Read - 2 minutes
ಬೆಂಗಳೂರು, ಸೆ.9: ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಮುಖ ಮಾರುಕಟ್ಟೆಗಳು ಸ್ಥಬ್ಧವಾಗಿವೆ. ಇನ್ನು ಬಂದ್‌ಗೆ ಸರ್ಕಾರಿ ಸಾರಿಗೆ ಸಂಸ್ಥೆ ನೌಕರರು ಬೆಂಬಲ ವ್ಯಕ್ತಪಡಿಸಿರುವುದರಿಂದ ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಬ್ದವಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರಸ್ಥರು ಬೆಂಬಲ ನೀಡಿದ್ದು, ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ಬಂದ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ ಭಾಗಶಃ ಬಂದ್
ಬೆಂಗಳೂರಿನ ಮೆಜೆಸ್ಟಿಕ್‌ನ ಸುತ್ತಮುತ್ತ ಪ್ರತಿಭಟನಾಕಾರರು ವಾಹನ ಸವಾರರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ. ಬಸ್, ಮೆಟ್ರೋ, ವಾಹನ ಸಂಚಾರ ಇಲ್ಲದ ಪರಿಣಾಮ ಉದ್ಯಾನನಗರಿ ಬಿಕೋ ಎನ್ನುತ್ತಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್ ಆಗಿದೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ನಿರತ ಟೆಕ್ಕಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ನಂತರ ಬಲವಂತವಾಗಿ ಕಚೇರಿ ಬಂದ್ ಮಾಡಿಸಲಾಯಿತು. ಏರ್ ಪೋರ್ಟ್ ಕ್ಯಾಬ್, ಟೂರಿಸ್ಟ್ ವಾಹನ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಚಾರ ಬಂದ್ ಆಗಿದ್ದು, ತಮಿಳು ೫೩ ಚಾನೆಲ್‌ಗಳನ್ನು ಕೇಬಲ್ ಆಪರೇಟರ್ಸ್ ಬಂದ್ ಮಾಡಿದ್ದಾರೆ.
ಇನ್ನು ಮೈಸೂರು ಹಾಗೂ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದ್ದು, ಬಂದ್ ಯಶಸ್ವಿಯಾಗುತ್ತಿದೆ. ಮೈಸೂರಿನಲ್ಲಿ ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದಗೊಂಡಿತ್ತು. ಪ್ರಮುಖ ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಬೆಂಗಳೂರು-ಮಂಡ್ಯ- ಮೈಸೂರು ಹೆದ್ದಾರಿ ಬಹುತೇಕ ಸ್ಥಬ್ಧವಾಗಿದ್ದು, ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಬದಲಿ ಮಾರ್ಗದ ಮೊರೆ ಹೋಗುತ್ತಿದ್ದಾರೆ. ಇನ್ನು ಅಲ್ಲಲ್ಲಿ ವಾಹನಗಳಿಗೆ ಬೆಂಕಿ ಹಚ್ಚುವ, ರಸ್ತೆ ತಡೆ ಉಂಟು ಮಾಡಿ ಸಂಚಾರಕ್ಕೆ ಅಡಚಣೆ ಮಾಡುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ.
ಮಂಡ್ಯದಲ್ಲಿ ಇಂದು ಕಾವೆರಿ ಹೋರಾಟವನ್ನು ಭಿನ್ನ ವಿಭಿನ್ನವಾಗಿ ನಡೆಸಲಾಗುತ್ತಿದ್ದು, ಸಂಘಟನೆಯೊಂದು ಸಿದ್ಧರಾಮಯಯ್ಯ ಕುತ್ತಿಗೆಗೆ ಜಯಲಲಿತಾ ತಾಳಿ ಕಟ್ಟುತ್ತಿರುವ ಪೋಸ್ಟರ್ ಹಿಡಿದು ಪ್ರತಿಭಟಿಸಿದ್ದಾರೆ.
ಕಾವೇರಿಗೆ ಉತ್ತರ ಕರ್ನಾಟಕದ ಬೆಂಬಲ
ಕನ್ನಡ ಪರ ಸಂಘಟನೆಗಳ ಹಾಗೂ ರೈತ ಪರ ಸಂಘಟನೆಗಳ ಕಾವೇರಿ ಪ್ರತಿಭಟನೆ ಇಡೀ ರಾಜ್ಯವನ್ನೇ ಸ್ಥಬ್ದಗೊಳಿಸಿದ್ದು, ಕಾವೇರಿಗಾಗಿ ಇದಕ್ಕೆ ಉತ್ತರ ಕರ್ನಾಟಕ ಕೂಡ ಕೈ ಜೋಡಿಸಿದೆ.
ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಬಂದ್‌ಗೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಬೆಳಗಾವಿ, ಗುಲ್ಬರ್ಗಾ, ವಿಜಯಪುರ, ಬಾಗಲಕೋಟೆ ಹಾಗೂ ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.
ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮಿಳುನಾಡು ಸರ್ಕಾರ ಹಾಗೂ ಸಿಎಂ ಜಯಲಲಿತಾ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಗುಲ್ಬರ್ಗಾ, ವಿಜಯಪುರದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ಕನ್ನಡಪರ ಸಂಘಟನೆಗಳು ಟೈರ ಗೆ ಬೆಂಕಿ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ಬಳ್ಳಾರಿಯ ಬೈಪಾಸ್‌ರಸ್ತೆಯಲ್ಲಿ ಸಂಚರಿಸುತ್ತಿದ್ದ ತಮಿಳುನಾಡು ರಾಜ್ಯದ ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಹಲವು ಲಾರಿಗಳು ಜಖಂಗೊಂಡಿವೆ. ಬಳ್ಳಾರಿಯಲ್ಲಿ ಪ್ರಮುಖವಾಗಿ ಮಂಗಳ ಮುಖಿಯರು ಪ್ರತಿಭಟನೆ ನಡೆಸುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ವಿಶೇಷವಾಗಿತ್ತು. ದಾವಣಗೆರೆಯಲ್ಲೂ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಗದೆಗದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಆದರೆ ಬೀದರ್, ರಾಯಚೂರು, ಚಿತ್ರದುರ್ಗದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನಜೀವನ ಎಂದಿನಂತೆ ಸಾಗಿದೆ. ಈ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವಹಿವಾಟಿನಲ್ಲಿ ತೊಡಗಿದ್ದಾರೆ.
ಚಿತ್ರೋದ್ಯಮದ ಬೆಂಬಲ
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರೋದ್ಯಮವೂ ಸಹ ಬೆಂಬಲ ವ್ಯಕ್ತಪಡಿಸಿದೆ.
ಶಿವರಾಜ್ ಕುಮಾರ್, ದೇವರಾಜ್, ಉಪೇಂದ್ರ, ಲೀಲಾವತಿ, ಶರಣ್, ಭಾರತಿ ಮೊದಲಾದ ಹಲವಾರು ಚಿತ್ರನಟರು ಶಿವಾನಂದ ಸರ್ಕಲ್ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದ್ದಾರೆ.
Discussion about this post