ಶ್ರೀನಗರ, ಸೆ.19: ಜಮ್ಮು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಿನ್ನೆ ಮುಂಜಾನೆ ಉಗ್ರರು ನಡೆಸಿದ್ದ ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೇ ಇಂದು ಹುತಾತ್ಮರಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 20ಕ್ಕೇರಿದೆ.
ನಿನ್ನೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಶ್ರೀನಗರದಲ್ಲಿರುವ ಸೇನಾಸ್ಪತ್ರೆಗೆ ದಾಖಲಾಗಿದ್ದ ಸೈನಿಕರ ಪೈಕಿ ಇಂದು ಮೂವರು ಯೋಧರು ಚಿಕಿತ್ಸೆ ಫಲಕಾರಿಯಾಗದೇ ಇಹ ಲೋಕ ತ್ಯಜಿಸಿದ್ದಾರೆ.
ಮೃತ ಯೋಧರ ವಿವರ ಹೊರಬಿದ್ದಿಲ್ಲವಾದರೂ, ಸಾವಿನ ಸಂಖ್ಯೆ ಏರಿಕೆಯಾಗಿರುವ ಕುರಿತು ಸೇನಾ ಮೂಲಗಳು ಮಾಹಿತಿ ನೀಡಿವೆ. ಅಂತೆಯೇ ಆಸ್ಪತ್ರೆಗೆ ದಾಖಲಾಗಿರುವ ಯೋಧರ ಪೈಕಿ ಹಲವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ನಸುಕಿನ 4 ಗಂಟೆಯ ಹೊತ್ತಿಗೆ ಕಾಶ್ಮೀರದಲ್ಲಿರುವ ಉರಿ ಸೇನಾ ಕ್ಯಾಂಪ್ಗೆ ನುಗ್ಗಿದ್ದ ನಾಲ್ಕು ಮಂದಿ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ತಮ್ಮೊಂದಿಗೆ ತಂದಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿಂದ ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ನಿನ್ನೆಯೇ 17 ಮಂದಿ ಯೋಧರು ಹುತಾತ್ಮರಾಗಿದ್ದರು. ಬಹುತೇಕ ಮಂದಿ ಸೈನಿಕರು ಕ್ಯಾಂಪ್ನಲ್ಲಿ ಬಿದ್ದ ಬೆಂಕಿಯಿಂದಾಗಿ ಸಾವನ್ನಪ್ಪಿದ್ದರು.
Discussion about this post