Read - < 1 minute
ಹಾಸನ, ಅ.೨೫: ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಪತ್ತೆಯಾದ ದಾಖಲೆಯಿಲ್ಲದ ೧.೯೭ ಕೋಟಿ ರೂ. ಹಣಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸಾಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದು ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು.
ಅವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ.ಹಣಕ್ಕೂ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ. ವಿಧಾನಸೌಧ,ಬಿಬಿಎಂಪಿ ಯಾರ ಕೈಯಲ್ಲಿದೆ ಎನ್ನುವುದು ನಿಮಗೆ ಗೊತ್ತಿದೆ. ಇಲ್ಲಿ ಏನು ನಡೆದರೂ ಅವರೇ ಕಾರಣ . ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಸಿಬಿಐಗಾಗಲಿ, ತೆರಿಗೆ ಅಧಿಕಾರಿಗಳಿಗಾಗಲಿ ಇಲ್ಲ ರಾಜ್ಯ ಸರ್ಕಾರದ ವತಿಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದ ಜನತೆಯ ಮುಂದೆ ಸತ್ಯ ಹೊರ ಬರಬೇಕು ಎಂದು ಆಗ್ರಹಿಸಿದರು.
ಕ್ಷುಲ್ಲಕ ಆರೋಪಗಳನ್ನು ಪ್ರಚಾರಕ್ಕಾಗಿ ಮಾಡುವುದನ್ನು ನಿಲ್ಲಿಸಿ. ಬಿಬಿಎಂಪಿಯಲ್ಲಿ ಎಲ್ಲವೂ ಕಮಿಷನ್ ವ್ಯವಹಾರ ನಡೆಯುತ್ತಿದೆ.ತಾವು ಬೆಣ್ಣೆ ತಿಂದು ಇನ್ನೊಬ್ಬರ ಮುಖಕ್ಕೆ ಒರೆಸಬೇಡಿ ಎಂದರು.
ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಪತ್ತೆಯಾದ ದಾಖಲೆಯಿಲ್ಲದ ೧.೯೭ ಕೋಟಿ ರೂ. ಎಲ್ಲಿಂದ ಬಂತು ?, ಎಲ್ಲಿಗೆ ಹೋಗುತ್ತಿತ್ತು ಎಂಬ ಸಂಪೂರ್ಣ ಮಾಹಿತಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪಅವರಿಗೆ ಗೊತ್ತಿದೆ .ಆ ಹಣದ ಮೂಲ, ಎಲ್ಲಿಗೆ ಹೋಗುತ್ತಿತ್ತು. ಯಾರಿಗೆ ಕೊಡಲು ತೆಗೆದು ಕೊಂಡು ಹೋಗಲಾಗುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಇರುವುದು ಯಡಿಯೂರಪ್ಪ ಅವರಿಗೆ ಮಾತ್ರ. ಬೇರೆ ಯಾರನ್ನೂ ಪ್ರಶ್ನಿಸುವ ಅಗತ್ಯವೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಶೋಭಾ ಈ ಹೇಳಿಕೆ ನೀಡಿದ್ದಾರೆ.
Discussion about this post