ಶಿವಮೊಗ್ಗ: ಈಗಾಗಲೇ ಸಾಕಷ್ಟು ಅಲ್ಲೋಲಕಲ್ಲೋಲ ಸೃಷ್ಠಿಸಿರುವ ಮೀಟೂ ಅಭಿಯಾನದಲ್ಲಿ ನಿಮ್ಮ ಹೆಸರೂ ಸಹ ಪ್ರಸ್ತಾಪವಾಗಬಹುದು ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕುಹಕವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ ಚುನಾವಣೆ ಮಾಡುವ ಪ್ರಯತ್ನ ನಡೆಸುದ್ದು, ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದೆ. ಕುಮಾರಸ್ವಾಮಿ ಅವರು ಸೊರಬಕ್ಕೆ ಬಂದಾಗ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸುಳ್ಳಿಗೆ ಯಾವಾಗಲೂ ಸಾಕ್ಷಿ, ಆಧಾರ ಇರುವುದಿಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಸಾಕ್ಷಿ ಸಮೇತ ನಾನು ಮಾತನಾಡುತ್ತೇನೆ. ಇನ್ನೂ ಹೆಚ್ಚು ಮಾತನಾಡಿದರೆ ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಎಚ್ಚರಿಸಿದರು.
ರಾಧಿಕಾ ಕುಮಾರಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಅವರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವುದು, ತಲೆ ಮರೆಸಿಕೊಂಡಿರುವುದು ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ನೂರಾರಿವೆ. ಅವರೂ ಸಹ ನಿಮ್ಮ ಕುಟುಂಬದ ಭಾಗವೇ ಆಗದ್ದಿರೆ, ಅವರನ್ನೂ ಸಹ ಚುನಾವಣೆಗೆ ನಿಲ್ಲಿಸಿ ಎಂದರು.
















