ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಿಎಸ್’ಎಫ್ ಕಮ್ಯುನಿಕೇಶನ್ ಮತ್ತು ಐಟಿ ವಿಭಾಗದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆದರ್ಶ್ ಎಸ್. ಸಿಗದಾಳ್ ಕೇಂದ್ರ ಗೃಹ ಮಂತ್ರಾಲಯದ ಪರಾಕ್ರಮ್ ಪದಕ ವಿಜೇತರು. ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ತೀರ್ಥಹಳ್ಳಿ ಗಾಯತ್ರಿ ಮಂದಿರದಲ್ಲಿ 5 ನೆಯ ಶಿವಮೊಗ್ಗ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕರಾಟೆ ಚಾಂಪಿಯನ್’ಶಿಪ್ ಉದ್ಘಾಟಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇವರೊಂದಿಗೆ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ್ದು, ನಮ್ಮ ಮಲೆನಾಡಿನ ವೀರ ಯೋಧನ ಕುರಿತಾಗಿ ಲೇಖನ ಇಲ್ಲಿದೆ.
ಅದು ಹಸಿರನ್ನು ಹೊದ್ದುಕೊಂಡಿರುವ ಮಲೆನಾಡ ಮಡಿಲು ತೀರ್ಥಹಳ್ಳಿಯ ತಾಲೂಕಿನ ಸಿಗದಾಳು ಎಂಬ ಪುಟ್ಟ ಗ್ರಾಮ. ಇಲ್ಲಿನ ದಿ.ಎಸ್.ಪಿ. ಶ್ರೀನಿವಾಸ್ ಹಾಗೂ ಇಂದಿರಾ ಅವರ ಪುತ್ರರಾಗಿ ಜನಿಸಿ, ಇಂದು ಹೆಮ್ಮೆಯ ಭಾರತೀಯ ಸೇನೆಯಲ್ಲಿ ದೇಶವೇ ಮೆಚ್ಚುವಂತೆ ತಾಯಿ ಭಾರತಿಯ ಸೇವೆ ಸಲ್ಲಿಸುತ್ತಿರುವ ವೀರ ಯೋಧ ಆದರ್ಶ್.
1978 ರ ಆಗಸ್ಟ್ 26 ರಂದು ಜನಿಸಿದ ಇವರು, ಬಿಎಸ್’ಸಿ ಪದವಿಯನ್ನು ತುಂಗಾ ಮಹಾವಿದ್ಯಾಲಯದಲ್ಲಿ ಪಡೆದು, ಕಾಲೇಜಿನ ಎನ್’ಸಿಸಿ ಸಾರ್ಜೆಂಟ್ ಮತ್ತು ಸೀನಿಯರ್ ಅಂಡರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿ, ವಿಶಾಖಪಟ್ಟಣಂ ಹತ್ತಿರವಿರುವ ಕೋರಕೊಂಡ ಸೇರಿದಂತೆ ಹಲವು ಕ್ಯಾಂಪ್’ನಲ್ಲಿ ಭಾಗವಹಿಸಿದ್ದಾರೆ.
2000ರಲ್ಲಿ ಭಾರತೀಯ ಸೇನೆಗೆ ಸೇರಿದ ಇವರು, ಪಶ್ಚಿಮ ಬಂಗಾಳದಲ್ಲಿ, ಜಮ್ಮು ಕಾಶ್ಮೀರಗಳಲ್ಲಿಯೂ ಸಹ ಸೇವೆ ಸಲ್ಲಿಸಿದ್ದು, 2011ರಲ್ಲಿ ಎನ್’ಎಸ್’ಜಿ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್)ನಲ್ಲಿ ಐಟಿ ಮತ್ತು ಕಮ್ಯುನಿಕೇಷನ್ ವಿಭಾಗದ ಯೂನಿಟ್’ಗೆ ಆಯ್ಕೆಯಾದರು. ಬ್ಲಾಕ್ ಕ್ಯಾಟ್ ಕಮಾಂಡೋ ಹೊಂದಿರುವ ಎನ್’ಎಸ್’ಜಿಯಲ್ಲಿ ಮಾಹಿತಿ ತಂತ್ರಜ್ಞಾನ ನಿರ್ವಹಣೆ ಮತ್ತು ಸ್ಟೋರ್ ಇನ್ಚಾರ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಅರೆ ಸೇನಾ ಪಡೆ – ಗಡಿ ಭದ್ರತಾ ಪಡೆಯ ಕಮ್ಯುನಿಕೇಶನ್ ಹಾಗೂ ಐಟಿ ವಿಭಾಗದಲ್ಲಿ ಪ್ರಸುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅದು 2018ರ ಜನವರಿ 26ರ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಇಡಿಯ ದೇಶವೇ ಮುಳುಗಿತ್ತು. ಅಂದು ಜಮ್ಮುವಿನಿಂದ ಕಾಶ್ಮೀರದವರೆಗೂ ಭಾರತದ ಸೈನಿಕರು ಸಹ ಸಿದ್ಧತೆ ನಡೆಸಿದ್ದರು. ಆದರೆ 2018 ರ ಜನವರಿ 19ರ ಮಧ್ಯಾಹ್ನ 12ರ ಸಮಯದಲ್ಲಿ ಜಮ್ಮುವಿನ ಸಾಂಬಾ ಜಿಲ್ಲೆಯ ರಾಮ್ ಘಡ್ ಗಡಿಯಲ್ಲಿ ಶತ್ರುಗಳಿಂದ ಬಾಂಬ್ ದಾಳಿ ನಡೆದಿತ್ತು.
ಪಾಕಿಸ್ಥಾನದಿಂದ ಭಾರತದ ಗಡಿಗೆ ಕೇವಲ ಮೂರೇ ಕಿಮೀ ದೂರವಿರುವ ರಾಮ್’ಘಡಾ ಕ್ಯಾಂಪ್ ಮೇಲೆ ಮೂರು ದಿನಗಳ ಕಾಲ ನಿರಂತರ ಫೈರಿಂಗ್ ಹಾಗೂ ಬಾಂಬ್ ದಾಳಿ ನಡೆದಿತ್ತು. ಅದಕ್ಕೆ ಭಾರತದ ಸೈನಿಕರು ಕೊಡ ಪ್ರತಿ ದಾಳಿ ನಡೆಸಿದ್ದರು. ಈ ವೇಳೆ ಪ್ರಾಣವನ್ನೂ ಲೆಕ್ಕಿಸದೇ ಶತ್ರುಗಳ ವಿರುದ್ಧ ಹೋರಾಡಿದ್ದ ನಮ್ಮ ಹೆಮ್ಮೆಯ ಸೈನಿಕ!
ಕಮ್ಯುನಿಕೇಷನ್ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೆಲಸ ಮಾಡುತ್ತಿದ್ದ ಆದರ್ಶ್ ಅವರಿಗೆ, ಕ್ಯಾಂಪ್ ಮೇಲೆ ಬಾಂಬ್ ದಾಳಿ, ಆ ದಾಳಿಯಿಂದ ಸಂಪರ್ಕ ಕಡಿದುಹೋಗುತ್ತದೆ. ದುರಸ್ತಿಗೆ ನುಗ್ಗಿ ಸಂಗಡಿಗರನ್ನು ರಕ್ಷಿಸಲು ಆದರ್ಶ್ ಮುಂದಾದ ವೇಳೆ ಅವರ ಎಡಗೈ ಹಾಗೂ ಬೆನ್ನಿಗೆ splinter ಅಪ್ಪಳಿಸಿ ಬೆನ್ನು ಸೀಳುತ್ತದೆ, ಎಡಗೈನ ಎರಡು ಮೂಳೆಗಳು ಮುರಿಯುತ್ತದೆ. ಭಾರೀ ಪೆಟ್ಟುಬಿದ್ದ ಪರಿಣಾಮ ಇವರ ಕೈಗೆ plates (3 rod) ಅಳವಡಿಸಲಾಗುತ್ತದೆ. ಈ ಘಟನೆಯನ್ನು ನೆನಪಿಸಿಕೊಳ್ಳುವ ಇವರು, ಸುಮಾರು ಎರಡು ವರ್ಷ ಕಳೆದರೂ ಎಡಗೈನಿಂದ ಕೆಲಸ ಮಾಡಲು ಆಗದೇ ಅಪಾರ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ.
ವೀರ ಯೋಧನ ಅರಸಿಬಂದ ಪ್ರಶಸ್ತಿ ಸಮ್ಮಾನಗಳು
ಮಲೆನಾಡಿನ ಈ ಹೆಮ್ಮೆಯ ವೀರ ಯೋಧನನ್ನು ನಮ್ಮಲ್ಲಿನ ಹಲವಾರು ಸಂಘಟನೆಗಳು ಗೌರವಿಸಿವೆ. ಕೊಪ್ಪ-ತೀರ್ಥಹಳ್ಳಿಯ ರೋಟರಿ ಕ್ಲಬ್, ಮಲೆನಾಡು ಮಿತ್ರ ವೃಂದ ಬೆಂಗಳೂರು, ತುಂಗಾ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ತುಂಗಾ ವಿದ್ಯಾವರ್ಧಕ ಸಂಘದ ವತಿಯಿಂದ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಇವರನ್ನು ಅತ್ಯಂತ ಪ್ರೀತಿಯಿಂದ ಗೌರವಿಸಲಾಗಿದೆ.
ಇನ್ನು, 2018ರಲ್ಲಿ ಮಲೆನಾಡು ಮಿತ್ರ ವೃಂದದ ವತಿಯಿಂದ ‘ಮಲೆನಾಡು ಸಾಧಕ’ ಎಂಬ ಬಿರುದು ನೀಡಿ ಸನ್ಮಾನಿಸಿದ್ದರೆ, ಬೆಂಗಳೂರಿನ ಆಸರೆ ಸಮಾಜ ಸೇವಾ ಟ್ರಸ್ಟ್ ವತಿಯಿಂದ ‘ಆಸರೆ ರತ್ನ’ ಪ್ರಶಸ್ತಿ ನೀಡಲಾಗಿದೆ. ಇವುಗಳೊಂದಿಗೆ ಈವರೆಗೂ ಸುಮಾರು 19 ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.
ಉಗ್ರರು ಅಥವಾ ಗಡಿ ಭಾಗದ ಶತ್ರುಗಳೊಂದಿಗಿನ ಹೋರಾಟದ ಆಪರೇಷನ್’ನಲ್ಲಿ ಯಶಸ್ವಿ ಪ್ರದರ್ಶನ ನೀಡಿ ಗಾಯಳುಗೊಂಡ ಯೋಧರಿಗೆ ನೀಡುವ ಪರಾಕ್ರಮ್ ಪದಕ ಸಹ ಇವರಿಗೆ ಸಂದಿದೆ.
ಹುತಾತ್ಮರಾದ ನಂತರವಲ್ಲ ಯೋಧರು ಬದುಕಿದ್ದಾಗ ಗೌರವಿಸಿ
ದೇಶ ಕಾಯುವ ಯೋಧರನ್ನು ಅವರು ಹುತಾತ್ಮರಾದ ನಂತರ ಗೌರವಿಸುವುದಕ್ಕಿಂತಲೂ, ಜೀವಂತ ಇರುವಾಗಲೇ ಅವರ ತ್ಯಾಗವನ್ನು ಹಾಗೂ ಸಾಧನೆಯನ್ನು ಗೌರವಿಸಬೇಕು.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡುವ ವೇಳೆ ತೀರಾ ಭಾವುಕರಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಆದರ್ಶ್, ನನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ನನ್ನ ಹಾಗೆ ಭಾರತೀಯ ಸೇನೆಗೆ ಸೇರಿಸಿ, ತಾಯಿ ಭಾರತಿಯ ಸೇವೆ ಸಲ್ಲಿಸಬೇಕು ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು. ತಮ್ಮ ಸನ್ಮಾನಗಳ ಕುರಿತಾಗಿ ಅಭಿಪ್ರಾಯ ಹಂಚಿಕೊಂಡ ಅವರು, ಸನ್ಮಾನ ಹಾಗೂ ಗೌರವಗಳೆಲ್ಲಾ ವೈಯಕ್ತಿಕವಾಗಿ ನನಗೆ ಸಂದವುಗಳಲ್ಲ. ಬದಲಾಗಿ ನಾನು ಸೇವೆ ಸಲ್ಲಿಸಿದ ನಮ್ಮ ದೇಶಕ್ಕೆ ಅರ್ಪಣೆ ಎನ್ನುತ್ತಾರೆ.
ದೇಶದ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಬೇಕು. ಹಾಗಿದ್ದಾಗ ಮಾತ್ರ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯ! ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಸೇವೆಯಲ್ಲಿರುವ ಯೋಧರನ್ನು ಮತ್ತು ಅವರ ಕುಟುಂಬದವರನ್ನು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳಬೇಕು. ರಾಜಕಾರಣಿಗಳು ಸ್ವಾರ್ಥಕ್ಕೆ ದೇಶದ ಹಿತಾಸಕ್ತಿಯನ್ನು ಬಲಿ ಕೊಡಬಾರದು.
-ಆದರ್ಶ್, ಪರಾಕ್ರಮ್ ಪದಕ ವಿಜೇತ ವೀರ ಯೋಧ
ಎಂಜೆ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್
ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಮನೆ ಮಾತಾಗಿರುವ ಎಂಜೆ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್’ಗೆ 25 ವರ್ಷಗಳ ಇತಿಹಾಸವಿದೆ.
ತಮ್ಮ ಸಂಸ್ಥೆಯ ಕುರಿತಾಗಿ ಮಾತನಾಡಿದ ಸಂಸ್ಥಾಪಕ ವೈ.ಎಸ್. ಮಹಾಬಲ ಜೋಯಿಸ್ ಅವರು, ನಮ್ಮ ಶಾಲೆಯಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರಾಟೆ ತರಬೇತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕವನ್ನು ಪಡೆದು ಆಧುನಿಕ ಸೌಲಭ್ಯಗಳನ್ನು ನೀಡಿ ತರಬೇತಿ ನೀಡುತ್ತೇವೆ ಎನ್ನುತ್ತಾರೆ.
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಚಾಂಪಿಯನ್’ಶಿಪ್’ನಲ್ಲಿ ಭಾಗವಹಿಸಿ ಪದಕ ವಿಜೇತರಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post