ಭಾರತದ ಪ್ರಾಚೀನ ಸಾಧನೆಗಳನ್ನು ಗಮನಿಸಿದಾಗ ಹಲವು ವಿಷಯಗಳಲ್ಲಿ ನಾವು ವಿಶ್ವಮಟ್ಟದಲ್ಲಿ ಮುಂಚುಣಿಯಲ್ಲಿದ್ದೆವು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇಪತ್ತನೇ ಶತಮಾನದ ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ರಾಷ್ಟ್ರದಾದ್ಯಂತ ವ್ಯಾಪಿಸಿತ್ತು. ಇಂತಹ ಕ್ಲಿಷ್ಟಕರ ಸಮಯದಲ್ಲೂ ಭಾರತಇಂದು ವಿಶ್ವದ ದಿಗ್ಗಜರೆಂದು ಕರೆಸಿಕೊಳ್ಳುವ ಅನೇಕ ರಾಷ್ಟ್ರಗಳನ್ನು, ಪ್ರಮುಖವಾಗಿ ಒಂದು ಕ್ಷೇತ್ರದಲ್ಲಿ ಮುಲಾಜಿಲ್ಲದೆ ಬಗ್ಗು ಬಡಿದಿತ್ತು. ಅದು ಹಾಕಿ ಕ್ರೀಡೆಯಲ್ಲಿ.
ವಿಶ್ವದ ಪ್ರಮುಖ ಕ್ರೀಡೆಯಲ್ಲೊಂದಾದ ಹಾಕಿಯಲ್ಲಿ ವಿಶ್ವದ ಜನರನ್ನು ಬಾಯ್ಮೇಲೆ ಬೆರಳಿಡುವಂತೆ ಅತ್ಯುತ್ತಮ ಸಾಧನೆ ಮಾಡಿತ್ತು ಭಾರತ. ಈ ಸಾಧನೆಯ ಹಿಂದಿನ ಮಹಾನ್ ಶಕ್ತಿ ಹಾಕಿ ಮಾಂತ್ರಿಕ ಮೇ. ಧ್ಯಾನ್ ಚಾಂದ್. ಈ ವಿಶ್ವ ಶ್ರೇಷ್ಠ ಹಾಕಿ ದಂತಕತೆಯನ್ನು, ಅವರ ಜನ್ಮದಿನದಂದು ಸ್ಮರಿಸುವ ಜವಾಬ್ದಾರಿ ನಮ್ಮೆಲ್ಲರದ್ದು.
ಕಿರಿಯ ವಯಸ್ಸಿನಲ್ಲೇ ಕಾರಣಾಂತರಗಳಿಂದ ಓದು ಮುಂದುವರೆಸಲಾಗದೆ, ಸೇನೆಗೆ ಸೇರಿದ ಧ್ಯಾನ್’ಸಿಂಗ್, ಸೇನೆಯ ಸ್ನೇಹಪೂರ್ಣ ಪಂದ್ಯಗಳಲ್ಲಿ ಹಾಕಿ ಆಡಲು ಶುರು ಮಾಡಿದರು. ಇವರ ಮಿಂಚಿನ ಆಟವನ್ನು ಗಮನಿಸಿದ ಮೇಜರ್ ಭೋಲೆ ತಿವಾರಿಯವರು ಧ್ಯಾನ್ ಸಿಂಗ್ ಅವರಿಗೆ ಹಾಕಿ ಕ್ರೀಡೆಯ ವಿಶೇಷತೆಗಳ ಬಗ್ಗೆ ತರಬೇತಿ ನೀಡಿದರು. ಅಷ್ಟೇ ಅಲ್ಲದೆ ಧ್ಯಾನ್‌ಸಿಂಗ್ ಅವರಆಟದ ವೈಖರಿ ಮತ್ತು ಅವರಲ್ಲಿದ್ದ ಚಾಕಚಕ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮೇ, ಭೋಲೆ ತಿವಾರಿ ಅಂದೇ, ಮುಂದೆ ಇವನು ಚಂದ್ರನಂತೆ(ಹಿಂದಿ ಭಾಷೆಯಲ್ಲಿ ಚಾಂದ್) ಬೆಳಗುತ್ತಾನೆ ಎಂದು ನುಡಿದಿದ್ದರು. ಇಷ್ಟು ಮಾತ್ರವಲ್ಲ ಹಾಕಿ ಮೇಲಿದ್ದ ನಿಷ್ಠೆಯಿಂದಾಗಿ ಧ್ಯಾನ್ ಸಿಂಗ್ ಚಂದ್ರನ ಬೆಳಕಿನಲ್ಲೂ ಹಾಕಿ ಅಭ್ಯಾಸ ಮಾಡುತ್ತಿದ್ದದನ್ನು ಗಮನಿಸಿದ ಇವರ ಸ್ನೇಹಿತರು ಇವರನ್ನು ‘‘ಚಾಂದ್’’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅಂದಿನಿಂದ ಧ್ಯಾನ್ ಸಿಂಗ್, ಧ್ಯಾನ್ ಚಾಂದ್ ಎಂದು ಹೆಸರಾದರು.
ಹಲವು ಸೇನೆಯ ಸ್ಪರ್ಧೆಗಳಲ್ಲಿ ಇವರು ತೋರಿದ ಅಸಾಧಾರಣ ಪ್ರದರ್ಶನದ ಫಲವಾಗಿ ನಂತರದ ದಿನಗಳಲ್ಲಿ ಸೇನಾ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. 1926ರಲ್ಲಿ ಮೊದಲ ಬಾರಿಗೆ ಧ್ಯಾನ್ ಚಂದ್ ನ್ಯೂಜಿಲಾಂಡ್ ತಂಡದ ವಿರುದ್ಧದ ಪಂದ್ಯಗಳಲ್ಲಿ ಆಡಿದರು. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಆಡಿದ 21 ಪಂದ್ಯಗಳಲ್ಲಿ 18 ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿತು. ಈ ಗೆಲುವುಗಳಲ್ಲಿ ಧ್ಯಾನ್ ಚಾಂದ್ ಅವರ ಕೊಡುಗೆ ಅಪಾರವಾದದ್ದು. ಇವರ ಆಟದ ಮೋಹಕತೆಗೆ ನಿಬ್ಬೆರಗಾದ ಅನೇಕರು ಪ್ರಶಂಸಿಸುತ್ತಾರೆ.
ನಂತರದ ದಿನಗಳಲ್ಲಿ ಇವರ ಪ್ರದರ್ಶನದ ಸಾಮರ್ಥ್ಯದ ಮುಲಕ ಅರ್ಹವಾಗಿಯೇ 1928, 1932 ಮತ್ತು 1936ರ ಒಲಂಪಿಕ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಧ್ಯಾನ್’ಚಂದ್ ತಮ್ಮದೆಯಾದ ಟ್ರೆಂಡ್ ಅನ್ನು ಹಾಕಿ ಕ್ಷೇತ್ರದಲ್ಲಿ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಈ ಮೂರೂ ಒಲಂಪಿಕ್ಸ್’ನಲ್ಲಿ ಭಾರತ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 107. ಇದರಲ್ಲಿ 39 ಗೋಲುಗಳು ಧ್ಯಾನ್’ಚಂದ್ ಅವರದ್ದೇ! ಮತ್ತು ಇದರ ಪರಿಣಾಮವಾಗಿ ಭಾರತ ಈ ಮೂರೂ ಒಲಂಪಿಕ್ಸ್’ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿತು.
ಲಾಸ್ ಏಂಜಲೀಸ್ ಒಲಂಪಿಕ್ಸ್ ನಂತರ ಅಮೆರಿಕಾವನ್ನು ಒಳಗೊಂಡ ವಿದೇಶಿ ಪ್ರವಾಸವನ್ನು ಭಾರತತಂಡ ಕೈಗೊಳ್ಳುತ್ತದೆ. ಈ ಪ್ರವಾಸದಲ್ಲಿ ಆಡಲಾದ 37 ಪಂದ್ಯಗಳಲ್ಲಿ ಭಾರತ 34ರಲ್ಲಿ ವಿಜಯಶಾಲಿಯಾಗುತ್ತದೆ. ಈ ಪಂದ್ಯಗಳಲ್ಲಿ ಭಾರತ ಗಳಿಸಿದ ಒಟ್ಟು 338 ಗೋಲುಗಳಲ್ಲಿ 133 ಗೋಲುಗಳನ್ನು ಧ್ಯಾನ್’ಚಂದ್ ಒಬ್ಬರೇ ಗಳಿಸುತ್ತಾರೆ!
ಧ್ಯಾನ್’ಚಂದ್ ಅವರ ಆಟ ಎಂತಹ ಸಂಚಲನವನ್ನು ಹುಟ್ಟಿಸಿತ್ತೆಂದರೆ 1936ರ ಬರ್ಲಿನ್ ಒಲಂಪಿಕ್’್ಸನ ಸಂದರ್ಭದಲ್ಲಿ ಜರ್ಮನ್ ಪತ್ರಿಕೆಯೊಂದು ಈ ರೀತಿ ಸುದ್ದಿ ಪ್ರಕಟಿಸುತ್ತದೆ, ‘‘ಹಾಕಿ ಆಟ ಈಗ ಮ್ಯಾಜಿಕ್ ಷೋ ಕೂಡ ಆಗಿದೆ. ಭಾರತದ ಮಾಂತ್ರಿಕನ ಆಟ ನೋಡಲು ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ’’, ಎಂದು. ಧ್ಯಾನ್’ಚಂದ್ ಅವರ ದಿಗ್ಭಮೆಗೊಳಿಸುವಂತಹ ಆಟ, ವಿಶ್ವದ ಜನರನ್ನು ಅವರ ಹಾಕಿ ಸ್ಟಿಕ್ ಮುರಿದು ನೋಡಿ, ಅದರಲ್ಲೇನಾದರೂ ಚೆಂಡನ್ನು ಹಿಡಿದಿಡುವ ತಂತ್ರದ ಅಳವಡಿಕೆಯಾಗಿದೆಯೇ ಎಂದು ಪರಿಶೀಲಿಸಿದ್ದೂ ಇದೆ.
ಹಾಗೆಯೇ ಧ್ಯಾನ್’ಚಾಂದ್ ಅವರ ಸಮಕಾಲೀನರಾದ ಕ್ರಿಕೆಟ್ ದಂತಕತೆ ಬ್ರಾಡ್ಮನ್ ಧ್ಯಾನ್’ಚಂದ್ ಅವರನ್ನು ಅಡಿ ಲೈಡ್’ನಲ್ಲಿ ಮುಖಾಮುಖಿಯಾದಾಗ ‘‘ನಾವು ಕ್ರಿಕೆಟ್’ನಲ್ಲಿ ರನ್ ಬಾರಿಸುವಂತೆ, ನೀವು ಗೋಲುಗಳನ್ನು ಬಾರಿಸುತ್ತೀರಲ್ಲ’’ ಎಂದು ಕೇಳಿದ್ದರಂತೆ. ಈ ಮಾತು ಹಾಕಿಯಲ್ಲಿ ಧ್ಯಾನ್’ಚಾಂದ್ ಅವರ ಶ್ರೇಷ್ಠ ಮಟ್ಟವನ್ನು ತಿಳಿಸುತ್ತದೆ.
ಧ್ಯಾನ್’ಚಂದ್’ರ ಈ ಸಾಧನೆಗಳು ಮತು ಅವರ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಜಗಜ್ಜನಿತವಾಗಿತ್ತೆಂದರೆ ಭಾರತದಲ್ಲಿ ಇವರ ಸಾಧನೆಯನ್ನು ಗುರುತಿಸುವ ಮೊದಲೇ ಆಸ್ಟ್ರೀಯಾದ ವಿಯೆನ್ನಾದಲ್ಲಿ ಇವರ ಪುತ್ಥಳಿ ಸ್ಥಾಪನೆಗೊಂಡಿತ್ತು. ನಂತರದ ದಿನಗಳಲ್ಲಿ ಇವರ ಜನ್ಮದಿನವನ್ನು ‘‘ರಾಷ್ಟ್ರೀಯ ಕ್ರೀಡಾ ದಿನ’’ವೆಂದು ಆಚರಣೆಗೆ ತಂದರು.
ಧ್ಯಾನ್’ಚಂದ್ ಕೇವಲ ಕ್ರೀಡಾಪಟು ಮಾತ್ರವಾಗಿರಲಿಲ್ಲ. ಬದಲಾಗಿ ಅಪ್ರತಿಮ ರಾಷ್ಟ್ರಭಕ್ತರೂ ಆಗಿದ್ದರು. 16ನೆಯ ವಯಸ್ಸಿನಲ್ಲಿ ಸೇನೆಗೆ ಸೇರಿದ್ದ ಇವರು, 1940ರ ದಶಕದ ಕೊನೆಯವರೆಗೂ ಸೇನೆಗಾಗಿ ಅದರ ಜೊತೆ ಜೊತೆಗೆ ಭಾರತದ ಹಾಕಿ ತಂಡದ ಮೂಲಕ ಭಾರತದ ಗೌರವವನ್ನು ಹೆಚ್ಚಿಸುವುದಕ್ಕಾಗಿ ದುಡಿದರು.
ಜರ್ಮನಿಯ ಆಗಿನ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕ್ರೀಡೆಯ ಮೂಲಕ ತನ್ನ ರಾಷ್ಟ್ರ ವಿಶ್ವಕ್ಕೆ ಸಮರ್ಥ ರಾಷ್ಟ್ರವೆಂದು ತೋರಿಸಿಕೊಡುವ ಉದ್ದೇಶದಿಂದ 1936ರಲ್ಲಿ ನಡೆದ ಬರ್ಲಿನ್ ಒಲಂಪಿಕ್ಸ್’ನ್ನು ಆಯೋಜಿಸುತ್ತಾನೆ. ಅಲ್ಲಿ ಹಾಕಿ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 8-1ರ ಅಂತರದಲ್ಲಿ ಗೆಲ್ಲುತ್ತದೆ. ಇದರಲ್ಲಿ ತಂಡದ ನಾಯಕನಾಗಿದ್ದ ಧ್ಯಾನ್’ಚಂದ್’ರ ಪಾತ್ರವೂ ಹೆಚ್ಚಿತ್ತು. ಇದನ್ನು ಗಮನಿಸಿದ ಹಿಟ್ಲರ್ ಅಧಿಕಾರದ ಪ್ರಲೊಭನೆಯನ್ನು ನೀಡಿ ಜರ್ಮನ್ ಪರ ಆಡಲು ಧ್ಯಾನ್’ಚಂದ್’ರ ಬಳಿ ಕೇಳಿದ್ದರಂತೆ. ಆದರೆ ಯಾವುದೇ ಪ್ರಲೋಭನೆಗಳಿಗೆ ಒಳಗಾಗದೇ ನಾನು ಆಡಿದರೆ ನನ್ನ ದೇಶಕ್ಕಾಗಿ ಮಾತ್ರ ಎಂದು ದೃಢವಾಗಿ ಹೇಳಿದ ಶ್ರೇಷ್ಠ ದೇಶಭಕ್ತ ಧ್ಯಾನ್’ಚಂದ್.
ನಿಜಕ್ಕೂ ಇವರು ಭಾರತರತ್ನ. ಇವರ ಹೆಸರಿನಲ್ಲೊಂದು ಅಕಾಡೆಮಿ, ಪದ್ಮಭೂಷಣ ಪ್ರಶಸ್ತಿ ನೀಡಿದ್ದನ್ನು ಬಿಟ್ಟು ನನ್ನ ಜ್ಞಾನದ ಅರಿವಿಗೆ ಬಂದಂತೆ ಬೇರೇನೂ ನೀಡಿದ್ದು ಕಾಣ ಸಿಗುವುದಿಲ್ಲ. ಈ ಮಹಾನ್ ವ್ಯಕ್ತಿಗಲ್ಲದೇ ಬೇರೆ ಯಾರಿಗೆ ತಾನೇ ಭಾರತರತ್ನ ಕೊಡಲು ಸಾಧ್ಯ. ಭಾರತ ಪ್ರಸ್ತುತ ಕ್ರೀಡಾಕ್ಷೇತ್ರದಲ್ಲಿ ಹೊಸ ಶಕ್ತಿಯಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರೇರಣೆ ಧ್ಯಾನ್’ಚಾಂದ್ ಆಗಲಿ. ನಮ್ಮ ಮನೆಯ ಮಕ್ಕಳಿಗೂ ಧ್ಯಾನ್’ಚಾಂದ್’ರಂತೆ ಆಗಲು ಪ್ರೇರೇಪಿಸುವ ಕೆಲಸಗಳಾಗಬೇಕು. ಆಗ ಸದೃಢ ಯುವ ಭಾರತವನ್ನು ನಿರ್ಮಿಸಲು ಸಾಧ್ಯ.
Discussion about this post