ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಾದಗಿರಿ: ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಆಪ್ ಮತ್ತು ಸಾಫ್ಟ್‌ವೇರ್‌ಗಳ ಬಳಕೆಯಿಂದ ಅನುಮತಿಯಿಲ್ಲದೇ ಮಾಹಿತಿ ಕದಿಯುವ (ಹ್ಯಾಕಿಂಗ್) ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ವಿವೇಕ ಹೊನಗುಂಟಿಕರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ, ಆಡಳಿತ ಸಂಸ್ಥೆ ಮೈಸೂರು, ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ತರಬೇತಿ ಸಂಸ್ಥೆ, ಯಾದಗಿರಿ ಇವರ ಸಹಯೋಗದೊಂದಿಗೆ ಎನ್‌ಇಜಿಡಿ ಸಾಮರ್ಥ್ಯಾಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಹ್ಯಾಕಿಂಗ್ ಮತ್ತು ಹ್ಯಾಕರ್ಸ್ ಕಾನೂನು ಬಾಹಿರವಾಗಿ ತೀರಾ ಖಾಸಗಿ ವಿಷಯಗಳನ್ನು ಸಹ ಕದಿಯುತ್ತಿದ್ದು, ಇದನ್ನು ತಡೆಯಲು ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಅಂತರ್ಜಾಲವನ್ನು ಬಳಸಿ ಇನ್‌ಸ್ಟಾಲ್ ಮಾಡಿಕೊಳ್ಳುವ ಆಪ್ ಮತ್ತು ಸಾಫ್ಟ್‌ವೇರ್‌ಗಳಿಂದ ವೈರಸ್ ಸಹ ಇನ್‌ಸ್ಟಾಲ್ ಆಗುತ್ತದೆ. ಹೀಗಾಗಿ ಹ್ಯಾಕಿಂಗ್ ಮಾಡಲು ಹ್ಯಾಕರ್ಸ್‌ಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.
ಜಗತ್ತಿನಲ್ಲಿ ಅಂತರ್ಜಾಲವನ್ನು ಕೇವಲ ಶೇ.4ರಷ್ಟು ಮಾತ್ರ ಸಕ್ರಮ ಕಾರ್ಯಗಳಿಗೆ ಬಳಸುತ್ತಿದ್ದು, ಇನ್ನುಳಿದ ಶೇ.96ರಷ್ಟು ಅಕ್ರಮವಾಗಿ ಬಳಸುತ್ತಿದ್ದಾರೆ ಮತ್ತು ಹ್ಯಾಕಿಂಗ್ ತಡೆಗಟ್ಟಲು ಒಟಿಪಿ ಕ್ರಮವನ್ನು ಬಳಸುತ್ತಿರುವುದು ನಮ್ಮ ದೇಶ ಮಾತ್ರ ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ನೋಟಿಫಿಕೇಷನ್‌ಗಳನ್ನು ಕಳುಹಿಸಿ ನಮ್ಮ ಗಮನ ಸೆಳೆಯಲು ಆಮಿಷಯೊಡ್ಡಿ ಹಣ ಸೇರಿದಂತೆ ನಮ್ಮ ಮಾಹಿತಿಗಳನ್ನು ಕದಿಯುತ್ತಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.
ಕಾರ್ಯಗಾರವನ್ನು ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಉದ್ಘಾಟಿಸಿದರು. ಯಾದಗಿರಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಂಬೋಜಿ ನಾಯ್ಕೊಡಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ್ ನಾಯಕ್, ಡಿಸ್ಟ್ರಿಕ್ಟ್ ಇನ್ಫಾರಮಿಟಿಕ್ ಅಧಿಕಾರಿ ಶ್ರೀನಿವಾಸರಾವ ಕುಲಕರ್ಣಿ, ಕಲಬುರಗಿ ವಿಭಾಗಿ ಇ-ಆಡಳಿತ ಸಂಸ್ಥೆಯ ಹಿರಿಯ ಬೋಧಕರು ಎಮ್. ಕವಿತಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post