Read - < 1 minute
ಉಡುಪಿ, ಸೆ.1: ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗವು ಹಾಲಿ ಆರ್ಥಿಕ ವರ್ಷದ ಪ್ರಥಮ 5 ತಿಂಗಳ ಅವಧಿಯಲ್ಲಿ 38,707 ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿ, 64.23 ಕೋಟಿ ರೂ.ಗಳಷ್ಟು ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ ಎಂದು ಹಿರಿಯ ವಿಭಾಗಾಧಿಕಾರಿ ವಿಶ್ವೇಶ್ವರ ರಾವ್ ಹೇಳಿದರು.
ಅವರು ಗುರುವಾರ ನಡೆದ ವಿಭಾಗೀಯ ಕಚೇರಿಯಲ್ಲಿ ವಿಮಾ ಸಪ್ತಾಹವನ್ನು ಉದ್ಘಾಟಿಸಿ, ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಳೆದ ಮಾ. 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗವು 2.50 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಿ 233 ಕೋಟಿ ರು. ಪ್ರಥಮ ಪ್ರೀಮಿಯಂ ಆದಾಯದ ಗುರಿಯಲ್ಲಿ 1.57 ಪಾಲಿಸಿಗಳನ್ನು ಮಾರಾಟ ಮಾಡಿ 194.29 ಕೋಟಿ ರು. ಪ್ರಥಮ ಪ್ರೀಮಿಯಂ ಗಳಿಸಿತ್ತು.
ಆದರೇ ಈ ಬಾರಿ 5 ತಿಂಗಳಲ್ಲಿಯೇ ಉದ್ದೇಶಿತ ಗುರಿಯ ಶೇ. 55ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಮಧ್ಯೆ 1.56 ಲಕ್ಷ ಪಾಲಿಸಿಗಳ 603.68 ಕೋಟಿ ರು. ಮೊತ್ತದ ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ ಎಂದವರು ಹೇಳಿದರು.
ಕಳೆದ ಆರ್ಥಿಕ ವರ್ಷದಲ್ಲಿ 162 ವಿಮಾಗ್ರಾಮ ಹಾಗೂ 33 ವಿಮಾಶಾಲೆಗಳೆಂದು ಘೋಷಿಸಲಾಗಿದ್ದು ಸಾಧನೆಗನುಗುಣವಾಗಿ ಸಹಾಯಧನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಅನುಕ್ರಮವಾಗಿ 500 ಮತ್ತು 200 ವಿಮಾಗ್ರಾಮ ಮತ್ತು ವಿಮಾಶಾಲೆಗಳ ಘೋಷಣೆಗೆ ಗುರಿ ನಿಗದಿಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಲ್‌ಐಸಿ ಉಡುಪಿ ವಿಭಾಗದ ಪ್ರಬಂಧಕ (ವಿಕ್ರಯ) ಶಶಿಧರ್ ಕೆ. ಎನ್. ಮತ್ತು ಪ್ರಬಂಧಕ (ಮಾರುಕಟ್ಟೆ) ರಾಜೇಶ್ ವಿ. ಮುಧೋಳ್ ಇದ್ದರು.
ಅದಕ್ಕೂ ಮುನ್ನ ನಡೆದ ವಿಮಾ ಸಪ್ತಾಹವನ್ನು ಪಾಲಿಸಿದಾರರ ಕೌನ್ಸಿಲ್ ಸದಸ್ಯ ಪದ್ಮನಾಭ ಕೆದ್ಲಾಯ ಉದ್ಘಾಟಿಸಿದರು.
Discussion about this post