ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೇಲೂರು: ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವಕ್ಕೆ ಈ ಬಾರಿ ಕೊರೋನಾ ವೈರಸ್ ಕರಿನೆರಳು ಆವರಿಸಿದ್ದು, 900 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾತ್ರೆಯನ್ನು ರದ್ದು ಮಾಡಲಾಗಿದೆ.
ಈ ಕುರಿತಂತೆ ಚನ್ನಕೇಶವ ಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿದ್ದು, 900 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದಾದ್ಯಂತ ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ರಥೋತ್ಸವವನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.
ಮಾರ್ಚ್ 28ರಿಂದ ಎಪ್ರಿಲ್ 10ರವೆರಗೂ ಜಾತ್ರಾ ಮಹೋತ್ಸವ ನಡೆಯಬೇಕಿತ್ತು. ಆದರೆ, ಜಾತ್ರೆ ಹಾಗೂ ರಥೋತ್ಸವ ನಡೆಸದಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಥೋತ್ಸವ ಸಂಬಂಧಿ ಧಾರ್ಮಿಕ ಕಾರ್ಯಕ್ರಮ ಹಾಗೂ ಉತ್ಸವಗಳನ್ನು ಸರಳವಾಗಿ ನಡೆಸಲು ಉದ್ದೇಶಿಸಿದ್ದು, ಇವೆಲ್ಲವಕ್ಕೂ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಇನ್ನು, ರಥೋತ್ಸವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇವಾಲಯ ಸಿಇಒ, ಪ್ರಧಾನ ಅರ್ಚಕರು ಹಾಗೂ ಸ್ಥಳೀಯರನ್ನು ಕರೆಸಿ ಸಭೆ ನಡೆಸಲಾಗಿದೆ. ಸಭೆಯ ತೀರ್ಮಾನದಂತೆ ಮಾರ್ಚ್ 17ರಿಂದ 31ರವರೆಗೂ ದಾಸೋಹದ ವ್ಯವಸ್ಥೆ ಸಂಪೂರ್ಣ ನಿಷೇಧಿಸಲಾಗಿದೆ. ರಥೋತ್ಸವಕ್ಕೆ ಸಂಬಂಧಿಸಿದಂತೆ ವಾದ್ಯ, ವಿದ್ಯುತ್ ಅಲಂಕಾರ, ಹೂವಿನ ಅಲಂಕಾರ ಸೇರಿದಂತೆ ಇನ್ನು ಕೆಲವು ಟೆಂಡರ್’ಗಳನ್ನು ರದ್ದು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ
ರಥೋತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಇದರಂತೆ ಯಾಗಶಾಲೆ, ಬಲಿ ಪ್ರಧಾನ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ, ಈ ಎಲ್ಲವಕ್ಕೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
Get in Touch With Us info@kalpa.news Whatsapp: 9481252093
Discussion about this post