ನವದೆಹಲಿ: ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಕುರಿತಾಗಿ ಪ್ರಬಲ ಸಾಕ್ಷಿ ದೊರೆತಿದ್ದರಿಂದಲೇ ಭೀಮಾ-ಕೋರೇಗಾಂವ್ ಹಿಂಸೆಗೆ ಸಂಬಂಧಪಟ್ಟ ಐವರು ಮಾನವ ಹಕ್ಕು ಕಾರ್ಯಕರ್ತರನ್ನು ತಾನು ಬಂಧಿಸಿರುವುದಾಗಿ ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟ್ ಇಂದು ಅಫಿಡವಿಟ್ ಸಲ್ಲಿಸಿದ್ದಾರೆ.
ಈ ಕುರಿತಂತೆ ಇಂದು ಅಫಿಡವಿಟ್ ಸಲ್ಲಿಸಿರುವ ಪೊಲೀಸರು, ಈ ಐವರು ಹಿಂಸಾಕೃತ್ಯಕ್ಕೆ ಯೋಜನೆ ರೂಪಿಸಿ ತಯಾರಿ ನಡೆಸಿದ್ದು ಮಾತ್ರವಲ್ಲದೆ ಅತಿದೊಡ್ಡ ಮಟ್ಟದಲ್ಲಿ ಹಿಂಸಾಚಾರ ಸೃಷ್ಟಿಸಲು ಯೋಜನೆ ನಡೆಸುತ್ತಿದ್ದರು. ಈ ಮೂಲಕ ಸಮಾಜದ ಆಸ್ತಿಪಾಸ್ತಿಗಳನ್ನು ನಾಶಮಾಡಿ ಶಾಂತಿ ಕೆಡಿಸಲು ಮುಂದಾಗಿದ್ದರು ಎಂದಿದ್ದಾರೆ.
ಮಾನವ ಹಕ್ಕು ಕಾರ್ಯಕರ್ತರನ್ನು ನಾವು ಬಂಧಿಸಿರುವುದು ಅವರಲ್ಲಿನ ಭಿನ್ನಮತದ ಅಭಿವ್ಯಕ್ತಿಗಾಗಿ ಅಲ್ಲ. ಮಾವೋವಾದಿಗಳೊಂದಿಗೆ ಅವರು ನಂಟು ಹೊಂದಿರುವ ಬಗ್ಗೆ ಪರ್ಯಾಪ್ತ ಪುರಾವೆಗಳು ದೊರಕಿದ ಕಾರಣಕ್ಕೇ ನಾವು ಅವರನ್ನು ಬಂಧಿಸಿದ್ದೆವು ಎಂದು ಪೊಲೀಸರು ಹೇಳಿದ್ದಾರೆ.
ನಾವು ಸಲ್ಲಿಸಿರುವ ಎಫ್‌ಐಆರ್ ಪ್ರತಿಯನ್ನು ಓದಿ, ಅವರುಗಳ ಅಪರಾಧದಗಳ ತೀವ್ರತೆಯನ್ನು ಅರಿಯಬಹುದಾಗಿದೆ ಎಂದಿರುವ ಪೂನಾ ಪೊಲೀಸ್ ಆಯುಕ್ತರು, ಇವರೆಲ್ಲಾ, ಹಿಂಸೆ ನಡೆಸಲು, ಶತ್ರುಗಳ ವಿರುದ್ಧ ಯೋಜಿತ ಹೊಂಚುದಾಳಿಯನ್ನು ಅಥವಾ ಧಂಗೆಯನ್ನು ನಡೆಸಲು ಯೋಜಿಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ ನಡೆದ ಬಳಿಕ ಭೀಮಾ ಕೋರೇಗಾಂವ್ ಗ್ರಾಮದಲ್ಲಿ ಹಿಂಸೆ ಸ್ಪೋಟಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ, ಸರಿಯಾದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಮಾನವ ಹಕ್ಕು ಕಾರ್ಯಕರ್ತರಾದ ವರವರ ರಾವ್, ಅರುಣ್ ಫರೇರಾ, ವರ್ನನ್ ಗೊನ್ಸಾಲ್ವಿಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವಲಾಖಾ ಅವರನ್ನು ಪೊಲೀಸರು ಬಂಧಿಸಿದ್ದರು.
Discussion about this post