ಡೆಹ್ರಾಡೂನ್: ಒತ್ತಡಪೂರಿತ ಜೀವನ ಶೈಲಿಯಿಂದಾಗಿ ಮಿಲಿಯನ್‌ಗಟ್ಟಲೆ ಜನರು ಸಾವಿಗೀಡಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಚಾರ. ಇಂತಹ ಆತಂಕದಿಂದ ದೂರವಾಗಲು ಯೋಗ ಸಹಕಾರಿಯಾಗಿದ್ದು, ಇದನ್ನು ಅಳವಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಉತ್ತರಾಖಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ, ಪ್ರಪಂಚವನ್ನುದ್ದೇಶಿಸಿ ಮಾತನಾಡಿದ ಅವರು, ಮಾನಸಿಕ ಹಾಗೂ ದೈಹಿಕ ಒತ್ತಡಗಳನ್ನು ದೂರವಾಗಿಸಿ, ನೆಮ್ಮದಿಯ ಜೀವನ ಪಡೆಯಲು ಯೋಗ ಸಹಕಾರಿಯಾಗಿದೆ. ದುಡ್ಡಿನ ವ್ಯಯವಿಲ್ಲದೇ ಅನಾರೋಗ್ಯವನ್ನು ದೂರವಾಗಿಸುವ ಸಾಧನವಾಗಿದೆ ಎಂದರು.
ಅನಾರೋಗ್ಯದಿಂದ ಆರೋಗ್ಯದೆಡೆಗೆ ಕರೆದೊಯ್ಯುವ ಮಹತ್ವದ ವಿದ್ಯೆಯಾಗಿರುವ ಯೋಗವನ್ನು ಈ ಕಾರಣಕ್ಕಾಗಿಯೇ ಇಂದು ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಮಂದಿ ಅಳವಡಿಸಿಕೊಂಡಿದ್ದಾರೆ ಎಂದರು.
ಭಾರತೀಯ ಸನಾತನ ವಿದ್ಯೆಯಾದ ಇಂತಹ ಯೋಗವನ್ನು ಇಂದು ಇಡಿಯ ವಿಶ್ವವೇ ಒಪ್ಪಿಕೊಂಡಿರುವುದು ಸಂತಸದ ಸಂಗತಿಯಾಗಿದ್ದು, ಇದನ್ನು ಸಂಭ್ರಮಿಸುತ್ತಿರುವುದು ಸ್ವಾಗತಾರ್ಹ ವಿಚಾರ ಎಂದರು.
Discussion about this post