ಸಾಂಸ್ಕೃತಿಕ ವೈಭವದ ನೆಲೆಬೀಡು ನಮ್ಮ ಈ ತುಳುನಾಡು. ಸ್ವಚ್ಛಂದ ಪ್ರಾಕೃತಿಕ ಸೊಬಗಿಗೆ ಮನಸೋತು ಈ ಪುಣ್ಯಭೂಮಿಯಲ್ಲಿ ನೆಲೆಯಾದ ದೈವ ದೇವರುಗಳ ಬಗ್ಗೆ ಇಂದಿಗೂ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಕಲ್ಲು ಮಣ್ಣು ನೀರು ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಂಡವರು ನಾವು, ಜೊತೆಗೆ ಅದೆಷ್ಟೋ ಸಾಂಸ್ಕೃತಿಕ ಕಲೆಗಳನ್ನು ಪೂಜಿಸಿ ಆರಾಧಿಸುವ ಸಮಾಜ ನಮ್ಮದು. ಅಂತಹ ಶ್ರೀಮಂತ ಕಲೆಗಳಲ್ಲಿ ಒಂದು ಯಕ್ಷಗಾನ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ತಾಯಿಗೆ ಅತ್ಯಂತ ಪ್ರೀತಿಯ ಸೇವೆ ಎಂದೇ ತುಳುವರ ಮನೆ ಮನಸ್ಸಿನಲ್ಲಿ ನೆಲೆಯಾಗಿ ನಿಂತಿದೆ. ಹಲವಾರು ಶ್ರೇಷ್ಠ ಕಲಾವಿದರಿಗೆ ಸಾಧಕರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದು. ಅದರಲ್ಲೂ ತನ್ನ ಅದ್ಭುತ ಕಂಠಸಿರಿ ಮತ್ತು ಕಟೀಲು ತಾಯಿಯ ಸೇವೆಯ ಜೊತೆಗೆ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಅನ್ನು ಸ್ಥಾಪಿಸಿ ಅಶಕ್ತ ಯಕ್ಷಗಾನ ಕಲಾವಿದರ ಬದುಕಿಗೆ ಆಶಾಕಿರಣವಾದ ನಮ್ಮ ಹೆಮ್ಮೆಯ ಭಾಗವತ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಯಕ್ಷಗಾನದ ಬಗೆಗಿನ ಒಂದಷ್ಟು ಮಾಹಿತಿ ಮತ್ತು ಪಟ್ಲ ಸತೀಶ್ ಶೆಟ್ಟಿಯವರು ಯುವ ಮನಸ್ಸುಗಳನ್ನು ಯಕ್ಷಗಾನದ ಕಡೆಗೆ ಸೆಳೆದು ತಂದ ಬಗೆಗಿನ ಮಾಹಿತಿಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ.
ಯಕ್ಷಗಾನವೆಂದರೆ ಸಪ್ತ ಸ್ವರಗಳ ಸಮ್ಮಿಲನ
ನಾಟ್ಯ, ಸಂಗೀತದ ಜೊತೆಗೆ ಚೆಂಡೆ ಮದ್ದಳೆಗಳ ಅಬ್ಬರ ಮತ್ತು ಅರ್ಥಪೂರ್ಣ ಮಾತುಗಾರಿಕೆಯ ಮಹಾ ಸಮ್ಮೇಳನವೆಂದರೆ ತಪ್ಪಾಗಲಾರದು. ತೆಂಕುತಿಟ್ಟು ಬಡಗುತಿಟ್ಟು ಯಕ್ಷಗಾನದ ಎರಡು ಪ್ರಮುಖ ವಿಧಗಳಾದರೂ ಒಂದೇ ನಾಣ್ಯದ ಎರಡು ಮುಖಗಳಂತೆ ಇವೆ. ಪೌರಾಣಿಕ ಪ್ರಸಂಗಗಳು ಹೆಚ್ಚಾಗಿ ಪ್ರದರ್ಶನಪಟ್ಟರೆ ಸಾಮಾಜಿಕ ಪ್ರಸಂಗಗಳು ಅಷ್ಟೇ ಪ್ರಾಧಾನ್ಯತೆಯನ್ನು ಪಡೆದಿದೆ. ಬಹುಮುಖ್ಯವಾಗಿ ಪರಿಶುದ್ಧ ಕನ್ನಡ ಭಾಷೆಯಲ್ಲಿ ಸಾಗುವ ಕಥಾನಕಗಳು ತುಳು ಭಾಷೆಯಲ್ಲೂ ಪ್ರದರ್ಶನಗೊಳ್ಳುತ್ತದೆ. ಹೆಚ್ಚಾಗಿ ರಾತ್ರಿಯಿಂದ ಬೆಳಗ್ಗಿನವರೆಗೆ ಪ್ರದರ್ಶನಗೊಳ್ಳುತ್ತಿದ್ದ ಬಯಲಾಟಗಳು ಈಗೀಗ ಹಗಲಿನಲ್ಲಿಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಯಕ್ಷಗಾನ ಬಯಲಾಟ, ತಾಳಮದ್ದಳೆ ಪ್ರಮುಖ ವಿಭಾಗಗಳಾದರೆ ಬದಲಾದ ಕಾಲಘಟ್ಟದಲ್ಲಿ ಯಕ್ಷಗಾನ ನಾಟ್ಯ, ಹಾಸ್ಯ, ಗಾನ ವೈಭವಗಳು ಕೂಡ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತದೆ.
ಇದು ಸರಿ ಸುಮಾರು ಏಳೆಂಟು ವರುಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಆಗ ಈಗಿನಷ್ಟು ವಾಟ್ಸಪ್ ಫೇಸ್’ಬುಕ್ ಇಂಟರ್ನೆಟ್ ಗಳ ಹಾವಳಿ ಇರಲಿಲ್ಲ. ಬಾಲ್ಯದಿಂದಲೂ ಯಕ್ಷಗಾನವನ್ನು ನೋಡುತ್ತಿದ್ದ ನಮಗೆ ಕಟೀಲು ಮೇಳದ ಆಟವೆಂದರೆ ಅಚ್ಚುಮೆಚ್ಚು. ಅದರಲ್ಲೂ ಶ್ರೀದೇವಿ ಮಹಾತ್ಮೆಯ ದೇವಿ, ಮಹಿಷಾಸುರ ಮತ್ತು ಚಂಡ ಮುಂಡ ರಕ್ತಬೀಜ ಪಾತ್ರಗಳಂದರೆ ತುಂಬಾ ಕುತೂಹಲ ಮತ್ತು ಸ್ವಾರಸ್ಯಕರ. ಒಮ್ಮೆ ಆಟ ನೋಡಲು ಕುಳಿತರೆ ಏಳುವುದು ಮಂಗಳ ಪದ್ಯಕ್ಕೆ ಮಧ್ಯದಲ್ಲಿ ಚೌಕಿಗೆ ಹೋಗಿ ವೇಷ ನೋಡಿ ಬರುವ ಸಂದರ್ಭಗಳು ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ.
ಮುಂದುವರೆದ ದಿನಗಳಲ್ಲಿ ವರುಷಕ್ಕೆ ಒಂದೆರಡು ವೇಷ ಮಾಡುವುದು ಬಿಟ್ಟರೆ ಉಳಿದೆಲ್ಲ ದಿನವೂ ನಾವು ಪ್ರೇಕ್ಷಕರು. ಆ ಸಂದರ್ಭದಲ್ಲಿ ಈ ಮಾತುಗಳು ಬಲು ಸಾಮಾನ್ಯವಾಗಿ ಕೇಳಿ ಬರುತ್ತಿತ್ತು ಆಟಕ್ಕೆ ಜನ ಬರುವುದಿಲ್ಲ!!! ಇನ್ನು ಯಾರು?? ಈ ಆಟ ಎಲ್ಲಾ ನೋಡುತ್ತಾರೆ??? ಆಟ ಪ್ರಾರಂಭವಾಗಿ ಬೆಳಗ್ಗಿನ ಹೊತ್ತಿಗೆ ಕೇವಲ ಭಾಗವತರು ವೇಷಧಾರಿಗಳು ಮತ್ತು ಆಟ ಆಡಿಸಿದವರು ಇರುತ್ತಾರೆ!!! ಎಂಬ ಮಾತುಗಳು ಬಲು ಸಾಮಾನ್ಯವಾಗಿತ್ತು.
ಅದೊಂದು ಯಕ್ಷಗಾನದ ಪದ್ಯ ಹೆಚ್ಚಾಗಿ ಹಲವರ ಮೊಬೈಲ್’ನಲ್ಲಿ ಕೇಳಿ ಬರುತ್ತಿತ್ತು. ನೋಡಿದನು ಕಲಿ ರಕ್ತಬೀಜನು ರಕ್ತಬೀಜನೆಂಬ ರಾಕ್ಷಸ ಶ್ರೀದೇವಿಯನ್ನು ಕದಂಬವನದಲ್ಲಿ ಕಂಡು ತಾಯಿಯನ್ನ ಸ್ಮರಿಸುವ ಸನ್ನಿವೇಶ ಅದು. ಆ ಪದ್ಯವನ್ನು ಹಾಡಿದ ಭಾಗವತರ ಹೆಸರು ತಿಳಿದಿಲ್ಲವಾದರೂ ದಿನಕ್ಕೆ ಒಂದೆರಡು ಬಾರಿಯಾದರು ಕೇಳುವ ಅಭ್ಯಾಸವಿತ್ತು. ದಿನಗಳು ಸಾಗುತ್ತ ಇದ್ದಂತೆ ದೇವಿ ಮಹಾತ್ಮೆಯ ಪ್ರತಿಯೊಂದು ಪದ್ಯಗಳು ಅತ್ಯಂತ ಹೆಚ್ಚಾಗಿ ಪ್ರಚಾರಕ್ಕೆ ಬಂದವು. ಒಂದು ವಿನೂತನ ಶೈಲಿ ಮತ್ತು ಅದ್ಭುತ ಕಂಠ ಸಿರಿ ಹೆಚ್ಚಾಗಿ ಎಂತವರನ್ನೂ ಮೋಡಿ ಮಾಡುವಷ್ಟು ಶಕ್ತಿಯುತವಾಗಿತ್ತು. ಅದೆಷ್ಟು ಅದ್ಭುತ ಕಂಠ ಸಿರಿಯೆಂದರೆ ಸಾಕ್ಷಾತ್ ಶ್ರೀದೇವಿಯನ್ನು ಪ್ರತ್ಯಕ್ಷ ಕಂಡ ಅನುಭವ ಅದು. ಪೌರಾಣಿಕ ಕಥೆಗಳನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಪ್ರಸ್ತುತ ಪಡಿಸುವುದಕ್ಕೆ ಇದೊಂದು ನಿಜವಾದ ಮಾರ್ಗವಾಗಿತ್ತು. ಅದುವೇ ಪಟ್ಲ ಶೈಲಿ.
ಹುಟ್ಟಿದ ಮನೆ ತಾನು ಬೆಳೆದ ಪರಿಸರ ವ್ಯಕ್ತಿಯೊಬ್ಬನ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪ್ರಭಾವವನ್ನು ಬೀರುತ್ತದೆಯಂತೆ. ಪಟ್ಲರ ತಂದೆ ಮಹಾಬಲ ಶೆಟ್ಟಿ ತಾಯಿ ಲಲಿತಾ ಶೆಟ್ಟಿ ದಂಪತಿಯ ಮಗನಾಗಿ ಜನಿಸಿದ ಪಟ್ಲರು ಬೆಳೆದದ್ದು ಪಟ್ಲ ಗ್ರಾಮದ ಪರಿಸರದಲ್ಲೇ ಪಟ್ಲ ಗುತ್ತು ಇವರ ಮನೆ. ಜೊತೆಗೆ ಪದ್ಯಾಣ, ಮಾಂಬಾಡಿ, ಕುರಿಯ ಯಕ್ಷಗಾನ ಹಿಮ್ಮೇಳದ ತವರೂರುಗಳು ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಸುತ್ತಮುತ್ತಲಿನ ಊರುಗಳು, ಇವರ ಯಕ್ಷಗಾನದ ಬಗೆಗಿನ ಆಸಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ.
ಮನೆಯಲ್ಲಿ ತಂದೆ ಯಕ್ಷಗಾನ ಕಲಾವಿದರು ಮತ್ತು ಬಾಲ್ಯದಲ್ಲಿಯೇ ಪಟ್ಲರಿಗೆ ಸಂಗೀತದ ಬಗ್ಗೆ ಆಸಕ್ತಿ ಮತ್ತು ಒಲವು ಜಾಸ್ತಿ ಇದ್ದುದರಿಂದ ಮೊದಲು ತಾನು ಎಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಪ್ರಥಮ ಬಹುಮಾನ ಅವರಿಗೇ ಲಭಿಸುತ್ತಿತ್ತು. ತದನಂತರ ಸಸಿಹಿತ್ಲು ಮೇಳಕ್ಕೆ ಅತಿಥಿ ಭಾಗವತರಾಗಿ ಹೋಗುತ್ತಿದ್ದ ಪಟ್ಲರು ನಂತರ ಸೇರಿದ್ದು ಕಲ್ಲಾಡಿ ವಿಠ್ಠಲ್ ಶೆಟ್ರ ಯಜಮಾನಿಕೆಯ ಕಟೀಲು ಮೇಳವನ್ನು ಅಲ್ಲಿ ದೊರಕಿದ ಕುರಿಯ, ಬಲಿಪ ನಾರಾಯಣ ಭಾಗವತರ ಮಾರ್ಗದರ್ಶನ ತಾನು ಇಷ್ಟರ ಮಟ್ಟಿಗೆ ಬೆಳೆಯಲು ಕಾರಣವಾಯಿತು ಎಂದು ಪಟ್ಲರೇ ಒಂದು ಸಂದರ್ಶನದಲ್ಲಿ ಹೇಳುತ್ತಾರೆ.
ಕಟೀಲು ಐದನೇ ಮೇಳವು ಪ್ರಾರಂಭವಾದಾಗ ಪ್ರಧಾನ ಭಾಗವತರಾಗಿ ನೇಮಕಗೊಂಡ ಪಟ್ಲರು ಐದನೇ ಮೇಳಕ್ಕೆ ಪ್ರಖ್ಯಾತಿಯನ್ನು ತಂದುಕೊಟ್ಟರು. ಎಷ್ಟರಮಟ್ಟಿಗೆ ಎಂದರೆ ಐದನೆಯ ಮೇಳಕ್ಕಾಗಿಯೇ ಕಾದು ಕುಳಿತುಕೊಳ್ಳುವ ಅಭಿಮಾನಿ ವರ್ಗವೇ ಸೃಷ್ಟಿಯಾಗಿತ್ತು. ಅದೆಷ್ಟೇ ದೂರದಲ್ಲಿ ಆಟವಿದ್ದರೂ ಪಟ್ಲರ ಪದ್ಯ ಕೇಳಲು ತೆರಳುವ ಅಭಿಮಾನಿಗಳಿದ್ದಾರೆ. ಮಧ್ಯರಾತ್ರಿ ಎದ್ದು ಪಟ್ಲರ ಪದ್ಯ ಕೇಳಲು ತೆರಳುತ್ತಿದ್ದ ಅಭಿಮಾನಿಗಳನ್ನು ಕಂಡಿದ್ದೇನೆ. ಇನ್ನೂ ಮುಂದುವರಿರು ಪಟ್ಲೆರ್ ಎತ್ ಗಂಟೆಗ್ ಪದ್ಯಗ್ ಕುಲ್ಲುನ್ ಪಟ್ಲೆರ್ ಬರ್ಪೆರಾ ಇನಿ ಇಂತಹ ಮಾತುಗಳು ಯಕ್ಷಗಾನ ಅಭಿಮಾನಿಗಳಲ್ಲಿ ಸರ್ವೇಸಾಮಾನ್ಯ. ಯುವಕರು ವಾಟ್ಸಪ್ ಸ್ಟೇಟಸ್’ನಲ್ಲೂ ಪಟ್ಲೆರ್ ಆಟದ ಮರ್ಲ್ ಪತ್ತಾರ್ಯೆ ಎಂದು ಹಾಕುತ್ತಾರೆ ಎಂದರೆ ಎಣಿಸಿ ಪಟ್ಲರ ಕೀರ್ತಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು.
ಕನಸನ್ನು ಕಾಣುವುದು ಸುಲಭ ಅದೇ ಕನಸನ್ನು ನನಸಾಗಿಸುವುದು ಕಠಿಣ. ದೇಶ ವಿದೇಶದಲ್ಲಿ ಎಣಿಕೆಗೂ ಮೀರಿದ ಅಭಿಮಾನಿಗಳನ್ನು ಹೊಂದಿರುವ ಪಟ್ಲರು ದೃಷ್ಟಿ ಹರಿಸಿದ್ದು ತನ್ನ ಜೊತೆಗೆ ಇದ್ದ ಸಹ ಕಲಾವಿದರುಗಳು ಮತ್ತು ಯಕ್ಷಗಾನದಿಂದ ನಿವೃತ್ತಿ ಹೊಂದಿದ ಅಶಕ್ತ ಕಲಾವಿದರುಗಳ ಕಡೆಗೆ. ಯಕ್ಷ ಧ್ರುವ ಪಟ್ಲ ಫೌಂಡೇಷನ್ ಅನ್ನು ಸ್ಥಾಪಿಸಿದ ಪಟ್ಲರು ಅಶಕ್ತ ಕಲಾವಿದರ ಕುಟುಂಬಕ್ಕೆ ನೆರವಾದರು. ಅವರ ಕಣ್ಣೀರ ಒರೆಸಿ ಕೈ ಹಿಡಿದು ನಡೆಸಿದವರು.
ಮನೆಯಿಲ್ಲದವರಿಗೆ ಪಟ್ಲ ಆಶ್ರಯ ಎಂಬ ಯೋಜನೆಯ ಅಡಿಯಲ್ಲಿ ನೆಲೆಯನ್ನು ಕಲ್ಪಿಸಿಕೊಟ್ಟವರು, ಕಲಾವಿದರಿಗೆ ತೀವ್ರ ಆರೋಗ್ಯ ಸಮಸ್ಯೆ ಬಂದಾಗ ನೆರವಿಗೆ ಬಂದವರು. ಇವೆಲ್ಲವೂ ಕಟೀಲು ತಾಯಿಯ ಅನುಗ್ರಹ ಮತ್ತು ಅಭಿಮಾನಿಗಳ ಸಹಾಯದಿಂದ ಎಂದು ಹೇಳುತ್ತಾರೆ ಪಟ್ಲರು. ಕೇವಲ ಕರಾವಳಿಯಲ್ಲಿ ಅಲ್ಲದೆ ರಾಜ್ಯ ಹೊರರಾಜ್ಯ, ವಿದೇಶದಲ್ಲೂ ಫೌಂಡೇಷನ್’ನ ಸ್ಥಾಪನೆ ಇವರ ಸಾಧನೆಗೆ ಹಿಡಿದ ಕೈಗನ್ನಡಿ. ಇತ್ತೀಚೆಗೆ ಪ್ರಪಂಚದ ದೊಡ್ಡಣ್ಣ ಎಂದೇ ಪ್ರತಿಬಿಂಬಿತವಾಗಿರುವ ಅಮೇರಿಕಾದಲ್ಲೂ ಫೌಂಡೇಷನ್’ನ ಸ್ಥಾಪನೆ ಹೆಮ್ಮೆಯ ವಿಷಯ.
ಸನ್ಮಾನ ಮತ್ತು ಸಾಧನೆಯಿಂದ ಹಿಗ್ಗದೆ ಟೀಕೆಗಳಿಗೆ ಕುಗ್ಗದೆ ಸಾಧನೆಯ ಹಾದಿಯಲ್ಲಿ ಸಾಗುವ ಗುಣ ಪಟ್ಲರದ್ದು. ಅಭಿಮಾನಿಗಳ ಹತ್ತಿರ ಇಂದಿಗೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುವ ಅದ್ಭುತ ವ್ಯಕ್ತಿತ್ವ ಅವರದ್ದು. ಯಕ್ಷಗಾನದ ಬಗೆಗಿನ ಇವರ ಸೇವೆ ನೂರಾರು ಕಾಲ ಹೀಗೆ ಸಾಗಲಿ ಎಂಬ ಅಭಿಲಾಷೆಯೊಂದಿಗೆ. ಹೂವು ಒಂದು ಗಿಡದಲ್ಲಿ ಅರಳಿ ಅಲ್ಲಿಯೇ ಬಾಡಿ ಹೋಗುವುದಕ್ಕಿಂತ ದೇವರ ಪೂಜೆಗೆ ಉಪಯೋಗವಾದರೆ ಅದರ ಜನ್ಮ ಸಾರ್ಥಕವಾಗುತ್ತದೆಯಂತೆ. ಅದೇ ರೀತಿ ಕಲೆಯೂ ಕೂಡ ಯೋಗ್ಯ ವ್ಯಕ್ತಿಗಳಿಂದ ಪ್ರದರ್ಶನಗೊಂಡಾಗ ಅದರ ಮೌಲ್ಯ ಹೆಚ್ಚಾಗುವುದರ ಜೊತೆಗೆ ಲೋಕ ಮುಖಕ್ಕೆ ಪರಿಚಯವಾಗುತ್ತದೆ ಎಂಬ ಸಂದೇಶದೊಂದಿಗೆ ಯಕ್ಷಗಾನಂ ವಿಶ್ವಗಾನಂ…
Discussion about this post