ಕುಂದಾಪ್ರ ಅನ್ನೋದು ಒಂದು ದೊಡ್ಡ ಪ್ರವಾಸಿ ತಾಣ. ಹಾಗೆ ಕುಂದಾಪ್ರ ಕಲಾ ಸಂಸ್ಕೃತಿಯ ಜಾಗ ಕೂಡ ಹೌದು. ನನ್ನ ಓರ್ವ ಆತ್ಮೀಯರು ಸಾಕಷ್ಟು ಜನರ ಪ್ರೀತಿ ಪಡೆದವರು ಕುಂದಾಪುರದ ಕೋಟ ಪರಿಸರದ ಒಬ್ಬ ಪ್ರತಿಭೆಯ ಲೇಖನ ಇವತ್ತು ನಿಮ್ಮ ಮುಂದೆ ಇಡ್ತಾ ಇದ್ದೀವಿ.
ಒಂದು ಸಣ್ಣ ಹೆಜ್ಜೆ, ಆ ಹೆಜ್ಜೆಗಳಿಗೆ ಸಾವಿರಾರು ನೋವು, ಆದರೆ ಆ ನೋವುಗಳೆಲ್ಲ ನನ್ನ ಜಯದ ಮುನ್ಸೂಚನೆ ಅನ್ನೋ ವೇದ ವಾಕ್ಯ ಹಿಡಿದು ಗೆದ್ದ ನಮ್ಮ ಹೆಮ್ಮೆಯ ಕುಂದಾಪ್ರದ ಕುವರ ವಿ.ಜೆ. ಪ್ರದೀಪ್ ಪುತ್ರನ್ ಕೋಟ. ಬಹುಶಃ ನೀವು ಈ ಹೆಸರು ಮುಂಚಿತವಾಗಿ ಕೇಳಿರ್ತೀರ.
ಪ್ರದೀಪ್ ಅವರು ಮೂಲತಃ ಕುಂದಾಪ್ರದ ಕೋಟ ಪರಿಸರದ ಯುವಕ ಶ್ರೀಯುತ ನರಸಿಂಹ ಹಾಗೂ ಪ್ರೇಮ ದಂಪತಿಗಳ ಸುಪುತ್ರ. ಪ್ರಮೋದ್ ಎಂಬವರ ಸಹೋದರ. ಇವರು ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ 4 ವರ್ಷಗಳ ಕಾಲ ಟೊಯೋಟಾ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ಮಾತಿನಲ್ಲಿ ಚಾಣಾಕ್ಷ, ಇವರ ಮಾತುಗಳನ್ನು ಕೇಳೋದೇ ಚಂದ. ಯಾಕೆ ತನ್ನ ಕಂಠವನ್ನು ನಿರೂಪಣೆಯಾಗಿ ಬದಲಾಯಿಸಬಾರದು ಎಂಬ ನಿಟ್ಟಿನಲ್ಲಿ ನಿರೂಪಣೆ ಎಂಬ ಹವ್ಯಾಸ ಅಳವಡಿಸಿಕೊಂಡರು.
ಇವರ ಪಯಣವೇ ಒಂದು ವಿಭಿನ್ನ. ತನ್ನಲ್ಲಿ ಬೆಟ್ಟದಷ್ಟು ನೋವಿದ್ದರೂ ಅದನ್ನ ಹೃದಯದಲ್ಲೇ ಬಚ್ಚಿಟ್ಟು ಇನ್ನೊಬ್ಬರ ನಗುವಿಗೆ ಕಾರಣವಾಗು ನಿನ್ನ ಕಾಯುವ ದೇವರು ನಿನ್ನ ನಗುವಿಗೆ ಕಾರಣವಾಗುವ ಎಂದು ಹೇಳುತ್ತಾ, ಇನ್ನೊಬ್ಬರ ನೋವಿಗೆ ಮಿಡಿಯುತ್ತಾ, ನಿರಂತರವಾಗಿ ಕಲಾ ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಲು ತೊಡಗಿದರು.
ತನ್ನ ನಿರೂಪಣೆ ಹವ್ಯಾಸವನ್ನು ನಿರಂತರವಾಗಿ ಬೆಳೆಸಿ ವಾಹಿನಿಗಳತ್ತ ತಮ್ಮ ಪಯಣ ಬೆಳೆಸಿದರು. ರಾಜ್ ಮ್ಯೂಸಿಕ್, ಪ್ರೈಮ್ ಟಿವಿ, ಸ್ಪಂದನ ಟಿವಿ, ಡೈಜಿ ವರ್ಲ್ಡ್, ಕನ್ನಡ ಟಿವಿ ಮುಂತಾದ ವಾಹಿನಿಗಳಲ್ಲಿ ಸೇವೆ ಸಲ್ಲಿಸಿ ಎಲ್ಲರಿಗೂ ಪರಿಚಿತರಾದರು.
ಅಲ್ಲಿಂದ ವಿಜೆ ಪ್ರದೀಪ್ ಪುತ್ರನ್ ಎಂಬ ಹೆಸರಿನ ಹೆಗ್ಗಳಿಕೆ ಪಡೆದುಕೊಂಡರು. ಅಲ್ಲದೆ ಕೋಸ್ಟಲ್ ಡಾನ್ಸ್ ಅಕಾಡಮಿ ಎನ್ನುವ ಸಂಸ್ಥೆಯ ಮೂಲಕ 2 ವರ್ಷಗಳ ಕಾಲ ಮಕ್ಕಳಿಗೆ ನೃತ್ಯ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಿಕೊಟ್ಟರು.
ತನ್ನದೇ ಆದ ನಿರೂಪಣಾ ಶೈಲಿಯಲ್ಲಿ ಇವರು ಸಾಕಷ್ಟು ಜನರ ಪ್ರೀತಿಗೆ ಪಾತ್ರರಾದರು. ಇಲ್ಲಿಯವರೆಗೆ 300 ಕ್ಕಿಂತಲೂ ಅಧಿಕ ವೇದಿಕೆಗಳಲ್ಲಿ ನಿರೂಪಣೆ ಮಾಡಿ ತನ್ನ ಕಂಠದಿಂದಲೇ ಎಲ್ಲರನ್ನು ಮನರಂಜಿಸೋ ಇವರು ಸಾಕಷ್ಟು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಒಬ್ಬ ಕಲೆಗಾರನಿಗೆ ಇನ್ನೇನು ಬೇಕು ಅಲ್ವ? ಜನರ ಪ್ರೀತಿ ಆಶೀರ್ವಾದವಿದ್ದರೆ ತಾನು ಜಗತ್ತೇ ಗೆಲ್ಲಬಹುದು ಅನ್ನೋ ಮಾತಿದೆ ಅದಕ್ಕೆ ಇವರೇ ಸ್ಫೂರ್ತಿ.
ಪ್ರದೀಪ್ ಓರ್ವ ನಿರೂಪಕನಲ್ಲದೆ ಇನ್ನೂ ಹಲವಾರು ಕ್ಷೇತ್ರದಲ್ಲಿ ಪ್ರವೀಣರು. ತನ್ನ ಹೈಸ್ಕೂಲ್ ಜೀವನದಲ್ಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು ಶಟಲ್ ಬ್ಯಾಡ್ಮಿಂಟನ್ ನಲ್ಲಿ ಎರಡು ಬಾರಿ ಜಿಲ್ಲಾಮಟ್ಟದಲ್ಲಿ, ಒಂದು ಬಾರಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು.
ಅಲ್ಲದೇ ಯಾವುದೇ ಸಂಗೀತ ತರಗತಿಗೂ ಹೋಗದೆ ಇಂಪಾಗಿ ಹಾಡುವ ಅದ್ಭುತ ಗಾಯಕ, ಚಿತ್ರ ಬಿಡಿಸೋ ಚಿತ್ರಗಾರ, ಓರ್ವ ಅದ್ಭುತ ಬರಹಗಾರ, ಚಿಕ್ಕಂದಿನಿಂದಲೇ ಕೃಷಿಯಲ್ಲೂ ಆಸಕ್ತಿ ಹೊಂದಿದ ಇವರು ಕೃಷಿ ಕೆಲಸಕ್ಕೆ ಇಳಿದರೆ ಎಲ್ಲವನ್ನ ಬಲ್ಲ ಚಾಣಾಕ್ಷ, ನಟನಾ ಕ್ಷೇತ್ರದಲ್ಲೂ ಕಮ್ಮಿ ಇಲ್ಲವೆಂಬಂತೆ ಯಕ್ಷಗಾನ, ನಾಟಕಗಳ ಮೂಲಕ ಹಲವಾರು ವೇದಿಕೆಗಳಲ್ಲಿ ರಂಜಿಸಿದ ಕಲಾವಿದ.
ಪ್ರದೀಪ್ ಅನ್ನೋ ಮೂರಕ್ಷರ ಕುಂದಾಪ್ರ ಜನತೆಯ ಪ್ರೀತಿ ಗೆದ್ದಿದೆ. ತಾನು ಒಬ್ಬ ಕಲಾವಿದನಾಗಿ ಅನೇಕ ಕಲಾವಿದರಿಗೆ ಕರಾವಳಿ ಕುಸುಮಗಳು ಮತ್ತು ಕುಂದಾಪ್ರ ಕುಟುಂಬ ಎಂಬ ಎರಡು ಫೇಸ್ಬುಕ್ ಪೇಜ್ ಮುಖಾಂತರ ಬೆಂಬಲ ನೀಡುತ್ತಾ ಬರುತಿದ್ದಾರೆ.
ಬೆಳೆಯಬೇಕು ಎನ್ನುವ ಅದೆಷ್ಟೋ ಮನಸ್ಸುಗಳಿಗೆ ಇವರಂತ ಒಳ್ಳೆ ಮನಸ್ಸುಗಳು ಸ್ಪೂರ್ತಿಯಾಗಿದೆ.
ಇವರ ಸಾಧನೆಯ ಹಾದಿ ಕಂಡು ಕೆಲವರು ಇವರ ಹೆಸರನ್ನ ಕೆಡಿಸೋ ಪ್ರಯತ್ನ ಮಾಡಿದ್ದರೂ, ಇವರ ಒಳ್ಳೆತನ ಅಂತವರ ಬಾಯಿಗಳನ್ನು ಮುಚ್ಚಿಸಿತು. ನೂರಾರು ಪ್ರತಿಭೆಗಳನ್ನ ಗುರುತಿಸಿ ಪ್ರೋತ್ಸಾಹ ನೀಡಿ, ಕಷ್ಟದಲ್ಲಿರುವ ಅದೆಷ್ಟೋ ಮನಸ್ಸುಗಳಿಗೆ ಸ್ಪಂದಿಸುವ ನಿಮ್ಮಂತಹ ಒಳ್ಳೆಯವರಿಗೆ ವಿಷ ಸರ್ಪಗಳು ಸಿಗೋದು ಸಹಜ. ಆದರೆ ನಿಮ್ಮ ಅಭಿಮಾನ ಪ್ರೀತಿ ಸದಾ ಒಳಿತನ್ನೇ ಕೊಡುವುದು ವಿನಃ ಕೆಡುಕನಲ್ಲ.
ನಗ್ತಾ ಇರಿ, ನಗಸ್ತಾ ಇರಿ ಅನ್ನೊ ನಿಮ್ಮದೇ ಮಾತಿನಂತೆ ಯಾವಾಗಲೂ ಇನ್ನೊಬ್ಬರ ಸಂತೋಷವನ್ನು ಬಯಸುವ ನಿಮ್ಮ ಸರಳತೆಯ ಪಯಣ ಹೀಗೆ ಮುಂದುವರಿಯಲಿ, ನಿಮ್ಮ ಪಯಣಕ್ಕೊಂದು ಶುಭಾಶಯಗಳು.
ಬರಹ: ಕಲಾವಿದರ ಧ್ವನಿ
ಚಿತ್ರಕೃಪೆ, ವೀಡಿಯೋ: ಕರಾವಳಿ ಕುಸುಮಗಳು
Discussion about this post