ನವದೆಹಲಿ, ಸೆ. 5: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಪ್ರತಿದಿನ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಕುರಿತಂತೆ ಇಂದು ಆದೇಶ ನೀಡಿರುವ ನ್ಯಾಯಾಲಯ, ಮುಂದಿನ 10 ದಿನಗಳ ಕಾಲ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿ ಎಂದು ಹೇಳಿದೆ.
ದುರಂತವೆಂದರೆ, ಪ್ರಸ್ತುತ 17 ಟಿಎಂಸಿ ನೀರು ಮಾತ್ರ ಕೆ ಆರ್ ಎಸ್ ನಲ್ಲಿ ಇದ್ದು, ಸುಪ್ರೀಂ ಆದೇಶದಂತೆ ಇದರಲ್ಲಿ ಮುಂದಿನ 10 ದಿನಗಳಲ್ಲಿ 13.7 ಟಿಎಂಸಿ ನೀರು ಬಿಡುಗಡೆ ಮಾಡಬೇಕಿದೆ. ಸುಪ್ರೀಂ ಆದೇಶದಂತೆ ನೀರು ಬಿಡುಗಡೆ ಮಾಡಿದರೆ ರಾಜ್ಯದ ರೈತರಿಗೆ ಭಾರಿ ಅನ್ಯಾಯವಾಗಲಿದೆ.
ರಾಜ್ಯದ ಬಳಿ ಕೇವಲ 17 ಟಿಎಂಸಿ ನೀರು ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ೮ ಟಿಎಂಸಿ ನೀರು ಬಿಡಲು ಸಾಧ್ಯ ಎಂದ ರಾಜ್ಯ ಸುಪ್ರೀಂಗೆ ಮನವಿ ಮಾಡಿತ್ತು.
ರಾಜ್ಯದ ಪರ ವಕೀಲ ಪಾಲಿ ನಾರಿಮನ್ ಸುಪ್ರೀಂ ಕೋರ್ಟ್‍ಗೆ ರಾಜ್ಯದ ಪರ ಮಾಹಿತಿ ಒದಗಿಸಿದ್ದರು. ಸುಪ್ರೀ೦ ಕೋರ್ಟ್’ನ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ತಮಿಳು ನಾಡು ಪರ ತೀರ್ಪು ನೀಡಿದೆ. ರಾಜ್ಯ ಸರ್ಕಾರ ತನ್ನ ಪರಿಸ್ಥಿತಿಯನ್ನು ಸುಪ್ರೀಂ ಮುಂದೆ ಮಂಡಿಸಲು ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಕೆ ಆರ್ ಎಸ್ ಸ್ಥಿತಿಯನ್ನು ಸುಪ್ರೀಂಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
Discussion about this post