ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿರುವ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿನ 800 ಅಡಿ ಪ್ರಪಾತದಲ್ಲಿ ಬಿದ್ದು ಭಾರತೀಯ ಮೂಲದ ಯುವ ದಂಪತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.
ನ್ಯೂಯಾರ್ಕ್ ನಲ್ಲಿ ವಾಸವಿರುವ ವಿಷ್ಣು ವಿಶ್ವನಾಥ್ ಹಾಗೂ ಮೀನಾಕ್ಷಿ ಮೂರ್ತಿ ಮೃತಪಟ್ಟ ದುರ್ದೈವಿಗಳಾಗಿದ್ದು, ಇತ್ತೀಚೆಗಷ್ಟೇ ಸ್ಯಾನ ಜೋಸ್ ಮೂಲದ ಸಿಸ್ಕೊ ಕಂಪನಿಯಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ವಿಷ್ಣು ಅವರಿಗೆ ಕೆಲಸ ದೊರೆತ ಹಿನ್ನೆಲೆಯಲ್ಲಿ ಕ್ಯಾಲಿಪೋರ್ನಿಯಾಗೆ ತೆರಳಿದ್ದರು ಎಂದು ವರದಿಯಾಗಿದೆ.

ಯೊಸೆಮೈಟ್ ನ್ಯಾಷನಲ್ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್‌ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು ಈ ವೇಳೆ ಪಾರ್ಕ್ ನ ತುತ್ತತುದಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರ ಮೃತದೇಹಗಳನ್ನು ತೆಗೆಯಲಾಗಿದೆ.
ಈ ಕುರಿತಂತೆ ಅಲ್ಲಿನ ಮಾಧ್ಯಮಗಳಿಗೆ ಮಾತನಾಡಿರುವ ಉದ್ಯಾನವನದ ಅಧಿಕಾರಿಗಳು ದಂಪತಿ ಆ ಸ್ಥಳದಿಂದ ಬೀಳಲು ಕಾರಣ ಏನು ಎಂಬುದು ನಮಗೂ ಸಹ ಅರ್ಥವಾಗುತ್ತಿಲ್ಲ. ಘಟನೆ ಹೇಗೆ ನಡೆದಿದೆ ಎಂಬುದನ್ನು ನಾವು ಪರಾಮರ್ಷಿಸುತ್ತಿದ್ದೇವೆ ಎಂದಿದ್ದಾರೆ.

















