ಬೆಂಗಳೂರು, ಸೆ.8: ಗೋವು ಯಾವುದೇ ಬೇದ ಭಾವ ಮಾಡದೇ, ಎಲ್ಲರಿಗೂ ಹಾಲುಕೊಡುತ್ತದೆ, ಆದರೆ ನಾವು ಗೋವು ಹಾಲು ಕೊಡುವವವರೆಗೆ ಕರೆದುಕೊಂಡು, ನಂತರ ಬೀದಿಗೆ ತಳ್ಳುತ್ತೇವೆ. ಬೀದಿಯಲ್ಲಿ ತಿರುಗುತ್ತಾ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಗೋವು ತಿನ್ನುವಂತಗಿರುವುದು ಮನುಷ್ಯ ಕುಲಕ್ಕೇ ಕಲಂಕ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಬೀಡಾಡಿ ದನಗಳ ಬಗ್ಗೆ ಖೇದವ್ಯಕ್ತಪಡಿಸಿ ಮಾತನಾಡಿದ ಶ್ರೀಗಳು, ದಿಕ್ಕಿಲ್ಲದ ದೇಶೀಗೋವುಗಳನ್ನು ಕಾನೂನಿನ್ವಯ ನೀಡಿದರೆ ಅವುಗಳಿಗೆ ಆಶ್ರಯ ಒದಗಿಸಲು ಶ್ರೀಮಠವು ಸಿದ್ದವಿದೆ, ಕಟುಕರಿಗೆ ಇಂತಹ ಗೋವುಗಳು ಸುಲಭದ ತುತ್ತಾಗಿದ್ದು, ದಿಕ್ಕಿಲ್ಲದ ಗೋವುಗಳಿಗೆ ಶ್ರೀಮಠ ದಿಕ್ಕಾಗಲಿದೆ. ಮುಂದೆ ನಡೆಯಲಿರುವ ಗೋಯಾತ್ರೆಯಲ್ಲಿಯೂ ಈ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಶ್ರೀ ಷ| ಬ್ರ| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿಲಾ ಮಠ, ತಾವರೆಕೆರೆ, ಸಂತಸಂದೇಶ ನೀಡಿ, ಅಮೃತಮಹಲ್ ಕಾವಲ್ ಅವ್ಯವಸ್ಥಿತವಾಗಿದ್ದು, ಗೋವಿನ ಕುರಿತಾಗಿ ಕೆಲಸವನ್ನು ಮಾಡುತ್ತಿರುವ ಶ್ರೀಗಳು ಇದನ್ನು ವ್ಯವಸ್ಥಿತಗೊಳಿಸಬೇಕು ಎಂದು ರಾಘವೇಶ್ವರ ಶ್ರೀಗಳಿಗೆ ನಿವೇದಿಸಿದರು ಶ್ರೀರಾಮಚಂದ್ರಾಪುರಮಠದ ಗೋಯಾತ್ರೆಗೆ ನಮ್ಮ ಬೆಂಬಲವಿದ್ದು, ಈ ಮಹಾ ಆಂದೋಲನಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ತಮ್ಮ ಹೋಟೆಲ್ ನಲ್ಲಿ ತಂಗಿದವರಿಂದ ನಿತ್ಯ ಗೋಪೂಜೆ ಮಾಡಿಸಿ, ವಿಶಿಷ್ಟರೀತಿಯಲ್ಲಿ ಗೋಸೇವೆಯಲ್ಲಿ ತೊಡಗಿಕೊಂಡಿರುವ ಯೋಗೀಶ್ ಭಟ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಶ್ರೀಭಾರತೀಪ್ರಕಾಶನವು ಹೊರತಂದ ಮಂಗಲಪಾಂಡೆ ಕಥಾಧಾರಿತ ಗೋಕಥಾ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಹಾಗೂ ಒಲಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಮತ್ತು ಗೋಪಿಚಂದ್ ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಸಿಂಧೂರ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
ಗಣ್ಯರ ಭೇಟಿ – ಶ್ರೀಗಳಿಂದ ಆಶೀರ್ವಾದ
ಶ್ರೀಪ್ರಮೋದ್ ಮುತಾಲಿಕ್, ಸಾಂಬಾರ ಮಂಡಳಿಯ ರಾಮಚಂದ್ರ ಕಲಪೆಟ್ಟ, ಸಂಗೀತಾ ಕ್ಯಾಸೆಟ್ಸ್ ಮಾಲಿಕರಾದ ಹೆಚ್ ಎಂ ಮಹೇಶ್, ಶರ್ಮಾ ಟ್ರಾವೆಲ್ಸ್ ಮಾಲಿಕರಾದ ಸುನಿಲ್, ನಗರಾಭಿವೃದ್ದಿ ಪ್ರಾಧಿಕಾರದ ಎಸ್ ಎಂ ಹೆಗಡೆ, ನಿವೃತ್ತ ಅರಣ್ಯಾಧಿಕಾರಿಗಳಾದ ರವಿರಾಜ್, ನಿವೃತ್ತ ನ್ಯಾಯಾಧೀಶರಾದ ಕುಕ್ಕಾಜೆ ರಾಮಕೃಷ್ಣ, ಉದ್ಯಮಿಗಳಾದ ಅಶೋಕ್ ರೈ, ರಾಜಾರಾಮ ಶೆಟ್ಟಿ , ಪದ್ಮನಾಭ ಶೆಟ್ಟಿ ಮುಂತಾದವರು ಶ್ರೀಗಳಿಂದ ಆಶೀರ್ವಾದ ಪಡೆದರು.
ದೇಶಕ್ಕೆ ಗೌರವ ತಂದುಕೊಟ್ಟವರು ಶ್ರೀಮಠಕ್ಕೆ ಆಗಮಿಸಿರುವುದು ಸಂತಸದ ವಿಚಾರ, ಇವರುಗಳಲ್ಲಿರುವ ಸರಳತೆ, ವಿನಯ ಶ್ಲಾಘನೀಯ. ಸಿಂಧು, ಗೋಪೀಚಂದ್, ಅರವಿಂದ್ ಭಟ್ ಇವರು ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ, ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ.
– ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು
Discussion about this post