Read - 4 minutes
ಬೆಂಗಳೂರು,ಅ.4: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ಹಿಡಿದಿರುವ ಸುಪ್ರೀಂಕೋರ್ಟ್, ತಮಿಳುನಾಡಿಗೆ 11 ದಿನ ಒಟ್ಟು 22 ಸಾವಿರ ಕ್ಯೂಸೆಕ್ ನೀರು ಹರಿಸಬೇಕು, ಕೇಂದ್ರ ಜಲ ಆಯೋಗದ ನೇತೃತ್ವದಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸಬೇಕು ಮತ್ತು ಹೊಸ ತಾಂತ್ರಿಕ ಉನ್ನತ ಅಧಿಕಾರ ಸಮಿತಿ ರಚಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್ ಸೆ.20 ಮತ್ತು 30ರ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ನಿನ್ನೆ ಸಲ್ಲಿಸಿದ್ದ ಪ್ರಮಾಣಪತ್ರದ ಮುಂದುವರೆದ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂಕೋರ್ಟ್ ನ ದೀಪಕ್ ಮಿಶ್ರಾ ಮತ್ತು ಉದಯ್ ಲಲಿತ್ ಅವರ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಅಕ್ಟೋಬರ್ 7 ರಿಂದ 18ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ಸ್ ನಂತೆ 22 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಇಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಇದರ ಜೊತೆಗೆ ಕೇಂದ್ರ ಜಲ ಆಯೋಗದ ಸದಸ್ಯ ಸೈಯದ್ ಮಸೂದ್ ಹುಸೇನ್ ನೇತೃತ್ವದಲ್ಲಿ ಕೇಂದ್ರ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಆರ್.ಕೆ. ಗುಪ್ತ ಹಾಗೂ ನಾಲ್ಕು ರಾಜ್ಯಗಳ ಇಂಜಿನಿಯರ್ ಗಳ ತಂಡ ಎರಡೂ ರಾಜ್ಯಗಳ ಜಲಾಶಯ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ನಡೆಸಿ ಅ.17ರೊಳಗೆ ಸುಪ್ರೀಂಕೋರ್ಟ್ ಗೆ ವರದಿ ನೀಡಬೇಕು.
ಜಿ.ಎಸ್.ಝಾ ನೇತೃತ್ವದಲ್ಲಿ ತಾಂತ್ರಿಕ ಉನ್ನತಾಧಿಕಾರ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಹಲವು ತಜ್ಞರು ಇರಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸೆ.20 ಮತ್ತು 30 ರಂದು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರದ ಪ್ರತಿಪಾದನೆಯಿಂದಾಗಿ ಸುಪ್ರೀಂಕೋರ್ಟ್ ಪಡೆದಿದೆ.
ಮೊದಲು ನೀರು ಬಿಡಿ:
ಇದಕ್ಕೂ ಮೊದಲು ನಡೆದ ವಾದ-ವಿವಾದದಲ್ಲಿ ಸುಪ್ರೀಂಕೋರ್ಟ್ ಸೆ.30ರಂದು ನ್ಯಾಯಾಲಯ ಆದೇಶ ನೀಡಿ ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನೀವು ಅದನ್ನು ಪಾಲಿಸಿಲ್ಲ ಎಂದು ನ್ಯಾಯಮೂರ್ತಿಗಳು ಆಕ್ಷೇಪಿಸಿದರು.
ಸೆ.30ರ ಆದೇಶ ಪಾಲನೆಗೆ ನಾವು ಬದ್ಧರಾಗಿದ್ದೇವೆ. ಆದೇಶವನ್ನು 1 ರಂದು ಮತ್ತು 2ನೆ ತಾರೀಖಿನವರೆಗೂ ಪಾಲಿಸಿಲ್ಲ. ಆದರೆ ಇಂದು ಮತ್ತು ನಾಳೆ ನಿತ್ಯ ಆರು ಸಾವಿರ ಬದಲು 12 ಸಾವಿರ ಕ್ಯೂಸೆಕ್ ನೀರನ್ನು ಹರಿಸಿ ಆದೇಶ ಪಾಲಿಸುತ್ತೇವೆ ಎಂದು ಕರ್ನಾಟಕ ಪರ ವಕೀಲ ನಾರಿಮನ್ ಹೇಳಿದರು.
ಈ ಸಂದರ್ಭದಲ್ಲಿ ನಾರಿಮನ್ ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಗಳೊಂದಿಗೆ ಬಲವಾದ ವಾದಕ್ಕಿಳಿದು, ಪಾಲಿಸಲು ಸಾಧ್ಯವಾಗದೆ ಇರುವ ಆದೇಶಗಳನ್ನು ನೀಡಬೇಡಿ. ಇದರಿಂದ ನಮಗೆ ಮುಜುಗರವಾಗುತ್ತದೆ ಎಂದರು.
ಲೆಕ್ಕಾಚಾರವನ್ನು ಆಧರಿಸಿಯೇ ನೀರು ಬಿಡುವಂತೆ ಆದೇಶಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳುತ್ತಿದ್ದಂತೆ, ಇಲ್ಲಿ ಲೆಕ್ಕಾಚಾರ ಮಾತ್ರ ಮುಖ್ಯವಲ್ಲ, ವಾಸ್ತವ ಸ್ಥಿತಿಗತಿ ಆಧರಿಸಿ ಆದೇಶ ನೀಡಬೇಕು. ನೀವು ಆದೇಶ ನೀಡುವ ವೇಳೆಗೆ ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರು ಕುಡಿಯಲಿಕ್ಕೆ ಮಾತ್ರ ಸಾಕಾಗುವಷ್ಟಿತ್ತು ಎಂದು ನಾರಿಮನ್ ವಾದ ಮಂಡಿಸಿದರು.
ಸೆ.20 ರಂದು ತಮಿಳುನಾಡಿಗೆ ನೀರು ಹರಿಸಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ನೀಡಿರುವ ಆದೇಶವನ್ನು ನ್ಯಾಯಾಲಯ ಹಿಂಪಡೆಯಬೇಕೆಂದು ನಾರಿಮನ್ ಪಟ್ಟು ಹಿಡಿದರು.ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕೂಡ ವಾದ ಮಂಡಿಸಿ, ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಅನುಸಾರ ಆತುರಾತುರವಾಗಿ ನೀರು ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವಿಲ್ಲ. ಸಂಸತ್ನಲ್ಲಿ ಚರ್ಚೆಯಾದ ನಂತರವೇ ಮಂಡಳಿ ರಚಿಸಬೇಕೆಂದು ಸ್ಪಷ್ಟವಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ನ ಆದೇಶ ಪಾಲಿಸಬೇಕಾದರೆ ಮೊದಲು ನ್ಯಾಯಾಧಿಕರಣದ ತೀರ್ಪನ್ನು ಬದಲಾವಣೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ನಡುವೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡುವಂತೆ ತಮಿಳುನಾಡು ಪರ ವಕೀಲರಾದ ಶೇಖರ್ ನಫಾಡೆ ಪಟ್ಟು ಹಿಡಿದರು. ಕೊನೆಗೆ ಸುಪ್ರೀಂ ಕೋರ್ಟ್ ನೀರು ನಿರ್ವಹಣಾ ಮಂಡಳಿ ರಚನೆಯ ಪ್ರಸ್ತಾಪವನ್ನು ಕೈ ಬಿಟ್ಟಿತ್ತು.
ಸೆ.30ರ ಆದೇಶದಂತೆ ಈಗಾಗಲೇ 9 ಸಾವಿರ ಕ್ಯೂಸೆಕ್ ನೀರನ್ನು ಹರಿಸಿದ್ದೇವೆ. ಒಟ್ಟು 36 ಸಾವಿರ ಕ್ಯೂಸೆಕ್ ಪೈಕಿ ಬಾಕಿ ಇರುವ ನೀರು ಹರಿಸಲು ನಾವು ಬದ್ಧರಿದ್ದೇವೆ. ಆದರೆ ಮುಂದೆ ನೀರು ಬಿಡುವಂತೆ ಆದೇಶ ನೀಡಬೇಡಿ ಎಂದರು.
ಕಾವೇರಿ ನ್ಯಾಯಾಧಿಕರಣ 2007ರ ಫೆ.5ರಂದು ನೀಡಿರುವ ಅಂತಿಮ ತೀರ್ಪಿನ ಮಾರ್ಪಾಡಿಗೆ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಅ.18ರಂದು ಸುಪ್ರೀಂಕೋರ್ಟ್ ನ ಮೂರು ಜನ ನ್ಯಾಯಾಧೀಶರ ಸಂವಿಧಾನಿಕ ಪೀಠದ ಮುಂದೆ ಬರಲಿದ್ದು, ಆವರೆಗೂ ನೀರು ಬಿಡಿ ಎಂಬುದಾಗಲಿ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಎಂದಾಗಲಿ ದ್ವಿಸದಸ್ಯ ಪೀಠ ಆದೇಶ ಮಾಡಬಾರದು ಎಂದು ನಾರಿಮನ್ ಪ್ರತಿಪಾದಿಸಿದರು.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಕ್ಟೋಬರ್ 7 ರಿಂದ 18ರವರೆಗೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ, ಇಲ್ಲವೇ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ತಿಳಿಸುವಂತೆ ಸೂಚನೆ ನೀಡಿದರು. ಸಮಾಲೋಚನೆಗಾಗಿ ಕೆಲಕಾಲ ವಿಚಾರಣೆ ಮುಂದೂಡಲಾಗಿತ್ತು.
ಮತ್ತೆ 3.15ಕ್ಕೆ ವಿಚಾರಣೆ ಆರಂಭವಾದಾಗ ಜಲಾಶಯಗಳಲ್ಲಿ ನೀರಿನ ಕೊರತೆಯಿಂದೆ ಹೀಗಾಗಿ ಅ.7ರಿಂದ 18ರವರೆಗೆ ನಿತ್ಯ 1500 ಕ್ಯೂಸೆಕ್ಸ್ ನೀರು ಹರಿಸಲು ಸಾಧ್ಯವಿದೆ ಎಂದರು. ಇದನ್ನು ಪರಿಷ್ಕರಿಸಿದ ನ್ಯಾಯಾಲಯ ಅ.7ರಿಂದ 18ರವರೆಗೆ ನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿದೆ.
ಆದೇಶದ ಮುಖ್ಯಾಂಶಗಳು
ಅಕ್ಟೋಬರ್ 1 ರಿಂದ 6 ರ ತನಕ ಪ್ರತಿದಿನ 6,000 ಕ್ಯೂಸೆಕ್
ಅಕ್ಟೋಬರ್ 7 ರಿಂದ 18 ರ ತನಕ ಪ್ರತಿದಿನ 2,000 ಕ್ಯೂಸೆಕ್
ಸದ್ಯಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಇಲ್ಲ
ಸುಪ್ರೀಂನಿಂದ ತಾಂತ್ರಿಕ ಉನ್ನತಾಧಿಕಾರಿಗಳ ತಂಡ ಸ್ಥಾಪನೆ
ಉಭಯ ರಾಜ್ಯಗಳಿಗೂ ಭೇಟಿ ನೀಡಿ ಅಕ್ಟೋಬರ್ 17 ರಂದು ವರದಿ ನೀಡಲಿರುವ ತಂಡ
ತಮಿಳುನಾಡಿಗೆ ಅಕ್ಟೋಬರ್ 6 ರೊಳಗೆ ಒಟ್ಟು 36 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಸೂಚನೆ
ಉಭಯ ರಾಜ್ಯಗಳ ಮಧ್ಯೆ ಇನ್ನು ಮುಂದೆ ನೀರು ಹಂಚಿಕೆ ತಲೆದೋರಿದಾಗ ವಸ್ತುಸ್ಥಿತಿಯ ವರದಿ ನೀಡಲು ಜಿ ಎಸ್ ಝಾ ನೇತೃತ್ವದಲ್ಲಿ ತಂಡ ರಚನೆ
ಅಧ್ಯಯನಂ ಶರಣಂ ಗಚ್ಚಾಮಿ – ಸುಪ್ರೀಂ ಜ್ಞಾನೋದಯ ವ್ಯಾಖ್ಯೆ
ಈ ಆದೇಶವನ್ನು ಕಳೆದ ಶುಕ್ರವಾರವೇ ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕ ಆದೇಶ ಪಾಲನೆ ಮಾಡುತ್ತದೆ ಎಂಬ ಸುಪ್ರೀಂ ಧೋರಣೆ ಹಾಗೂ ಕಾನೂನು ಲೋಪಗಳು ಜೊತೆಗೆ ಅಟಾರ್ನಿ ಜನರಲ್ ಸ್ವಲ್ಪ ದುಡುಕು ಮತ್ತೊಮ್ಮೆ ಕರ್ನಾಟಕಕ್ಕೆ ಆಘಾತಕ್ಕೆ ಕಾರಣವಾಗಿತ್ತು. ಆದರೆ ಮುಖ್ಯಮಂತ್ರಿಯ ಸತತ ಪ್ರಯತ್ನ, ರಾಜಕೀಯ ಒಗ್ಗಟ್ಟು ಇಡೀ ರಾಜ್ಯದ ಒತ್ತಡ ಕೇಂದ್ರಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ವ್ಯಾಪಕ ಪರಿಣಾಮ ಬೀರಿದ್ದು ಸುಳ್ಳಲ್ಲ.
ದುರ್ಬಲವಾದ ಮಂಡನೆ ಕರ್ನಾಟಕಕ್ಕೆ ಸ್ವಲ್ಪ ಮಟ್ಟಿಗೆ ಮಾರಕವಾಗಿಯೂ ಪರಿಣಮಿಸಿದರೂ ಕಾನೂನು ಅಂಶಗಳಲ್ಲಿ ರಕ್ಷಣಾತ್ಮಕವಾಗಿ ರಾಜಕೀಯ ನಡೆಯನ್ನೇ ಸರ್ಕಾರ ಅವಲಂಬಿಸಿದ್ದು, ಸ್ವಲ್ಪ ಹಿನ್ನಡೆಗೆ ಕಾರಣವಾಯಿತು. ಇದೇ ವೇಳೆ ಕೇಂದ್ರ ಜಲಸಂಪನ್ಮೂಲ ಸಚಿವರ ಸಲಹೆಗೆ ಸೊಪ್ಪು ಹಾಕದ ತಮಿಳುನಾಡು ತನ್ನ ಮೊಂಡುತನವನ್ನೇ ಪ್ರದರ್ಶಿಸಿದ್ದುದು, ಕರ್ನಾಟಕಕ್ಕೆ ವರವಾಯಿತು.
ತಕ್ಷಣ ಜಲಸಂಪನ್ಮೂಲ ಇಲಾಖೆ ಮತ್ತು ಪ್ರಧಾನಿ ಕಾರ್ಯಾಲಯ ಸಹ ಈ ಪ್ರಕರಣದಲ್ಲಿ ಅಖಾಡಕ್ಕಿಳಿಯುವುದು ಅನಿವಾರ್ಯವಾಯಿತು. ಪರಿಣಾಮವಾಗಿ ಸ್ವತಃ ಪ್ರಧಾನಿಯೇ ಪ್ರಕರಣ ಪರಿಶೀಲಿಸಿದರು. ಆಗ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ದುಡುಕಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒಪ್ಪಿದ್ದು, ತಪ್ಪಾಗಿದ್ದು, ಕಂಡುಬಂತು. ತಕ್ಷಣ ಈ ಲೋಪವನ್ನು ಸರಿಪಡಿಸಿ ಶನಿವಾರವೇ ಮರುಪರಿಶೀಲನಾ ಅರ್ಜಿ ಹಾಕಬೇಕಾಗಿದ್ದ ರೋಹಟಗಿ ಕರ್ನಾಟಕವೇ ಇದನ್ನು ಮಾಡಲಿ ಎಂದು ಕೈಬಿಟ್ಟಿದ್ದರು. ರಾಜ್ಯವೂ ಈ ತಾಂತ್ರಿಕ ವಿಷಯವನ್ನು ಅದೇ ದಿನ ಗಂಭೀರವಾಗಿ ಪರಿಗಣಿಸಲಿಲ್ಲ.
ಕೊನೆಗೆ ಪ್ರಧಾನಿ ಮಧ್ಯಪ್ರವೇಶದಿಂದಾಗಿ ಸುಪ್ರೀಂಕೋರ್ಟ್ ನಲ್ಲಿ ತಾಂತ್ರಿಕವಾಗಿ ಸಮಬಲ ಹೋರಾಟ ನಡೆಯಲು ಕಾರಣವಾಗಿ, ಸುಪ್ರೀಂಕೋರ್ಟ್ ಈ ವಿಷಯದಲ್ಲಿ ತನ್ನ ವ್ಯಾಪ್ತಿ ಮೀರಿದೆ ಎಂಬ ಸಂದೇಶವನ್ನು ನೇರವಾಗಿಯೇ ರವಾನಿಸಿತು.
ಇದನ್ನು ಸ್ವತಃ ಅಟಾರ್ನಿ ಜನರಲ್ ಅಫಿಡವಿಟ್ ನಲ್ಲೇ ದಾಖಲಿಸಿದ್ದು, ಸುಪ್ರೀಂಕೋರ್ಟ್ ಮುಜುಗರಕ್ಕೆ ಕಾರಣವಾಗಿ ತನ್ನ ಆದೇಶ ಮಾರ್ಪಡಿಸಿ, ಅಧ್ಯಯನಂ ಶರಣಂ ಗಚ್ಚಾಮಿ ಎಂದಿತು.ಬಹುತೇಕ ಇಲ್ಲಿಗೆ ಕಾವೇರಿ ಪ್ರಕರಣ ಶೇ.50 ರಷ್ಟು ಮುಕ್ತಾಯಕಂಡಂತಾಗಿದೆ.
ಕೋರ್ಟ್ ಆದೇಶ ಪಾಲನೆ ಅನಿವಾರ್ಯ: ದೇವೇಗೌಡ
ಅ.7 ರಿಂದ 18 ರವರೆಗೆ ನೀರು ಬಿಡಲು ಆದೇಶ ನೀಡಿದೆ. ಸುಪ್ರೀಂ ಆದೇಶವನ್ನು ಪಾಲನೆ ಅನಿವಾರ್ಯ ಎಂಬುದು ನಮ್ಮ ಭಾವನೆಯಾಗಿದೆ. ಇದಕ್ಕಿಂತ ಹೆಚ್ಚು ನಿರೀಕ್ಷೆ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಅವರೇ ವಾದ ಮಂಡಿಸಿದ್ದು, ತುಂಬಾ ಸಂತಸವಾಗಿದೆ ಅವರಿಗೂ ಅಭಿನಂದನೆ ಎಂದು ಹೇಳಿದರು.
ನೀರು ಬಿಡುವ ಬಗ್ಗೆ ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ತಿಳಿಸಿದರು.
ನಮಗೆ ನ್ಯಾಯ ಒದಗಿಸುವ ಕೆಲಸವನ್ನು ಕೇಂದ್ರ ಮಾಡಬೇಕು. ಉಪವಾಸ ಸತ್ಯಾಗ್ರಹವನ್ನು ರಾಜಕೀಯ ಮಾಡೋದಿಲ್ಲ..
ತ್ರಿಸದಸ್ಯ ಪೀಠದ ಮುಂದೆ ಕಾವೇರಿ ವಿವಾದ ಬಾಕಿ ಇದೆ ಎಂದರು.
ರಾಜ್ಯದ ಮುಖಂಡರು ಯಾವುದೋ ಸಂದರ್ಭದಲ್ಲಿ ನಾರಿಮನ್ ವಿರುದ್ದ ಮಾತಾಡಿರಬಹುದು ಆದರೆ ನಾರಿಮನ್ ರಲ್ಲಿ ನಾನು ಕ್ಷಮೆ ಕೇಳ್ತೆನೆ,ರಾಜ್ಯದ ಯಾವ ನಾಯಕರೂ ಕೂಡ ಹಾಗೆ ಮಾತಾಡಬಾರದು,
ಡೆಲ್ಲಿಗೆ ಹೋಗಿ ನಾರಿಮನ್ ಅವರನ್ನೇ ಭೇಟಿಯಾಗಿ ಕ್ಷಮೆ ಕೋರುತ್ತೇನೆ, ಈ ಬಗ್ಗೆ ಪತ್ರವನ್ನು ಬರೆದಿದ್ದೇನೆ ಎಂದು ತಿಳಿಸಿದರು.
ಪ್ರಧಾನಿ, ಮಾಜಿ ಪ್ರಧಾನಿಗೆ ಸಿಎಂ ಅಭಿನಂದನೆ:
ಇಂದಿನ ಸುಪ್ರೀಂಕೋರ್ಪು ತೀರ್ಪು ರಾಜ್ಯದ ಮಟ್ಟಿಗೆ ನಿರಾಳವಾಗಿದ್ದು, ಇದಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಸಿಎಂ ಸಿದ್ದರಾಮಯ್ಯ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು 10 ದಿನದಲ್ಲಿ 2 ಬಾರಿ ವಿಶೇಷ ಅಧಿವೇಶನ ನಡೆದಿರುವುದು ಕರ್ನಾಟಕ ಇತಿಹಾಸದಲ್ಲೇ ಪ್ರಥಮ, ಸೆ.2 ರಿಂದ ಅ.2 ರವರೆಗೆ ಕಾವೇರಿ ಸಂಕಷ್ಟವಿದ್ದು, ಈ ಎಲ್ಲಾ ಬೆಳವಣಿಗೆಗಳು ಕರ್ನಾಟಕ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ತೊಂದರೆ ಇಲ್ಲ: ಹೆಚ್ ಎಸ್ ಮಹದೇವಪ್ರಸಾದ್
ಸದ್ಯದ ಪರಿಸ್ಥಿತಿ ಯಲ್ಲಿ ಮುಖ್ಯ ಅರ್ಜಿ 18 ರಂದು ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತಿದೆ. 4.15ಲಕ್ಷ ಎಕರೆಯ ನಮ್ಮ ಬೆಳೆಗಳಿಗೆ ನೀರು ಕೊಡಬೇಕು.ಹೆಚ್ಚುವರಿಯಾಗಿ 6 ಟಿಎಂಸಿ ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರು ಬೆಳೆಗೆ ಹರಿಸಲಾಗುತ್ತದೆ. ಜಮೀನಿಗೆ ನೀರು ಬಿಡುವಾಗ ಸೀಪೇಜ್ ನೀರು, ಸಹಜವಾಗಿ ಹರಿದು ಹೋಗುವ ನೀರು ಸೇರಿ 2 ಸಾವಿರ ಕ್ಯೂಸೆಕ್ ನೀರು ಬಿಡುವುದು ಕಷ್ಟವಾಗಲಾರದು. ನಮ್ಮ ರೈತರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಹಕಾರ ಕೊಡಬೇಕು. ದೀಪಾವಳಿ ವರೆಗೂ ಅಲ್ಪಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅ.6 ರ ವರಗೆ ಮಾತ್ರ ನೀರು ಕೊಡುವ ಉದ್ದೇಶ ಹೊಂದಿದ್ದೆವು. ಆದರೆ,ಸುಪ್ರಿಂ ಕೋರ್ಟ ಆದೇಶ ತಳ್ಳಿ ಹಾಕಲು ಸಾಧ್ಯವಿಲ್ಲ. ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಲ್ಲ, ನಾರಿಮನ್ ವಿಷಯದಲ್ಲಿ ಸರ್ಕಾರ ಎಂದೂ ಕೆಟ್ಟದಾಗಿ ವರ್ತಿಸಿಲ್ಲ. ಪ್ರತಿಪಕ್ಷದವರು ಕೆಲವರು ವೈಯಕ್ತಿಕವಾಗಿ ಮಾತನಾಡಿರಬಹುದು. ಆದರೆ, ಸರ್ಕಾರ ಮಾತ್ರ ನಾರಿಮನ್ ಅವರೇ ಮುಂದುವರಿಯಬೇಕು ಎಂಬ ಅಚಲ ನಿಲುವು ಹೊಂದಿತ್ತು ಎಂದರು.
ಕಬ್ಬಿನ ಬಾಕಿ ಕೇವಲ ಶೇ.1ರಷ್ಟು ಮಾತ್ರ ಬಾಕಿ ಕೊಡಬೇಕಿದೆ.ಕಬ್ಬು ಬೆಳೆ ನಷ್ಟಕ್ಕೂ ಪರಿಹಾರ ಕೊಡಬೇಕು ಅಂತಾ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.
Discussion about this post