ. ಪರಿಸರವು ಗಟ್ಟಿಗೊಳಿಸಿ ಕಾಪಾಡಲ್ಪಡುತ್ತದೆ.
ನಾವೆಲ್ಲರೂ ಸ್ವಾಸ್ಥ್ಯದೆಡೆಗೆ ಪಯಣ ಬೆಳೆಸೋಣ. ಸದ್ವಿಚಾರಗಳುಳ್ಳ ಯೋಗ ಬಂಧುಗಳ ಸಂಘಟನೆಯಾಗಲಿ ಎಂದು ಆಶಿಸುತ್ತಾ
‘‘ಲೋಕಾಸಮಸ್ತ ಸುಖಿನೋಭವಂತು’’
ಡಾ.ವೀಣಾ ಎಸ್ ಭಟ್, ಸ್ತ್ರೀರೋಗ ತಜ್ಞರು, ನಯನ ಆಸ್ಪತ್ರೆ,
ಮಹಿಳಾ ಆರೋಗ್ಯ ವೇದಿಕೆಯ ಅಧ್ಯಕ್ಷರು,
ಐಎಂಎ ಭದ್ರಾವತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷರು,
ಹವ್ಯಕ ಸಂಘದ ಅಧ್ಯಕ್ಷರು, ಭದ್ರಾವತಿ.
Discussion about this post