ಬೆಂಗಳೂರು: ಮಾಡಿದ ಪಾಪ ಹಾಗೂ ತಪ್ಪಿನ ಫಲವನ್ನು ಜೀವನದಲ್ಲಿ ಅನುಭವಿಸಿಯೇ ಹೋಗಬೇಕು; ಅದು ವಿಧಿ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ “ಕೃಷ್ಣಕಥಾ” ಸಪ್ತಾಹದ 3 ನೇ ದಿನ ಸಾನ್ನಿಧ್ಯವಹಿಸಿ ಪ್ರಚನವನ್ನು ಅನುಗ್ರಹಿಸಿದ ಶ್ರೀಗಳು ; ಭಾಗವತಾಧಾರಿತವಾದ ಪೂತನಿ ಸಂಹಾರದ ಪ್ರವಚನವನ್ನು ಪ್ರಸ್ತಾಪಿಸಿ, ಪೂತನಿಯು ವಾತ್ಸಲ್ಯದ ಎದೆಹಾಲನ್ನು ಉಣಿಸುವ ನೆಪದಲ್ಲಿ ಮಕ್ಕಳಿಗೆ ವಿಷವುಣ್ಣಿಸಿ ಸಂಹರಿಸುತ್ತಿದ್ದಳು. ಆಗ ಬಾಲ ಕೃಷ್ಣ ವಿಷಮಯವಾದ ಅವಳ ಎದೆಹಾಲು ಕುಡಿಯುತ್ತಾ ಅವಳ ಜೀವವನ್ನೇ ಅಪಹರಿಸಿದ. ಅವಳ ಪಾಪಕ್ಕೆ ತಕ್ಕ ಶಿಕ್ಷೆ ಕೊಟ್ಟ ಎಂದರು.
ಶ್ರೀಕೃಷ್ಣನಿಗೆ ಗೋಧೂಳಿಯ ರಕ್ಷೆ : ಪೂತನಿ ಸಂಹಾರದ ನಂತರ ಗೋಪಿಕೆಯರು ಬಾಲ ಕೃಷ್ಣನನ್ನು ಗೋಮೂತ್ರದಿಂದ ಸ್ನಾನ ಮಾಡಿಸಿ, ಗೋಧೂಳಿಯಿಂದ ರಕ್ಷೆ ಮಾಡಿದರು ಹಾಗೂ ಗೋವಿನ ಬಾಲವನ್ನು ಸ್ಪರ್ಷಮಾಡಿಸುವುದರ ಮೂಲಕ ಬಾಲ ಕೃಷ್ಣನ ದೃಷ್ಟಿ ತೆಗೆದರು ಎಂದು ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ಇದು ಗೋವಿನ ಮಹತಿಯನ್ನು ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರವಚನ – ಗಾಯನ – ಚಿತ್ರ – ರೂಪಕ -ವಾದನಗಳಿಂದ ಕೂಡಿದ ಈ ವಿಶಿಷ್ಟಕಾರ್ಯಕ್ರಮದಲ್ಲಿ ಶ್ರೀಗಳ ಪ್ರವಚನದ ಜೊತೆಜೊತೆಗೆ, ಕಡತೋಕ ಶ್ರೀಪಾದ್ ಭಟ್, ಶಂಕರಿಮೂರ್ತಿ ಬಾಳಿಲ, ದೀಪಿಕಾ ಭಟ್, ಪೂಜಾ ಕೊರಿಕ್ಕಾರ್, ಪ್ರಿಯಾ ಕೊರಿಕ್ಕಾರ್ ಹಾಗೂ ರಘುನಂದನ್ ಬೇರ್ಕಡವು ಸಂಗೀತದ ಸಾಥ್ ನೀಡಿದರೆ, ಪ್ರಸಿದ್ಧ ಕಲಾವಿದ ನೀರ್ನಳ್ಳಿ ಗಣಪತಿಯವರು ಪ್ರಸಂಗಕ್ಕೆ ತಕ್ಕ ಚಿತ್ರವನ್ನು ಬಿಡಿಸಿ ಜನರ ಗಮನಸೆಳೆದರು. ಕೊರ್ಗಿ ಶಂಕರನಾರಾಯಣ ಉಪಾಧ್ಯ ಹಾಗೂ ತಂಡ ‘ಪೂತನಿ ಸಂಹಾರ’ದ ರೂಪಕವನ್ನು ಪ್ರದರ್ಶಿಸಿದರು.
ಸೆ. 08 ವರೆಗೆ ಪ್ರತಿದಿನ ಸಂಜೆ ಶ್ರೀರಾಮಾಶ್ರಮದಲ್ಲಿ ಕೃಷ್ಣಕಥಾ:
ಪ್ರಸಿದ್ಧ ಶ್ರೀರಾಮಕಥಾ ಮಾದರಿಯಲ್ಲಿ ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ಸಂಯೋಜನೆಯಲ್ಲಿ, ಶ್ರೀಕೃಷ್ಣನ ತತ್ವಗಳನ್ನು ಜನಮಾನಸಕ್ಕೆ ಬಿತ್ತರಿಸುವ ವಿಶಿಷ್ಟ ಕಾರ್ಯಕ್ರಮ “ಕೃಷ್ಣಕಥಾ”ವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದು, ನಾಡಿನ ಖ್ಯಾತ ಕಲಾವಿದರುಗಳು ಭಾಗವಹಿಸಲಿದ್ದಾರೆ.
ಕಲಾಸಕ್ತರು ಹಾಗೂ ಆಸ್ತಿಕ ಭಕ್ತಜನರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ; ಮನೋರಂಜನೆಯೊಂದಿಗೆ ಕೃಷ್ಣನ ತತ್ತ್ವಗಳನ್ನು ಅರಿತುಕೊಳ್ಳಬಹುದಾಗಿದೆ.
ಸೆ. 08 ವರೆಗೆ ಪ್ರತಿದಿನ : ಸಂಜೆ 06.00 – 09.00
ಸ್ಥಳ : ಶ್ರೀರಾಮಚಂದ್ರಾಪುರಮಠ, ಗಿರಿನಗರ
Discussion about this post